ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದವರೇ ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ ಕರ್ನಾಟಕ ಮಾಡೆಲ್ ಅನುಸರಿಸಿದ್ದಾರೆ

“ಈ ದೇಶದಲ್ಲಿ ಬಡವರಿಗೆ ಸೂರು, ಹೊಟ್ಟೆ ತುಂಬಿಸಲು ಅನ್ನ, ಕೆಲಸ ಮಾಡಲು ಉದ್ಯೋಗ, ಉಳುವವನಿಗೆ ಭೂಮಿ ಕೊಟ್ಟಿರುವುದು, ಫಾರಂ 53 ತಂದು ಬಗರ್ ಹುಕುಂ ಸಾಗುವಳಿ ಜಮೀನು ಸಕ್ರಮ, ಅರಣ್ಯ ಪ್ರದೇಶದಲ್ಲಿ ವಾಸವಿರುವ ಬುಡಕಟ್ಟು ಜನರಿಗೆ ಭೂಮಿ ಕೊಟ್ಟಿರುವುದು ಕಾಂಗ್ರೆಸ್ ಸರ್ಕಾರ. ಇದೇ ನಮ್ಮ ಇತಿಹಾಸ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಶುಕ್ರವಾರ ತಿಳಿಸಿದರು.
ನಿಯಮಾವಳಿ 69ರ ಅಡಿಯಲ್ಲಿ ಅಭಿವೃದ್ಧಿ ಮತ್ತು ಅತಿವೃಷ್ಟಿ ಸಂಕಷ್ಟ ಕುರಿತ ವಿಶೇಷ ಚರ್ಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಉತ್ತರಿಸಿದರು.
“ಬೇಕಿದ್ದರೆ ನೀವು ನಿಮ್ಮ ಸರ್ಕಾರದ ಸಾಧನೆಗಳನ್ನು ಹೇಳಿ. ನಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ದೇಶದ ಗೌರವಾನ್ವಿತ ಪ್ರಧಾನಮಂತ್ರಿಗಳು ಟೀಕೆ ಮಾಡಿದ್ದರು. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಇದು ಜಾರಿ ಅಸಾಧ್ಯ ಎಂದರು. ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದರು. ಆದರೆ ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಕರ್ನಾಟಕ ಮಾದರಿ ಅನುಸರಿಸಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಯೋಜನೆಗಳೇ ಹೊರತು ಬಿಜೆಪಿ ಯೋಜನೆಗಳಲ್ಲ ಎಂಬುದನ್ನು ಈ ಸದನದಲ್ಲಿ ಮತ್ತೊಮ್ಮೆ ಹೇಳುತ್ತೇನೆ” ಎಂದು ತಿಳಿಸಿದರು.

“ಚುನಾವಣೆ ಸಂದರ್ಭದಲ್ಲಿ ನಾನು ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳಿದ್ದೆ. ಈ ದಾನ ದರ್ಮ ಮಾಡುವ ಕೈಗೆ ಜನ ಅಧಿಕಾರ ಕೊಟ್ಟಿದ್ದಕ್ಕೆ ಐದು ಗ್ಯಾರಂಟಿ ಕೊಟ್ಟಿದೆ. ಈ ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿಗಳು ಸೇರಿ ಕೈ ಗಟ್ಟಿಯಾಯಿತು. ಇದಕ್ಕೆಲ್ಲ ಉತ್ತರವನ್ನು 2028ರಲ್ಲಿ ರಾಜ್ಯದ ಜನ ಉತ್ತರ ನೀಡಲಿದ್ದಾರೆ” ಎಂದು ತಿಳಿಸಿದರು.
“ನಿಯಮ 69ರ ಅಡಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು 38 ಶಾಸಕರು 6 ಗಂಟೆ 17 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದು, ಜನ ನಮ್ಮನ್ನು ಆಡಳಿತದಲ್ಲಿ ಕೂರಿಸಿದ್ದಾರೆ. ಪ್ರತಿಪಕ್ಷದಲ್ಲಿರುವವರೂ ಈ ಹಿಂದೆ ಆಡಳಿತ ಮಾಡಿದ್ದಾರೆ. ಈ ಸರ್ಕಾರದಲ್ಲಿ ಆಡಳಿತ ಪಕ್ಷದ 139 ಶಾಸಕರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ, ಮುಖ್ಯಮಂತ್ರಿಗಳು ಆಗ ವಿರೋಧ ಪಕ್ಷದ ನಾಯಕರಾಗಿ ಇಡೀ ರಾಜ್ಯದ ಪ್ರವಾಸ ಮಾಡಿ ಜನರ ಆಸೆ, ಆಕ್ರೋಶ ಗಮನದಲ್ಲಿಟ್ಟುಕೊಂಡು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು” ಎಂದರು.
“ಬೆಲೆಗಳು ಆಗಸಕ್ಕೇರಿ, ಆದಾಯ ಪಾತಾಳಕ್ಕೆ ಕುಸಿದಿತ್ತು. ಇದನ್ನು ಯಾವ ರೀತಿ ಸರಿ ಮಾಡಬೇಕು. ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದಾಗ ನಾವು ವಿರೋಧ ಪಕ್ಷದಲ್ಲಿದ್ದಾಗ 100 ನಾಟೌಟ್ ಎಂದು ಟೀಕೆ ಮಾಡಿದೆವು. ಗ್ಯಾಸ್ ಬೆಲೆ 400ರಿಂದ 1100 ರೂ. ಆಗಿತ್ತು. ನಾವು ಎಲ್ಲೇ ಹೋದರೂ, ಹಿರಿಯರು, ಮಹಿಳೆಯರು, ಯುವಕರು ಈ ವಿಚಾರವಾಗಿ ಅತೃಪ್ತಿ ವ್ಯಕ್ತಪಡಿಸುತ್ತಿದ್ದರು. ಯುವಕರು ಉದ್ಯೋಗವಿಲ್ಲ ಎಂದು ಕೇಳಿದಾಗ, ಅವರಿಗೆ ಪಕೋಡಾ ಮಾರಿ ಎಂದು ಕೆಲವು ನಾಯಕರು ಹೇಳಿದರು. ಹೀಗಾಗಿ ನಮ್ಮ ಮೇಲೆ ಭರವಸೆ ಇಡಿ, ನಮಗೆ ಅಧಿಕಾರ ನೀಡಿ, ನಾವು ನಿಮ್ಮ ಬುಕಿನಲ್ಲಿ ಬದಲಾವಣೆ ತರುತ್ತೇವೆ ಎಂದು ಜನರಲ್ಲಿ ಮನವಿ ಮಾಡಿದೆವು. ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡುತ್ತಿದ್ದರು. ನಾವು ಬದುಕಿನ ಮೇಲೆ ರಾಜಕಾರಣ ಮಾಡಬೇಕು ಎಂಬುದು ನಮ್ಮ ಪಕ್ಷದ ಮೂಲ ಸಿದ್ಧಾಂತ” ಎಂದರು.

“ಕಾಂಗ್ರೆಸ್ ಪಕ್ಷ ಯಾವಾಗಲೇ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವಾಗಿನಿಂದ ಇತಿಹಾಸ ತೆಗೆದು ನೋಡಿ. ನಾವು ಪ್ರತಿ ಸಂದರ್ಭದಲ್ಲೂ ಸಂವಿಧಾನ ಹಾಗೂ ಕಾನೂನು ಅಡಿಯಲ್ಲಿ ಜನರ ಬದುಕಿಗೆ ಅವಕಾಶ ಕಲ್ಪಿಸಿದ್ದೇವೆ. ಇಂದಿರಾ ಗಾಂಧಿ ಅವರ ಕಾಲದಲ್ಲಿ ವೃದ್ಧಾಪ್ಯ, ವಿಧವಾ ಪಿಂಚಣಿ ಯೋಜನೆ ತಂದರು. ಇಂದಿರಾ ಗಾಂಧಿ ಅವರ ನಿರ್ದೇಶನದಲ್ಲಿ ದೇವರಾಜ ಅರಸು ಅವರು ಉಳುವವನಿಗೆ ಭೂಮಿ ನೀಡಿದರು. ಗುಂಡೂರಾವ್ ಹಾಗೂ ಬಂಗಾರಪ್ಪನವರ ಕಾಲದಲ್ಲಿ ರೈತರ ಬದುಕಿಗಾಗಿ ಉಚಿತ ವಿದ್ಯುತ್ ನೀಡಲು ಆರಂಭಿಸಲಾಯಿತು. ಆಶ್ರಯ ಯೋಜನೆ ತಂದರು, ಕೃಷ್ಣಾ ಅವರ ಕಾಲದಲ್ಲಿ ಸ್ತ್ರೀ ಶಕ್ತಿ, ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಜಾರಿಗೆ ತರಲಾಯಿತು” ಎಂದರು.
“ಸಿದ್ದರಾಮಯ್ಯ ಅವರ ಕಾಲದಲ್ಲಿ ನಾನು ಇಂಧನ ಸಚಿವನಾಗಿದ್ದಾಗ ರೈತರಿಗೆ ಉಚಿತವಾಗಿ ನೀಡುವ ವಿದ್ಯುತ್ ಅನ್ನು 6 ಗಂಟೆಯಿಂದ 7 ಗಂಟೆಗೆ ಏರಿಸಿದೆವು. ಈ ಯೋಜನೆಗಾಗಿ ನಾವು ಇಂದು ಪ್ರತಿ ವರ್ಷ 19 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಇನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿಗೆ ಸುಮಾರು 40 ಸಾವಿರ ಕೋಟಿಯಷ್ಟು ಅನುದಾನವನ್ನು ಮೀಸಲಿಡುತ್ತಿದ್ದೇವೆ. ಪರಿಶಿಷ್ಟರ ಅಭಿವೃದ್ಧಿಗೆ ಜನಸಂಖ್ಯೆ ಆಧಾರದ ಮೇಲೆ ಅನುದಾನ ನೀಡಬೇಕು ಎಂದು ಕಾನೂನು ತಂದಿದ್ದು ಆಂಧ್ರ ಪ್ರದೇಶ ಬಿಟ್ಟರೆ ನಮ್ಮ ರಾಜ್ಯದಲ್ಲೇ. ನಾವು ಎಸ್ ಸಿಪಿ ಟಿಎಸ್ಪಿ ಕಾನೂನು ಜಾರಿಗೆ ತಂದಾಗ 28 ಸಾವಿರ ಕೋಟಿ ಅನುದಾನ ನೀಡಿದೆವು. ಅದೇ ವರ್ಷ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಕೇವಲ 84 ಸಾವಿರ ಕೋಟಿ ಮಾತ್ರ ನೀಡಿತ್ತು” ಎಂದು ತಿಳಿಸಿದರು.

“ನಾವು ಜನರ ಕಲ್ಯಾಣಕ್ಕಾಗಿ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾನು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ಈ ಐದು ಗ್ಯಾರಂಟಿಗಳನ್ನು ವರ್ಷಕ್ಕೊಂದು ಗ್ಯಾರಂಟಿ ಜಾರಿ ಮಾಡಿಕೊಂಡು ಹೋಗಿ ಎಂದು ಸಲಹೆ ನೀಡಿದರು. ಆಗ ನಾನು ಏನು ಮಾತನಾಡದೇ, ಹಿರಿಯರ ಸಲಹೆ ಸ್ವೀಕರಿಸಿದೆ. ನಾನು ಹಾಗೂ ಮುಖ್ಯಮಂತ್ರಿಗಳು ಕೂತು ಚರ್ಚೆ ಮಾಡಿ ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ಬಿಜೆಪಿಯವರು ಒಂದು ಕಾಲು ಅಕ್ಕಿ ಕಡಿಮೆಯಾದರೂ ಸುಮ್ಮನಿರುವುದಿಲ್ಲ ಎಂದು ಆಗ್ರಹ ಮಾಡುತ್ತಿದ್ದರು. ನಾವು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು” ಎಂದು ತಿಳಿಸಿದರು.
ಆಹಾರ ಭದ್ರತೆ ಕಾಯ್ದೆ ತಂದಿದ್ದು ಕಾಂಗ್ರೆಸ್

ಈ ಸಂದರ್ಭದಲ್ಲಿ ಅರವಿಂದ ಬೆಲ್ಲದ್ ಅವರು, ಮೋದಿ ಅವರು ಕೊಟ್ಟ ಅಕ್ಕಿ ಕೊಟ್ಟಿರಿ, ನೀವು ಎಲ್ಲಿ ಕೊಟ್ಟಿರಿ ಎಂದು ಕೇಳಿದರು. ಇದಕ್ಕೆ ತಿರುಗೇಟು ನೀಡಿದ ಶಿವಕುಮಾರ್ ಅವರು, “ಬೆಲ್ಲದ್ ಅವರೇ ನಾನು ನಿಮ್ಮ ತಂದೆ ಜೊತೆಗೂ ಶಾಸಕನಾಗಿದ್ದೆ. ಅವರು ನಿಮ್ಮ ರೀತಿ ಮಾತನಾಡುತ್ತಿರಲಿಲ್ಲ. ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನವೇ ಬಸವ ಜಯಂತಿ ದಿನದಂದು ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದರು. ಇದಾದ ನಂತರ ಸೋನಿಯಾ ಗಾಂಧಿ ಅವರ ಮುಖಂಡತ್ವದಲ್ಲಿ ಮನಮೋಹನ್ ಸಿಂಗ್ ಅವರು ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದರು. ಬಡವರ ಹೊಟ್ಟೆ ತುಂಬಿಸಲು ಈ ದೇಶದಲ್ಲಿ ಕಾನೂನು ತಂದಿದ್ದರೆ ಅದು ಕಾಂಗ್ರೆಸ್ ಸರ್ಕಾರ” ಎಂದು ತಿಳಿಸಿದರು.

“ತಮಿಳುನಾಡಿನಲ್ಲಿ ಚೆನ್ನೈ ನಗರದ ಒಳಗೆ ಮಾತ್ರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗಿತ್ತು. ಆದರೆ ನಾವು ಇಡೀ ರಾಜ್ಯಕ್ಕೆ ಈ ಯೋಜನೆ ನೀಡಿದ್ದೇವೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಶಕ್ತಿ ಯೋಜನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತಾದಿಗಳು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಪ್ರಾರ್ಥನೆ ನಿಮ್ಮ ಸರ್ಕಾರಕ್ಕೂ ಸೇರಬೇಕು ಎಂದು ಹೇಳಿದರು. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನನ್ನ ನಂಬಿಕೆ. ನಾವು ಮಹಿಳೆಯರಿಗೆ ನೀಡುತ್ತಿರುವ 2 ಸಾವಿರ, ಉಚಿತ ಪ್ರಯಾಣ ಯೋಜನೆಯಿಂದ ಮಹಿಳೆಯರು ನಮಗೆ ಆಶೀರ್ವಾದ ಮಾಡುತ್ತಿದ್ದಾರೆ. ಬೇಕಿದ್ದರೆ ನಿಮ್ಮ ಪಕ್ಷದ ಮಹಿಳೆಯರನ್ನೇ ಕೇಳಿ” ಎಂದು ತಿರುಗೇಟು ನೀಡಿದರು.