ನಾ ದಿವಾಕರ
ಪ್ರಜಾಪ್ರಭುತ್ವ ಎಂಬ ಕಲ್ಪನೆಗೆ ಶತಮಾನಗಳ ಚರಿತ್ರೆ ಇರುವ ಹಾಗೆಯೇ ಅದರ ತಳಹದಿಯಾಗಿ ಸ್ವೀಕೃತವಾಗಿರುವ ಮೌಲ್ಯಗಳಿಗೆ ಇನ್ನೂ ಆಳವಾದ , ವ್ಯಾಪಕವಾದ ಹಾಗೂ ಸ್ವತಂತ್ರವಾದ ಚರಿತ್ರೆ ಇದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಕಾಲಕಾಲಕ್ಕೆ ನಡೆಯುವ ಚುನಾವಣೆಗಳು ಮತ್ತು ಮತದಾನದ ಸಾರ್ವತ್ರಿಕ ಹಕ್ಕು ಈ ಮೌಲ್ಯಗಳಲ್ಲಿ ಪ್ರಧಾನವಾದುದಾದರೂ, ಪ್ರಜಾತಂತ್ರದ ವಾಸ್ತವಿಕ ಸ್ಥಾನಮಾನವನ್ನು ಅಳೆಯಲು ಅದೊಂದೇ ಮಾನದಂಡವಾಗಲಾರದು. ಭಾರತದ ಸಂವಿಧಾನ ಪೀಠಿಕೆ ಈ ನಿಟ್ಟಿನಲ್ಲಿ ಸಾರ್ವಕಾಲಿಕ ನಿರ್ದೇಶನವನ್ನು ನೀಡುತ್ತದೆ. ಭಾರತದಂತಹ ಒಂದು ಬೃಹತ್ ಜನಸಂಖ್ಯೆಯ, ಹಲವಾರು ಜಾತಿ-ಧರ್ಮ-ಭಾಷೆಗಳ, ಸಾಂಪ್ರದಾಯಿಕ ದೇಶದಲ್ಲಿ ಪ್ರಜಾಪ್ರಭುತ್ವ ಇನ್ನೂ ಆಳವಾದ ಅರ್ಥ ಪಡೆದುಕೊಳ್ಳುತ್ತದೆ.

ಭಾರತದಲ್ಲಿ ಶತಮಾನಗಳ ಸಂಪ್ರದಾಯ ಮತ್ತು ಪರಂಪರೆಗಳಿಂದಲೇ ಪ್ರಭಾವಿತವಾಗುವ ಸಮಾಜಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ, ಈ ಪಾರಂಪರಿಕ ಪದ್ಧತಿ, ಆಚರಣೆ ಮತ್ತು ಜೀವನ ವಿಧಾನಗಳನ್ನು, ಆಧುನಿಕೀಕರಣಗೊಳಿಸುವ ಜವಾಬ್ದಾರಿ ಸಮಸ್ತ ಜನತೆಯ ಮೇಲಿರುತ್ತದೆ. ಈ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಮಾಡಲು ಚುನಾವಣೆಗಳ ಮೂಲಕ ಆಳ್ವಿಕೆಯ ಕೇಂದ್ರಗಳನ್ನು ಅಂದರೆ ಸರ್ಕಾರಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರೊಂದಿಗೇ ಸಂವಿಧಾನದ ಚೌಕಟ್ಟಿನಲ್ಲೇ ಸ್ಥಾಪಿಸಲಾಗುವ ಸಂಸ್ಥೆಗಳು ಸಮಾಜವನ್ನು ಆರೋಗ್ಯಕರವಾಗಿಯೂ, ಸೌಹಾರ್ದಯುತವಾಗಿಯೂ ನಿರ್ವಹಿಸುವ, ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತವೆ. ರಾಜಕೀಯ ಪರಿಭಾಷೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂದು ನಿರ್ವಚಿಸಲಾಗುವ ಈ ಸಂಸ್ಥೆಗಳು ತಮ್ಮ ಕಾರ್ಯವೈಖರಿಯಲ್ಲಿ ಅಥವಾ ಕೈಗೊಳ್ಳುವ ನಿರ್ಧಾರಗಳಲ್ಲಿ ಲೋಪಗಳೇನಾದರೂ ಕಂಡುಬಂದಲ್ಲಿ ಅದನ್ನು ಪ್ರಶ್ನಿಸುವ ಮತ್ತು ಸಾರ್ವಭೌಮ ಜನತೆಯ ಗಮನಕ್ಕೆ ತರುವ ಜವಾಬ್ದಾರಿಯನ್ನು ಮತ್ತೊಂದು ಸ್ವತಂತ್ರ-ಸ್ವಾಯತ್ತ ಸಂಸ್ಥೆ ಹೊತ್ತಿರುತ್ತದೆ.

ನಾಲ್ಕನೆಯ ಸ್ತಂಭದ ಮೂಲ ಅಶಯ
ಇದನ್ನೇ ನಾವು ಮಾಧ್ಯಮ ಎನ್ನುತ್ತೇವೆ, ಹಾಗೆಯೇ ಈ ದೊಡ್ಡ ಜವಾಬ್ದಾರಿಯ ಕಾರಣದಿಂದಲೇ ಮಾಧ್ಯಮ ಕ್ಷೇತ್ರವನ್ನು ಸಂವಿಧಾನದ ನಾಲ್ಕನೆಯ ಸ್ತಂಭ ಎಂದು ಪರಿಗಣಿಸಲಾಗುತ್ತದೆ. ಇದು ಶಾಸನಾತ್ಮಕ ನಿರ್ವಚನೆ ಅಲ್ಲ, ಬದಲಾಗಿ ದೇಶವನ್ನು ಭವಿಷ್ಯದೆಡೆಗೆ ಕರೆದೊಯ್ಯುವ ನೈತಿಕ, ಸಾಂವಿಧಾನಿಕ ಹಾಗೂ ವೃತ್ತಿಪರ ನೊಗವನ್ನು ಹೊರುವ ನಿಟ್ಟಿನಲ್ಲಿ ಇದನ್ನು ನಿಷ್ಕರ್ಷೆ ಮಾಡಬೇಕಿದೆ. ಹಾಗಾಗಿ ಮಾಧ್ಯಮ ಕ್ಷೇತ್ರಕ್ಕೆ ಈ ಮೂರೂ ನೆಲೆಗಳಲ್ಲಿ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಅನಿವಾರ್ಯವಾಗಿ ಇರಬೇಕಾಗುತ್ತದೆ. ಈ ಹಾದಿಯಲ್ಲಿ ಸಂವಿಧಾನ ಅಥವಾ ಪ್ರಜಾಪ್ರಭುತ್ವದ ಇತರ ಮೂರು ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತು ನ್ಯಾಯಾಂಗ ಕೆಲವು ಸಂದರ್ಭಗಳಲ್ಲಿ ಜನತೆಯ ಆಶಯಗಳಿಗೆ ವ್ಯತಿರಿಕ್ತವಾದ ರೀತಿಯಲ್ಲಿ ನಡೆದುಕೊಳ್ಳುವ ಸಾಧ್ಯತೆಗಳೂ ಇರುತ್ತವೆ.
ಶಾಸಕಾಂಗ ಮತ್ತು ಕಾರ್ಯಾಂಗಗಳು ಸದಾ ಕಾಲವೂ ಪರಸ್ಪರ ಪೂರಕವಾಗಿಯೇ ಕಾರ್ಯನಿರ್ವಹಿಸುವುದರಿಂದ, ನ್ಯಾಯಾಂಗದ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಹುತೇಕ ಜನಪರ ಕಾಯ್ದೆಗಳು, ಕಾನೂನುಗಳು ಉನ್ನತ ನ್ಯಾಯಾಂಗದ ಮೂಲಕವೇ ಜಾರಿಯಾಗಿರುವುದನ್ನು ಗಮನಿಸಬಹುದು. ಸಾಂದರ್ಭಿಕವಾಗಿ ನ್ಯಾಯಾಂಗದಿಂದ ವಿಶಾಲ ಸಮಾಜಕ್ಕೆ ಅಥವಾ ಅಲಕ್ಷಿತ ಸಮುದಾಯಗಳಿಗೆ ವ್ಯತಿರಿಕ್ರವಾದ ನಿರ್ಧಾರಗಳು ಹೊರಬರುವುದನ್ನೂ ಚರಿತ್ರೆ ದಾಖಲಿಸಿದೆ. ಆದರೆ ನ್ಯಾಯಾಂಗದಲ್ಲಿರುವ ಸಾಂವಿಧಾನಿಕ ಎಚ್ಚರ ಮತ್ತು ಸಾಮಾಜಿಕ ಕಾಳಜಿಯನ್ನು ಉಳಿದ ಎರಡು ಸಂಸ್ಥೆಗಳಿಂದ ನಿರೀಕ್ಷಿಸಲಾಗುವುದಿಲ್ಲ. ಏಕೆಂದರೆ ಈ ಸಂಸ್ಥೆಗಳನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಮತ್ತು ಇವುಗಳ ನಿಯಂತ್ರಣದಲ್ಲೇ ಕಾರ್ಯನಿರ್ವಹಿಸುವ ಅಧಿಕಾರಶಾಹಿಯೂ ಸಹ ಅಸ್ತಿತ್ವವಾದಿಗಳಾಗಿರುತ್ತವೆ ಹಾಗಾಗಿ ಆಳ್ವಿಕೆಯ ಸಂದರ್ಭದಲ್ಲಿ ಸಂಭವಿಸಬಹುದಾದ ತಪ್ಪುಗಳನ್ನು, ಪ್ರಮಾದಗಳನ್ನು, ಸಾಮಾನ್ಯ ಜನತೆಯ ಗಮನಕ್ಕೆ ತಂದು ಎಚ್ಚರಿಸುವ ಗುರುತರ ಜವಾಬ್ದಾರಿಯನ್ನು ಮಾಧ್ಯಮ ವಲಯ ವಹಿಸಿಕೊಳ್ಳಬೇಕಾಗುತ್ತದೆ .

ಉಳಿದ ಮೂರೂ ಸ್ತಂಭಗಳು ಶಿಥಿಲವಾದರೂ, ಪ್ರಜಾಪ್ರಭುತ್ವ ಎಂಬ ಸ್ಥಾವರವನ್ನು ಸ್ಥಿರವಾಗಿ ನಿಲ್ಲಿಸಲು ಈ ಸ್ತಂಭ ಜಂಗಮ ರೂಪಿಯಾಗಿ ಸದಾ ಜಾಗೃತವಾಗಿರಬೇಕಾಗುತ್ತದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವದ ಆಳ್ವಿಕೆಯ ಅಳತೆಗೋಲಿನಂತೆ ಬಳಸುವುದೂ ಇದೇ ಕಾರಣಕ್ಕೆ. ಮಾಧ್ಯಮಗಳಿಗೆ ಹೆಚ್ಚಿನ ಸ್ವಾತಂತ್ರ್ಯವಿದ್ದಷ್ಟೂ ಪ್ರಜಾಪ್ರಭುತ್ವದ ಮೌಲ್ಯಗಳು ಸುಸ್ಥಿರವಾಗಿರುತ್ತವೆ. ಇಲ್ಲವಾದಲ್ಲಿ ಸರ್ವಾಧಿಕಾರ, ನಿರಂಕುಶಾಧಿಕಾರ ಬಲವಾಗಿ ಬೇರೂರುತ್ತದೆ. ಇಲ್ಲಿ ಮಾಧ್ಯಮ ಸ್ವಾತಂತ್ರ್ಯ ಎಂಬ ಕಲ್ಪನೆಯನ್ನು ಕಾನೂನಾತ್ಮಕ ನೆಲೆಯಲ್ಲಿ ನೋಡುವುದರ ಬದಲು, ಸಾಮಾನ್ಯ ಜನತೆಯ ದೃಷ್ಟಿಯಿಂದ ನೋಡಿದಾಗ, ಸ್ವತಂತ್ರ ಮಾಧ್ಯಮಗಳು ಹೆಚ್ಚು ನಿಖರವಾದ, ವಸ್ತುನಿಷ್ಠವಾದ ಸುದ್ದಿಗಳನ್ನು, ಆಳ್ವಿಕೆಯ ಹಂಗಿಗೆ ಒಳಗಾಗದೆ ನೀಡುವ ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಬೇಕಿದೆ.
ಅಸ್ತಿತ್ವದಿಂದಾಚೆಗಿನ ಸ್ವಾತಂತ್ರ್ಯ

ಮಾಧ್ಯಮ ವಲಯ ತನ್ನ ಸ್ವಂತಿಕೆ ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಂಡಾಗ, ಅಲ್ಲಿ ವೃತ್ತಿ ಧರ್ಮ ಇಲ್ಲವಾಗುತ್ತದೆ. ತನ್ನ ಸಾಂವಿಧಾನಿಕ ಕರ್ತವ್ಯವನ್ನು ಅರಿತು ಕಾರ್ಯನಿರ್ವಹಿಸಿದಾಗ, ತಳಮಟ್ಟದವರೆಗೂ ಜನತೆಗೆ ಅಗತ್ಯವಾದ ನ್ಯಾಯೋಚಿತ ಸೇವೆಯನ್ನು ಮಾಡಲು ಸಾಧ್ಯವಾಗುತ್ತದೆ. ಈ ಎರಡೂ ಸನ್ನಿವೇಶಗಳಿಗೆ ಸ್ವತಂತ್ರ ಭಾರತ ಸಾಕ್ಷಿಯಾಗಿದೆ. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಾಧ್ಯಮಗಳು (ಮುದ್ರಣ ಮಾಧ್ಯಮ) ನಿರ್ವಹಿಸಿದ ಪ್ರಮುಖ ಪಾತ್ರವೇ ಆ ಕರಾಳ ದಿನಗಳನ್ನು ದಾಟಿ ಭಾರತ ಮರಳಿ ಪ್ರಜಾಪ್ರಭುತ್ವದ ಹಾದಿಯಲ್ಲಿ ನಡೆಯಲು ಸಾಧ್ಯವಾಯಿತು. ವರ್ತಮಾನದ ಸಂದರ್ಭದಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು ರೂಪಾಂತರಗೊಂಡು, ಕಾರ್ಪೋರೇಟ್ ಮಾರುಕಟ್ಟೆಯ ಹಿಡಿತಕ್ಕೆ ಸಿಲುಕಿ ತಮ್ಮ ಸ್ವಂತಿಕೆ ಕಳೆದುಕೊಂಡಿರುವುದನ್ನು ನೋಡುತ್ತಿದ್ದೇವೆ. ಏಕೆಂದರೆ ಇಲ್ಲಿ ಅಸ್ತಿತ್ವ ಪ್ರಧಾನವಾಗುತ್ತದೆ.

ಭಾರತದಲ್ಲಿ ಪತ್ರಿಕೋದ್ಯಮ ವೃತ್ತಿಯಾಗಿ ಉಳಿದಿಲ್ಲ, ವ್ಯಾಪಾರವಾಗಿದೆ ಎಂದು ಅಂಬೇಡ್ಕರ್ ಅವರು ಹೇಳಿ ದಸಕಗಳೇ ಕಳೆದಿವೆ. ಆದರೆ ಅದನ್ನು ಸುಳ್ಳುಮಾಡುವ ಪ್ರಯತ್ನಗಳೇನೂ ಹೆಚ್ಚಾಗಿ ನಡೆದಿಲ್ಲ. ಬದಲಾಗಿ ನವ ಉದಾರವಾದಿ ಆರ್ಥಿಕತೆಯಲ್ಲಿ, ಮಾಧ್ಯಮಗಳ ಒಡೆತನ ಕಾರ್ಪೋರೇಟ್ ಮಾರುಕಟ್ಟೆ ಮತ್ತು ಬಂಡವಾಳ ಸ್ಹೇಹಿ (Crony Capital) ಸರ್ಕಾರಗಳ ಮರ್ಜಿಗೆ ಒಳಪಟ್ಟಿರುವುದರಿಂದ, ಮುಖ್ಯವಾಹಿನಿಯ ಬಹುಪಾಲು ಮಾಧ್ಯಮಗಳು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು, ಸರ್ಕಾರಗಳ ಬಾಲಂಗೋಚಿಗಳಾಗಿವೆ. ಈ ನಿಟ್ಟಿನಲ್ಲಿ ಕೆಲವು ಅಪವಾದಗಳೂ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಪತ್ರಿಕೋದ್ಯಮದ ವೃತ್ತಿ ಧರ್ಮ ಎಂದರೆ ಜನತೆಯ ದನಿಯಾಗಿರುವುದು. ನಾಲ್ಕನೆಯ ಸ್ತಂಭವಾಗಿ ಮಾಧ್ಯಮ ಕ್ಷೇತ್ರಕ್ಕೆ ಭೌತಿಕವಾಗಿ ಶಕ್ತಿ ನೀಡುವುದು ಸಾಮಾನ್ಯ ಜನತೆಯೇ ಹೊರತು, ಆಳ್ವಿಕೆಯ ಕೇಂದ್ರಗಳಲ್ಲ. ಆದರೆ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯಲ್ಲಿ ಭೌತಿಕ ಶಕ್ತಿಗಿಂತಲೂ ಆರ್ಥಿಕ ಸ್ಥಾನ ಮತ್ತು ಮಾರುಕಟ್ಟೆಯ ಶ್ರೇಣಿ ಪ್ರಧಾನವಾಗುತ್ತದೆ. ಹಾಗಾಗಿಯೇ ಬಹುತೇಕ ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು, ಸುದ್ದಿ ವಾಹಿನಿಗಳು ಜನತೆಯ ದನಿಗೆ ದನಿಯಾಗಿ ನಿಲ್ಲಲು ನಿರಾಕರಿಸುತ್ತದೆ.

ಈ ಸಾಂವಿಧಾನಿಕ ಹಾಗೂ ಆರ್ಥಿಕ ನೆಲೆಗಳನ್ನು ದಾಟಿ ನೋಡಿದಾಗ, ತಮ್ಮ ಅಸ್ತಿತ್ವದ ಉಳಿವಿಗಾಗಿಯೇ ಕಾರ್ಯನಿರ್ವಹಿಸುತ್ತಿದ್ದರೂ, ಮಾಧ್ಯಮಗಳಿಗೆ ನೈತಿಕ ಜವಾಬ್ದಾರಿಯೂ ಇರುವುದನ್ನು ಮನಗಾಣಬೇಕಿದೆ. ಈ ನೈತಿಕತೆಯನ್ನು ಹೊಂದಿರಬೇಕಾದರೆ ಮಾಧ್ಯಮಗಳು ಜನತೆಯ ನಡುವೆ ನಿಂತು ಕಾರ್ಯನಿರ್ವಹಿಸಬೇಕೇ ಹೊರತು ಆಡಳಿತ ವ್ಯವಸ್ಥೆಯ ಅಂಗಳದಲ್ಲಿ ಅಲ್ಲ. ನೆಲದ ವಾಸ್ತವಗಳನ್ನು ಅರಿಯಲು, ಶೋಷಿತ ಹಾಗೂ ಅಲಕ್ಷಿತ ಜನತೆಯ ನಾಡಿಮಿಡಿತವನ್ನು ಗ್ರಹಿಸಬೇಕಾದರೆ, ಮಾಧ್ಯಮ ಪ್ರತಿನಿಧಿಗಳು , ನೆಲಮುಖಿಯಾಗಿ ಸಮಾಜಗಳ ನಡುವೆ ನಿಂತು ಜಾಗೃತಾವಸ್ಥೆಯಲ್ಲಿದ್ದುಕೊಂಡು, ಆಗುಹೋಗುಗಳನ್ನು ಗಮನಿಸುತ್ತಿರಬೇಕಾಗುತ್ತದೆ. ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳಲ್ಲಿ ಈ ಮನೋಭಾವ ಇದ್ದರೆ, ಸಾಂಸ್ಥಿಕ ನೆಲೆಯಲ್ಲಿ ಇದನ್ನು ಆಗುಮಾಡುವುದು ಕಷ್ಟವೇನಲ್ಲ.

ನೈತಿಕತೆಯ ನೆಲೆಯಲ್ಲಿ ಸ್ವಾತಂತ್ರ್ಯ
ದುರಂತ ಎಂದರೆ ಪತ್ರಿಕೋದ್ಯಮ ಎನ್ನುವುದೇ ಅಕ್ಷರಶಃ ಉದ್ಯಮವಾಗಿದೆ. ಹಾಗಾಗಿ ಇವರು ಪ್ರತಿನಿಧಿಸುವ ಸಂಸ್ಥೆಗಳೂ ಸಹ ತಮ್ಮ ಹಿತಾಸಕ್ತಿಗನುಗುಣವಾಗಿ ಪತ್ರಕರ್ತರನ್ನು ಬಳಸಿಕೊಳ್ಳುತ್ತವೆ. ಜೀವನೋಪಾಯದ ಮಾರ್ಗವಾಗಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳುವುದರಿಂದ, ವ್ಯಕ್ತಿಗಳಲ್ಲಿಯೂ ಸಹ ಅಸ್ತಿತ್ವವೇ ಪ್ರಧಾನವಾಗಿ, ನೀತಿ, ತತ್ವ ಅಥವಾ ಸೈದ್ಧಾಂತಿಕ ಮೌಲ್ಯಗಳು ನಗಣ್ಯವಾಗಿಬಿಡುತ್ತದೆ. ಈ ನಿಟ್ಟಿನಲ್ಲಿ ಹಲವು ಅಪವಾದಗಳನ್ನು ಗುರುತಿಸಬಹುದಾದರೂ, ಮುಖ್ಯವಾಹಿನಿಯ ದೃಶ್ಯ ಮಾಧ್ಯಮಗಳಲ್ಲಿ ಇದು ಅಪರೂಪವಾಗಿಯೇ ಕಾಣಲು ಸಾಧ್ಯ. ಪ್ರಭುತ್ವದ ಹಿಡಿತ ಮತ್ತು ನಿಯಂತ್ರಣ, ಅದಕ್ಕೆ ಪೂರಕವಾದ ಮಾರುಕಟ್ಟೆ ಹಿತಾಸಕ್ತಿಯೇ ಬಲಗೊಂಡಾಗ, ಈ ವೃತ್ತಿಪರತೆ ಕ್ರಮೇಣ ನಶಿಸಿಹೋಗುತ್ತದೆ. ಭಾರತ ಇಂತಹ ಒಂದು ವಾತಾವರಣವನ್ನು ಎದುರಿಸುತ್ತಿದೆ.
ಹಾಗಾಗಿಯೇ ಕಾರ್ಪೋರೇಟ್- ಹಾಗೂ ರಾಜಕೀಯ ಹಿತಾಸಕ್ತಿಯನ್ನು ಪ್ರತಿನಿಧಿಸುವ ಮಾಧ್ಯಮಗಳು ಅನೇಕ ಸಂದರ್ಭಗಳಲ್ಲಿ ಆಡಳಿತಾರೂಢ ಪಕ್ಷಗಳ ಮುಖವಾಣಿಗಳಾಗಿ ಕಾರ್ಯನಿರ್ವಹಿಸುತ್ತವೆ. ಅಥವಾ ಸೈದ್ಧಾಂತಿಕವಾಗಿ ರಾಜಕೀಯ ಪಕ್ಷಗಳ ಪರ ಒಲವು ಹೊಂದಿರುತ್ತವೆ. ರಾಜಕೀಯ ಪಕ್ಷಗಳ ಅಥವಾ ರಾಜಕಾರಣಿಗಳ ಒಡೆತನದಲ್ಲಿರುವ ಮುದ್ರಣ-ದೃಶ್ಯ ಮಾಧ್ಯಮಗಳು ಬಹುಮಟ್ಟಿಗೆ ಈ ಧೋರಣೆಯನ್ನೇ ಬಿಂಬಿಸುತ್ತವೆ. ಇಲ್ಲಿ ಅಸ್ತಿತ್ವದ ಪ್ರಶ್ನೆ ಇರುವುದಾದರೂ, ಮಾಧ್ಯಮ ಕ್ಷೇತ್ರದ ವೃತ್ತಿಪರತೆ ಅಥವಾ ವೃತ್ತಿ ಧರ್ಮದ ನೆಲೆಯಲ್ಲಿ ನೋಡಿದಾಗ, ಮಾಧ್ಯಮಗಳ ಈ ಧೋರಣೆಯೇ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿ ಕಾಣುತ್ತದೆ. ಸಂವಿಧಾನದ ಅಥವಾ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಇಲ್ಲಿ ಬಹಳ ಮುಖ್ಯವಾಗುತ್ತದೆ.

ಆದ್ದರಿಂದಲೇ ಪ್ರಧಾನವಾಹಿನಿಯ ಮಾಧ್ಯಮಗಳಲ್ಲಿ ಜನಪರ ದನಿಯಾಗಲೀ, ಕಾಳಜಿಯಾಗಲೀ, ಕಳಕಳಿಯಾಗಲೀ ಕಾಣಲಾಗುವುದಿಲ್ಲ. ಜನಸಾಮಾನ್ಯರ ನಿತ್ಯ ಬದುಕಿನ ಸಂಕಟಗಳು, ಅವಕಾಶವಂಚಿತ ಸಮುದಾಯಗಳ ಸಂಕಷ್ಟಗಳು, ಶೋಷಿತ ಜನತೆ ಎದುರಿಸುವ ದೌರ್ಜನ್ಯ ತಾರತಮ್ಯಗಳು ಈ ವಾಹಿನಿಗಳಿಗೆ ಪ್ರಧಾನ ಸುದ್ದಿಯಾಗುವುದಿಲ್ಲ. ಅನುಷಂಗಿಕವಾಗಿ ಇವುಗಳನ್ನು ನೋಡುವ ಮೂಲಕ ಸುದ್ದಿರೋಚಕತೆಗೇ ಹೆಚ್ಚಿನ ಪ್ರಾಶಸ್ತ್ಯ ನೀಡಿ, ವಿಷಯದ ಅಥವಾ ಘಟನೆಯ ಗಾಂಭೀರ್ಯತೆಯನ್ನೆ ನಿರ್ಲಕ್ಷಿಸಲಾಗುತ್ತದೆ. ಅತ್ಯಾಚಾರ ಮುಂತಾದ ಮಹಿಳಾ ದೌರ್ಜನ್ಯಗಳು ಮತ್ತು ಅಸ್ಪೃಶ್ಯತೆಯಂತಹ ಜಾತಿ ದೌಜನ್ಯಗಳ ಸಂದರ್ಭದಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಸಂತ್ರಸ್ತಳನ್ನಾಗಿ ನೋಡದೆ ಅಪರಾಧಿಯಾಗಿ ಕಾಣುವ ಒಂದು ಮನಸ್ಥಿತಿಗೆ, ಹಸಿವು ಬಡತನದ ಕ್ರೌರ್ಯವನ್ನು ಗಮನಿಸಲೂ ಹಿಂಜರಿಯುವ ಮನೋಭಾವಕ್ಕೆ ಮಾಧ್ಯಮಗಳ ನಿರೂಪಣೆ ಮತ್ತು ವ್ಯಾಖ್ಯಾನಗಳೇ ಪ್ರಧಾನ ಕಾರಣವಾಗಿರುವುದನ್ನು ಗಮನಿಸಬೇಕಿದೆ.
ನೊಂದ-ಶೋಷಿತರ ದನಿಯಾಗಿ
ಇದರ ನೇರ, ಜ್ವಲಂತ ನಿದರ್ಶನವನ್ನು ಕರ್ನಾಟಕದಲ್ಲೇ ಕಾಣಬಹುದು. ಸಾಂವಿಧಾನಿಕ ಸಂಸ್ಥೆಗಳು ನ್ಯಾಯೋಚಿತವಾಗಿ, ಸಂವಿಧಾನದ ಆಶಯಗಳಿಗೆ ತಕ್ಕಂತೆ ತಮ್ಮ ಕರ್ತವ್ಯ ನಿರ್ವಹಣೆ ಮಾಡಿದಾಗ, ಅಂತಹ ಸಂಸ್ಥೆಗಳು ಜನಮನ್ನಣೆ, ಸಾರ್ವಜನಿಕರ ವಿಶ್ವಾಸವನ್ನು ಗಳಿಸಿರುತ್ತವೆ. ವಿಶೇಷವಾಗಿ ಶೋಷಿತ ಸಮುದಾಯಗಳು, ದೌರ್ಜನ್ಯಕ್ಕೊಳಗಾದ ಮಹಿಳೆಯರು ತಮಗಾಗಿರುವ ಅನ್ಯಾಯಗಳನ್ನು ಕಾನೂನಾತ್ಮಕವಾಗಿ ಎದುರಿಸುವಾಗ, ಈ ಸಂಸ್ಥೆಗಳ ಮೇಲಿನ ವಿಶ್ವಾಸವೇ ಮುಖ್ಯವಾಗುತ್ತದೆ. ಈ ಸಂಸ್ಥೆಗಳು ಪಟ್ಟಭದ್ರ ಹಿತಾಸಕ್ತಿಗಳಿಗೆ, ರಾಜಕೀಯ ಪ್ರಭಾವಗಳಿಗೆ ಬಲಿಯಾಗದೆ, ಜನಪರ ದನಿಯಾಗಿ ಕಾರ್ಯನಿರ್ವಹಿಸಿದಾಗ ನೊಂದ ಜನರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆ, ವಿಶ್ವಾಸ ಇಮ್ಮಡಿಯಾಗುತ್ತದೆ.

ಕರ್ನಾಟಕದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಈ ನಿಟ್ಟಿನಲ್ಲಿ ಪೂರ್ವನಿದರ್ಶನವಾಗಬಹುದಾದ ಕ್ರಮವನ್ನು ಅನುಸರಿಸಿದ್ದಾರೆ. ಧರ್ಮಸ್ಥಳದ ಸುತ್ತಮುತ್ತ ಕಳೆದ ಹಲವು ವರ್ಷಗಳಲ್ಲಿ ನಡೆದಿರುವ ಅತ್ಯಾಚಾರ, ಹತ್ಯೆಗಳನ್ನು ತನಿಖೆ ನಡೆಸಲು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಲು ಸರ್ಕಾರಕ್ಕೆ ಸೂಚಿಸಿದ್ದೇ ಅಲ್ಲದೆ, ಈಗ ಅಲ್ಲಿ ಸಂಭವಿಸಿರುವ ಎಲ್ಲ ಅಸಹಜ ಸಾವುಗಳನ್ನೂ ತನಿಖೆಗೊಳಪಡಿಸುವಂತೆ ಎಸ್‌ಐಟಿಗೆ ಲಿಖಿತವಾಗಿ ಮನವಿ ಮಾಡಿದ್ದಾರೆ. ಇದು ಹೆಮ್ಮೆ ಪಡುವ ವಿಚಾರವಾಗಿದ್ದು ಆಯೋಗದ ಅಧ್ಯಕ್ಷರು ಸಹಜವಾಗಿ ಪ್ರಶಂಸೆಗೊಳಗಾಗಬೇಕಿತ್ತು. ಏಕೆಂದರೆ ಅವರ ಪತ್ರ ಜೀವತೆತ್ತ ಅಮಾಯಕ ಮಹಿಳೆಯರ ಪರ ಇದ್ದು , ಅಂತಹ ನಿರ್ಭಾಗ್ಯರ ನೊಂದ ಕುಟುಂಬ ಸದಸ್ಯರ ದನಿಯಾಗಿ ಕಾಣುತ್ತದೆ.
ವಿಪರ್ಯಾಸ ಎಂದರೆ, ಕನ್ನಡದ ಪ್ರತಿಷ್ಠಿತ ಸುದ್ದಿವಾಹಿನಿಯ ದೃಷ್ಟಿಯಲ್ಲಿ, ಮಹಿಳಾ ಆಯೋಗದ ಅಧ್ಯಕ್ಷರೂ ಸಹ, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಕಲ್ಪಿತ ಪಿತೂರಿ ಅಥವಾ ಷಡ್ಯಂತ್ರದ ಭಾಗವಾಗಿಯೇ ಕಾಣುತ್ತಾರೆ. ಆಕೆಯನ್ನೂ ತನಿಖೆಗೊಳಪಡಿಸಬೇಕು ಎಂದು ಬಹಿರಂಗವಾಗಿ ಆಗ್ರಹಿಸಲಾಗುತ್ತದೆ. ಒಂದು ಕಡೆ ರಾಜ್ಯದ ಮಹಿಳೆಯರು, ಪುರೋಗಾಮಿ ಚಿಂತಕರು ಹಾಗೂ ಜನಪರದ ದನಿಗಳು ಅಲ್ಲಿ ಅನ್ಯಾಯಕ್ಕೊಳಗಾಗಿರುವ ಅಮಾಯಕ ಮಹಿಳೆಯರಿಗೆ ದನಿಯಾಗಿ “ ಕೊಂದವರು ಯಾರು ,,,, ? ” ಎಂದು ಸರ್ಕಾರವನ್ನು ಕೇಳುತ್ತಿರುವಾಗ, ಈ ಮಹಿಳಾ ದನಿಗೆ ಸಹೃದಯತೆಯಿಂದ ಸ್ಪಂದಿಸಿ, ದನಿಗೂಡಿಸಬೇಕಾದ ಮಾಧ್ಯಮಗಳು ಈ ಹೋರಾಟಗಾರರನ್ನೇ ಅಪರಾಧಿಗಳಂತೆ ಕಟಕಟೆಯಲ್ಲಿ ನಿಲ್ಲಿಸುತ್ತಿರುವುದು ದುರಂತ ಅಲ್ಲವೇ ? ಮಾಧ್ಯಮ ಸ್ವಾತಂತ್ರ್ಯದ ಪ್ರಶ್ನೆ ಬಂದಾಗ ಮಾಧ್ಯಮಗಳ ನೈತಿಕತೆ ಮತ್ತು ಸಂವಿಧಾನ ಬದ್ಧತೆಯೂ ಮುನ್ನಲೆಗೆ ಬರುತ್ತದೆ.

ನಿತ್ಯ ಅತ್ಯಾಚಾರಕ್ಕೊಳಗಾಗುತ್ತಿರುವ ಮಹಿಳಾ ಸಂಕುಲ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ಪ್ರಾಚೀನ ಸಮಾಜದ ಕ್ರೌರ್ಯಕ್ಕೆ ಒಳಗಾಗುತ್ತಿರುವ ತಳಸಮುದಾಯಗಳು, ಕೋಮು ದ್ವೇಷ ಮತ್ತು ನಿರ್ಲಕ್ಷ್ಯಕ್ಕೊಳಗಾಗಿ, ಅಂಚಿಗೆ ತಳ್ಳಲ್ಪಡುತ್ತಿರುವ ಅಲ್ಪಸಂಖ್ಯಾತರು, ತಮ್ಮ ಮೂಲ ನೆಲೆಯಿಂದಲೇ ಉಚ್ಚಾಟಿತರಾಗುತ್ತಿರುವ ಬುಡಕಟ್ಟು ಸಮುದಾಯಗಳು ಮಾಧ್ಯಮಗಳಿಂದ ನಿರೀಕ್ಷಿಸುವುದು ಈ ನೈತಿಕತೆಯನ್ನೇ ಅಲ್ಲವೇ ? ಮನುಜ ಸೂಕ್ಷ್ಮತೆ, ಲಿಂಗ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಕಳೆದುಕೊಂಡ ಮಾಧ್ಯಮಗಳಿಂದ ಇದನ್ನು ನಿರೀಕ್ಷಿಸುವುದಾದರೂ ಹೇಗೆ ? ಈ ಜಿಜ್ಞಾಸೆಯನ್ನು ಮಾಧ್ಯಮ ಮಿತ್ರರೇ ಪರಿಹರಿಸಬೇಕಿದೆ. ಈ ನೊಂದ ಜನರೇ ಮಾಧ್ಯಮ ಸ್ವಾತಂತ್ರ್ಯದ ಪ್ರಬಲ ಸಮರ್ಥಕರೂ, ಪ್ರತಿಪಾದಕರೂ ಆಗಿರುವುದನ್ನು ಗುರುತಿಸಬೇಕಲ್ಲವೇ ? ಈ ಸ್ವಾತಂತ್ರ್ಯವನ್ನು ಪಡೆದು, ನೊಂದವರ ಪರ ನಿಲ್ಲದೆ ಇರುವುದು ಅನೈತಿಕತೆಯ ಪರಮಾವಧಿ.
ಸಂವಿಧಾನ ಅಥವಾ ಪ್ರಜಾಪ್ರಭುತ್ವದ ನಾಲ್ಕನೆ ಸ್ತಂಭ ಎಂಬ ಗೌರವಯುತ ಸ್ಥಾನ ಪಡೆದಿರುವ ಮಾಧ್ಯಮಗಳು, ವಿಶೇ಼ಷವಾಗಿ ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು, ಸುದ್ದಿಮನೆಗಳು ಹಾಗೂ ಸುದ್ದಿ ನಿರೂಪಕರು ತಮ್ಮ ಈ ನೈತಿಕ ಜವಾಬ್ದಾರಿಯಿಂದ ವಿಮುಖರಾದಷ್ಟೂ ಶೋಷಣೆ, ದೌರ್ಜನ್ಯ, ತಾರತಮ್ಯಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಏಕೆಂದರೆ ಕ್ಷಣ ಮಾತ್ರದಲ್ಲಿ ಲಕ್ಷಾಂತರ ಜನರನ್ನು ತಲುಪಿ, ಪ್ರಭಾವಿಸಬಹುದಾದ ಈ ಸಂವಹನ ಸೇತುವೆಗಳು, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ತಮ್ಮ ನೈತಿಕ ಕರ್ತವ್ಯದಲ್ಲಿ ವಿಫಲವಾಗುತ್ತವೆ. ಇದು ವರ್ತಮಾನದ ಭಾರತ ಎದುರಿಸುತ್ತಿರುವ ಸಂದಿಗ್ಧತೆ. ಪತ್ರಿಕೋದ್ಯಮದಲ್ಲಿರುವ ಮತ್ತು ಬಾಹ್ಯ ಸಮಾಜದಲ್ಲಿರುವ ಯುವ ಸಮೂಹ ಇದನ್ನು ಗಂಭೀರವಾಗಿ ಗಮನಿಸಬೇಕಿದೆ. ಭವಿಷ್ಯದ ಉಜ್ವಲ ಭಾರತಕ್ಕೆ ಅಥವಾ ವಿಕಸಿತ ಭಾರತಕ್ಕೆ ಇದು ಅನಿವಾರ್ಯ.

-೦-೦-೦-೦-












