ಬಜೆಟ್ ಮಂಡನೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಬಿಜೆಪಿ ಶಾಸಕರು, ಸಂಸದರ ಜೊತೆಗೆ ಸಭೆ ಮಾಡಿದ್ದಾರೆ. ಮೀಟಿಂಗ್ ಹಾಲ್ಗೆ ವಾಕಿಂಗ್ ಸ್ಟಿಕ್ನ ಸಹಾಯದಿಂದ ನಡೆದುಕೊಂಡ ಬಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಸಿಎಂಗೆ ಶಾಲು ಹೊದಿಸಿ ಬಿ.ವೈ ವಿಜಯೇಂದ್ರ ಸನ್ಮಾನಿಸಿದ್ದಾರೆ. ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೂ ಗುಚ್ಛ ನೀಡಿ ಸ್ವಾಗತಿಸಿದ್ದಾರೆ. ನಂತರ ಬಿಜೆಪಿ ಶಾಸಕರು, ಸಂಸದರ ಮನವಿಗಳನ್ನು ಆಲಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಕಾವೇರಿ ನಿವಾಸದಲ್ಲಿ ಬಿಜೆಪಿ ನಾಯಕರ ಜೊತೆಗೆ ಸಭೆ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, ನಾವೆಲ್ಲ ಇಂದು ಸಿಎಂ ಭೇಟಿ ಮಾಡಿದ್ದೇವೆ. ಬಜೆಟ್ನಲ್ಲಿ ಬೆಂಗಳೂರು ಅಭಿವೃದ್ಧಿಗೆ ಹಣ ನೀಡಬೇಕು. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ 6-8 ಸಾವಿರ ಕೋಟಿ ಅನುದಾನ ನೀಡ್ತಿದ್ರು. ಎರಡು ವರ್ಷದಿಂದ ಅನುದಾನ ನೀಡಿಲ್ಲ. ಈ ಬಜೆಟ್ನಲ್ಲಿ 6-8 ಸಾವಿರ ಕೋಟಿ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿ ನಿಧಾನ ಗತಿಯಲ್ಲಿ ಸಾಗ್ತಿದೆ. ಮೆಟ್ರೋ ಪ್ರಯಾಣ ಟಿಕೆಟ್ ದರ ಏರಿಕೆ ಆಗಿದೆ. ತಕ್ಷಣ ದರ ಇಳಿಸಬೇಕು ಎಂದು ಸಂಸದ ಪಿಸಿ ಮೋಹನ್ ಹಾಗು ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.

ಮೊದಲ ಬಾರಿ ಗೆದ್ದ ಶಾಸಕರ ಕ್ಷೇತ್ರಲ್ಲೂ ಹೆಚ್ಚು ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದು, ಬಿಬಿಎಂಪಿ ಚುನಾವಣೆ ಶೀಘ್ರದಲ್ಲಿ ನಡೆಸಬೇಕು ಅಂತಾನೂ ಸಿಎಂ ಸಿದ್ದರಾಮಯ್ಯ ಎದುರು ಮೊರೆ ಇಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ನಮ್ಮ ಮನವಿಗೆ ಸ್ಪಂದಿಸಿದ್ದಾರೆ, ಅನುದಾನ ಕೊಡುವ ಬಗ್ಗೆಯೂ ಗಮನ ಹರಿಸ್ತೇವೆ ಎಂದಿದ್ದಾರೆ. ಮಹಾನಗರಕ್ಕೆ ಹಿಂದೆಂದೂ ಇಂತಹ ದುಸ್ಥಿತಿ ಬಂದಿರಲಿಲ್ಲ. ಪ್ರತಿ ಬಜೆಟ್ನಲ್ಲೂ 6-8 ಸಾವಿರ ಕೋಟಿ ನೀಡ್ತಿದ್ರು. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಹೆಸರಿದೆ. ಅದನ್ನು ಉಳಿಸಿಕೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಎರಡು ವರ್ಷ ನೋಡಿ ನೋಡಿ ಸಾಕಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇವೆ. ಅನುದಾನ ಕೊಡಿ ಎಂದು ಕೇಳಿದ್ದೇವೆ. ರಾಜ್ಯದ ಎಲ್ಲ ಬಿಜೆಪಿ ಶಾಸಕರು ಅನುದಾನ ಇಲ್ಲದೆ ಕಣ್ಣೀರು ಹಾಕ್ತಿದಾರೆ. ಬಿಜೆಪಿ ಸರ್ಕಾರ ಎಂದಿಗೂ ತಾರತಮ್ಯ ಮಾಡಿಲ್ಲ. ಈಗ ರಾಜ್ಯ ಸರ್ಕಾರ ತಾರತಮ್ಯ ಮಾಡ್ತಿದೆ. ಮೆಟ್ರೊ ದರ ಏರಿಕೆ ವಿರೋಧಿಸಿ ಜನರೇ ಪ್ರತಿಭಟನೆಗೆ ಮುದಾಗಿದ್ದಾರೆ. ವಿರೋಧ ಪಕ್ಷವಾಗಿ ಸರ್ಕಾರಕ್ಕೆ ತೊಂದರೆ ಕೊಡಲ್ಲ. ಅಭಿವೃದ್ಧಿಗೆ ಸರ್ಕಾರ ಸ್ಪಂದಿಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.