
ಅಕ್ಕ ಸತ್ತರೆ ಅಮಾಸೆ ನಿಲ್ಲಲ್ಲ ಎಂಬ ನುಡಿಯೂ ಇದೆ.ಇಂದಿನದು ಇಂದಿಗೆ, ನಾಳಿನದು ನಾಳೆಗೆ ಎಂಬುದು ನಿಮ್ಮ ನಿಮ್ಮ ದೃಷ್ಟಿಕೋನಕ್ಕೆ ನಿಲುಕಿದ್ದು;ನಿಮಿಷದಲ್ಲಿ ಬದುಕುವವನಿಗೆ ನಾಳೆ ಹಗಲು ಇದೆ.ನಿಜದಲ್ಲಿ ಜೀವಿಸುವವನಿಗೆ ಇಲ್ಲ. ಬೀಸೋ ದೊಣ್ಣೆ ತಪ್ಪಿದ್ರೆ ಸಾವಿರ ವರ್ಷ ಬದುಕಿದ ಅಂದ್ರೆ ನಾಳೆ ಇರಲೇಬೇಕು.,ಆದ್ರೆ ನಾವು ಇರ್ತೀವಾ?.ನೀರಿನ ಮೇಲೆ ಗುಳ್ಳೆ ಗೊತ್ತಿಲ್ಲ…ಅಷ್ಟೇ….ನಾಳೆಯ ಎಣಿಕೆಯಲ್ಲಿ ತಲೆ ಕುದಲು ಬಿಳಿಯಾಯ್ತೆ ವಿನಃ ಇನ್ನೇನೂ ಆಗಲಿಲ್ಲ. ಮೂಕ ಪ್ರಾಣಿಗಳನ್ನ ನೋಡಿ, ನಿರಾತಂಕ, ಹಸಿವಾದರೆ ಬೇಟೆ ಆಡಿ, ನಿದ್ದೆ ಬಂದರೆ ಮಲಗಿತು.ಈ ಮನುಷ್ಯನೇ ತುಂಬಾ ಆಸೆ ಸ್ವಲ್ಪ ಬೇಕು ಅಂದರೆ ಮಗದಷ್ಟು ಬೇಕು ಅನ್ನುತ್ತಾನೆ
ರೋಗಿಗೆ ಬೇಡದ ನಾಳೆ,ಭೋಗಿಗೆ ಮೋಹದ ನಾಳೆ,ಯೋಗಿಗೆ ಸಹಜ ನಾಳೆ,ಪಾಪಿಗೆ ಮುಗಿಯದ ನಾಳೆ,..ಹೀಗೆ ಒಂದೇ ಎರಡೇ..ನಾಳೆಯೇ ನಾಳೆ.. ನರನ ನಾಳ ಹರಿದರೂ ನಾಳೆ ನೀಗಲಿಲ್ಲವಂತೆ,ನರಕದಲ್ಲಿಯೂ ನಾಳೆಯೆಂಬು ಗೋಳಾಟ ನಿಲ್ಲಲಿಲ್ಲವಂತೆ…ಯಾಕ್ರೀ ಚಿಂತೆಯ ಚಿತೆ ಏರ್ತೀರಿ ಸಾಹೇಬ್ರ..ಇಂದಿಗೆ ಈಗ ಖುಷಿ ಆಗಿ ಬದುಕ್ರಿ..ಥತ್ ನಿಮ್ಮ..

“ಮಲ್ಲಿಗೆಯ ಹೂವು ತಾ,ಮೈದುಂಬಿ ಅರಳಿತ್ತು,ಗಂಧವನು ಪೂಸುತ್ತ,ಶಿವನ ಮುಡಿಯೇರಿತ್ತುನಾರಿಯರ ಶಿರದಲ್ಲಿ ಘಮ್ಮೆಂದು ಘಮಿಸಿತ್ತು,ನಾಗವೇಣಿಯ ನಡುವೆ ಹಾರದಲಿ ನಗುತಿತ್ತು,ಅಂದಂದೆ ಪುಟ್ಟಿತ್ತು,ಅಂದಂದೆ ಅಳಿದಿತ್ತು,ಹತ್ತು ಘಳಿಗೆಯ ಹೊತ್ತು,ಮೆರೆದು ಮರೆಯಾಗಿತ್ತು,ಮತ್ತೆ ನೇಸರು ಬರಲು, ಮಲ್ಲಿಗೆಯು ಇನ್ನೆಲ್ಲಿ..?ಕೆಸರು ಗದ್ದೆಯ ಬದಿಗೆ,ಹೆಸರಿಲ್ಲದೆ ಹೋಗಿತ್ತು,..ಇಷ್ಟೇ ಬದುಕು.”
ದೀಪದ ಹಾಗೆ, ಇದ್ದಷ್ಟು ದಿನ ಬೆಳಗಿ ಹೋಗಬೇಕು,ನಾಳೆ ಎಂಬುದು ನಿಜವಾದರೂ ನಶ್ವರ.ಅಡ್ಡಗೋಡೆಯ ದೀಪದಂತೆ.ಉಸಿರು ಮುಗಿದರೂ,ಹೆಸ್ರು ಹಸಿರಾಗಬೇಕು.ಬಾಳು ಹಸನಾಗಬೇಕು..!

ಭೂತವೆಂಬೋ ಭೂತ ಬಿಟ್ಟು, ಭವಿಷ್ಯದ ವಿಷ್ಯ ಬದಿಗಿಟ್ಟು,ವರ್ತಮಾನದ ಒರತೆಯ ಅನುಭವಿಸೋ ನೀ ಮಂಕುತಿಮ್ಮ..!ಸಾಗರದಲ್ಲೇಕೆ ಅರಸುವೆ ಸಾಸಿವೆ ಕಾಳನ್ನು, ಅರಸನಾಗಿ ಬದುಕು,ಪ್ರಸ್ತುತದಲಿ..!ಸೃಷ್ಟಿಯು ಸಾಗುವುದು ಅದರ ಋತದಲಿ..!..

ಇಂತಿ ಎನ್ನ ಚಿತ್ತದ ಚಿಟ್ಟೆ,ನಾಳೆ ಎಂಬುದು ಲೊಳಲೊಟ್ಟೆ,ಅತಿಯಾಗಿ ನಾಳೆಯ ನಂಬಲು ನೀನಿಂದು ಕೆಟ್ಟೆ , ಇಗೋ ನಿನ್ನ ಮನಕೆ ಯೋಚಿಸಲು ಸ್ವಾತಂತ್ರ್ಯವನು ನಾ ಕೊಟ್ಟೆ
ನವೀನ ಹೆಚ್ ಎ ಹನುಮನಹಳ್ಳಿ ಅಂಕಣಕಾರರು ಲೇಖಕರು ಕೆಆರ್ ನಗರ