
ಮಂಡ್ಯದಲ್ಲಿ ವಾಹನ ತಪಾಸಣೆ ವೇಳೆ ಪೊಲೀಸರು ಮಾಡಿದ ಎಡವಟ್ಟಿನಿಂದ ಪುಟ್ಟ ಮಗು ಮೃತಪಟ್ಟ ಪ್ರಕರಣದ ಬಳಿಕ ರಾಜ್ಯ ಪೊಲೀಸ್ ಇಲಾಖೆಯಿಂದ ಹೊಸ ಸುತ್ತೋಲೆ ಹೊರಡಿಸಿದೆ. ನೂತನ ಡಿಜಿಪಿ ಎಂ.ಎ ಸಲೀಂ ಸುತ್ತೋಲೆ ಹೊರಡಿಸಿದ್ದು, ಮಂಡ್ಯ ಘಟನೆಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದೇ ಇರುವುದು ಪತ್ತೆಯಾಗಿದ್ದು, ಹೀಗಾಗಿ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ರಸ್ತೆಯಲ್ಲಿ ಹೋಗುವಾಗ ಕಾರಣವಿಲ್ಲದೇ ವಾಹನಗಳನ್ನ ತಡೆದು ತಪಾಸಣೆ ಪಡಿಸುವಂತಿಲ್ಲ. ಕಣ್ಣಿಗೆ ಕಾಣುವ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಮಾತ್ರವೇ ವಾಹನಗಳನ್ನು ನಿಲ್ಲಿಸಬೇಕು. ಹೆದ್ದಾರಿಗಳಲ್ಲಿ ಜಿಗ್ ಜಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನ ತಡೆಯಬಾರದು. ರಸ್ತೆಯಲ್ಲಿ ದಿಢೀರನೆ ಅಡ್ಡ ಬಂದು ವಾಹನ ನಿಲ್ಲಿಸುವಂತಿಲ್ಲ. ಬೈಕ್ ಹಿಂಬದಿ ಸವಾರನನ್ನು ಹಿಡಿದು ಎಳೆಯುವಂತಿಲ್ಲ. ವಾಹನಗಳ ಕೀ ತೆಗೆದುಕೊಳ್ಳುವಂತಿಲ್ಲ. ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನ ಬೆನ್ನತ್ತುವಂತಿಲ್ಲ ಎಂದು ನೂತನ ಡಿಜಿಪಿ ಸಲೀಂ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ವಾಹನ ವೇಗವಾಗಿ ಹೋಗುವಾಗ ತಡೆಯುವಂತಿಲ್ಲ. ಬದಲಿಗೆ ವಾಹನದ ನೋಂದಣಿ ಸಂಖ್ಯೆ ಗುರುತಿಸಿ ನಿಯಂತ್ರಣ ಕೋಣೆಗಳಿಗೆ ಮಾಹಿತಿ ರವಾನಿಸಬೇಕು. ತಪಾಸಣೆ ವೇಳೆ ಪೊಲೀಸ್ ಸಿಬ್ಬಂದಿ ರಿಫ್ಲೆಕ್ಟಿವ್ ಜಾಕೆಟ್ ಧರಿಸಿರಬೇಕು. ಕಡ್ಡಾಯವಾಗಿ LED ಬ್ಯಾಟನ್ಗಳನ್ನು ಉಪಯೋಗಿಸಬೇಕು. ತಪಾಸಣೆ ವೇಳೆ ಕಡ್ಡಾಯವಾಗಿ ಬಾಡಿ ವಾರ್ನ್ ಕ್ಯಾಮೆರಾ ಧರಿಸಿರಬೇಕು. ಐಟಿಎಂಎಸ್ ಮೂಲಕ ಪ್ರಕರಣ ದಾಖಲಿಸಬೇಕು.(ಸಂಪರ್ಕರಹಿತ ಘಟಕಗಳ ಮೂಲಕ)ಕ್ಯಾಮೆರಾ ಮುಖಾಂತರ ಮಾತ್ರ ಪ್ರಕರಣ ದಾಖಲಿಸಬೇಕು. ಅನಾಹುತಗಳನ್ನು ತಪ್ಪಿಸಲು ಸಂಚಾರ ನಿಯಮ ಪಾಲನೆಗೆ ಜಾಗೃತಿ ಕಾರ್ಯಕ್ರಮ ಮಾಡಬೇಕು ಎಂದು ತಿಳಿಸಲಾಗಿದೆ.

ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಅತಿ-ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವಂತಿಲ್ಲ. ಅಂತವರ ವಿರುದ್ಧ ಎಫ್.ಟಿ.ವಿ.ಆರ್ ತಂತ್ರಜ್ಞಾನ ಆಧಾರಿತ ನಿಯಮ ಅನುಸರಿಸುವುದು. ವಾಹನಗಳ ವೇಗವನ್ನು ಇಳಿಸಲು 150 ಮೀಟರ್ ದೂರದಲೇ ರಿಪ್ಲೆಕ್ಟಿವ್ ಅಳವಡಿಸುವುದು. ರಾತ್ರಿ ವೇಳೆ ಸಂಚಾರ ಸಿಗ್ನಲ್ ಜಂಕ್ಷನ್ಗಳ ಬದಿಯಲ್ಲೇ ವಾಹನಗಳನ್ನು ತಪಾಸಣೆ ಮಾಡಬೇಕು. ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ನಾಕಾಬಂಧಿ ಪ್ರಕ್ರಿಯೆಗಳನ್ನು ಹೆದ್ದಾರಿಗಳಲ್ಲಿ ನಡೆಸಬಾರದು. ತಪಾಸಣೆಯ ಸಂದರ್ಭದಲ್ಲಿ ಸಂಚಾರ ಪೊಲೀಸರ ಸಹಕಾರ ಪಡೆದುಕೊಳ್ಳಬೇಕು. ಸುತ್ತೋಲೆಯ ಅಷ್ಟು ಅಂಶಗಳ ಕಡ್ಡಾಯ ಪಾಲನೆ ಮಾಡಬೇಕು ಎಂದು ಸೂಚನೆ ಕೊಡಲಾಗಿದೆ.













