
ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಸೇರಿದ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಅವರು ದುಬೈಯಿಂದ ಸುಮಾರು ₹12.56 ಕೋಟಿ ಮೌಲ್ಯದ 14.2 ಕಿಲೋಗ್ರಾಂ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ತರಲು ಯತ್ನಿಸಿದ್ದ ಪ್ರಕರಣ ಮನೆ ಮಾತಾಗಿದೆ.

ಇದೀಗ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಇದೀಗ ಸಚಿವ ಎಂ.ಬಿ ಪಾಟೀಲ್ ಹೊಸ ಟ್ವೀಸ್ಟ್ ಕೊಟ್ಟಿದ್ದಾರೆ.. ಬಿಜೆಪಿ ಸರ್ಕಾರದಲ್ಲಿ ರನ್ಯಾ ಯೋಜನೆಗೆ ಮಂಜೂರು ಮಾಡಿದ್ರು, ಆದರೆ ಯೋಜನೆಗೆ ಹಣ ಕೊಟ್ಟಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.. ವಿಧಾನಸೌಧದಲ್ಲಿ ಮಾತನಾಡಿದ ಅವರು,
ನಟಿ ರನ್ಯಾ ರಾವ್ ಅವರ ಟಿಎಂಟಿ ಸರಳು ತಯಾರಿಸುವ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರ ಅನುಮೋದನೆ ನೀಡಿತ್ತು. ಇದಕ್ಕೆ ಶಿರಾ ಕೈಗಾರಿಕಾ ಪ್ರದೇಶದಲ್ಲಿ 12 ಎಕರೆ ಜಮೀನು ಮಂಜೂರು ಮಾಡಲು 2023ರ ಜನವರಿ 2ರಂದು ನಡೆದಿದ್ದ ಉನ್ನತ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ತೀರ್ಮಾನಿಸಿತ್ತು. ಆದರೆ ರನ್ಯಾ ಅವರು ನಿಗದಿತ ಅವಧಿಯಲ್ಲಿ ಹಣ ಪಾವತಿಸದ ಕಾರಣ ಅವರಿಗೆ ಜಮೀನಿನ ಹಂಚಿಕೆ ಮಾಡಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಯೋಜನೆ ಏನೆಂದರೇ : ನಟಿ ರನ್ಯಾ ರಾವ್ ಅವರ Ksiroda India Pvt Ltd ಕಂಪನಿಗೆ, ಫೆಬ್ರವರಿ 22, 2023ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಭೂಮಿ ಮಂಜೂರು ಮಾಡಿತ್ತು ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಈ ಮಾಹಿತಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮಾಹಿತಿ ಹಂಚಿಕೊಂಡಿದೆ.

2023ರ ಫೆಬ್ರವರಿ ತಿಂಗಳಲ್ಲಿ ಉಕ್ಕಿನ ಉತ್ಪಾದನಾ ಘಟಕ ಸ್ಥಾಪನೆಗಾಗಿ 12 ಎಕರೆ ಕೈಗಾರಿಕಾ ಭೂಮಿ ಮಂಜೂರು ಮಾಡಲಾಗಿತ್ತು. ಈ ಭೂಮಿ ತುಮಕೂರು ಜಿಲ್ಲೆಯ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಗುರುತಿಸಲಾಗಿತ್ತು ಎನ್ನಲಾಗಿದೆ. 137ನೇ ರಾಜ್ಯ ಮಟ್ಟದ ಏಕಜಾಲರಿ ಅನುಮೋದನಾ ಸಮಿತಿಯ ಸಭೆಯಲ್ಲಿ ಈ ಭೂಮಿ ಹಂಚಿಕೆ ಮಂಜೂರಾಗಿತ್ತು. ಅಲ್ಲದೇ ಈ ಯೋಜನೆಯಡಿ ₹138 ಕೋಟಿ ಹೂಡಿಕೆ ಮಾಡಲಾಗುವುದು ಎಂಬ ಮಾತು ಕೇಳಿ ಬಂದಿದ್ದಲ್ಲದೇ, 160 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತೀರ್ಮಾನಿಸಲಾಗಿತ್ತು.

ಇನ್ನು KIADB ಬಿಡುಗಡೆ ಮಾಡಿದ ಈ ಒಂದೇ ಒಂದು ಹೇಳಿಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಅಲೆಯನ್ನೇ ಸೃಷ್ಟಿಸಿದೆ. ಏಕೆಂದರೆ ಈಗ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರ್ಕಾರಕ್ಕೆ, ಬಿಜೆಪಿ ವಿರುದ್ಧ ತಿರುಗಿಬೀಳಲು ಹೊಸ ಪುಷ್ಠಿ ಸಿಕ್ಕಂತಾಗಿದೆ. ಕಾಂಗ್ರೆಸ್ ವಿರುದ್ಧ ಉರಿದು ಬೀಳುತ್ತಿರುವ ಕೇಸರಿಪಡೆ ಬಾಯಿ ಮುಚ್ಚಿಸಲು, ರನ್ಯಾ ರಾವ್ ಅವರ ಭೂ ವಿವಾದವೇ ದೊಡ್ಡ ಅಸ್ತ್ರವಾಗಿದೆ. ನಿಮ್ಮ ಸರ್ಕಾರವಿದ್ದಾಗಲೇ ಇಂಥ ಕೆಲಸಗಳು ನಡೆಯುವುದು ಎಂದು ತಿವಿಯಲು, ಚೂರಿ ಸಿಕ್ಕಂತಾಗಿದೆ. ನಟಿ ರನ್ಯಾ ರಾವ್ ದುಬೈನಿಂದ ಸುಮಾರು ₹12.56 ಕೋಟಿ ಮೌಲ್ಯದ 14.2 ಕಿಲೋಗ್ರಾಂ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ತರಲು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿರುವ ಸುದ್ದಿ ಜಗಜ್ಜಾಹೀರಾಗಿದೆ. ಇದರ ನಡುವೆಯೇ 2023ರಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗಾಗಿ ಭೂಮಿಯನ್ನು ಮಂಜೂರು ಮಾಡಿತ್ತು ಎಂಬ ವಿಷಯ ಬೆಳಕಿಗೆ ಬಂದಿದ್ದು, ರಾಜಕೀಯ ಲೇಪನ ಮೆತ್ತಿಕೊಂಡಂತಾಗಿದೆ.
