ಮಾರ್ಗ ಮಧ್ಯೆ ಸಾರಿಗೆ ಬಸ್ ನಿಲ್ಲಿಸಿ ನಮಾಜ್ ಮಾಡಿದ ಪ್ರಕರಣದಲ್ಲಿ ತನಿಖೆ ಮಾಡಿ ತಪ್ಪಿತಸ್ಥರೆಂದು ತಿಳಿದು ಬಂದರೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ ಮಾಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್‌ನಿಂದ ವಿಶಾಲಗಡ್‌ಗೆ ತೆರಳುತ್ತಿದ್ದ ಬಸ್ ಅನ್ನು ಮಾರ್ಗ ಮಧ್ಯೆ ನಿಲ್ಲಿಸಿ ಕಂಡೆಕ್ಟರ್ ಕಂ ಡ್ರೈವರ್ ಒಬ್ಬರು ಸೀಟ್ ಮೇಲೆ ನಮಾಜ್ ಮಾಡಿದ್ದರು.

ನಮಾಜ್ ಮಾಡುವ ದೃಶ್ಯವನ್ನು ಪ್ರಯಾಣಿಕರೇ ಮೊಬೈಲ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಜಾಲತಾಣದಲ್ಲಿ ನಮಾಜ್‌ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಜಾಲತಾಣದಲ್ಲಿ ಕಂಡಕ್ಟರ್ ಕಂ ಡ್ರೈವರ್ ಕರ್ತವ್ಯದ ನಡುವೆ ಬಸ್‌ನಲ್ಲಿ ನಮಾಜ್ ಎಷ್ಟು ಸರಿ..? ಕರ್ತವ್ಯದಲ್ಲಿ ಇರುವಾಗ ಧಾರ್ಮಿಕ ಆಚರಣೆ ಸರಿಯೇ ಎಂದೆಲ್ಲಾ ಪ್ರಶ್ನೆ ಮಾಡಿ ವಿರೋಧ ವ್ಯಕ್ತಪಡಿಸಿದ್ದರು.
ಸಾರಿಗೆ ಬಸ್ ನಿಲ್ಲಿಸಿ ಬಸ್ ಸೀಟಿನ ಮೇಲೆ ಕುಳಿತು ನಮಾಜ್ ಮಾಡುತ್ತಿದ್ದ ದೃಶ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ಆಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲೂ ಸುದ್ದಿ ಆಗಿತ್ತು. ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ನಮಾಜ್ ಮಾಡಿದ ಬಗ್ಗೆ ಕ್ರಮಕ್ಕೆ ಒತ್ತಾಯ ಕೂಡ ಕೇಳಿ ಬಂದಿತ್ತು. ಇದೀಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಬಗ್ಗೆ ಆದೇಶ ಹೊರಡಿಸಿದ್ದು. ತನಿಖೆ ನಡೆಸಿ ಕ್ರಮಕ್ಕೆ ಸೂಚಿಸಿದ್ದಾರೆ.

ದಿನಾಂಕ 29-04-2025 ರ ಸಂಜೆ ಹುಬ್ಬಳ್ಳಿಯಿಂದ ಹಾವೇರಿಗೆ ಕಾರ್ಯಾಚರಣೆ ಆಗುತ್ತಿದ್ದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಚಾಲಕ-ಕಂ-ನಿರ್ವಾಹಕ ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ನಮಾಜ್ ಮಾಡಿರುವ ಬಗ್ಗೆ ಪ್ರಯಾಣಿಕರೊಬ್ಬರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕೆಲವೊಂದು ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗಿರುತ್ತದೆ ಎಂದಿದ್ದಾರೆ.