ಬೆಂಗಳೂರು: ತಮ್ಮ ಆಸ್ತಿ ವಿವರ ಸಲ್ಲಿಸದ ರಾಜ್ಯದ ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಪಟ್ಟಿಯನ್ನು ಲೋಕಾಯುಕ್ತ ಸಂಸ್ಥೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಆಡಳಿರೂಢ ಕಾಂಗ್ರೆಸ್, ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್ನ ಒಟ್ಟು 67 ಶಾಸಕರು ಇದ್ದಾರೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 22(1) ಮತ್ತು (2)ರ ಪ್ರಕಾರ ವಿಧಾನಸಭೆ, ವಿಧಾನಪರಿಷತ್ ಸದಸ್ಯರು ಪ್ರತಿ ವರ್ಷ ಜೂನ್ 30ರೊಳಗೆ ತಮ್ಮ ಹಾಗೂ ಕುಟುಂಬದ ಸದಸ್ಯರ ಆಸ್ತಿ ವಿವರವನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಬೇಕು. ಆದರೆ ರಾಜ್ಯದ ಐದು ಸಚಿವರು ಸೇರಿ 67 ಶಾಸಕರು, 28 ವಿಧಾನಪರಿಷತ್ ಸದಸ್ಯರು ಇದುವರೆಗೂ 2024-25ನೇ ಸಾಲಿನ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ. ಹೀಗಾಗಿ ಲೋಕಾಯುಕ್ತ, ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ ಸಚಿವ ಕೆ ಎಚ್.ಮುನಿಯಪ್ಪ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಸಚಿವ ಜಮೀರ್ ಅಹ್ಮದ್ ಖಾನ್, ಪೌರಾಡಳಿತ ಸಚಿವ ರಹೀಮ್ ಖಾನ್ ಹಾಗೂ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ.
ಉಳಿದಂತೆ ಕೆ.ಎನ್ ರಾಜಣ್ಣ, ಲಕ್ಷ್ಮಣ ಸವದಿ, ಖನೀಜ್ ಫಾತಿಮಾ, ಜನಾರ್ದನ ರೆಡ್ಡಿ, ವಿನಯ ಕುಲಕರ್ಣಿ, ಬಿ ಕೆ ಸಂಗಮೇಶ್ವರ್, ನಯನಾ ಮೊಟಮ್ಮ, ಬಿ. ಸುರೇಶ್ ಗೌಡ, ಕೆ.ಗೋಪಾಲಯ್ಯ, ಸಿ.ಪಿ.ಯೋಗೇಶ್ವರ, ಎಚ್.ಡಿ ರೇವಣ್ಣ ಹಾಗೂ ಸಿ. ಪುಟ್ಟರಂಗಶೆಟ್ಟಿ ಸೇರಿದಂತೆ 67 ಶಾಸಕರು ಕೂಡ ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ.
ಈ ವಿಷಯವಾಗಿ ಲೋಕಾಯುಕ್ತ ಅದೇಶ ಹೊರಡಿಸಿದ್ದು, ಸರ್ಕಾರಿ ನೌಕರನಲ್ಲದ ವ್ಯಕ್ತಿಯು ವಿವರಣಾ ಪಟ್ಟಿಯನ್ನು ಸಲ್ಲಿಸುವಲ್ಲಿ ವೈಫಲ್ಯವಾದರೆ, ಈ ಅಧಿನಿಯಮದಲ್ಲಿ ಹೇಳಿರುವಂತೆ ಆಸ್ತಿಗಳ ವಿವರಣಾ ಪಟ್ಟಿಯ ಸಲ್ಲಿಸದಿರುವಿಕೆಯ ಬಗ್ಗೆ ಪ್ರಾಧಿಕಾರಕ್ಕೆ ವರದಿ ಮಾಡಬೇಕು ಎಂದು ಕಲಂ22(2)ರಲ್ಲಿ ಅದೇಶಿಲಾಗಿದೆ.
ಇದರಂತೆ ಸಂಬಂಧಪಟ್ಟ ಸಾರ್ವಜನಿಕ ನೌಕರನಿಗೆ ಈ ವರದಿಯ ಪ್ರತಿಯನ್ನು ಕಳುಹಿಸುವುದೂ ಕೂಡಾ ಅವಶ್ಯಕವಾಗಿರುತ್ತದೆ. ಅಲ್ಲದೆ, ಸಂಬಂಧಪಟ್ಟ ಸಾರ್ವಜನಿಕ ನೌಕರನಿಗೆ ಕಲಂ 22(1) ರಲ್ಲಿರುವಂತೆ ವರದಿಯನ್ನು ಕಳುಹಿಸಿದ್ದಾಗಿಯೂ ಇಂತಹ ವರದಿಯನ್ನು ಕಳುಹಿಸಿದ ಎರಡು ತಿಂಗಳೊಳಗೆ ಸಂಬಂಧಪಟ್ಟ ಸಾರ್ವಜನಿಕ ನೌಕರರು ಕಲಂ 22(2) ಅನ್ನು ಪಾಲಿಸುವಲ್ಲಿ ವಿಫಲವಾದರೆ, ಲೋಕಾಯುಕ್ತರು ತಪ್ಪಿತಸ್ಥ ಸಾರ್ವಜನಿಕ ನೌಕರರ ಹೆಸರುಗಳನ್ನು ರಾಜ್ಯದಲ್ಲಿ ಪ್ರಚಲಿತವಾಗಿರುವ ಮೂರು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಬಹುದು ಅಥವಾ ಪ್ರಕಟಿಸುವಂತೆ ಮಾಡಬಹುದು ಎಂದು ಹೇಳಿದೆ.











