ಬೆಳಗಾವಿ: ಕಬ್ಬಿನ ಬೆಳೆಗೆ ನಿಗದಿತ ಬೆಲೆ ನೀಡುವಂತೆ ಆಗ್ರಹಿಸಿ ಜಿಲ್ಲಾ ರೈತರು ಆರಂಭಿಸಿದ್ದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಗುರ್ಲಾಪುರದಲ್ಲಿ ಆರಂಭವಾದ ಈ ಹೋರಾಟ ಇದೀಗ ಬೆಳಗಾವಿ ಜಿಲ್ಲೆಯಾದ್ಯಂತ ಹಬ್ಬಿದ್ದು, ವಿಜಯಪುರ, ಸಂಕೇಶ್ವರ ಜತ್ತ ಜಾಂಬೋಟಿ ಹೆದ್ದಾರಿ ಬಂದ್ ಮಾಡಿ ರೈತರು ಆಕ್ರೋಶ ಹೊರಹಾಕಿದ್ದಾರೆ.

ಜಿಲ್ಲಾ ರೈತರ ಹೋರಾಟಕ್ಕೆ ಅಥಣಿ ಜನತೆ ಬೆಂಬಲ ನೀಡಿದ್ದಾರೆ. ಇಂದು ಅಥಣಿ ಪಟ್ಟಣ ಸಂಪೂರ್ಣ ಬಂದ್ ಆಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಲು, ಹಣ್ಣು, ಆಸ್ಪತ್ರೆ, ಮೆಡಿಕಲ್, ತರಕಾರಿ ಹೊರತುಪಡಿಸಿ ಇನ್ನುಳಿದ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುವ ಮೂಲಕ ಅಥಣಿ ಜನರು ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

ಇನ್ನು ಬೆಳಗಾವಿಯ ರೈತರ ಪ್ರತಿಭಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೆಂಬಲ ಸೂಚಿಸಿದ್ದು, ರೈತರ ಪ್ರತಿಭಟನೆಗೆ ರಾಜ್ಯ ಸರ್ಕಾರ ಸ್ಪಂದನೆ ನೀಡದೇ ಇದ್ದಾಗ, ವಿರೋಧ ಪಕ್ಷವಾಗಿ ನಾವು ಬೆಂಬಲ ನೀಡಬೇಕಿದೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರ್ಲಾಪುರದಲ್ಲಿ ಕೆಲ ದಿನಗಳಿಂದ ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ನ್ಯಾಯಯುತವಾಗಿರುವ ಬೇಡಿಕೆಗಳನ್ನು ರಾಜ್ಯ ಸರ್ಕಾರ ಮುಂದಾಳತ್ವ ವಹಿಸಿ ಈಡೇರಿಸುವ ಆಗ್ರಹ ಇದೆ. ವಿರೋಧ ಪಕ್ಷವಾಗಿ ನಾವು ರೈತರಿಗೆ ಬೆಂಬಲ ನೀಡಬೇಕಿದೆ. ಹಾಗಾಗಿ ನಾನು ಸಹ ಪಕ್ಷದ ಮುಖಂಡರ ಜೊತೆಗೆ ಚರ್ಚೆ ಮಾಡಿ, ರೈತರ ಪ್ರತಿಭಟನೆಗೆ ಬೆಂಬಲ ಕೊಡಲು ಬಂದಿದ್ದೇನೆ. ಅತೀವೃಷ್ಟಿ ಸಂದರ್ಭದಲ್ಲಿ ಸಹ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾನು ಪ್ರವಾಸ ಮಾಡಿದ್ದೆ ಎಂದರು.

ಇನ್ನು ಭೀಕರ ಮಳೆಯಿಂದ ತೊಂದರೆಗಿಡಾದಾಗ ಕೂಡ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರು, ಕೃಷಿ ಸಚಿವರು ಉತ್ತರ ಕರ್ನಾಟಕ ಪ್ರವಾಸ ಮಾಡಲಿಲ್ಲ. ರೈತರು ಇಂದು ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ರಾಜ್ಯ ಸರ್ಕಾರ ಕಿಂಚಿತ್ತೂ ತಲೆ ಕೆಡಸಿಕೊಳ್ಳದೇ ಇದ್ದಾಗ ನಾವು ಹೋರಾಟಕ್ಕೆ ಬಂದಿದ್ದೇವೆ. ಸಂಕಷ್ಟದಲ್ಲಿರುವ ರೈತರ ಪರಿಸ್ಥಿತಿ ಕೇಳಲು ರಾಜ್ಯ ಸರ್ಕಾರ ಮುಂದೆ ಬರುತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.


