ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಭೂತನ್‌ಗೆ ತೆರಳಿದ್ದಾರೆ. ಭಾರತ ಮತ್ತು ಭೂತಾನ್ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನರೇಂದ್ರ ಮೋದಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭೂತನ್ ಪ್ರವಾಸದ ಹಿಂದಿನ ಉದ್ದೇಶವನ್ನು ಸಹ ತಿಳಿಸಿದ್ದಾರೆ. ʼಭೂತಾನ್‌ಗೆ ತೆರಳುತ್ತಿದ್ದೇನೆ, ಅಲ್ಲಿ ನಾನು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ಭೂತಾನ್ ನಾಲ್ಕನೇ ರಾಜನ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡುತ್ತಿದ್ದೇನೆ. ಈ ಭೇಟಿ ನಮ್ಮ ಇಂಧನ ಪಾಲುದಾರಿಕೆಗೆ ದೊಡ್ಡ ಉತ್ತೇಜನವಾಗಲಿದೆ. ಅಲ್ಲದೇ ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆʼ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಪ್ರಧಾನಿ ಮೋದಿ ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ಮತ್ತು ಪ್ರಧಾನಿ ತ್ಸೆರಿಂಗ್ ಟೋಬ್ಗೆ ಅವರನ್ನು ಭೇಟಿಯಾಗಲಿದ್ದು, ಭೂತಾನ್ ರಾಜ ಜಿಗ್ಮೆ ಅವರ ಜೊತೆಯಲ್ಲಿ ಪುನತ್ಸಂಗ್ಚು-II ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
ಇನ್ನು ದೆಹಲಿಯ ಕೆಂಪು ಕೋಟೆ ಬಳಿ ನಿನ್ನೆ ಸಂಜೆ ಸಂಭವಿಸಿದ ನಿಗೂಢ ಕಾರು ಸ್ಫೋಟ ಹಿನ್ನೆಲೆಯಲ್ಲಿ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈ ಘಟನೆ ಸಂಪೂರ್ಣ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ದೇಶದ ಭದ್ರತೆಯ ಬಗ್ಗೆ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಂಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳು ಸಹ ಹರಿದಾಡುತ್ತಿದೆ.













