
ಬೆಳಗಾವಿ ಸಾಹುಕಾರ್ ಮನೆಗೆ ಮಾಜಿ ಸಂಸದ ಡಿ.ಕೆ ಸುರೇಶ್ ಓಡೋಡಿ ಬಂದಿದ್ದಾರೆ.. ಕೊಯಮತ್ತೂರಿನಲ್ಲಿ ಡಿ.ಕೆ ಶಿವಕುಮಾರ್ ಹಾಗು ಅಮಿತ್ ಷಾ ವೇದಿಕೆ ಹಂಚಿಕೊಂಡ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಮನೆಗೆ ಬಂದಿರುವುದು ಭಾರೀ ಕುತೂಹಲಕ್ಕೂ ಕಾರಣವಾಗಿದೆ.
ಬೆಂಗಳೂರಿನ ಗಾಲ್ಫ್ ಲಿಂಕ್ ರಸ್ತೆಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.. ಕೆಲವೇ ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬದಲಾವಣೆಗೆ ಸತೀಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಇದ್ರ ಬೆನ್ನಲ್ಲೇ ಡಿ.ಕೆ.ಸುರೇಶ್ ಭೇಟಿ ಕುತೂಹಲ ಮೂಡಿಸಿದೆ.

ಭೇಟಿ ಬಳಿಕ ಮಾತನಾಡಿ ಮಾಜಿ ಸಂಸದ ಡಿ.ಕೆ.ಸುರೇಶ್, ರಾಮನಗರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಬಂದಿದ್ದೆ ಎಂದಿದ್ದಾರೆ. ನಾನು ಸತೀಶ್ ಅವರ ಮನೆಗೆ ಬರ್ತ ಇರ್ತೇನೆ. ಸತೀಶ್ ಜಾರಕಿಹೊಳಿ ಅವರ ಮನೆಗೆ ನಾನು ಬಂದು ಭೇಟಿ ಮಾಡಿರೋದು ಹೊಸದೇನಲ್ಲ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಗೆ ಬಂದಿದ್ದೆ. ಈ ಭೇಟಿ ನನ್ನ ಅವರ ವೈಯಕ್ತಿಕ ಭೇಟಿ ಅಷ್ಟೆ ಎಂದಿದ್ದಾರೆ.

ಪಕ್ಷದ ಒಳಜಗಳ ಬಿಟ್ಟು ಒಟ್ಟುಗೂಡಿಸುವ ವಿಚಾರದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಅದೆಲ್ಲಾ ಹಿರಿಯ ತೀರ್ಮಾನ ತೆಗೆದುಕೊಳ್ಳುತ್ತಾರೆ . ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಾಮಾನ್ಯವಾಗಿ ಅವ್ರು ನಮ್ಮ ಮನೆಗೆ ಬರ್ತಿರ್ತಾರೆ. ಈ ಭೇಟಿ ಏನು ಹೊಸದೇನಲ್ಲ. ಎಲ್ಲರು ಬರ್ತಾರೆ ಅದೇ ರೀತಿ ಸುರೇಶ್ ಬಂದಿದ್ದಾರೆ. ಅವರು ಪದೇ ಪದೇ ಬರ್ತಿರ್ತಾರೆ. ಈ ಬಾರಿ ಕೂಡಾ ಸಾಮಾನ್ಯವಾಗಿ ಭೇಟಿ ನೀಡಿದ್ದಾರೆ ಎಂದಿದ್ದಾರೆ.
ಪಕ್ಷದ ಒಳಜಗಳ, ಒಟ್ಟುಗೂಡಿಸುವ ಬಗ್ಗೆ ಚರ್ಚೆ ವಿಚಾರದ ಬಗ್ಗೆ ಮಾತನಾಡಿ, ನಾವು ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ. ಕೆಲಸ ಕೊಟ್ಟಾಗ ಒಟ್ಟಾಗಿಯೇ ಮಾಡ್ತೇವೆ ಎಂದು ತೇಪೆ ಸಾರಿಸುವ ಕೆಲಸ ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್ನಲ್ಲಿ ಮಿಂಚಿನ ಸಂಚಾರ ಆಗ್ತಿದೆ ಅನ್ನೋದು ಮಾತ್ರ ರಾಜಕಾರಣ ಬಲ್ಲವರಿಗೆ ಗೊತ್ತಾಗುತ್ತಿದೆ. ಆದರೆ ಏನು ಆ ಮಿಂಚಿನ ಸಂಚಾರ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಬಹಿರಂಗ ಆಗಬೇಕಿದೆ.
