ಕರ್ನಾಟಕದಲ್ಲಿ ರ‍್ಯಾಪಿಡೋ(Rapido), ಉಬರ್ ಬೈಕ್ ಟ್ಯಾಕ್ಸಿಯನ್ನ (Uber Bike Taxi) ಬ್ಯಾನ್ ಮಾಡಿದರ ಬೆನ್ನಲ್ಲೇ ಆಟೋ ಚಾಲಕರು (Auto Drivers) ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು ಇಂದು ಬೆಳ್ಳಂಬೆಳಗ್ಗೆ ಆಟೋ ಚಾಲಕರಿಗೆ ಆರ್ಟಿಓ ಅಧಿಕಾರಿಗಳು ಶಾಕ್ ನೀಡಿ 100ಕ್ಕೂ ಹೆಚ್ಚು ಆಟೋಗಳನ್ನು ಸೀಜ್ ಮಾಡಿದ್ದಾರೆ..

ಸಾರಿಗೆ ಇಲಾಖೆಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ
ಆಟೋ ಚಾಲಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆ ನಗರದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಕಾರ್ಯಾಚರಣೆ ಮಾಡಲಾಗಿದೆ. ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆ್ಯಪ್ ಆಧಾರಿತ ಮತ್ತು ಇನ್ನಿತರ ಆಟೋ ಚಾಲಕರ ವಿರುದ್ಧ,
ಕಾನೂನು ಉಲ್ಲಂಘಿಸುವವರ ವಿರುದ್ಧ ಮತ್ತು ಪ್ರಯಾಣಿಕರಿಂದ ದರೋಡೆ ಮಾಡಿದರೆ ಪರ್ಮೀಟ್ ರದ್ದು ಪಡಿಸುವಂತೆ ಸಾರಿಗೆ ಇಲಾಖೆ ಕಮಿಷನರ್ಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.

ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಶೋಭಾ ಅವರು, ಸಾರ್ವಜನಿಕರಿಂದ ಆಟೋ ದರ ಹೆಚ್ಚಳ ವಸೂಲಿ ದೂರು ಬಂದಿತ್ತು. ಹೀಗಾಗಿ ಆಟೋ ದರ ಪರಿಶೀಲನೆ ಮಾಡಲು ಮುಂದಾಗಿದ್ದೇವೆ. ಬೆಳಗ್ಗೆಯಿಂದ ಇಲ್ಲಿಯವರೆಗೆ ನಗರದಲ್ಲಿ 100ಕ್ಕೂ ಅಧಿಕ ಆಟೋ ಸೀಜ್ ಮಾಡಲಾಗಿದೆ ಎಂದು ಹೇಳಿದರು.

ದುಪ್ಪಟ್ಟು ದರ ಪರಿಶೀಲನೆ ವೇಳೆ ದಾಖಲೆಗಳೂ ಇಲ್ಲದೆ ಇರುವುದು ಗಮನಕ್ಕೆ ಬಂದಿದೆ. 250ಕ್ಕೂ ಅಧಿಕ ದೂರನ್ನು ಆಟೋ ಚಾಲಕರ ಮೇಲೆ ದಾಖಲೆ ಮಾಡಿಕೊಂಡಿದ್ದು, ಅಗ್ರಿಗೇಟರ್ ಕಂಪೆನಿಗಳ ಮೇಲೂ ನಾವು ನಿಗಾ ಇಡುತ್ತಿದ್ದೇವೆ ಎಂದಿದ್ದಾರೆ.

ಸರ್ಕಾರ ನೀಡಿರುವ ಆಟೋ ದರಕ್ಕೆ 5% ಸರ್ವೀಸ್ ಚಾರ್ಜ್ ಹಾಕಬಹುದು. ಅದು ಬಿಟ್ಟರೆ ದುಪ್ಪಟ್ಟು ದರ ವಿಧಿಸುವ ಅಧಿಕಾರ ಅಗ್ರಿಗೇಟರ್ ಕಂಪೆನಿಗಳಿಗಿಲ್ಲ. ಎಲ್ಲಾ ಕಡೆ ದಾಳಿ ನಡೆಯುತ್ತಿದೆ.











