
ಕರ್ನಾಟಕದಲ್ಲಿ ಜಾತಿ ಜನಗಣತಿ ಘೋಷಣೆ ಬಗ್ಗೆ ಗೊಂದಲದಲ್ಲಿ ಮುಳುಗಿರುವಾಗಲೇ ಕೇಂದ್ರ ಸರ್ಕಾರ ಜನಗಣತಿ ಘೋಷಣೆ ಮಾಡಿದೆ. ಜನಗಣತಿ ಜೊತೆಗೆ ಜಾತಿಗಣತಿ ಮಾಡುವುದಾಗಿ ಘೋಷಿಸಿದೆ. ಪ್ರತಿ 10 ವರ್ಷಗಳಿಗೆ ಒಮ್ಮೆ ಜನಗಣತಿ ನಡೆಯುತ್ತದೆ. 2011ರಲ್ಲಿ ಜನಗಣತಿ ನಡೆದಿದ್ದು, ಆ ಬಳಿಕ 2021ರಂದು ಜನಗಣತಿ ನಡೆಯಬೇಕಿತ್ತು. ಆದರೆರ ಕೊರೋನಾ ಕಾರಣಕ್ಕೆ ಜನಗಣತಿ ನಡೆದಿರಲಿಲ್ಲ, ಇದೀಗ ಜನಗಣತಿ ಘೋಷಣೆ ಮಾಡಿದ್ದು, ಜಾತಿಗಣತಿಯನ್ನೂ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್, ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಜನಗಣತಿ ಸರ್ವೇ ಮಾಡಲಿದೆ ಅಂತಾ ತಿಳಿಸಿದ್ರು. ಸಚಿವ ಸಂಪುಟ ಸಭೆ ಬಳಿಕ ಪಾಕ್ ವಿರುದ್ಧ ತೆಗೆದುಕೊಳ್ಳುವ ಕಠಿಣ ಕ್ರಮಗಳ ಬಗ್ಗೆ ಘೋಷಣೆ ಮಾಡಲಾಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಜಾತಿ ಜನಗಣತಿ ಬಗ್ಗೆ ಮಾಹಿತಿ ನೀಡಿದ್ದು, ದೇಶದಲ್ಲಿ ಅವೈಜ್ಞಾನಿಕವಾಗಿ ಜಾತಿ ಜನಗಣತಿ ಸರ್ವೇ ಮಾಡಿಕೊಂಡು ರಾಜಕೀಯ ಮಾಡ್ತಿದ್ದಾರೆ. ಹೀಗಾಗಿ ದೇಶದಲ್ಲಿ ಜಾತಿಗಣತಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಬೇರೆ ಯಾವುದೇ ಸಮೀಕ್ಷೆಗಳ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಅಶ್ವಥನಾರಾಯಣ ಮಾತನಾಡಿ, ಕೇಂದ್ರ ಸರ್ಕಾರ ಜಾತಿ ಜನಗಣತಿ ಹಾಗೂ ಜನಗಣತಿ ಮಾಡ್ತಿರೋದಕ್ಕೆ ಸ್ವಾಗತ, ಪ್ರಧಾನಿ ಮೋದಿಯವರಿಗೆ ಅಭಿನಂದನೆ ತಿಳಿಸ್ತೇವೆ ಎಂದಿದ್ದಾರೆ. ಈ ಬಾರಿ ಜಾತಿ ಜನಗಣತಿಯನ್ನೂ ಸೇರಿಸಿ ಜನಗಣತಿ ಮಾಡ್ತಿರೋದು ವಿಶೇಷ. ನಮ್ಮ ರಾಜ್ಯದಲ್ಲಿ ಜಾತಿ ಜನಗಣತಿ ಮೂಲಕ ದೊಡ್ಡ ಗೊಂದಲ ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ಅವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಈಗಾಗಲೇ ಅಭಿಪ್ರಾಯ ತಿಳಿಸಿದ್ದು, ಕಾಂಗ್ರೆಸ್ ಸರ್ಕಾರ ಸಮಾಜಗಳ ಮಧ್ಯೆ ಒಡಕು ತಂದು ಗೊಂದಲ ಮೂಡಿಸಿತ್ತು. ಈಗ ಕೇಂದ್ರವೇ ಎಲ್ಲ ಗೊಂದಲಕ್ಕೆ ತೆರೆ ಎಳೆದು ಜಾತಿಜನಗಣತಿ ಮಾಡುವ ಘೋಷಣೆ ಮಾಡಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರದಿಂದ ವ್ಯವಸ್ಥಿತವಾಗಿ ಜಾತಿ ಜನಗಣತಿ ನಡೆಯಲಿದೆ ಎಂದಿರುವ ಮಾಜಿ ಸಚಿವ ಅಶ್ವತ್ಥ ನಾರಾಯಣ್,. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಜಾತಿ ಜನಗಣತಿಗೆ ಕಾನೂನು ಮಾನ್ಯತೆ ಸಿಕ್ಕಿಲ್ಲ. ಕೇವಲ ರಾಜಕೀಯ ದುರುದ್ದೇಶದಿಂದ ಸಮೀಕ್ಷೆ ಮಾಡಿಸಿತ್ತು. ಕಾಂಗ್ರೆಸ್ ಪಕ್ಷದ ದುರುದ್ದೇಶದಿಂದ ಸಮಾಜಗಳ ನಡುವೆ ಗೊಂದಲ ಮೂಡಿಸಿತ್ತು, ಈಗ ಇದಕ್ಕೆಲ್ಲ ತೆರೆ ಎಳೆಯಲು ಕೇಂದ್ರ ಸರ್ಕಾರವೇ ಜಾತಿ ಜನಗಣತಿ ಮಾಡಲಿದೆ ಎಂದಿದ್ದಾರೆ.
ಸಂಸದ ಗೋವಿಂದ ಕಾರಜೋಳ ಜಾತಿ ಜನಗಣತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರ ತೆಗೆದುಕೊಂಡ ಜಾತಿಗಣತಿ ನಿರ್ಣಯ ಐತಿಹಾಸಿಕವಾಗಿದೆ. ಈ ನಿರ್ಣಯವನ್ನು ಸ್ವಾಗತ ಮಾಡುತ್ತೇವೆ. ಹಿಂದುಳಿದ ವರ್ಗಗಳ ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ಅವರನ್ನು ಮೇಲೆತ್ತಲು ಈ ಜಾತಿಗಣತಿ ಅನುಕೂಲಕರ ಆಗಿದೆ. ಸಿದ್ದರಾಮಯ್ಯ ಹತ್ತು ವರ್ಷಗಳಿಂದ ಜಾತಿ ಗಣತಿ ಮಾಡುತ್ತೇವೆ ಎಂದರು. ಹಿಂದುಳಿದ ವರ್ಗಗಳಿಗೆ ಸಿದ್ದರಾಮಯ್ಯ ಏನು ಮಾಡಿಲ್ಲ, ಕೇವಲ ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿದ್ರು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.