• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸೌಜನ್ಯಶೂನ್ಯ  ಸಮಾಜ- ಅಂತಿಮ ನ್ಯಾಯದ ಕನಸು

ನಾ ದಿವಾಕರ by ನಾ ದಿವಾಕರ
April 7, 2025
in ಕರ್ನಾಟಕ, ರಾಜಕೀಯ, ವಿಶೇಷ, ಶೋಧ
0
ಸೌಜನ್ಯಶೂನ್ಯ  ಸಮಾಜ- ಅಂತಿಮ ನ್ಯಾಯದ ಕನಸು
Share on WhatsAppShare on FacebookShare on Telegram

—ನಾ ದಿವಾಕರ—–

ADVERTISEMENT

ಮನುಜ ಸಂವೇದನೆ ಕಳೆದುಕೊಂಡ ಸಮಾಜದಲ್ಲಿ ದೌರ್ಜನ್ಯ-ಅಪರಾಧಗಳು ಸಹಜ ಎನಿಸುತ್ತವೆ

12 ವರ್ಷಗಳ ಹಿಂದೆ, ಇಡೀ ಸಮಾಜದ ಕಣ್ಣಿಗೆ ರಾಚುವಂತೆ ನಡೆದ ಒಂದು ದೌರ್ಜನ್ಯ, ವರ್ತಮಾನದ ಸಮಾಜಕ್ಕೆ ಇನ್ನೂ ನಿಗೂಢವಾಗಿಯೇ ಉಳಿದಿದ್ದು, ಅಪರಾಧಿಗಳು ಅಗೋಚರವಾಗಿಯೇ ಇದ್ದಾರೆ ಎಂದರೆ ಆ ಸಮಾಜದಲ್ಲಿ ಆಂತರಿಕವಾಗಿ ಏನೋ ಐಬು ಇದೆ ಎಂದೇ ಅರ್ಥ. ಈ ಮೂಲ ದೋಷ ಎಲ್ಲಿದೆ ಎಂದು ಹುಡುಕಾಡುವುಕ್ಕಿಂತಲೂ, ಮುಖ್ಯವಾಗಿ ಪ್ರಜ್ಞೆ ಇರುವ ಜನರನ್ನು ಕಾಡಬೇಕಿರುವುದು ಈ ದೋಷ ಏಕಿದೆ ಎಂಬ ಪ್ರಶ್ನೆ. ಸಾಮಾನ್ಯವಾಗಿ ಭಾರತದ ಜನತೆಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಹೆಚ್ಚಿಸುವ ನ್ಯಾಯಾಂಗ ತನ್ನ ಕರ್ತವ್ಯವನ್ನು ನಿಭಾಯಿಸಿದೆಯಾದರೂ, 17 ವರ್ಷದ ಯುವತಿಯೊಬ್ಬಳನ್ನು ಹಾಡಹಗಲಲ್ಲೇ ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ ಒಂದು ಹೀನಾತಿಹೀನ ಅಪರಾಧದ ಹಿಂದೆ ಇರುವ ವ್ಯಕ್ತಿ ಅಥವಾ ಶಕ್ತಿ ಯಾವುದು ಎಂಬ ಪ್ರಶ್ನೆಗೆ, ನ್ಯಾಯಾಂಗದ ಹೊರಗೆ ನಿಂತೇ ಉತ್ತರ ಶೋಧಿಸಬೇಕಿದೆ.

ಇದು ಪ್ರಜಾಪ್ರಭುತ್ವವವನ್ನು ನಿಭಾಯಿಸುವ, ಸಮ ಸಮಾಜ ಮತ್ತು ಸಮಾಜವಾದದ ಸುಂದರ ಕನಸುಗಳನ್ನು ಕಟ್ಟುವ ಒಂದು ರಾಜಕೀಯ ವ್ಯವಸ್ಥೆಯನ್ನು ಅಣಕಿಸುವ ವಿದ್ಯಮಾನ. ಅಪರಾಧಿಕ ಸಂಹಿತೆಗಳು ವಸಾಹತು ಕಾಲದಂತೆಯೇ ಇಂದಿಗೂ ಕಠಿಣವಾಗಿವೆ. ಕಾಯ್ದೆ ಕಾನೂನುಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ರೂಪಿಸಲ್ಪಟ್ಟಿವೆ. ʼʼನಿರಪರಾಧಿಗೆ ಶಿಕ್ಷೆಯಾಗಕೂಡದುʼ ಎಂಬ ನ್ಯಾಯ ಸಂಹಿತೆಯ ನೈತಿಕ ನೆಲೆಗಳಲ್ಲಿ ವ್ಯತ್ಯಯ ಕಂಡುಬಂದರೂ, ʼ ಅಪರಾಧ ಎಸಗಿದ ವ್ಯಕ್ತಿ ಶಿಕ್ಷೆಯಿಂದ ಪಾರಾಗಬಾರದುʼ ಎಂಬ ಸಾಮಾಜಿಕ ನ್ಯಾಯದ ನೀತಿಸಂಹಿತೆಯನ್ನು ನಮ್ಮ ಸಮಾಜ, ವ್ಯವಸ್ಥೆ ಮತ್ತು ರಾಜಕೀಯ ಅಧಿಕಾರ ಕೇಂದ್ರಗಳು ಪಾಲಿಸುತ್ತಿವೆಯೇ ಎಂಬ ಪ್ರಶ್ನೆಗೆ ನಾವು ನಿರುತ್ತರರಾಗುತ್ತೇವೆ.                  “ ವಿಳಂಬಿತ ನ್ಯಾಯ ನ್ಯಾಯ ಎನಿಸಿಕೊಳ್ಳುವುದಿಲ್ಲ ” ಎಂಬ ಚಾರಿತ್ರಿಕ ನಾಣ್ಣುಡಿಯ ನೆಲೆಯಲ್ಲಿ ನೋಡಿದಾಗ, ನಮಗೆ ನ್ಯಾಯಾಂಗ ಪ್ರಕ್ರಿಯೆಗಳಿಂದಾಗುವ ವಿಳಂಬ ಮಾತ್ರವೇ ಕಾಣುವುದು ಸಹಜ.

ಸಾಮಾಜಿಕ ನ್ಯಾಯ ಮತ್ತು ರಾಜಕೀಯ

ಆದರೆ ಭಾರತದ ಸಾಂಪ್ರದಾಯಿಕ ಸಮಾಜವೊಂದು ಈ ಸಾಂವಿಧಾನಿಕ ಪ್ರಕ್ರಿಯೆಗಳನ್ನೂ ದಾಟಿ ತನ್ನ ಪಾರಮ್ಯವನ್ನು ಸಾಧಿಸುವ ಹಾದಿಗಳನ್ನು ಕಂಡುಕೊಂಡಿರುವುದನ್ನು ಗಂಭೀರವಾಗಿ ನಿಷ್ಕರ್ಷೆಗೊಳಪಡಿಸಬೇಕಿದೆ. ಸಾಕ್ಷ್ಯಾಧಾರಗಳನ್ನು ಆಧರಿಸಿ ಅಂತಿಮ ನ್ಯಾಯ ಒದಗಿಸುವ ನ್ಯಾಯಾಂಗದ ಸ್ವಾಭಾವಿಕ ಪ್ರಕ್ರಿಯೆಗೆ, ಪ್ರಜಾಪ್ರಭುತ್ವದ ಆಳ್ವಿಕೆಯೂ ಪೂರಕವಾಗಿ ಸ್ಪಂದಿಸಿದಾಗ ಮಾತ್ರ ನ್ಯಾಯ ವಿಳಂಬವನ್ನು ತಡೆಗಟ್ಟಲು ಸಾಧ್ಯ. ಆದರೆ ಭಾರತದ ಪ್ರಜಾತಂತ್ರ ಆಳ್ವಿಕೆಯನ್ನು ಇಂದಿಗೂ ನಿರ್ದೇಶಿಸುವ ಪ್ರಬಲ ಸಮಾಜಗಳು, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ ಆಳವಾಗಿ ಬೇರೂರಿದ್ದು, ಆಡಳಿತ ವ್ಯವಸ್ಥೆಯನ್ನೂ ಸಹ ನಿಯಂತ್ರಿಸುತ್ತಿರುವುದು ಈ ದಾರಿಯಲ್ಲಿ ಬಹುದೊಡ್ಡ ತೊಡಕಾಗಿ ಪರಿಣಮಿಸುತ್ತದೆ. ಭಾರತದ ರಾಜಕೀಯ ವ್ಯವಸ್ಥೆಯಲ್ಲಿ, ಸಾಂವಿಧಾನಿಕ ಆಶಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮೌಖಿಕವಾಗಿ ತೋರುವ ಬದ್ಧತೆ, ಕಾರ್ಯತಃ ಬಹುಮಟ್ಟಿಗೆ ಇಲ್ಲವಾಗಿರುವುದು, ಈ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ.

ಹಾಗಾಗಿಯೇ 1992ರ ಭವಾರಿ ದೇವಿಯಿಂದ 2012ರ ಸೌಜನ್ಯವರೆಗೆ ಭಾರತೀಯ ಸಮಾಜದಲ್ಲಿ ಸಂಭವಿಸಿರುವ ಮಹಿಳೆಯರ ಮೇಲಿನ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಅಮಾನುಷ ಹತ್ಯೆ ಮತ್ತಿತರ ಹಲವಾರು ದೌರ್ಜನ್ಯ ಪ್ರಕರಣಗಳು, ಅಂತಿಮ ನ್ಯಾಯಕ್ಕಾಗಿ ಹಂಬಲಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಸಾರ್ವಜನಿಕವಾಗಿ, ಸಾಮೂಹಿಕ ಅತ್ಯಾಚಾರಕ್ಕೊಳಗಾದ ಅಥವಾ ಹತ್ಯೆಗೀಡಾದ ಮಹಿಳೆಗೆ ಅಂತಿಮ ನ್ಯಾಯ ದೊರೆಯುವುದು ಎಂದರೇನು ? ಇನ್ನೂ ಬದುಕಿರುವ ಮಹಿಳೆ ತನ್ನ ಮೇಲಿನ ಅತ್ಯಾಚಾರ-ದೌರ್ಜನ್ಯಕ್ಕೆ ಕಾರಣರು ಯಾರು ಎಂದು ಅರಿತಿದ್ದರೂ, ಅವರು ಶಿಕ್ಷೆಗೊಳಗಾಗದೆ, ಗಣ್ಯ ಸಮಾಜದ ಒಂದು ಭಾಗವಾಗಿ ಇರುವುದನ್ನು ಕಾಣುವುದೇ ಒಂದು ಸಾಮಾಜಿಕ ವ್ಯಾಧಿ ಅಲ್ಲವೇ ? ಅತ್ಯಾಚಾರ-ಹತ್ಯೆಗೀಡಾದ ಮಹಿಳೆಯ ನಿಕಟವರ್ತಿಗಳಿಗೂ ಇಂತಹ ಒಂದು ಸನ್ನಿವೇಶ ಆಘಾತಕಾರಿಯಾಗಿ ಕಾಣುವುದು ಸಹಜ.

YouTube player

ಆದರೆ ಈ ಪುಟ್ಟ ಸಮಾಜವೊಂದು ನಿಸ್ಸಹಾಯಕತೆಯಿಂದ ನ್ಯಾಯಕ್ಕಾಗಿ ಮೊರೆ ಹೋಗುವ ಪ್ರಕ್ರಿಯೆಗೆ ಮೂಲತಃ ಸ್ಪಂದಿಸಬೇಕಾದ, ವಿಶಾಲ ಸಮಾಜವೊಂದು ನಮ್ಮ ನಡುವೆ ಇರುವುದೇ ಆದರೆ, ಈ ಸಾಮಾಜಿಕ ವ್ಯಾಧಿಯನ್ನು ಗುಣಪಡಿಸಲು ಸಾಧ್ಯ ಅಲ್ಲವೇ ? ದುರದೃಷ್ಟವಶಾತ್‌ ಸಾಮೂಹಿಕ ಅತ್ಯಾಚಾರ ಎಸಗಿದವರನ್ನು ಸಂತ್ರಸ್ತೆಯ ಕಣ್ಣೆದುರೇ ಸನ್ಮಾನಿಸುವ ಸಮಾಜವೂ ನಮ್ಮ ನಡುವೆ ಉಸಿರಾಡುತ್ತಿರುವುದನ್ನು ಬಿಲ್ಕಿಸ್‌ ಬಾನೋ ಪ್ರಕರಣ ನಿರೂಪಿಸಿದೆ. ಇಂತಹ ಒಂದು ವಾತಾವರಣದಲ್ಲಿ ಸೌಜನ್ಯಾಳಂತಹ ಅಮಾಯಕ ಹೆಣ್ಣು, ಹಾಥ್ರಸ್‌ನಲ್ಲಿ ನಡುರಾತ್ರಿಯಲ್ಲಿ ದಹಿಸಲ್ಪಟ್ಟ ಹೆಣ್ಣುಮಗಳ ಕುಟುಂಬ, ಅಂತಿಮ ನ್ಯಾಯ ಬೇಡುವುದೇ ಆದರೆ ಯಾರಿಂದ ? ಭಾರತದ ಸಮಸ್ತ ಜನತೆಗೂ ಘನತೆ ಗೌರವದಿಂದ ಬದುಕುವ ಪ್ರಾಥಮಿಕ ಹಕ್ಕು ನೀಡುವ ಸಂವಿಧಾನವನ್ನು ಒಪ್ಪಿ ಅಧಿಕಾರದಲ್ಲಿರುವ ಪ್ರಾತಿನಿಧಿಕ ಸರ್ಕಾರಗಳಿಂದ ಅಲ್ಲವೇ ?

ವ್ಯಷ್ಟಿ-ಸಮಷ್ಟಿಯ ನೆಲೆಗಳಲ್ಲಿ

ಇಲ್ಲಿ ಉದ್ಭವಿಸುವ ಮತ್ತೊಂದು ಗಹನವಾದ ಪ್ರಶ್ನೆ ಎಂದರೆ, ಯಾವುದೇ ಅಪರಾಧ ಎಸಗದ ವ್ಯಕ್ತಿ ಜೈಲು ಶಿಕ್ಷೆಗೊಳಗಾಗುವುದಾದರೂ ಏಕೆ ? ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಲ್ಪಟ್ಟು, ಹಲವು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ, ಈಗ ನಿರಪರಾಧಿ ಎಂದು ಸಾಬೀತಾದ ನಂತರ ಬಿಡುಗಡೆಯಾಗಿರುವ ವ್ಯಕ್ತಿಗೆ ನ್ಯಾಯ ದೊರಕಿಸುವುದಾದರೂ ಹೇಗೆ ? ಆತನ ವ್ಯಕ್ತಿಗತ ಯಾತನೆ, ವೈಯುಕ್ತಿಕ ವೇದನೆ ಮತ್ತು ತಳಮಳ, ಆತನ ತಂದೆ ತಾಯಿಯರ ಅಳಲು ಹಾಗೂ ಅಪರಾಧಿ ಎಂದು ಭಾವಿಸಲ್ಪಟ್ಟ ಈ ಕುಟುಂಬವು ಸಮಾಜದಿಂದ ಎದುರಿಸಿರುವ ಕಳಂಕ, ಕಿರುಕುಳಗಳು, ಈ ನೋವುಗಳಿಗೆ ನ್ಯಾಯ ದೊರಕಿಸುವುದೆಂದರೆ ಹೇಗೆ ? ಇಲ್ಲಿಯೂ ಸಹ ನ್ಯಾಯಾಂಗದ ಪರಿಧಿಯಿಂದಾಚೆಗೇ ನೈಜ ಅಪರಾಧಿಯನ್ನು ಗುರುತಿಸುವ ಜವಾಬ್ದಾರಿಯನ್ನು ನಮ್ಮ ಸಮಾಜ ಹೊರಬೇಕಿದೆ. ಈ ಸಮಾಜವನ್ನು ಆಳುವ ಅಧಿಕಾರ ರಾಜಕಾರಣ ನಿಭಾಯಿಸಬೇಕಿದೆ.

ಆದರೆ ಕಳೆದ ಮೂರು ದಶಕಗಳಲ್ಲಿ ಭಾರತದ ಅಧಿಕಾರ ರಾಜಕಾರಣ ತನ್ನ ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡಿರುವುದನ್ನು ಸಹ ಕಾಣುತ್ತಿದ್ದೇವೆ. ಆತ್ಮಹತ್ಯೆ, ಅತ್ಯಾಚಾರ, ಸಾಮೂಹಿಕ ದೌರ್ಜನ್ಯ, ಗುಂಪುಥಳಿತದಿಂದ ಹತ್ಯೆ ಹೀಗೆ ಎಲ್ಲ ರೀತಿಯ ಹಿಂಸಾತ್ಮಕ ಪೀಡೆಗಳನ್ನೂ ರಾಜಕೀಯ ಬಂಡವಾಳವಾಗಿ ಪರಿವರ್ತಿಸಿಕೊಳ್ಳುವ ವ್ಯಾವಹಾರಿಕ ತಂತ್ರಗಾರಿಕೆಯನ್ನು ಮಾರುಕಟ್ಟೆ ವ್ಯವಸ್ಥೆಯು ರಾಜಕೀಯ ಪಕ್ಷಗಳಿಗೆ ಕಲಿಸಿಬಿಟ್ಟಿದೆ. ಹಾಗಾಗಿಯೇ ಒಬ್ಬ ಪಕ್ಷದ ಕಾರ್ಯಕರ್ತನ ಆತ್ಮಹತ್ಯೆ ಮತ್ತು ಆತ ಬಿಟ್ಟು ಹೋಗುವ ಡೆತ್‌ ನೋಟ್‌ , ರಾಜಕೀಯ ದ್ವೇಷಾಸೂಯೆಗಳ ಪಗಡೆಯ ಹಾಸಿನಂತೆ ಬಳಕೆಯಾಗುತ್ತದೆ. ಸತ್ಯ ವ್ಯಕ್ತಿಯ ಜೀವ ರಾಜಕೀಯ ಪಗಡೆಯ ದಾಳವಾಗಿಬಿಡುತ್ತದೆ. ಈ ಅಸೂಕ್ಷ್ಮತೆಯ ನಡುವೆಯೇ ʼ ಸೌಜನ್ಯ ʼ ನಮ್ಮ ನಡುವೆ ನಿಂತಾಗ, ಆಕೆಯನ್ನು ಪ್ರತಿನಿಧಿಸುವವರು ಯಾರು ? ಸೌಜನ್ಯ ಏಕೆ ಈ ಪಗಡೆಯಾಟದಲ್ಲಿ ಕಾಯಿ ಸಹ ಆಗಲಿಲ್ಲ ? ಆಕೆಯ ಅತ್ಯಾಚಾರ ಮತ್ತು ಸಾವಿನ ಪ್ರಕರಣ ಏಕೆ ರಾಜಕೀಯ ರೂಪ ಪಡೆದುಕೊಳ್ಳಲಿಲ್ಲ, ಈಗಲೂ ಪಡೆದುಕೊಳ್ಳುತ್ತಿಲ್ಲ ?

ಇಲ್ಲಿ ನಮಗೆ ವಿಶಾಲ ಸಮಾಜ, ವ್ಯಷ್ಟಿ ನೆಲೆಯಲ್ಲಿ ಮನುಜ ಸೂಕ್ಷ್ಮ ಸಂವೇದನೆ, ಸಮಷ್ಟಿ ನೆಲೆಯಲ್ಲಿ ಸಾಮಾಜಿಕ ಪ್ರಜ್ಞೆ, ಮತ್ತು ಒಂದು ಆರೋಗ್ಯಕರ ಸಮಾಜದಲ್ಲಿರಬೇಕಾದ ಪಾಪಪ್ರಜ್ಞೆಯ ಪ್ರಶ್ನೆ ಎದುರಾಗುತ್ತದೆ. ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ನೈಜ ಅಪರಾಧಿಗಳು ಯಾರು ಎಂದು ನಿಷ್ಕರ್ಷೆ ಮಾಡಲು ನ್ಯಾಯಾಂಗವು ಸಾಕ್ಷ್ಯಾಧಾರಗಳನ್ನು ಅಪೇಕ್ಷಿಸುತ್ತದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಇಂದಿಗೂ ಪ್ರಯತ್ನಿಸುತ್ತಿರುವ ರೂವಾರಿಗಳು ಯಾರು ಎನ್ನುವುದು ನಿಗೂಢವಾಗಿಯೇ ಉಳಿದುಬಿಡುತ್ತದೆ. ಏಕೆಂದರೆ ಇಲ್ಲಿ ಸಾಕ್ಷ್ಯ ಸಂಗ್ರಹವೇ ಅಸಾಧ್ಯವಾಗಿಬಿಡುತ್ತದೆ. ಈ ಸಂದಿಗ್ಧತೆಯ ನಡುವೆ ರಾಜ್ಯಾದ್ಯಂತ ಜನಾಕ್ರೋಶ ಹೊರಹೊಮ್ಮಿದ್ದು,               ʼ ಸೌಜನ್ಯಾಗೆ ನ್ಯಾಯ ʼ ದೊರಕಿಸುವ ಜನಾಗ್ರಹ ಗಟ್ಟಿಯಾಗುತ್ತಿದೆ. ಇಲ್ಲಿ ಧರ್ಮಸ್ಥಳದ ಬಗ್ಗೆ ಸಮಾಜದಲ್ಲಿರುವ ಶ್ರದ್ಧಾಭಕ್ತಿಗಳ

ಪ್ರಶ್ನೆ ಉದ್‌ಭವಿಸುವುದೇ ಇಲ್ಲ ಅಲ್ಲವೇ ?

ಒಬ್ಬ ಅಸಹಾಯಕ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆಗೆ ಕಾರಣವಾಗುವುದು ವ್ಯಕ್ತಿಗಳೇ ಹೊರತು ಕ್ಷೇತ್ರವಲ್ಲ ಎನ್ನುವುದು ವಾಸ್ತವ. ಆದರೆ ಇಂದಿಗೂ ರಾಜಕಾರಣಿಗಳನ್ನೂ ಸೇರಿದಂತೆ, ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಸತ್ಯವನ್ನು ಪ್ರಮಾಣಿಸಲು ಒಂದು ಧಾರ್ಮಿಕ ನೆಲೆ ಎಂದೇ ಪರಿಗಣಿಸಲ್ಪಡುವ ಧರ್ಮಸ್ಥಳದಲ್ಲಿ ಇಂತಹ ಒಂದು ಅಮಾನುಷ ಕೃತ್ಯ ನಡೆದಿರುವುದನ್ನು, ನೈಜ ಅಪರಾಧಿಗಳನ್ನು ಗುರುತಿಸಲು ಸಾಕ್ಷ್ಯಾಧಾರಗಳ ಕೊರತೆ ಇರುವುದನ್ನು ಅಥವಾ ಇದ್ದಂತಹ ಸಾಕ್ಷ್ಯಾಧಾರಗಳನ್ನು ನಾಶಪಡಿಸಿರುವುದನ್ನು ಹೇಗೆ ನಿರ್ವಚಿಸಬೇಕು ? ಬದುಕಿಗೆ ಕಣ್ತೆರೆಯುವ ಮುನ್ನವೇ ಮನುಷ್ಯನ ರಾಕ್ಷಸೀ ಕೃತ್ಯಕ್ಕೆ ಬಲಿಯಾಗಿರುವ ಅಸಹಾಯಕ-ಅಮಾಯಕ ಬಾಲಕಿ, ಅಮೂರ್ತ ಸ್ವರೂಪದಲ್ಲಾದರೂ ನಮ್ಮ ಸುಸಂಸ್ಕೃತ ಎನ್ನಲಾಗುವ, ಧರ್ಮನಿಷ್ಠ ಎನ್ನಲಾಗುವ ಸಮಾಜದ ನಡುವೆ ನಿಂತು, ನನಗೆ ನ್ಯಾಯ ಕೊಡಿ ಎಂದು ಕೇಳಿದಾಗ, ಉತ್ತರಿಸಬೇಕಾದವರು ಯಾರು ?

ಸಾಮಾಜಿಕ ಸೂಕ್ಷ್ಮ ಪ್ರಜ್ಞೆಯ ನೆಲೆಯಲ್ಲಿ

ʼ ಸೌಜನ್ಯಾಗೆ ನ್ಯಾಯ ಕೊಡಿ ʼ ಎಂಬ ಅಂತಿಮ ನ್ಯಾಯದ ಜನಾಗ್ರಹವನ್ನು ಈ ನೆಲೆಯಲ್ಲಿಟ್ಟು ನೋಡಿದಾಗ, ನಮಗೆ ಮನುಷ್ಯರಲ್ಲಿ ವ್ಯಕ್ತಿಗತವಾಗಿ, ಸಮಾಜದಲ್ಲಿ ಸಾರ್ವಜನಿಕವಾಗಿ ಕೊಂಚ ಮಟ್ಟಿಗಾದರೂ ಇರಲೇಬೇಕಾದ ʼ ಪಾಪಪ್ರಜ್ಞೆ ʼ ಅಥವಾ ʼಅಪರಾಧಿ ಮನೋಭಾವʼ ದ ಪ್ರಶ್ನೆ ಎದುರಾಗುತ್ತದೆ. ರಾಜಕೀಯ ಚೌಕಟ್ಟುಗಳನ್ನು ಹೊರತುಪಡಿಸಿ ಅಥವಾ “ತಮ್ಮವರು ತಪ್ಪು ಮಾಡಲಾರರು ” ಎಂಬ ಸಾರ್ವತ್ರಿಕ ಸೂತ್ರದ ಅನುಸಾರ ಧಾರ್ಮಿಕ ನಂಬಿಕೆ, ಸಾಂಸ್ಕೃತಿಕ ಅಸ್ತಿತ್ವ ಮತ್ತು ಅಸ್ಮಿತೆಗಳ ನೆಲೆಯಲ್ಲಿ ನೋಡುವ ಸಮಾಜವನ್ನು ಹೊರತುಪಡಿಸಿ, ವಿಶಾಲ ಸಮಾಜದತ್ತ ನೋಡಿದಾಗ, ಈ ಜನಾಗ್ರಹದ ದನಿಗೆ ದನಿಗೂಡಿಸುವವರ ಸಂಖ್ಯೆ ಎಷ್ಟಿದೆ ಎಂದು ಯೋಚಿಸಬೇಕಾಗುತ್ತದೆ. ಇಲ್ಲಿ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಅಸ್ಮಿತೆಯ ವ್ಯಾಧಿ ಎದುರಾಗುತ್ತದೆ. ಸೌಜನ್ಯ ಎಂಬ ಅಮಾಯಕ ಹೆಣ್ಣು ಎಲ್ಲ ಸಮಾಜಗಳಿಗೂ ʼ ನಮ್ಮವಳು ʼ ಎನಿಸುವುದಿಲ್ಲ. ಆ ನತದೃಷ್ಟ ಹೆಣ್ಣು ದಕ್ಷಿಣ ಕನ್ನಡದ ಮನೆ ಮಗಳೂ ಆಗುವುದಿಲ್ಲ, ನಿರ್ದಿಷ್ಟ ಜಾತಿಯ, ಸಮುದಾಯದ, ಮತದ ಪ್ರತಿನಿಧಿಯೂ ಆಗುವುದಿಲ್ಲ, ಶೋಷಿತ ಸಮಾಜದ ಗುರುತು ಎಂದೂ ಪರಿಗಣಿಸಲ್ಪಡುವುದಿಲ್ಲ, ಅಥವಾ ಧರ್ಮ-ಸಂಸ್ಕೃತಿ ರಕ್ಷಕರ ದೃಷ್ಟಿಯಲ್ಲಿ ಆಕೆ ಕಾಣುವುದೇ ಇಲ್ಲ.

ಈ ಪ್ರವೃತ್ತಿಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಮಥುರಾದಿಂದ ಆರ್‌ಜಿ ಕಾರ್‌ ಆಸ್ಪತ್ರೆಯವರೆಗೆ ಮಹಿಳಾ ದೌರ್ಜನ್ಯಗಳ ಚರಿತ್ರೆಯನ್ನು ಗಮನಿಸಿದಾಗ, ಇಂತಹ ಸಂದಿಗ್ಧ ಪ್ರಶ್ನೆಗಳು ನಮ್ಮ ಸಮಾಜದಿಂದ ಉತ್ತರ ಬಯಸುತ್ತವೆ. ಸೌಜನ್ಯ ಇದರ ಒಂದು ಭಾಗವಾಗಿ ಕಾಣುತ್ತಾಳೆ. ಮಹಿಳೆಯರು ಮತ್ತು ಶೋಷಿತ ತಳಸಮುದಾಯಗಳ ಅಸಹಾಯಕರು ಅತ್ಯಾಚಾರ, ತಾರತಮ್ಯ, ಹಿಂಸೆ, ಕೊಲೆ ಮುಂತಾದ ಭೀಭತ್ಸ ದೌರ್ಜನ್ಯಗಳಿಗೆ ತುತ್ತಾದಾಗಲೆಲ್ಲಾ, ಪ್ರಜ್ಞೆ ಇರುವ ಸಮಾಜವನ್ನು ಕಾಡುವುದು ಈ ಜಿಜ್ಞಾಸೆಯೇ ಅಲ್ಲವೇ ? ಮಹಾರಾಷ್ಟ್ರ ಖೈರ್ಲಾಂಜಿಯನ್ನು ಮರೆತಿಲ್ಲ, ಕರ್ನಾಟಕ ಕಂಬಾಲಪಲ್ಲಿಯನ್ನೂ ಮರೆತಿಲ್ಲ, ಹೌದಲ್ಲವೇ ? ಹೌದು ಎಂದಾದರೆ, ಸಾಮಾಜಿಕ ವ್ಯಾಧಿಯಾಗಿ ಆಳಕ್ಕಿಳಿದಿರುವ ಅಸೂಕ್ಷ್ಮತೆ ಮತ್ತು ಸಂವೇದನಾಶೂನ್ಯ ಮನಸ್ಥಿತಿಗಳು, ಒಂದು ಭೀಕರ ವ್ರಣವಾಗಿ ವ್ಯಾಪಿಸುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕಲ್ಲವೇ ? ಕರ್ನಾಟಕದ ಸೌಜನ್ಯ ಆಗಲೀ, ಸಾಮೂಹಿಕ ಅತ್ಯಾಚಾರಕ್ಕೀಡಾಗ ಕೊಲೆಯಾದ,  ಕಾಶ್ಮೀರ ಕಥುವಾದ ಆಸಿಫಾ ಎಂಬ ಎಂಟು ವರ್ಷದ ಹಸುಳೆಯಾಗಲೀ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ ?

ಸಮಷ್ಟಿ ಭಾವನೆಯ ನೆಲೆಯಲ್ಲಿ

ಇದು ಕೇವಲ ಭಾವನಾತ್ಮಕ ಪ್ರಶ್ನೆ ಅಲ್ಲ. ಇಷ್ಟೊಂದು ಅನ್ಯಾಯಗಳ ನಡುವೆ ನ್ಯಾಯಕ್ಕಾಗಿ ಹೋರಾಡುವ ʼ ಆಂದೋಲನ ಜೀವಿಗಳು ʼ ನಮ್ಮ ಸಮಾಜವನ್ನು ಇನ್ನೂ ಚಿರನಿದ್ರೆಗೆ ಜಾರಲು ಬಿಡದೆ ಕಾಪಾಡಿಕೊಂಡು ಬಂದಿದ್ದಾರೆ. ದುರಂತ ಎಂದರೆ, ವಿಕಾಸದ ಹಾದಿಯಲ್ಲಿ ಬಹಳವೇ ಮುನ್ನಡೆದಿರುವ ಒಂದು ಪ್ರಬುದ್ಧ ಸಮಾಜದಲ್ಲಿ, ಈ ಆಂದೋಲನದ ದನಿಗಳೇ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತಹ ವಾತಾವರಣದಲ್ಲಿ ನಾವಿದ್ದೇವೆ. ಪ್ರತಿಯೊಂದು ಅಸಹಜ ಸಾವು ರಾಜಕೀಯ ದೋಷಾರೋಪ-ಪ್ರತ್ಯಾರೋಪಗಳ ನೆಲೆಯಾಗುತ್ತಿರುವ ಹೊತ್ತಿನಲ್ಲೂ, ಸಮಾಜದ ಒಂದು ಮೂಲೆಯಲ್ಲಿ ಸದ್ದಿಲ್ಲದೆ ಇಲ್ಲವಾಗಿಬಿಟ್ಟ ಸೌಜನ್ಯ ಯಾರಿಗೂ ಬೇಡದ ಕೂಸಾಗಿರುವುದು ಇತಿಹಾಸದ ವ್ಯಂಗ್ಯ  ಎನಿಸುವುದಿಲ್ಲವೇ ? ಇದು ವಿಶಾಲ ಸಮಾಜವನ್ನು ಗಹನವಾಗಿ ಕಾಡಬೇಕಿರುವ ಮೌಲಿಕ ಪ್ರಶ್ನೆ ಮತ್ತು ನೈತಿಕ ಸವಾಲು ಅಲ್ಲವೇ ?

YouTube player

ಕರ್ನಾಟಕದ ಸಮಾಜ ತನ್ನ ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡಿದೆ ಎನ್ನುವುದಕ್ಕೆ ಸೌಜನ್ಯ ಸಾಕ್ಷಿಯಾಗುತ್ತಾಳೆ. ಈ ಸಾಮಾಜಿಕ ವ್ಯಾಧಿ ಒಂದು ಸಾಂಸ್ಕೃತಿಕ ವ್ರಣವಾಗುತ್ತಿರುವುದಕ್ಕೆ ನಮ್ಮ ಸಮಾಜ ಸಾಕ್ಷಿಯಾಗುತ್ತಿದೆ. ಇಲ್ಲಿ ಸೌಜನ್ಯ ಏಕಾಂಗಿಯಾಗಿ ಕಾಣಬೇಕಿಲ್ಲ. ಸಹಜೀವಿಯನ್ನು ಕೊಂದು, ತುಂಡರಿಸಿ, ಸೂಟ್‌ಕೇಸ್‌ಗಳಲ್ಲಿಟ್ಟು ಬಿಸಾಡುವಂತಹ ಒಂದು ಸಮಾಜದಲ್ಲಿ ಧಾನಮ್ಮ ಅಥವಾ ಸೌಜನ್ಯ ಒಬ್ಬರಾಗಿ ಕಾಣುತ್ತಾರೆ. ಆಧುನಿಕತೆಯನ್ನು ಮೈಗೂಡಿಸಿಕೊಂಡು, ತಂತ್ರಜ್ಞಾನ ಯುಗದಲ್ಲಿ ಮೇಲ್ನಡಿಗೆಯ ಹಾದಿಯಲ್ಲಿ ಸಾಗುತ್ತಿರುವ ಹೊತ್ತಿನಲ್ಲೇ, ಈ ಶಿಲಾಯುಗದ ಮನಸ್ಥಿತಿ ನಮ್ಮ ನಡುವೆ, ಸಾಂಸ್ಕೃತಿಕವಾಗಿ ಬೇರೂರುತ್ತಿರುವುದು, ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ.  ವ್ಯಷ್ಟಿ ನೆಲೆಯಲ್ಲಿ ಸಾಮಾಜಿಕ ವ್ಯಾಧಿ ಅಥವಾ ವ್ಯಸನವಾಗಿ ಕಾಣುವ ಈ ಮನೋವೃತ್ತಿ, ವಿಶಾಲ ಸಮಷ್ಟಿ ನೆಲೆಯಲ್ಲಿ, ನಾಗರಿಕತೆಯನ್ನು ಕಾಡುವ ವ್ರಣವಾಗುತ್ತಿರುವುದು ನಮ್ಮ ಪ್ರಜ್ಞೆಯನ್ನು ಮತ್ತೆಮತ್ತೆ ಬಡಿದೆಬ್ಬಿಸಬೇಕಿದೆ. ಧರ್ಮ-ಸಂಸ್ಕೃತಿ ರಕ್ಷಣೆಯಿಂದಾಚೆಗೆ ಇದನ್ನು ಯೋಚಿಸಬೇಕಿದೆ.

ಈ ಜವಾಬ್ದಾರಿ ಇಡೀ ಸಮಾಜದ ಮೇಲಿದೆ ಎನ್ನುವುದನ್ನು ಮನಗಾಣದೆ ಹೋದರೆ ಬಹುಶಃ ವರ್ತಮಾನದ ತಲೆಮಾರು ಇತಿಹಾಸದಲ್ಲಿ ಶಾಶ್ವತ ಅಪರಾಧಿಯಾಗಿ ಉಳಿದುಬಿಡುತ್ತದೆ.

YouTube player

-೦-೦-೦-೦-

Previous Post

ತೆರೆಗೆ ಬರಲು ಸಿದ್ದವಾದ “ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್” .

Next Post

ಎಲ್ಲ ಕೈಗಾರಿಕೆಗಳ ಮಾಲಿನ್ಯ ಅಧ್ಯಯನಕ್ಕೆ ಸೂಚನೆ: ಎಂ ಬಿ ಪಾಟೀಲ

Related Posts

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?
Top Story

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

by ಪ್ರತಿಧ್ವನಿ
January 13, 2026
0

ಬಿಗ್ ಬಾಸ್ ಕನ್ನಡ ಸೀಸನ್ 12( Bigg Boss Kannada season 12) ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ಸೋಲು-ಗೆಲುವಿನ ಲೆಕ್ಕಾಚಾರದ ಚರ್ಚೆ ಜೋರಾಗಿದ್ದು, ಬಿಗ್ ಬಾಸ್ ಮನೆಯ ...

Read moreDetails
ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್

ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್

January 13, 2026
ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

January 13, 2026
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

January 13, 2026
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

January 12, 2026
Next Post

ಎಲ್ಲ ಕೈಗಾರಿಕೆಗಳ ಮಾಲಿನ್ಯ ಅಧ್ಯಯನಕ್ಕೆ ಸೂಚನೆ: ಎಂ ಬಿ ಪಾಟೀಲ

Recent News

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?
Top Story

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

by ಪ್ರತಿಧ್ವನಿ
January 13, 2026
ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ
Top Story

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

by ಪ್ರತಿಧ್ವನಿ
January 13, 2026
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!
Top Story

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

by ಪ್ರತಿಧ್ವನಿ
January 13, 2026
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ
Top Story

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 12, 2026
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ
Top Story

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

by ಪ್ರತಿಧ್ವನಿ
January 12, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

January 13, 2026
ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್

ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada