ಭಾರತೀಯರಿಗೆ ಕ್ರಿಕೆಟ್ ಎನ್ನುವುದು ಕೇವಲ ಆಟವಲ್ಲ ಅದೊಂದು ಭಾವನಾತ್ಮಕ ಸಂಬಂಧ. ದೇಶದ ಕೋಟ್ಯಂತರ ಜನರ ನಾಡಿಮಿಡಿತದಲ್ಲಿ ಕ್ರಿಕೆಟ್ ಸೇರಿಕೊಂಡಿದ್ದು, ಯುದ್ಧ ಹೊರತು ಪಡಿಸಿದರೆ ಬಹುಶಃ ಭಾರತೀಯರೆಲ್ಲಾ ಒಗ್ಗೂಡುವುದು ನಮ್ಮ ಕ್ರಿಕೆಟ್ ತಂಡದ ಗೆಲುವಿಗಾಗಿ ಮಾತ್ರ. ಇದೀಗ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಭಾರತದ ಮಹಿಳಾ ತಂಡ ಚೊಚ್ಚಲ ವಿಶ್ವಕಪ್ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಗರ್ಘಿಸಿದ ಭಾರತದ ವನಿತೆಯರು ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿದ್ದಾರೆ.

ಎರಡು ಬಾರಿ ಫೈನಲ್‌ನಲ್ಲೇ ಸೋಲು ಕಂಡಿದ್ದ ಭಾರತ
ವಿಶ್ವಕಪ್ ಗೆಲ್ಲಬೇಕು ಎನ್ನುವುದು ಭಾರತ ಮಾತ್ರವಲ್ಲ ಎಲ್ಲಾ ಕ್ರಿಕೆಟ್ ತಂಡಗಳ ಬಹುದೊಡ್ಡ ಕನಸು. ಅಂತೆಯೇ ಭಾರತದ ಮಹಿಳಾ ತಂಡ ಈ ಬಾರಿ ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ ಅಸಂಖ್ಯಾತ ಕ್ರಿಕೆಟ್ ಪ್ರೇಮಿಗಳ ಕನಸನ್ನು ನನಸು ಮಾಡಿದ್ದಾರೆ. ಈ ಹಿಂದೆ ಎರಡು ಬಾರಿ ಫೈನಲ್ ಪ್ರವೇಶಿಸಿದ್ದ ಭಾರತದ ಮಹಿಳಾ ತಂಡ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. 2005 ಹಾಗೂ 2017ರಲ್ಲಿ ಏಕದಿನ ವಿಶ್ವಕಪ್ ಅಂತಿಮ ಹಣಾಹಣಿಯಲ್ಲಿ ಸೋಲು ಕಂಡಿದ್ದ ಭಾರತ ತಂಡ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ವಿಶ್ವಕಪ್ ಗೆದ್ದ ನಾಲ್ಕನೇ ದೇಶ ಭಾರತ
ಈ ಬಾರಿ ಭಾರತದ ಮಹಿಳಾ ತಂಡ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ವಿಶ್ವಕಪ್ ಗೆದ್ದ ನಾಲ್ಕನೇ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಿಳಾ ವಿಶ್ವಕಪ್ 1973ರಲ್ಲಿ ಆರಂಭವಾಗಿದ್ದು, ಈವರೆಗೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಹಾಗೂ ನ್ಯೂಜಿಲ್ಯಾಂಡ್ ಗೆಲುವು ಸಾಧಿಸಿ ಕಪ್ ತಮ್ಮದಾಗಿಸಿಕೊಂಡಿದ್ದರು. ಇದೀಗ ಭಾರತದ ವನಿತೆಯರು ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‍ಗಳ ಭರ್ಜರಿ ಜಯ ಸಾಧಿಸುವ ಮೂಲಕ ವಿಶ್ವಕಪ್ ಗೆದ್ದ ನಾಲ್ಕನೇ ದೇಶವಾಗಿ ಹೊರಹೊಮ್ಮಿದೆ. ಇದು ಕೇವಲ ಕ್ರಿಕೆಟ್ ತಂಡ, ಕ್ರಿಕೆಟ್ ಪ್ರೇಮಿಗಳು ಮಾತ್ರವಲ್ಲದೇ ಸಂಪೂರ್ಣ ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ.

ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಗರ್ಘಿಸಿದ ಭಾರತದ ವನಿತೆಯರು
ಟಾಸ್ ಸೋತ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಮೊದಲು ಬ್ಯಾಟಿಂಗ್ ನಡೆಸಿದರು. ಮೈದಾನಕ್ಕೆ ಪ್ರವೇಶಿಸುತ್ತಿದ್ದಂತೆ ಆರ್ಭಟಿಸಲು ಆರಂಭಿಸಿದ ಭಾರತದ ವನಿತೆಯರು ಆರಂಭದಲ್ಲೇ ಗೆಲುವಿನ ಮುನ್ಸೂಚನೆ ನೀಡಿದ್ದರು. ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ್ದು, ಮೊದಲ ವಿಕೆಟ್ ಪಥನಕ್ಕೆ 104 ರನ್ಗಳ ಜೊತೆಯಾಟ ನಡೆಸಿದ್ದರು. ಶಫಾಲಿ ವರ್ಮಾ ಜೊತೆಗಿನ ಜೊತೆಯಾಟದಲ್ಲಿ ಉತ್ತಮ ಸಾಥ್ ನೀಡಿದ್ದ ಸ್ಮೃತಿ ಮಂದಾನ 45 ರನ್ಗಳಿಸಿ ಕ್ಲೋಯ್ ಟ್ರಯಾನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ಬಳಿಕ ಅಖಾಡಕ್ಕಿಳಿದ ಶಫಾಲಿ ಮತ್ತು ಜೆಮಿಮಾ ರಾಡ್ರಿಗಸ್, 62 ರನ್ಗಳ ಜೊತೆಯಾಟವಾಡಿದ್ದು, ಒಟ್ಟಾರೆ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಬರೋಬ್ಬರಿ 298 ರನ್‌ಗಳ ಟಾರ್ಗೆಟ್ ನೀಡಿದರು. ಏಳು ವಿಕೆಟ್‌ಗಳ ನಷ್ಟಕ್ಕೆ ಭಾರತ ಐವತ್ತು ಓವರ್‌ಗಳಲ್ಲಿ ಮೂನ್ನೂರರ ಸಮೀಪದ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡಕ್ಕೆ ನೀಡಿದರು.

ಟೀಂ ಇಂಡಿಯಾ ಬೌರ್ಲಸ್‌ಗಳ ಅಬ್ಬರಕ್ಕೆ ನಡುಗಿದ ದಕ್ಷಿಣ ಆಫ್ರಿಕಾ
ಭರ್ಜರಿ ಬ್ಯಾಟಿಂಗ್ ಮಾಡಿದ ಭಾರತದ ಮಹಿಳಾ ತಂಡ ಬೌಲಿಂಗ್‌ನಲ್ಲೂ ಮೋಡಿ ಮಾಡಿದ್ದು, ಟೀಂ ಇಂಡಿಯಾ ಬೌರ್ಲಸ್‌ಗಳ ಅಬ್ಬರಕ್ಕೆ ದಕ್ಷಿಣ ಆಫ್ರಿಕಾದ ಆಟಗಾರರು ಮಂಡಿಯೂರಿದ್ದಾರೆ. ಭಾರತ ತಂಡದ ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ, ಶೆಫಾಲಿ ವರ್ಮಾ ಹಾಗೂ ಶ್ರೀ ಚರಣಿ ಬ್ಯಾಕ್ ಟು ಬ್ಯಾಕ್ ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು ಒಟ್ಟಾರೆ ದಕ್ಷಿಣ ಆಫ್ರಿಕಾ ಎದುರು ಗರ್ಘಿಸಿದ ಭಾರತದ ವನಿತೆಯರು 52 ರನ್‍ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತದ ಕ್ರಿಕೆಟ್ ಪ್ರೇಮಿಗಳ ಬಹು ವರುಷದ ಕನಸನ್ನು ನನಸು ಮಾಡಿದ್ದಾರೆ.

