
ರಾಜಕೀಯ ಬಿಟ್ಟು, ಸರಿಯಾಗಿ ಕೆಲಸ ಮಾಡಿ: ಸಚಿವ ಸಂತೋಷ್ ಲಾಡ್
ಧಾರವಾಡ ಜುಲೈ.1: ರಾಜಕೀಯ ಬಿಟ್ಟು, ಸರಿಯಾಗಿ ಕೆಲಸ ಮಾಡಬೇಕು ಅಂದಾಗ ಶಾಲೆಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಇರಲು ಕಾರಣ ನಾವೇ ಆಗಿದ್ದೇವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಧಾರವಾಡದ ಜೆ.ಎಸ್.ಎಸ್. ಸನ್ನಿಧಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಅವರ ಸಂಯುಕ್ತಾಶ್ರಯದಲ್ಲಿ ಬದಲಾವಣೆಯ ಶಿಕ್ಷಣ; ಭವಿಷ್ಯದ ನಿರ್ಮಾಣ 2025-26 ಅಂಗವಾಗಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪ್ರಧಾನ ಗುರುಗಳ, ಮುಖ್ಯೋಪಾಧ್ಯಾರ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿ (ಎಸ್.ಡಿ.ಎಂ.ಸಿ.) ಅಧ್ಯಕ್ಷರಿಗೆ ಆಯೋಜಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಸಮಾರೋಪ ಹಾಗೂ ಕಳೆದ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಸಮಾಜ, ಶಾಲೆ ಮತ್ತು ಮನೆಯ ವಾತಾವರಣದ ಮೇಲೆ ಮಕ್ಕಳು ಬೆಳೆಯುತ್ತಾರೆ. ಆದ್ದರಿಂದ ಮಕ್ಕಳ ಜೀವನದ ಮೇಲೆ ವಿಶೇಷವಾದ ಪರಿಣಾಮ ಬೀರುವ ಮಾತುಗಳನ್ನಾಡಿ, ತಿಳಿವಳಿಕೆ ಹೇಳಿ. ಅವರ ಜ್ಞಾನದ ಬಗ್ಗೆ, ಗುರಿಯ ಬಗ್ಗೆ ಶಿಕ್ಷಕರು ಮಕ್ಕಳಿಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.
ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿಯು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಾಗೂ ಅವರ ಶೈಕ್ಷಣಿಕ ಪ್ರಗತಿ ಸಾಧಿಸಲು ಹಾಗೂ ಮಕ್ಕಳ ಶ್ರೇಯೊಭಿವೃದ್ದಿಗಾಗಿ ಉತ್ತಮ ಕೆಲಸ ಮಾಡಬೇಕು. ನಮ್ಮ ಶಾಲೆಗಳ ಬಗ್ಗೆ ನಮ್ಮಗೆ ಹೆಮ್ಮೆ, ಗರ್ವ ಮೂಡುವಂತಾಗಬೇಕು ಎಂದು ತಿಳಿಸಿದರು.

ಶಾಲೆಯಲ್ಲಿ ಮಕ್ಕಳಿಗೆ ವಿಷಯದ ಬಗ್ಗೆ ತಿಳಿಸುವಾಗ ಅವರ ಕೌಶಲ್ಯ, ನೈತಿಕ ಮೌಲ್ಯಗಳು, ವಿವೇಕವನ್ನು ಹೆಚ್ಚಿಸಿ, ಮಕ್ಕಳನ್ನು ಸಮಾಜದ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವ ಪ್ರಯತ್ನ ಶಿಕ್ಷಕರು ಮಾಡಬೇಕು. ಮಕ್ಕಳ ಸರ್ವತೋಮುಖ ಬೆಳವಣಿಗೆಯ ಅಡಿಪಾಯವನ್ನು ಶಿಕ್ಷಕರು ಮಾಡಬೇಕಾದ ಕರ್ತವ್ಯವಾಗಿದೆ ಎಂದರು.
ಮಕ್ಕಳಿಗೆ ಸಮಾಜದಲ್ಲಿ ಜೀವಿಸುವುದನ್ನು ಕಲಿಸಿ, ಶಾಲೆಯ ವ್ಯವಸ್ಥೆ ಹಾಗೂ ಸಮಸ್ಯೆಗಳ ಬಗ್ಗೆ ಏನಾದರೂ ತೊಂದರೆಗಳಿದ್ದರೆ ಗಮನಕ್ಕೆ ತಂದರೆ, ಸರಿ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಮಕ್ಕಳಿಗೆ ಜೀವನ ರೂಪಿಸುವುದು ಶಿಕ್ಷಕರ ಕೈಯಲ್ಲಿ ಇರುವುದರಿಂದ ಮಕ್ಕಳಲ್ಲಿ ಇರುವ ಕೌಶಲ್ಯದ ಬಗ್ಗೆ, ತಂತ್ರಜ್ಞಾನದ ಬಗ್ಗೆ ಆಸಕ್ತಿ ಇದ್ದರೆ ಅವರನ್ನು ಗುರುತಿಸಿ ಮತ್ತು ಆ ವಿಷಯದ ಬಗ್ಗೆ ಅವರಿಗೆ ತಿಳಿಹೇಳಿ ಎಂದು ಹೇಳಿದರು.

ಮನೆಯಲ್ಲಿ ಉತ್ತಮ ಸಂಸ್ಕಾರದ ಬಗ್ಗೆ ಚರ್ಚಿಸುವ ಹಾಗೂ ಮಕ್ಕಳಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ಮಾಡಬೇಕು. ಆದರೇ ನಾವು ಇದಾವುದು ಇಂದು ಮಾಡದೇ ರಾಜಕೀಯ, ಜಾತಿ, ಮೇಲು ಕೀಳು ಮಾತನಾಡಿ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತೇವೆ. ಇದು ಮಕ್ಕಳ ಮೇಲೆ ಬಹಳಷ್ಟು ಮಾನಸಿಕ ಪ್ರಭಾವ ಬೀರುತ್ತಿದೆ. ನಾವು ಮಕ್ಕಳ ಭವಿಷ್ಯದ ಕುರಿತು ಎಚ್ಚರಿಕೆ ಮಹಿಸಬೇಕು. ಅವರ ಚಲನ ವಲನದ ಬಗ್ಗೆ ನಿತ್ಯ ಕಾಳಜಿ ವಹಿಸಿ ಅವರನ್ನು ತಿದ್ದುವ ಕೆಲಸ ಮಾಡಬೇಕು. ಇಂದಿನ ಶಿಕ್ಷಕರು, ನಾವು ಮಕ್ಕಳಿಗೆ ಜ್ಞಾನ ಒದಗಿಸುವಲ್ಲಿ ವಿಫಲರಾಗುತ್ತಿದ್ದು, ಅವರನ್ನು ಪ್ರೀತಿಯಿಂದಲೇ ಜ್ಞಾನದ ಮಾರ್ಗದಲ್ಲಿ ಕರೆದುಕೊಂಡು ಹೋಗಬೇಕು. ಮನೆಯಿಂದಲೇ ಮಕ್ಕಳಿಗೆ ಗೌರವ ಮನೋಭಾವ, ಪ್ರಾಮಾಣಿಕತೆ, ಸಜ್ಜನಿಕ್ಕೆ, ಸರಳತೆ ಕಲಿಸಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರನ್ನು ಹಾಗೂ ಜಿಲ್ಲೆಗೆ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು. ಜಿಲ್ಲೆಗೆ ಅತಿ ಹೆಚ್ವು ಅಂಕಪಡೆದ ವಿದ್ಯಾರ್ಥಿಗಳಿಗೆ ಸಚಿವ ಸಂತೋಷ ಲಾಡ್ ಅವರು ತಮ್ಮ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ತಲಾ ರೂ.10 ಸಾವಿರ ಪ್ರೋತ್ಸಾಹಧನ ನೀಡಿ, ಗೌರವಿಸಿದರು.

ಸಮಾರಂಭದಲ್ಲಿ ನವಲಗುಂದ ಶಾಸಕ ಎನ್ ಎಚ್ ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಜಿಲ್ಲೆಯ ಎಲ್ಲ ಕ್ಷೇತ್ರಶಿಕ್ಷಣಾಧಿಕಾರಿಗಳು, ಪ್ರಾಥಮಿಕ, ಪ್ರೌಢಶಾಲೆಗಳ ಪ್ರಧಾನ ಗುರುಗಳು, ಮುಖ್ಯೋಪಾಧ್ಯಾಯರು, ಎಸ್.ಡಿ.ಎಂ.ಸಿ.ಅಧ್ಯಕ್ಷರು, ಜನಪ್ರತಿನಿಗಳು ಭಾಗವಹಿಸಿದ್ದರು.