
ಬೆಂಗಳೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚಾಗಿರುವ ಬೆನ್ನಲ್ಲೇ ಅರಣ್ಯ ಸಚಿವರು ಮಹತ್ವದ ಆದೇಶ ಹೊರಡಿಸಿದ್ದಾರೆ. ನಾಗರಹೊಳೆ, ಬಂಡೀಪುರ ಅರಣ್ಯ ವಲಯದಲ್ಲಿ ತಾತ್ಕಾಲಿಕವಾಗಿ ಸಫಾರಿ ಮತ್ತು ಟ್ರೆಕ್ಕಿಂಗ್ ನಿಷೇಧ ಮಾಡಿ ಸಚಿವ ಈಶ್ವರ್ ಖಂಡ್ರೆ ಆದೇಶ ಹೊರಡಿಸಿದ್ದಾರೆ.

ಇಂದು ಬೆಳಗ್ಗೆ ಸರಗೂರು ತಾಲೂಕಿನಲ್ಲಿ ಜಮೀನಿಗೆ ಹೋಗುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿ ಕೊಂದುಹಾಕಿತ್ತು. ಇದು ರೈತರ ಆಕ್ರೋಶ ಹೆಚ್ಚಾಗಲು ಕಾರಣವಾಯಿತು. ಇದರ ಬೆನ್ನಲ್ಲೇ ನರಹಂತಕ ಹುಲಿ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸಲು ಮುಂದಾಗಿದ್ದು, ಹುಲಿ ಸೆರೆ ಹಿಡಿಯುವುದಕ್ಕಾಗಿ ಕ್ರಮ ಕೈಗೊಂಡಿದೆ. ಅರಣ್ಯ ಸಿಬ್ಬಂದಿಯನ್ನು ಕೂಂಬಿಂಗ್‌ಗೆ ಬಳಸಿಕೊಳ್ಳುವುದಕ್ಕಾಗಿ ಬಂಡೀಪುರ ಮತ್ತು ನಾಗರಹೊಳೆಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಬಂಡೀಪುರ, ನಾಗರಹೊಳೆ ಸಫಾರಿಯ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳು ಮತ್ತು ವಾಹನ ಚಾಲಕರ ಸಹಿತ ಎಲ್ಲ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜನೆ ಮಾಡಲು ಹಾಗೂ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಮತ್ತು ಹುಲಿ ಯೋಜನೆಯ ನಿರ್ದೇಶಕರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪದೆ ಪದೇ ದಾಳಿ ಮಾಡುತ್ತಿರುವ ಹುಲಿಯನ್ನು ಹಿಡಿಯಲು ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇತ್ತೀಚೆಗೆ ಚಾಮರಾಜನಗರದಲ್ಲಿ ನಡೆದ ಸಭೆಯಲ್ಲಿ ರೈತರು, ಕಾಡಿನಲ್ಲಿ ನಡೆಯುವ ಸಫಾರಿಯ ಕಿರಿಕಿರಿಯಿಂದ ವನ್ಯಜೀವಿಗಳು ಕಾಡಿನಿಂದ ಹೊರ ಬರುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಡಿಸಿದ್ದಾರೆ. ಮತ್ತೊಂದೆಡೆ, ಅಧಿಕಾರಿಗಳು ಸಿಬ್ಬಂದಿಯ ಕೊರತೆ ಇದೆ ಎಂದು ತಿಳಿಸಿರುತ್ತಾರೆ. ಈ ಹಿನ್ನೆಲೆ ಮುಂದಿನ ಆದೇಶದವರೆಗೆ ಇಂದಿನಿಂದಲೇ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಬಂದ್ ಮಾಡಲು ಮತ್ತು ಮಾನವ ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಟ್ರಕ್ಕಿಂಗ್ (ಚಾರಣ) ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದು ಸಚಿವರು ಆದೇಶಲ್ಲಿ ತಿಳಿಸಿದ್ದಾರೆ.


