
ಕೇಂದ್ರ ಸರ್ಕಾರ ಹಠಕ್ಕೆ ಬಿದ್ದಂತೆ ವಕ್ಫ್ ಮಸೂದೆ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಕೊಂಚ ಮಟ್ಟಿಗೆ ತಡೆ ನೀಡಿದೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಕಾನೂನಿಗೆ ಸುಪ್ರೀಂಕೋರ್ಟ್ ಅಂಕುಶ ಹಾಕುವ ನಿರೀಕ್ಷೆ ಮೂಡಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ವಕ್ಫ್ ಮಸೂದೆಗೆ ತಿದ್ದುಪಡಿ ತಂದಿದೆ.. ಲೋಕಸಭೆ, ರಾಜ್ಯಸಭೆಯಲ್ಲೂ ಮಸೂದೆ ಪಾಸ್ ಮಾಡಿಕೊಂಡು ರಾಷ್ಟ್ರಪತಿಗಳಿಂದಲೂ ಅಂಕಿತ ಹಾಕಿಸಿಕೊಂಡಿದೆ.

ವಕ್ಫ್ ತಿದ್ದುಪಡಿ ಮಸೂದೆಯನ್ನ ದೇಶಾದ್ಯಂತ ಜಾರಿಗೆ ತರುವ ಮುನ್ನ ಕಾಂಗ್ರೆಸ್, ಎಎಪಿ ಸೇರಿದಂತೆ ಇಂಡಿಯಾ ಕೂಟದವ್ರು ಹಾಗು ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್ ಕೋರ್ಟ್ ಮೆಟ್ಟಿಲೇರಿದ್ದಾರೆ. ವಕ್ಪ್ ತಿದ್ದುಪಡಿ ಕಾಯ್ದೆ ಜಾರಿಗೆ ತಡೆಯಾಜ್ಞೆ ನೀಡುವಂತೆ ಅರ್ಜಿ ಹಾಕಿದ್ದಾರೆ. ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದು ವಕ್ಫ್ ಕಾಯ್ದೆ ಜಾರಿಯ ವೇಗಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ.

ವಕ್ಫ್ ತಿದ್ದುಪಡಿ ಕಾಯ್ದೆಗೆ ತಡೆಯಾಜ್ಞೆಯನ್ನೂ ನೀಡುವುದಿಲ್ಲ ಎಂದಿರುವ ಸುಪ್ರೀಂಕೋರ್ಟ್, ಹೊಸ ಕಾಯ್ದೆಯಡಿ ಯಾವುದೇ ನೇಮಕಾತಿ ಮಾಡಬಾರದು. ಕೇಂದ್ರ, ರಾಜ್ಯ ವಕ್ಫ್ ಬೋರ್ಡ್, ಸಮಿತಿಗಳಿಗೆ ಸದಸ್ಯರನ್ನ ನೇಮಿಸಬಾರದು. ವಕ್ಫ್ ಕಾಯ್ದೆಯ 77 ತಕರಾರು ಅರ್ಜಿಗಳ ಬಗ್ಗೆ ಕೇಂದ್ರ ಸರ್ಕಾರ ವಿವರಣೆ ನೀಡಬೇಕು ಎಂದು 1 ವಾರದ ಗಡುವೆ ನೀಡಿದೆ. ಕೇಂದ್ರ ಸರ್ಕಾರ ಕಾಯ್ದೆ ಬಗ್ಗೆ ತಮ್ಮ ನಿಲುವಿನ ಬಗ್ಗೆ ವರದಿ ನೀಡಬೇಕು. ವಕ್ಫ್ ಬಳಕೆಯ ಆಸ್ತಿ ಮೇಲೆ ಯಾವುದೇ ಅಧಿಕಾರ ಚಲಾಯಿಸಬೇಡಿ. ವಕ್ಫ್ ಬಳಕೆಯ ಆಸ್ತಿಯನ್ನು ಜಿಲ್ಲಾಧಿಕಾರಿ ಬದಲಾವಣೆ ಮಾಡಬಾರದು. ದೇಶದಲ್ಲಿ ಎಲ್ಲೇ ಆಗಲಿ ವಕ್ಫ್ ಆಸ್ತಿಗಳನ್ನ ಡಿನೋಟಿಫೈ ಮಾಡಬಾರದು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಿರುವ ಸರ್ವೋಚ್ಛ ನ್ಯಾಯಾಲಯ ವಿಚಾರಣೆಯನ್ನ ಮೇ 5ಕ್ಕೆ ಮುಂದೂಡಿದೆ.. ಇನ್ನೊಂದು ಕಡೆ ಸಂಸತ್ ನಿರ್ಧಾರದ ಪರಮಾಧಿಕಾರಕ್ಕೆ ಬ್ರೇಕ್ ಹಾಕಿದ್ದರ ಬಗ್ಗೆ ಆಕ್ಷೇಪ ಸಲ್ಲಿಸಲು ಕೇಂದ್ರ ಸರ್ಕಾರವೂ ಸಜ್ಜಾಗ್ತಿದೆ. ಈ ನಡುವೆ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಮಾತನಾಡಿ, ವಕ್ಫ್ ಕಾಯ್ದೆಯೇ ಅಸಂವಿಧಾನಿಕ. ಕೇಂದ್ರ, ರಾಜ್ಯ ವಕ್ಫ್ ಕೌನ್ಸಿಲ್‌ಗಳಿಗೆ ನೇಮಕಾತಿ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ. ವಕ್ಫ್ ಬಳಕೆದಾರರ ಆಸ್ತಿಯನ್ನು ಡಿನೋಟಿಫೈ ಮಾಡುವಂತಿಲ್ಲ ಅಂತಾನೂ ನ್ಯಾಯಪೀಠ ಹೇಳಿದೆ. ನಮ್ಮ ಕಾನೂನು ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ.
