ಬೆಂಗಳೂರು: ಬೆಂಗಳೂರು ನಿವಾಸಿಗಳು ಹಾಗೂ ಗ್ರೇಟರ್ ಬೆಂಗಳೂರು ಅಥಾರಿಟಿ ನಡುವಿನ ಕಸದ ಜಟಾಪಟಿ ಮುಂದುವರಿದಿದೆ. ಸ್ವಚ್ಛ ಬೆಂಗಳೂರು ಮಾಡಲು ಪಣತೊಟ್ಟಿರುವ ಗ್ರೇಟರ್ ಬೆಂಗಳೂರು ಅಥಾರಿಟಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನು ಕೆಲವರ ವಿಳಾಸ ಆಧರಿಸಿ ಕಂಡ ಕಂಡಲ್ಲಿ ಕಸ ಎಸೆಯುವವರ ಮನೆಯ ಮುಂದೆಯೇ ಕಸ ಸುರಿದು ಬಿಸಿ ಮುಟ್ಟಿಸಿದ್ದ ಜಿಬಿಎ ಇದೀಗ ಮತ್ತೊಂದು ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

ಈವರೆಗೂ ಕಸ ಎಸೆಯುವವರಿಗೆ ದಂಡ ವಿಧಿಸುತ್ತಿದ್ದ ಪಾಲಿಕೆ ಅಧಿಕಾರಿಗಳು ಇನ್ನು ಮುಂದೆ ಮನೆಯ ಬಳಿ ಬರುವ ವಾಹನಕ್ಕೆ ಕಸ ಕೊಡದೇ ಇರುವವರಿಗೆ ದಂಡ ವಿಧಿಸಲು ನಿರ್ಧರಿಸಿದೆ. ಪ್ರತಿ ನಿತ್ಯ ಮನೆಯ ಬಳಿ ಬರುವ ಟ್ರಕ್‌ಗೆ ಕಸ ಕೊಡದ ಮನೆಯವರು ರಾತ್ರಿ ವೇಳೆ ಎಲ್ಲೆಂದರಲ್ಲಿ ಎಸೆದು ಬರುತ್ತಿದ್ದಾರೆ. ಹೀಗಾಗಿ ಈ ವಿಚಾರವನ್ನು ಗಮನಕ್ಕೆ ತೆಗೆದುಕೊಂಡಿರುವ ಗ್ರೇಟರ್ ಬೆಂಗಳೂರು ಅಥಾರಿಟಿ ಮುಂದಿನ ದಿನಗಳಲ್ಲಿ ಕಸವನ್ನು ಬೆಳಿಗ್ಗೆ ಮನೆಯ ಬಳಿ ಬಂದ ವಾಹನಕ್ಕೆ ಕೊಡದವರನ್ನು ಕೂಡ ಪತ್ತೆ ಹಚ್ಚಿ ದಂಡ ವಿಧಿಸಲು ಮುಂದಾಗಿದೆ.

ಕಸ ಎಸೆದವರ ಮನೆ ಮುಂದೆ ಕಸ ಸುರಿಯುವ ಕ್ರಮಕ್ಕೆ ಪೌರ ಕಾರ್ಮಿಕರ ವಿರೋಧ
ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕಾರಿಗಳು ಅವರ ಮನೆಯ ಮನೆ ಕಸ ಸುರಿಯುವ ಮೂಲಕ ಬಿಸಿ ಮುಟ್ಟಿಸಿದ್ದರು. ಈ ಕ್ರಮಕ್ಕೆ ಪೌರ ಕಾರ್ಮಿಕರ ವಿರೋಧ ವ್ಯಕ್ತಪಡಿಸಿದ್ದಾರೆ. ಮೊದಲು ಕಸವನ್ನು ನಾವೇ ಎತ್ತಬೇಕು ಬಳಿಕ ಕಸ ಎಸೆದವರ ಮನೆಯ ಮುಂದೆ ಸುರಿಯ ಬೇಕು ಕೊನೆಯಲ್ಲಿ ಅವರು ದಂಡ ಕಟ್ಟಿದ ಬಳಿಕ ನಾವೇ ಆ ಕಸವನ್ನು ಮತ್ತೆ ಎತ್ತಬೇಕು ಇದರಿಂದ ನಮ್ಮ ಶ್ರಮ ಸುಮ್ಮನೆ ವ್ಯರ್ಥ ಎಂದು ಪೌರ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದ್ದಾರೆ.













