ಶಿವಮೊಗ್ಗ: ಕರ್ನಾಟಕ ವಿದ್ಯುತ್ ನಿಗಮದ ( Electricity Corporation )ಅವೈಜ್ಞಾನಿಕ ಭಡ್ತಿಗೆ ಹೈಕೋರ್ಟ್ ( High Court ) ತಡೆ ನೀಡಿದೆ. 16ನೇ ಕೇಡರ್‌ನಲ್ಲಿದ್ದ ಅಧಿಕಾರಿ ಒಂದೆರಡು ವರ್ಷದಲ್ಲಿ 7ನೇ ಕೇಡರ್‌ಗೆ ಭಡ್ತಿ ಪಡೆಯುತ್ತಿದ್ದರು. ಇದು ಯಾವ ರೀತಿಯ ಭಡ್ತಿ ಎಂಬುದೇ ಯಕ್ಷಪ್ರಶ್ನೆಯಾಗಿತ್ತು. ಇದರ ವಿರುದ್ಧ ಕೋರ್ಟ್ ಮೊರೆ ಹೋಗಿದ್ದ ನಿಗಮದ ಎಂಜಿನಿಯರ್ಗಳಿಗೆ ಕೊನೆಗೂ ಜಯ ಸಿಕ್ಕಿದೆ.

ರಾಜ್ಯ ಸರ್ಕಾರ 1986ಕ್ಕೆ ಮೊದಲಿದ್ದ ಭಡ್ತಿ ಯೋಜನೆಯನ್ನು ವಿವಾದಗಳಿಂದಾಗಿ ಕೈಬಿಟ್ಟಿತ್ತು. ಆದರೆ, ಯಾವುದೇ ಇಲಾಖೆ, ನಿಗಮದಲ್ಲಿ ಇಲ್ಲದ ಭಡ್ತಿ ಯೋಜನೆ ಮಾತ್ರ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್)ದಲ್ಲಿ ಇನ್ನೂ ಚಾಲ್ತಿಯಲ್ಲಿತ್ತು. ಇದರಿಂದ ಪ್ರಾಮಾಣಿಕವಾಗಿ ಸಹಾಯಕ ಎಂಜಿನಿಯರ್‌ಗಳು ಅನ್ಯಾಯಕ್ಕೆ ಒಳಗಾಗಿದ್ದರು. ಡಿಪ್ಲೊಮಾ ಪದವಿ ಮೇಲೆ ಜೂನಿಯರ್ ಎಂಜಿನಿಯರ್ ಆಗಿ ಬಂದವರು ಒಂದೆರಡು ವರ್ಷದಲ್ಲಿ ಎಇ (ಸಹಾಯಕ ಎಂಜಿನಿಯರ್) ಆಗಿ ಭಡ್ತಿ ಪಡೆದು ಸೇವಾ ಹಿರಿತನವನ್ನು ಕೂಡ ನಡೆಯುತ್ತಿದ್ದರು. ಆದರೆ ಬಿಇ ಮುಗಿಸಿ ಬಂದವರಿಗೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಬೇಸತ್ತು ಹೋಗಿದ್ದ ಉದ್ಯೋಗಿಗಳು 2012ರಲ್ಲಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ 2024ರ ಡಿ. 4ರಂದು ತೀರ್ಪು ನೀಡಿದೆ.
ತಕರಾರು ಏನು?: ಡಿಪ್ಲೊಮಾ ಮಾಡಿದವರು ಜಿ ಇ (ಜೂನಿಯರ್ ಎಂಜಿನಿಯರ್) ಹುದ್ದೆಗೆ ಅರ್ಜಿ ಹಾಕಬಹುದು. ಬಿಇ ಮಾಡಿದವರು ಎಇ (ಸಹಾಯಕ ಎಂಜಿನಿಯರ್) ಹುದ್ದೆಗೆ ಅರ್ಜಿ ಹಾಕಬಹುದು. ಜಿಇಗೆ ನೇಮಕ ಆದವರು ಕನಿಷ್ಠ 5 ವರ್ಷ ಸೇವೆ ಸಲ್ಲಿಸಬೇಕಾಗುತ್ತದೆ. ಆಮೇಲೆ ಅವರು ಎಇಯಾಗಿ ಭಡ್ತಿ ಹೊಂದಲು ಇಲಾಖೆ ವತಿಯಿಂದ ನಡೆಯುವ ಪರೀಕ್ಷೆ ಬರೆಯಬೇಕು ಅಥವಾ ಡಿಪಿಆರ್ ನಿಯಮ ಪ್ರಕಾರ ಭಡ್ತಿ ಪಡೆಯಬಹುದು ಎಂದು ನಿಯಮ. ಆದರೆ ನಿಗಮದಲ್ಲಿ ಜೆಇ ಆಗಿ ಸೇವೆಗೆ ಸೇರಿ ಒಂದೇ ವರ್ಷಕ್ಕೆ ಹಲವರಿಗೆ ಎಇಯಾಗಿ ಭಡ್ತಿ ನೀಡಲಾಗುತ್ತಿತ್ತು. ಇದರಿಂದಾಗಿ 16ನೇ ಕೇಡರ್‌ನಲ್ಲಿದ್ದವರು ಒಂದೇ ವರ್ಷದಲ್ಲಿ 7ನೇ ಕೇಡರ್‌ಗೆ ಬರುತ್ತಿದ್ದರು.
1987ರ ಹಿಂದೆ ಜೆಇ ಆಗಿ ಬಂದವರು ನಿಗಮದ ಎನ್‌ಸಿ ಪಡೆದು ಉನ್ನತ ಶಿಕ್ಷಣಕ್ಕೆ ಹೋಗುತ್ತಿದ್ದರು. ಆ ರೀತಿ ಕಳುಹಿಸಿದವರನ್ನು ಎಇ ಎಂದು ಪರಿಗಣಿಸ ಲಾಗುತ್ತಿತ್ತು. ಒಬ್ಬ ವ್ಯಕ್ತಿ 10 ವರ್ಷ ಸೇವೆ ಸಲ್ಲಿಸಿದ್ದರೆ 3ನೇ ಒಂದು ಭಾಗದಷ್ಟು ಸೇವಾ ಹಿರಿತನದೊಂದಿಗೆ ಬಡ್ತಿ ನೀಡಲಾಗುತ್ತಿತ್ತು. ಸರಕಾರ ಈ ವ್ಯವಸ್ಥೆಯನ್ನು 1987ರಲ್ಲಿ ಕೈಬಿಟ್ಟಿತ್ತು. ಆದರೆ 1994ರಲ್ಲಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಈ ವ್ಯವಸ್ಥೆ ರದ್ದು ಮಾಡಲಾಗುವುದು ಎನ್ನಲಾಗಿದ್ದರೂ ಈವರೆಗೆ ಮಾಡಿರಲಿಲ್ಲ.
ಡಿಪ್ಲೊಮಾ ಮಾಡಿಕೊಂಡು ಬಂದವರು ನಿಗಮದ ಎನ್‌ಸಿ ಪಡೆಯದೆ ವಿಟಿಯು (ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ) ಅಡಿ ನೋಂದಾಯಿತ ರೆಗ್ಯುಲರ್ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬಿಇ ಪದವಿ ಪಡೆದಿದ್ದರು. ಎಂಜಿನಿಯರಿಂಗ್ ಪದವಿ ಕಲಿಸಲು ಯೋಜನಾ ಪ್ರದೇಶದ ಹತ್ತಿರದಲ್ಲಿ ಯಾವುದೇ ಸಂಜೆ ಕಾಲೇಜುಗಳಿಲ್ಲ. ಆರ್‌ಟಿಪಿಎಸ್ ಸೇವೆಯಲ್ಲಿದ್ದವರು 180 ಕಿ.ಮೀ. ದೂರದಲ್ಲಿರುವ ಹೈದರಾಬಾದ್ ಕಾಲೇಜಿನಲ್ಲಿ, ವಾರಾಹಿಯಲ್ಲಿದ್ದವರು ತುಮಕೂರಿನಲ್ಲಿ, ಶಿವಮೊಗ್ಗದಲ್ಲಿರುವವರು ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಆದರೆ ವಿಟಿಯು ನಿಯಮದ ಪ್ರಕಾರ, ಸೇವೆಯಲ್ಲಿದುಕೊಂಡೇ ಪೂರ್ಣಾವ ಧಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬರುವುದೇ ಇಲ್ಲ. ಉದ್ಯೋಗ ಮಾಡುತ್ತ ಎಂಜಿನಿಯರಿಂಗ್ ಪದವಿ ಮುಗಿಸಲೂ ಬರುವುದಿಲ್ಲ. ಅಷ್ಟೇ ಅಲ್ಲದೆ ಸಂಬಂಧ ಇಲ್ಲದ ಕೋರ್ಸ್‌ಗಳನ್ನು (ಆಟೋಮೊಬೈಲ್, ಇಂಡಸ್ಟ್ರಿಯಲ್ ಪ್ರೊಡಕ್ಷನ್) ಸಹ ಮಾಡಿ ಭಡ್ತಿ ಪಡೆದಿದ್ದರು. ಈ 3 ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿ ಅನ್ಯಾಯಕ್ಕೊಳಗಾದ ಕೆಪಿಸಿಎಲ್ ಎಂಜಿನಿಯರ್ಗಗಳು ಕೋರ್ಟ್
ಮೊರೆ ಹೋಗಿದ್ದರು. ಕೋರ್ಟ್ ಕೊನೆಗೂ ನ್ಯಾಯ ದೊರಕಿಸುವ ಕೆಲಸ ಮಾಡಿದೆ.