
ದೌರ್ಜನ್ಯ-ಹಿಂಸೆಗೀಡಾದವರನ್ನು ನಿರ್ಲಕ್ಷಿಸುವ ಸಮಾಜ ಅಪರಾಧಿಕ ಜಗತ್ತಿನ ರಕ್ಷಕ ಆಗುತ್ತದೆ
ನಾ ದಿವಾಕರ
ಆಧುನಿಕ ಭಾರತ ಆರ್ಥಿಕವಾಗಿ ಏರುಗತಿಯಲ್ಲಿ ಸಾಗುತ್ತಿದೆ, ರಾಜಕೀಯವಾಗಿ ಪ್ರಜಾಪ್ರಭುತ್ವದ ತತ್ವಗಳಿಗೆ ಬದ್ಧವಾಗಿದೆ, ಧಾರ್ಮಿಕವಾಗಿ-ಸಾಂಸ್ಕೃತಿಕವಾಗಿ, ಹಲವು ಅಪಾಯಗಳ ಹೊರತಾಗಿಯೂ, ಬಹುತ್ವ ಸಂಸ್ಕೃತಿಯನ್ನು ಕಾಪಾಡಿಕೊಂಡು ವಿಶಿಷ್ಟ ಸ್ಥಾನ ಗಳಿಸಿದೆ, ಈ ಎಲ್ಲ ಮೇಲರಿಮೆಗಳ ಹೊರತಾಗಿ, ನಮ್ಮ ಸಾಮಾಜಿಕ ಆಲೋಚನಾ ವಿಧಾನ ಹಿಮ್ಮುಖ ಚಲನೆಯನ್ನೇ ಕಾಣುತ್ತಿದೆ. ಈ ವಿಪರ್ಯಾಸವನ್ನು ಹೇಗೆ ವಿಶ್ಲೇಷಿಸುವುದು ? ಸಮಾಜದ ಉನ್ನತಿಗೆ, ಉದಾತ್ತ ಬೆಳವಣಿಗೆಗೆ ಹಾಗೂ ಮಾನವೀಯ ಪ್ರಗತಿಗೆ ಪೂರಕವಾದ ಸುಧಾರಣೆಯ ದನಿಗಳು ಶತಮಾನಗಳಿಂದಲೂ ಈ ದೇಶದಲ್ಲಿ ಜೀವಂತಿಕೆಯಿಂದ ನಡೆದುಬಂದಿವೆ. ಇಂದು ನಾರಾಯಣಗುರು ಅವರನ್ನು ಸ್ಮರಿಸುತ್ತಿದ್ದೇವೆ.
ಸಹಜೀವಿಗಳನ್ನು ಮನುಷ್ಯರಂತೇ ನೋಡುವ, ಅವರ ನೋವು ಆತಂಕಗಳಿಗೆ ಮಾನವೀಯವಾಗಿ ಸ್ಪಂದಿಸುವ ಮತ್ತು ಅವರು ಪಾತಕ ಜಗತ್ತಿನಲ್ಲಿ ಅನುಭವಿಸುವ ಸಂಕಟಗಳಿಗೆ ಕಿವಿಗೊಡುವ ಒಂದು ಪರಂಪರೆಯನ್ನೂ ಈ ದೇಶ ಹೊಂದಿದೆ. ಆದರೆ ಆಧುನಿಕ ಜಗತ್ತಿಗೆ ಹೊರಳಿರುವ ನವ ಭಾರತ ಈ ಪರಂಪರೆಯ ಪಳೆಯುಳಿಕೆಗಳನ್ನೂ ಉಳಿಸಿಕೊಂಡಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ, ವಿಶಾಲ ಸಮಾಜದ ಬಹುಸಂಖ್ಯೆಯ ವರ್ಗಗಳು ವರ್ತಿಸುತ್ತಿವೆ. ದೌರ್ಜನ್ಯಕ್ಕೊಳಗಾದವರಿಗೆ, ನೊಂದವರಿಗೆ, ಹಸಿದವರಿಗೆ ದನಿಯಾಗುವವರನ್ನು ಮಾರ್ಕ್ಸ್‌ವಾದಿ ಅಥವಾ ಎಡಚರ (ಎಡಪಂಥೀಯ ಪದದ ಅಪಭ್ರಂಶ), ಪ್ರಗತಿಪರ ಎಂದು ಕರೆಯುವುದು, ಈ ತಾತ್ವಿಕತೆಗಳನ್ನು ಒಪ್ಪಿ ನಡೆಯುವರಿಗೆ ಹೆಮ್ಮೆಯ ವಿಚಾರ. ಜನಪರ ದನಿ ಎಲ್ಲವೂ ಮಾರ್ಕ್ಸ್‌ವಾದಿ ಎನ್ನುವುದು ಮಾರ್ಕ್ಸ್‌ವಾದದ ಹಿರಿಮೆ ಅಲ್ಲವೇ ?
ಈ ಹೋಲಿಕೆ, ಹೀಯಾಳಿಕೆಗಳ ಹೊರತಾಗಿ ನೋಡಿದಾಗ, ಕ್ರಮೇಣವಾಗಿ ಭಾರತೀಯ ಸಮಾಜ ಆರ್ಥಿಕವಾಗಿ ಮುಂದುವರೆದಷ್ಟೂ ಕೆಳಹಂತದಲ್ಲಿ ಇಂದಿಗೂ ಬದುಕು ಸವೆಸುತ್ತಿರುವ ಅಪಾರ ಜನಸಂಖ್ಯೆಯ ಬಗ್ಗೆ, ಅಲ್ಲಿ ಅನೇಕ ರೀತಿಯ ತಾರತಮ್ಯ, ದೌರ್ಜನ್ಯ, ದಬ್ಬಾಳಿಕೆ ಮತ್ತು ಅಸಮಾನತೆಗಳಿಗೆ ಒಳಗಾಗುತ್ತಿರುವ ಜನಸಮುದಾಯಗಳ ಬಗ್ಗೆ ಅಸಡ್ಡೆ ಹೆಚ್ಚಾಗುತ್ತಿರುವುದು ಇತಿಹಾಸದ ದ್ವಂದ್ವ ಅಲ್ಲವೇ ? ಅತ್ಯಾಚಾರಕ್ಕೊಳಗಾದ, ಹತ್ಯೆಗೀಡಾದ ಅಮಾಯಕ ಮಹಿಳೆಯರನ್ನು ನೊಂದ ಸಂತ್ರಸ್ತರನ್ನಾಗಿ ನೋಡಬೇಕಾದರೆ, ಅವರ ಜಾತಿ-ಮತ-ಧರ್ಮ-ಸಾಮುದಾಯಿಕ ಅಸ್ಮಿತೆಗಳೇ ಮಾನದಂಡವಾಗುವ ಒಂದು ವಿಕೃತ ಪರಂಪರೆಯನ್ನು ಸಮಾಜ ರೂಢಿಸಿಕೊಳ್ಳುತ್ತಿದೆ. ಇದು ರಾಜಕೀಯ ರೂಪದಲ್ಲಿದ್ದರೂ ಮೂಲತಃ ಸಾಂಸ್ಕೃತಿಕವಾಗಿ ನೆಲೆಗಾಣುತ್ತಿರುವ ಒಂದು ಜೀವ ವಿರೋಧಿ ಧೋರಣೆ ಎನ್ನುವುದು ವಾಸ್ತವ.
ಕ್ಷೇತ್ರ ಮತ್ತು ಜೀವಗಳ ತಾಕಲಾಟ
ಕರ್ನಾಟಕದಲ್ಲಿ ನಿತ್ಯ ಸದ್ದು ಮಾಡುತ್ತಿರುವ ಧರ್ಮಸ್ಥಳದ ಸುತ್ತಮುತ್ತ, ಕಳೆದ ಹಲವು ದಶಕಗಳಿಂದಲೂ ನಡೆಯುತ್ತಿರುವ ಅಮಾಯಕ ಮಹಿಳೆಯರ-ಬಾಲೆಯರ ಅತ್ಯಾಚಾರ, ಹತ್ಯೆ ಮತ್ತು ಕಾಣೆಯಾಗುವ ಪ್ರಕರಣಗಳು ಈಗ ಸಮಾಜದ ಈ ವರ್ಗಗಳನ್ನೂ ಎಚ್ಚರಿಸುತ್ತಿರುವುದು ವಾಸ್ತವ. ಸೌಜನ್ಯ, ಪದ್ಮಲತ, ವೇದವತಿ, ಸೌಜನ್ಯ ಹೀಗೆ ನೂರಾರು ಮಹಿಳೆಯರು ಇಂತಹ ಊಳಿಗಮಾನ್ಯ ಪುರುಷಾಧಿಪತ್ಯದ ದೌರ್ಜನ್ಯಕ್ಕೀಡಾಗಿರುವ ನತದೃಷ್ಟರು. ಈ ಸಂತ್ರಸ್ತರಿಗೆ ನ್ಯಾಯ ಕೊಡಿ ಎಂದು ಕೇಳುವುದನ್ನೇ ಅಪರಾಧ ಎಂದು ಭಾವಿಸುವ ಒಂದು ಸಮಾಜವೂ ನಮ್ಮ ನಡುವೆ ಇರುವುದು ನಾಗರಿಕತೆಯನ್ನು ಅಣಕಿಸುವ ವಿದ್ಯಮಾನ ಅಲ್ಲವೇ ? ಇಲ್ಲವಾಗಿರುವ ಈ ನೂರಾರು ಜೀವಗಳ, ಅವರ ಕುಟುಂಬದವರ ನೋವಿನ ದನಿಗೆ ದನಿಗೂಡಿಸುವ ಮನಸ್ಸುಗಳಿಗೆ ಧರ್ಮಸ್ಥಳ ಅಥವಾ ಅಲ್ಲಿನ ದೇವಸ್ಥಾನ ಮುಖ್ಯ ಪ್ರಶ್ನೆಯಾಗುವುದಿಲ್ಲ. ನಡೆದ ಅನ್ಯಾಯ ಮಾತ್ರವೇ ಮೂರ್ತ ಪ್ರಶ್ನೆಯಾಗುತ್ತದೆ. ಇದನ್ನು ವಸ್ತುನಿಷ್ಠವಾಗಿ ಒಪ್ಪಿಕೊಳ್ಳುವ ಒಂದು ಮನಸ್ಥಿತಿಯೇ ಇಲ್ಲದ ರಾಜಕೀಯ ಪಕ್ಷಗಳು ಮತ್ತು ಸಾಂಪ್ರದಾಯಿಕ ಸಮಾಜದ ಒಂದು ವರ್ಗ, ಧರ್ಮಸ್ಥಳದ ರಕ್ಷಣೆಗಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

ಈ ಮಹಿಳೆಯರು, ಬಾಲೆಯರು ಹೇಗೆ ಅಕಾಲ ಮರಣಕ್ಕೀಡಾದರು ? ಬದುಕಿಗೆ ಕಣ್ತೆರೆಯುವ ಮುನ್ನವೇ ಭೀಕರ ದೌರ್ಜನ್ಯಕ್ಕೀಡಾಗಿ ಶವವಾದ ಸೌಜನ್ಯ ಯಾರ ದುಷ್ಕೃತ್ಯಕ್ಕೆ ಬಲಿಯಾದಳು ? ಆಕೆಯ ಮತ್ತು ಇತರ ಜೀವಗಳ, ತಾಯಿ ಮತ್ತು ಕುಟುಂಬದ ಸದಸ್ಯರಿಗೆ ಪ್ರಾಮಾಣಿಕ ಉತ್ತರ ನೀಡುವುದು ಸಮಾಜದ ನೈತಿಕ ಕರ್ತವ್ಯ ಅಲ್ಲವೇ ? ಇಡೀ ಸಮಾಜವನ್ನು ಆಡಳಿತಾತ್ಮಕವಾಗಿ ನಿರ್ವಹಿಸುವ, ಕಾನೂನಾತ್ಮಕವಾಗಿ ನಿಯಂತ್ರಿಸುವ ಮತ್ತು ತಮ್ಮದೇ ಆದ ತಾತ್ವಿಕ ನೆಲೆಗಳಲ್ಲಿ ನಿರ್ದೇಶಿಸುವ ರಾಜಕೀಯ ಪಕ್ಷಗಳು/ನಾಯಕರು ಈ ನೈತಿಕತೆಯನ್ನು ತಮ್ಮ ಸ್ವಾರ್ಥ ಲಾಭಕ್ಕಾಗಿ ಮರೆತರೆ, ಈ ಬೆಂದ ಜೀವಗಳಿಗೆ ಮತ್ತು ಸಂತ್ರಸ್ತರಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸಿ, ಸಾಂತ್ವನ ಹೇಳುವುದು ಸುಶಿಕ್ಷಿತ-ಪ್ರಜ್ಞಾವಂತ-ನಾಗರಿಕತೆಯನ್ನು ಉಸಿರಾಡುವ ಸಮಾಜದ ಕರ್ತವ್ಯ ಆಗುವುದಿಲ್ಲವೇ ?
ಹೀಗೆ ನೊಂದ ಜೀವಗಳೊಡನೆ ದನಿಗೂಡಿಸುವವರಿಗೆ ನಗರ ನಕ್ಸಲರು, ಬುದ್ಧಿಜೀವಿಗಳು, ಮಾರ್ಕ್ಸ್-ಅಂಬೇಡ್ಕರ್‌ವಾದಿಗಳು ಮುಂತಾದ ಹಣೆಪಟ್ಟಿಗಳನ್ನು ಲಗತ್ತಿಸಿದ ಮಾತ್ರಕ್ಕೆ ಅದೇನೂ ಅಪಮಾನಕರವಲ್ಲ, ಬದಲಾಗಿ ಮಾನವೀಯ ಮೌಲ್ಯಗಳೇ ನಿಶ್ಶೇಷವಾಗುತ್ತಿರುವ ಸಮಾಜದಲ್ಲಿ ನೋವಿಗೆ ಸ್ಪಂದಿಸುವ-ಸಾಂತ್ವನ ಹೇಳುವ ಮನಸ್ಸುಗಳೂ ಇವೆ ಎನ್ನುವುದರ ದ್ಯೋತಕ ಎಂದೇ ಭಾವಿಸಬೇಕಾಗುತ್ತದೆ. ಆದರೆ ನೋವಿನ ವಿಚಾರ ಎಂದರೆ ಈ ನೊಂದ ಜೀವಗಳನ್ನು ಅಧಿಕಾರ ರಾಜಕಾರಣ ಮತ್ತು ಅದರ ವಾರಸುದಾರರು ನೋಡುವ ದೃಷ್ಟಿಕೋನ. ಧರ್ಮಸ್ಥಳ ಒಂದೇ ಅಲ್ಲ, ಭಾರತದ ಉದ್ದಗಲಕ್ಕೂ ಗುರುತಿಸಬಹುದಾದ ಒಂದು ಸಮಾನ ಎಳೆ ಎಂದರೆ, ಅತ್ಯಾಚಾರ, ದೌರ್ಜನ್ಯ, ಹತ್ಯೆಗೀಡಾದ, ನಿರಂತರ ಶೋಷಣೆಗೊಳಗಾಗುತ್ತಿರುವ ದುರ್ಬಲ ವರ್ಗಗಳ ಮಹಿಳೆಯರು , ರಾಜಕೀಯ ನಾಯಕರ ಪಾಲಿಗೆ ಕಡೆಯ ಅಥವಾ ಕಡೆಗಣಿಸಬಹುದಾದ ಆದ್ಯತೆಯೇ ಆಗಿರುತ್ತದೆ.
ಮನುಜ ಸೂಕ್ಷ್ಮತೆ ಇಲ್ಲದಿರುವಾಗ,,,
ಈ ಅಸೂಕ್ಷ್ಮತೆಯ ವಿರುದ್ಧವೇ ಪ್ರಜ್ಞಾವಂತ ಸಮಾಜ ನಿರಂತರ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಧರ್ಮಸ್ಥಳದ ಪ್ರಕರಣಗಳ ಹಿನ್ನೆಲೆಯಲ್ಲಿ ಮಹಿಳೆಯರ ಪ್ರತಿರೋಧದ ಸಂಕೇತವಾಗಿ ರೂಪುಗೊಂಡಿರುವ ʼ ಕೊಂದವರು ಯಾರು ʼ ಎಂಬ ಗುಂಪಿನ ಮಹಿಳೆಯರು ಒತ್ತಾಯಿಸುತ್ತಿರುವುದು ನಿರ್ದಿಷ್ಟ ವ್ಯಕ್ತಿಗಳನ್ನು ಶಿಕ್ಷಿಸಬೇಕು ಎಂದಾಗಲೀ, ಅಂತಹ ವ್ಯಕ್ತಿಗಳ ವಾಸದ ಭೂ ಪ್ರದೇಶವನ್ನು ಕಟಕಟೆಯಲ್ಲಿ ನಿಲ್ಲಿಸಬೇಕು ಎಂದಾಗಲೀ ಅಲ್ಲ. ಕೊಂದವರು, ಅತ್ಯಾಚಾರ ಎಸಗಿದವರು ಯಾರೇ ಆಗಿರಲಿ, ಈ ಮಹಿಳೆಯರ ಮತ್ತು ಅವರೊಡನೆ ಹೆಗಲಾಗಿ ನಿಂತಿರುವ ಸಮಾಜದ ಉದ್ದೇಶ ಇರುವುದು ನೊಂದು ಬೆಂದವರಿಗೆ, ಅನಾಥ ಶವಗಳಾಗಿ ಕೊನೆಯಾದವರಿಗೆ, ಯಾರದೋ ದೌರ್ಜನ್ಯಕ್ಕೀಡಾಗಿ ಅನಾಥ ಹೆಣಗಳಾದವರಿಗೆ ನ್ಯಾಯ ಒದಗಿಸುವುದು. ಇದನ್ನೇ ಅಪರಾಧ ಎನ್ನುವುದಾದರೆ, ನಮ್ಮ ಸಮಾಜವನ್ನು ʼಮಾನವ ಸಮಾಜʼ ಎಂದು ಹೇಗೆ ನಿರ್ವಚಿಸಲು ಸಾಧ್ಯ ? ಕನ್ನಡದ ಸುದ್ದಿವಾಹಿನಿಯೊಂದು ಈ ಮಹಿಳೆಯರನ್ನು ʼ ಕಾಂಗ್ರೆಸ್ ಮಹಿಳಾ ಮಣಿಗಳು ʼ ಎಂದು ಲೇವಡಿ ಮಾಡಿರುವುದು, ಸಮಾಜದಲ್ಲಿನ ಈ ಅಸೂಕ್ಷ್ಮತೆ ಮತ್ತು ಅಮಾನುಷ ಧೋರಣೆಯ ಪ್ರತೀಕವಾಗಿ ಕಾಣುತ್ತದೆ.
ಭಾರತದ ಪಿತೃಪ್ರಧಾನ-ಊಳಿಗಮಾನ್ಯ-ಜಾತಿಗ್ರಸ್ತ ಸಮಾಜದಲ್ಲಿ ನೊಂದ ಮಹಿಳೆಯ ದನಿಗೆ , ಆ ಜೀವಗಳ ನೋವಿಗೆ ಸ್ಪಂದಿಸುವ ಮನುಷ್ಯ ಜೀವಿಗಳಿಗೆ ಯಾವುದೇ ಹಣೆಪಟ್ಟಿ ಅಗತ್ಯವಿಲ್ಲ ಎನ್ನುವ ಕನಿಷ್ಠ ವಿವೇಕವಾದರೂ ಮಾಧ್ಯಮಗಳಿಗೆ ಇರಬೇಕು. ಹಾಥ್ರಸ್‌ನಲ್ಲಿ ರಾತ್ರೋರಾತ್ರಿ ದಹಿಸಿಹೋದ ಯುವತಿಯಾಗಲೀ, ದೇಶದ ರಾಜಧಾನಿ ದೆಹಲಿಯಲ್ಲಿ ಅತ್ಯಾಚಾರಕ್ಕೀಡಾಗಿ ಜೀವತೆತ್ತ ನಿರ್ಭಯ ಆಗಲೀ, ಪ್ರತಿ ಗಂಟೆಗೊಂದರಂತೆ ಪುರುಷ ಸಮಾಜದ ದೌರ್ಜನ್ಯಕ್ಕೀಡಾಗುತ್ತಿರುವ ಯಾವುದೇ ಮಹಿಳೆಯಾಗಲೀ, ಸಮಾಜದ ಸಾಂತ್ವನ ಬಯಸುವುದು ಮತ್ತು ಸಮಾಜ ಸಹೃದಯತೆಯಿಂದ ಸ್ಪಂದಿಸುವುದು ನಾಗರಿಕತೆಯ ಲಕ್ಷಣ ಅಲ್ಲವೇ ? ಈ ಸ್ಪಂದನೆಯನ್ನೇ ಲೇವಡಿ ಮಾಡುವುದು ಯಾವ ಪರಂಪರೆ ಅಥವಾ ಯಾವ ಸಂಸ್ಕೃತಿ ? ಇದಕ್ಕೆ ಪಿತೃಪ್ರಧಾನ ವ್ಯವಸ್ಥೆಯ ವಾರಸುದಾರರು ಉತ್ತರಿಸಬೇಕಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಸ್ವತಂತ್ರ ಭಾರತದ ಚರಿತ್ರೆಯಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಬಂದಿವೆ. ಕೋಮುದ್ವೇಷ, ಮತದ್ವೇಷ, ಮತಾಂಧತೆ, ಪುರುಷಾಧಿಪತ್ಯದ ನೆಲೆಗಳಲ್ಲಿ ಸಾಮಾನ್ಯ ಜನತೆ ಬಲಿಯಾಗುತ್ತಲೇ ಬಂದಿದ್ದಾರೆ. ನಾಲ್ಕು ದಶಕಗಳ ಹಿಂದೆ ನಡೆದ ನೆಲ್ಲಿ ಹತ್ಯಾಕಾಂಡದಿಂದ, 1984ರ ಸಿಖ್ ವಿರೋಧಿ ದಂಗೆ, 2002ರ ಗುಜರಾತ್‌ವರೆಗೂ ಹಲವು ಘಟನೆಗಳಲ್ಲಿ ನೂರಾರು ಅಮಾಯಕರು ಜೀವ ತೆತ್ತಿದ್ದಾರೆ. ಆದರೆ ಯಾವ ಘಟನೆಗಳಲ್ಲೂ ಯಾರೂ ಸಹ ಉತ್ತರದಾಯಿಯಾಗಿಲ್ಲ. ಸಮಾಜವೂ ತನ್ನ ಉತ್ತರದಾಯಿತ್ವವನ್ನು ಮರೆತಿದೆ. ಈ ಕೋಮುಗಲಭೆಗಳಲ್ಲಿ ಮಡಿದ ಸಾವಿರಾರು ಜನರ ಸಾವಿಗೆ ಯಾರು ಕಾರಣ ? ಇವರೆಲ್ಲರೂ ಸ್ವ- ಇಚ್ಛೆಯಿಂದ ತಪತಪನೆ ಉದುರಿಹೋದರೇ ? ಉಳಿದುಕೊಂಡರೂ ಬಹಿಷ್ಕೃತರಾಗಿ, ನಿರ್ಗತಿಕರಾಗಿ, ಅವಮಾನಿತರಾಗಿ ಬದುಕು ಸವೆಸಬೇಕಾಗಿ ಬಂದ ಸಂತ್ರಸ್ತ ಕುಟುಂಬಗಳ ಯಾತನೆಯನ್ನು ಯಾರು ಕೇಳಬೇಕು ?
ಆತ್ಮಸಾಕ್ಷಿಯ ಪ್ರಶ್ನೆಗಳಿಗೆ ಉತ್ತರ ???
ಈ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಗೆ ತುತ್ತಾದ ಸಾವಿರಾರು ಕುಟುಂಬಗಳಲ್ಲಿ ಈ ಪ್ರಶ್ನೆ ಸಹಜವಾಗಿ ಇರುತ್ತದೆ. ವಿಭಜನೆಯ ಗಳಿಗೆಯಿಂದ ಹಿಡಿದು ಇಲ್ಲಿಯವರೆಗೆ, ದೇಶದ ವಿವಿಧೆಡೆಗಳಲ್ಲಿ ಸಂಭವಿಸಿದ ಕೋಮು ಗಲಭೆಗಳಲ್ಲಿ, ದ್ವೇಷಾಸೂಯೆಯ ದಾಳಿಗಳಲ್ಲಿ, ಇಂದಿಗೂ ತುಡುಗುಪಡೆಗಳ (Fringe elements) ದಾಳಿಗಳಲ್ಲಿ, ಜಾತಿ ದೌರ್ಜನ್ಯಗಳಲ್ಲಿ ಜೀವ ತೆತ್ತ- ಜೀವ ಉಳಿದರೂ ನಿರ್ಗತಿಕರಾಗಿ ಬದುಕು ಸವೆಸುತ್ತಿರುವ ಲಕ್ಷಾಂತರ ಜನರ ಸಾವು ನೋವುಗಳಿಗೆ ಕಾರಣಕರ್ತರು ಯಾರು ? ಆಡಳಿತಾರೂಢ ಸರ್ಕಾರಗಳ ನಿರ್ಲಕ್ಷ್ಯ, ಅಸಡ್ಡೆ ಅಥವಾ ತಾರತಮ್ಯ ದೃಷ್ಟಿಕೋನಗಳನ್ನು ಬದಿಗಿಟ್ಟು ನೋಡಿದಾಗಲೂ, ಈ ವೇದನೆಗಳಿಗೆ ನಮ್ಮ ಸಮಾಜವೇ ಕಾರಣ ಅಲ್ಲವೇ ? ಈ ಸಮಾಜವೇ ಸೃಷ್ಟಿಸಿರುವ ದುಷ್ಟ ಶಕ್ತಿಗಳು ಕಾರಣ ಅಲ್ಲವೇ ? ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಈ ಸಮಾಜಗಳ ಬಹುಸಂಖ್ಯೆಯ ಜನರನ್ನು ಪ್ರಭಾವಿಸುವ, ಧಾರ್ಮಿಕ-ಆಧ್ಯಾತ್ಮಿಕ-ಜಾತೀಯ ಸಂಸ್ಥೆಗಳಲ್ಲವೇ ?

ಸಾಮಾನ್ಯ ಮನುಷ್ಯರಲ್ಲಿ ದುಷ್ಟ ಪ್ರವೃತ್ತಿಯನ್ನು ಮೂಡಿಸುವುದು ಎಷ್ಟು ಅಪರಾಧವೋ ಅದಕ್ಕಿಂತಲೂ ಹೀನಾಪರಾಧವಾಗಿ ಕಾಣಬೇಕಿರುವುದು, ಅಂತಹ ದುಷ್ಟತನವನ್ನು ಪೋಷಿಸುವುದು ಅಥವಾ ಕಂಡೂ ಕಾಣದಂತೆ ಇರುವುದು, ಅಥವಾ ಮನುಷ್ಯ ಜೀವಿಯ ಸಾವನ್ನೂ, ಹೆಣಗಳನ್ನೂ ಜಾತಿ-ಮತ-ಧರ್ಮಗಳ ಗುರುತು ನೀಡಿ ಹೆಕ್ಕಿ ತೆಗೆದು, ನ್ಯಾಯಾನ್ಯಾಯದ ದನಿ ಏರಿಸುವುದು ಹಾಗೂ ತಮ್ಮ ತಾತ್ವಿಕ ಅನುಕೂಲತೆಗಳ ದೃಷ್ಟಿಯಿಂದ ಅತ್ಯಾಚಾರಿಗಳನ್ನೂ, ಹಂತಕರನ್ನೂ, ದೌರ್ಜನ್ಯಕ್ಕೀಡಾದವರನ್ನೂ ವಿಂಗಡಿಸುವುದು ಇವೇ ಮುಂತಾದ ಧೋರಣೆಗಳು. ಸಮಕಾಲೀನ ಭಾರತದಲ್ಲಿ ನಾವು ನೇರವಾಗಿ ಕಾಣುತ್ತಿರುವ ದುರಂತ ಇದು. ಈಗ ಧರ್ಮಸ್‌ಥಳದ ಸುತ್ತ ನಡೆದಿರುವ ದೌರ್ಜನ್ಯಗಳಿಗೆ ನ್ಯಾಯ ಕೇಳುತ್ತಿರುವಾಗ, ಈ ನೊಂದ ಜನರ ಪರವಾಗಿ ನಿಲ್ಲುವುದು ರಾಜಕೀಯ ಪಕ್ಷಗಳ ಆದ್ಯತೆ, ನೈತಿಕ ಕರ್ತವ್ಯ ಆಗಬೇಕಲ್ಲವೇ ?
ಆದರೆ ಮುಖ್ಯವಾಹಿನಿಯ ಎಲ್ಲ ಪಕ್ಷಗಳೂ ಧರ್ಮಸ್ಥಳದ ಗೌರವ ಕಾಪಾಡುವ ಸಲುವಾಗಿ, ಪಾದಯಾತ್ರೆ, ಮೆರವಣಿಗೆ, ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿವೆ. ನೊಂದವರ ಪರ ಸದ್ದು ಮಾಡುತ್ತಿರುವವರಿಗೆ ಧರ್ಮಸ್ಥಳ ಪ್ರಸ್ತುತ ಅಲ್ಲ. ಅಥವಾ ಮತ್ತಾವುದೇ ಕ್ಷೇತ್ರ ಮುಖ್ಯವಾಗುವುದಿಲ್ಲ. ಈ ಪ್ರದೇಶಗಳಲ್ಲೇ ನಡೆದಿರುವ ದೌರ್ಜನ್ಯಗಳಿಗೆ ಕಾರಣಕರ್ತರಾದ ಅಮಾನುಷ ವ್ಯಕ್ತಿಗಳು ಮುಖ್ಯವಾಗುತ್ತಾರೆ. ಅವರ ಸ್ಥಾನಮಾನ, ಅಂತಸ್ತು, ಅಧಿಕಾರ ಅಥವಾ ಸಂಪತ್ತು ಇದಾವುದೂ ಮುಖ್ಯವಾಗುವುದಿಲ್ಲ. ಇವರು ಯಾರು ಎಂದು ನಿರ್ಧರಿಸುವ ಜವಾಬ್ದಾರಿಯನ್ನು ಸರ್ಕಾರ, ನ್ಯಾಯಾಂಗ ಮತ್ತು ಕಾನೂನು ವ್ಯವಸ್ಥೆ ಹೊತ್ತಿರುತ್ತದೆ. ಆದರೆ ಈ ಪ್ರಕ್ರಿಯೆಯನ್ನೇ ಅವಮಾನಿಸುವ, ಅವಹೇಳನ ಮಾಡುವ ಸಮಾಜದ ಒಂದು ವರ್ಗಕ್ಕೆ ಏನು ಹೇಳಬೇಕು ? ಮನುಜ ಪ್ರಜ್ಞೆ ಮತ್ತು ಸೂಕ್ಷ್ಮ ಸಂವೇದನೆ ಜೀವಂತವಾಗಿರುವ ಯಾವುದೇ ಸಮಾಜ ಈ ಪ್ರಶ್ನೆಯನ್ನು ತನಗೆ ತಾನೇ ಕೇಳಿಕೊಳ್ಳಬೇಕಲ್ಲವೇ ?

ವಿಕಸಿತ ಭಾರತದ ಕನಸು ಹೊತ್ತು,,,,,
ಎಲ್ಲ ಕ್ಷೇತ್ರಗಳಲ್ಲೂ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗುವ ಕನಸು ಹೊತ್ತು 2047ರ ವಿಕಸಿತ ಭಾರತದ ಹಾದಿಯಲ್ಲಿ ಸಾಗುತ್ತಿರುವ ಒಂದು ದೇಶ ಮತ್ತು ಅದನ್ನು ಪ್ರತಿನಿಧಿಸುವ ಸಮಾಜ, ಈ ಮಾನವೀಯ ದೃಷ್ಟಿಕೋನವನ್ನೇ ಕಳೆದುಕೊಂಡರೆ, ಈ ಹಾದಿಯಲ್ಲಿ ನಿರ್ಲಕ್ಷಿಸಲ್ಪಡುವ, ಅಂಚಿಗೆ ತಳ್ಳಲ್ಪಡುವ, ಶೋಷಿಸಲ್ಪಡುವ ಮತ್ತು ಅಮಾನುಷ ದೌರ್ಜನ್ಯಗಳಿಗೆ ತುತ್ತಾಗುವ ಸಾಮಾನ್ಯ ಜನತೆ , ದುರ್ಬಲ ವರ್ಗಗಳು, ವಿಶೇಷವಾಗಿ ಮಹಿಳೆಯರು, ತಳಸಮುದಾಯಗಳು, ಬುಡಕಟ್ಟು ಸಮಾಜಗಳು ಯಾರ ಕಡೆ ನೋಡಬೇಕು ? ಈ ಪ್ರಶ್ನೆಗೆ ಉತ್ತರಿಸಬೇಕಿರುವುದು ಯಾತ್ರಾ ನಿರತ ರಾಜಕೀಯ ನಾಯಕರು , ಸರ್ಕಾರಗಳು ಮತ್ತು ಆಡಳಿತ ವ್ಯವಸ್ಥೆಯ ಜವಾಬ್ದಾರಿ ಇರುವ ಅಧಿಕಾರ ವರ್ಗ ಅಲ್ಲವೇ ? ನೊಂದವರಿಗೆ ನ್ಯಾಯ ಕೇಳುವವರನ್ನೇ ಅನುಮಾನಿಸುವ, ಅಂತಹ ಸಂಸ್ಥೆಗಳ , ವ್ಯಕ್ತಿಗಳ ಚಾರಿತ್ರ್ಯವಧೆ ಮಾಡಲು ತುದಿಗಾಲಲ್ಲಿ ನಿಂತಿರುವ ಕನ್ನಡದ ಮುಖ್ಯವಾಹಿನಿ ವಿದ್ಯುನ್ಮಾನ ಮಾಧ್ಯಮಗಳು ಈ ಪ್ರಶ್ನೆಗೆ ಉತ್ತರಿಸಬೇಕಿದೆ.
ಇದು ಕೇವಲ ಧರ್ಮಸ್ಥಳದ ಪ್ರಶ್ನೆ ಅಲ್ಲ. ದೆಹಲಿಯಿಂದ ಕೋಲಾರದವರೆಗೆ ಅತ್ಯಾಚಾರ, ದೌರ್ಜನ್ಯಕ್ಕೀಡಾಗುತ್ತಿರುವ, ಅಕಾಲಿಕ ಅಸಹಜ ಸಾವಿಗೆ ಈಡಾಗುತ್ತಿರುವ, ಶೋಷಣೆಗೊಳಗಾಗುತ್ತಿರುವ ಎಲ್ಲ ಪ್ರಜೆಗಳ ಜೀವನ, ಬದುಕಿನ ಪ್ರಶ್ನೆ. ಸಂವಿಧಾನ ಪ್ರತಿಯೊಬ್ಬ ನಾಗರಿಕರಿಗೂ ಬದುಕುವ ಹಕ್ಕು ನೀಡಿದೆ. ಆದರೆ ಈ ಹಕ್ಕನ್ನು ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಅಭೀಪ್ಸೆಗಳನ್ನು ತೀರಿಸಿಕೊಳ್ಳುವುದಕ್ಕಾಗಿ, ತಮ್ಮ ದುಷ್ಟ ಪ್ರವೃತ್ತಿಯನ್ನು ಪ್ರದರ್ಶಿಸಿ ಸಮಾಜದ ಮೇಲೆ ಹಿಡಿತ ಸಾಧಿಸುವ ಪಾತಕ ಜಗತ್ತಿನ ಒಂದು ವರ್ಗ, ಕಸಿದುಕೊಳ್ಳುತ್ತಲೇ ಇದೆ. ಭವಾರಿ ದೇವಿ, ಬಿಲ್ಕಿಸ್ ಬಾನೋ, ನಿರ್ಭಯ, ಧಾನಮ್ಮ, ಸೌಜನ್ಯ ಇವರೆಲ್ಲರೂ ಈ ದುಷ್ಟ ಜಗತ್ತಿನಲ್ಲಿ ನಮ್ಮ ನಡುವೆ ಕಾಣುವ ದುರಂತ ನಿದರ್ಶನಗಳಲ್ಲವೇ ? ಇವರುಗಳ ಪರವಾಗಿ , ಎಡಪಕ್ಷಗಳನ್ನು ಹೊರತುಪಡಿಸಿ, ಯಾವ ಪಕ್ಷವಾದರೂ ಪಾದಯಾತ್ರೆ ನಡೆಸಿದೆಯೇ ?
ಅಧಿಕಾರ ರಾಜಕಾರಣದ ಹಲವು ಅಪಸವ್ಯಗಳ ನಡುವೆಯೂ ಕೆಲವರಾದರೂ ಪ್ರಜ್ಞಾವಂತ, ಸಮಾಜಮುಖಿ, ಜನಪರ ರಾಜಕಾರಣಿಗಳು ಇರುವುದು ಸತ್ಯ. ಇವರ ದನಿಗೆ ಏನಾಗಿದೆ ? ನ್ಯಾಯಕ್ಕಾಗಿ ಆಗ್ರಹಿಸುವ ಸಾರ್ವಜನಿಕರೇ ಅಪರಾಧಿಗಳಾಗಿ ಕಂಡರೆ, ಸಮಾಜದ ಎಲ್ಲ ವಲಯಗಳನ್ನೂ, ಎಲ್ಲ ಸ್ತರಗಳಲ್ಲೂ ಆಕ್ರಮಿಸುತ್ತಿರುವ ಪಾತಕ ಜಗತ್ತು ನಿರ್ಭಿಡೆಯಿಂದ ಇರುತ್ತದೆ. ಈ ಪರಿವೆ ರಾಜಕೀಯ ಪಕ್ಷಗಳಿಗೆ ಇರಬೇಕಲ್ಲವೇ ? ಚುನಾವಣೆಗಳ ದೃಷ್ಟಿಯಿಂದ, ಅಧಿಕಾರ ಗಳಿಸಲು ಅನುಸರಿಸುವ, ಪಾಲಿಸುವ ತತ್ವ ಸಿದ್ಧಾಂತಗಳಿಂದಾಚೆಗೂ, ಒಂದು ಮಾನವ ಸಮಾಜವನ್ನು ನಾವು ಪ್ರತಿನಿಧಿಸುತ್ತೇವೆ ಎಂಬ ಕನಿಷ್ಠ ಅರಿವು, ಪರಿಜ್ಞಾನ ರಾಜಕೀಯ ಪಕ್ಷಗಳಲ್ಲಿ ಇರಬೇಕಲ್ಲವೇ ? ಹಾಗಿದ್ದಲ್ಲಿ ಮಾತ್ರವೇ ನಮ್ಮ ಸಮಾಜವನ್ನು ʼ ಮಾನವೀಯ ʼ ಎಂದು ನಿರ್ವಚಿಸಲು ಸಾಧ್ಯ. ಇಲ್ಲವಾದರೆ ದೌರ್ಜನ್ಯಗಳಿಗೆ ತುತ್ತಾಗುವ ಅಮಾಯಕ ಜೀವಗಳು ಅನಾಥವಾಗಿಬಿಡುತ್ತವೆ.
-೦-೦-೦-














