
ಕಾಂಗ್ರೆಸ್ ಮಹಿಳಾ ಘಟಕದಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಭಾರತ್ ಜೋಡೊ ಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಕೆಪಿಸಿಸಿ ಮಹಿಳಾ ಉಪಾಧ್ಯಕ್ಷೆ ಪುಷ್ಪಾ ಅಮರ್ನಾಥ್, ಜಿ.ಸಿ ಚಂದ್ರಶೇಖರ್, ವಿನಯ್ ಕುಮಾರ್ ಸೊರಕೆ ಸೇರಿದಂತೆ ಹಲವರು ನಾಯಕರು ಭಾಗಿಯಾಗಿದ್ದರು.

ಮಹಿಳಾ ಕಾಂಗ್ರೆಸ್ ದಿನಾಚರಣೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಭಾಷಣ ಆರಂಭದಲ್ಲಿ ವೇದಿಕೆ ಮುಂಭಾಗ ನಿಂತಿದ್ದ ಮಹಿಳೆಯರನ್ನು ಉದ್ದೇಶಿಸಿ, ನಡೀರಮ್ಮ ಬೇಗ ಕೂತ್ಕೊಳಿ.. ಹೇ ಪೊಲೀಸ್ ನಿಂತಿರುವವರನ್ನೆಲ್ಲಾ ಒಳಗೆ ಕಳಿಸಿ, ಒಳಗೆ ಬಂದು ಕೂರಲಿ, ಚೇರ್ ಖಾಲಿ ಇದ್ದಾವೆ.. ನಾವು ಸೀಟು ಸೀಟು ಅಂತಿದ್ದೀವಿ.. ನೀವು ಸೀಟ್ ಸಿಕ್ಕುದ್ರು ಕೂರಲ್ಲ ಎನ್ನುವ ಮೂಲಕ ಕಾಂಗ್ರೆಸ್ನಲ್ಲಿ ಕುರ್ಚಿ ಫೈಟ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ಡಿ.ಕೆ ಶಿವಕುಮಾರ್ ಮಾತಿಗೆ ಇಡೀ ಸಭೆ ನಗೆಗಡಲಲ್ಲಿ ತೇಲಿದೆ.

ಆ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಗೃಹ ಲಕ್ಷ್ಮೀಯರಿಂದ ಕನಿಷ್ಠ 50 ಮಂದಿ ಸದಸ್ಯತ್ವ ಮಾಡಿಸಬೇಕು. ಹೆಚ್ಚು ಮೆಂಬರ್ಶಿಪ್ ಮಾಡುವವರನ್ನ ಯಾವುದಾದರೊಂದು ಕಮಿಟಿಗೆ ನಾಮಿನಿ ಮಾಡ್ತೀವಿ. ಆಮೇಲೆ ಈ ಡಿ.ಕೆ ಶಿವಕುಮಾರ್ ಮಾತಿಗೆ ತಪ್ಪಿದ್ರೆ ಮಾತನಾಡಿ. ಈ ಡಿಕೆ ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತೇನೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ನಮಗೆ ಮೊದಲು ಪಾರ್ಟಿ, ಪಾರ್ಟಿಯೇ ನಮ್ಮ ತಂದೆ ತಾಯಿ. ಪಾರ್ಟಿ ಇದ್ರೆ ಸಿದ್ದರಾಮಯ್ಯ, ಪಾರ್ಟಿ ಇದ್ರೆ ಎಲ್ಲ. ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ. ಇದನ್ನ ನಾನು ಮೊದಲಿಂದಲೂ ಹೇಳುತ್ತಾ ಬಂದಿದ್ದೇನೆ ಎಂದಿದ್ದಾರೆ.

ನನಗೆ ಏನಾದ್ರು ಭವಿಷ್ಯ ಕಾಣಬೇಕಾದ್ರೆ ಅದು ಮಹಿಳೆಯರು, ಯುವಕರಿಂದ ಮಾತ್ರ ಸಾಧ್ಯ ಎಂದು ನಾನು ಅಧ್ಯಕ್ಷನಾದಾಗ ಹೇಳಿದ್ದೆ. ಹಾಗಾಗಿ ನಾವು ಗ್ಯಾರಂಟಿಗಳನ್ನ ಕೊಡುವುವಾಗ, ಮಹಿಳೆಯರು, ಯುವಕರನ್ನ ಗಮನದಲ್ಲಿಟ್ಟುಕೊಂಡು ಕೊಟ್ಟಿದ್ದೇವೆ. ಮಹಿಳೆಯರಿಗೆ ಪ್ರೋತ್ಸಾಹ ಕೊಡಲಿಕ್ಕೆ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಮೊದಲಿಗೆ ಗ್ಯಾರಂಟಿಗಳು ಜಾರಿಗೆ ಬಂದ್ರೆ ಆರ್ಥಿಕವಾಗಿ ದೀವಾಳಿ ಆಗುತ್ತದೆ ಅಂದ್ರು. ಅದರೆ ನಮ್ಮನ್ನ ನೋಡಿ ಬೇರೆ ಬೇರೆ ರಾಜ್ಯಗಳಲ್ಲಿ ವಿರೋಧ ಪಕ್ಷದವರು ಗ್ಯಾರಂಟಿ ಜಾರಿಗೆ ತಂದಿದ್ದಾರೆ.

ಮಹಿಳೆ ಸಮಾಜದ ಕಣ್ಣು, ನನ್ನ ಕಾರ್ಯಕ್ರಮಕ್ಕೆ ಆಹ್ವಾನ ಮಾಡುವಾಗಲೂ ಪತ್ನಿ ಹೆಸರು ಹೇಳ್ತಾರೆ. ಈ ಹಿನ್ನಲೆಯಲ್ಲಿ ಮಹಿಳೆಯರು ಎಲ್ಲದರಲ್ಲೂ ಮುಖ್ಯ. ಪ್ರತಿಯೊಬ್ಬರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಗ್ಯಾರಂಟಿಗಳನ್ನ ತಿಳಿಸಿ. ಕಾಂಗ್ರೆಸ್ಗೆ ಮಹಿಳಾ ಸದಸ್ಯತ್ವ ಹೆಚ್ಚಿಗೆ ಮಾಡಬೇಕು. ಎಲ್ಲರೂ ಪಕ್ಷ ಸಂಘಟನೆಗೆ ಮುಂದೆ ಬನ್ನಿ ಎಂದಿದ್ದಾರೆ. ನಾ ಬಂದ್ರೆ ಅವರು ಏನಾಂತರೋ ಅಥವಾ ಅವರು ಮುಂದೆ ಹೋಗ್ತಾರೆ. ಅದು ಇದು ಅಂತಾ ಅನ್ಕೊಂಡು ಹಿಂದೆ ಸರಿಬೇಡಿ. ಹೀರೋ ಇದ್ದವರು ಜೀರೋ ಆಗ್ತಾರೆ, ಜೀರೋ ಇದ್ದವರು ಹೀರೋ ಆಗ್ತಾರೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ.
ಹೆಣ್ಣು ಮಕ್ಕಳು ತ್ಯಾಗ ಮಾಡುವುದಕ್ಕೂ ಸಿದ್ದರಿರಬೇಕು. ನಿಮ್ಮ ನಿಮ್ಮ ವಿಚಾರ ಏನೋ ಇದ್ರು ಸೈಡಿಗಿಟ್ಟು, ಹೆಣ್ಣು ಮಕ್ಕಳ ಅಭಿವೃದ್ಧಿಗೆ ಯೋಚನೆ ಮಾಡಿ. ಸೌಮ್ಯ ರೆಡ್ಡಿ ಅಧ್ಯಕ್ಷರಾಗಬೇಕು ಎಂದು ಏನು ಇರಲಿಲ್ಲ. ನಾನೇ ಹೇಳಿ ಅಧ್ಯಕ್ಷೆ ಮಾಡಿದ್ದೇನೆ. ಎಲ್ಲರೂ ಎಲ್ಲರಂತೆ ಆಗೋಕೆ ಆಗುವುದಿಲ್ಲ. ಪ್ರತಿಯೊಬ್ಬರು ಮಹಿಳಾ ನಾಯಕಿರನ್ನ ತಯಾರು ಮಾಡಿ. ಗ್ಯಾರಂಟಿ ಅನುಷ್ಠಾನ ಮಾಡಿದ್ದಕ್ಕೆ ಅಸೆಂಬ್ಲಿಯಲ್ಲಿ ಬಿಜೆಪಿ ಅವರು ದೊಡ್ಡ ಗಲಾಟೆ ಮಾಡಿದ್ರು. ನಾವು ಹೇಳಿದ್ವಿ ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಅದಕ್ಕೆ ನಾವು ಮಾಡಿದ್ದೇವೆ ಅಂತಾ ನಾವು ಹೇಳಿದ್ದೇವೆ. ಮೇ 20 ರಂದು ಸರ್ಕಾರ ಬಂದು ಎರಡು ವರ್ಷ ಆಗಿದೆ. ಎರಡು ವರ್ಷದ ಸಂಭ್ರಮ ಅದ್ದೂರಿಯಾಗಬೇಕು. ಪ್ರತಿ ಊರಿನ ಮನೆ ಮುಂದೆ ರಂಗೋಲಿ ಹಾಕಬೇಕು ಎಂದು ಕರೆ ನೀಡಿದ್ದಾರೆ. ರಂಗೋಲಿ ಸ್ಫರ್ಧೆ ಮಾಡಬೇಕು, ಅವರಿಗೆ ಬಹುಮಾನ ಕೊಡಬೇಕು ಎಂದಿದ್ದಾರೆ.








