• Home
  • About Us
  • ಕರ್ನಾಟಕ
Tuesday, July 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಹಸಿರು ಉಸಿರಿನ ನಡುವೆ ಅಕ್ಷರ ಬಿತ್ತಿದ ʼ ನಿರಂಜನ ʼ

ನಾ ದಿವಾಕರ by ನಾ ದಿವಾಕರ
February 28, 2025
in ಕರ್ನಾಟಕ, ಜೀವನದ ಶೈಲಿ, ವಾಣಿಜ್ಯ, ಶೋಧ
0
ಹಸಿರು ಉಸಿರಿನ ನಡುವೆ ಅಕ್ಷರ ಬಿತ್ತಿದ ʼ ನಿರಂಜನ ʼ
Share on WhatsAppShare on FacebookShare on Telegram

ಕನ್ನಡ ಸಾಹಿತ್ಯವನ್ನು ಜನಮುಖಿ ಮಾಡಿದ ಮೊದಲಿಗರಲ್ಲಿ ʼ ಚಿರಸ್ಮರಣೀಯ ʼ ನಿರಂಜನ ಒಬ್ಬರು

ADVERTISEMENT

ಆಧುನಿಕ ಕನ್ನಡ ಸಾಹಿತ್ಯದಲ್ಲಿ ನವೋದಯದಿಂದ ಸತ್ಯೋತ್ತರ ಯುಗದ ದಲಿತ-ಬಂಡಾಯ ಸಾಹಿತ್ಯದವರೆಗಿನ ಅಕ್ಷರ ಕೃಷಿಯನ್ನು ಗಮನಿಸುವಾಗ ಒಂದು ಹೆಸರು ನೆನಪಾಗಲೇಬೇಕೆಂದರೆ ಅದು                ʼ ನಿರಂಜನ ʼ ಎಂದೇ ಗುರುತಿಸಲ್ಪಡುವ ಕುಳಕುಂದ ಶಿವರಾಯರು. ಸ್ವಾತಂತ್ರ್ಯೋತ್ತರ ಭಾರತದ ಕನ್ನಡ ಸಾಹಿತ್ಯ ಲೋಕದಲ್ಲಿ ಆರಂಭದ ದಿನಗಳಿಂದಲೂ ವ್ಯವಸ್ಥಿತವಾಗಿ ರೂಪುಗೊಂಡಿರುವ                        ʼ ಸಾಹಿತ್ಯ ಕೂಟ ʼದ ಒಂದು ಬೌದ್ಧಿಕ ಪರಂಪರೆಯಲ್ಲಿ ಸಾಹಿತ್ಯ ಪರಿಚಾರಕರೂ ಸಹ ತತ್ವ, ಸಿದ್ಧಾಂತ ಮತ್ತು ಸಾಮಾಜಿಕ ಅಸ್ಮಿತೆಗಳ ಚೌಕಟ್ಟಿನೊಳಗೆ ಬಂಧಿಸಲ್ಪಟ್ಟಿರುವುದನ್ನು ವಿಷಾದದಿಂದಲೇ ಗುರುತಿಸಬೇಕಿದೆ. ಕಳೆದ ಐದು ದಶಕಗಳಲ್ಲಿ ಜಾತಿ ಅಸ್ಮಿತೆಯೂ ಇದರ ಒಂದು ಭಾಗವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.

 ಈ ಕೂಟ ವ್ಯವಸ್ಥೆಯ ಒಂದು ಭಾಗವಾಗಿಯೇ ಕನ್ನಡದ ವಿಮರ್ಶಾ ಲೋಕವೂ ಸಹ ತನ್ನದೇ ಆದ ಬೇಲಿಗಳನ್ನು ನಿರ್ಮಿಸಿಕೊಂಡಿರುವುದೂ ಸತ್ಯ. ನವೋದಯ, ನವ್ಯ, ಬಂಡಾಯ-ದಲಿತ ಇತ್ಯಾದಿಗಳ ವರ್ಗೀಕರಣದ ನಡುವೆ ಪ್ರಧಾನವಾಗಿ ಕೇಳಿಬರದ ಒಂದು ಸಾಹಿತ್ಯ ಪ್ರಕಾರ ಎಂದರೆ ಪ್ರಗತಿಶೀಲ ಸಾಹಿತ್ಯ. ಆದರೂ ಒಂದು ಚಳುವಳಿಯ ರೂಪದ ಪ್ರಗತಿಶೀಲ ಸಾಹಿತ್ಯ ಕೆಲವೇ ಸಾಹಿತಿಗಳ ಮೂಲಕ ಅಂದಿನ ಸಮಾಜದಲ್ಲಿನ ತಲ್ಲಣಗಳಿಗೆ, ಆತಂಕಗಳಿಗೆ ಸ್ಪಂದಿಸಿದ್ದನ್ನು ಮರೆಮಾಚಲಾಗುವುದಿಲ್ಲ. ಬಸವರಾಜ ಕಟ್ಟಿಮನಿ, ಅನಕೃ, ಚದುರಂತ, ಕುಮಾರ ವೆಂಕಣ್ಣ ಮುಂತಾದವರೊಡನೆ ಈ ಪ್ರಗತಿಶೀಲ ವಾತಾವರಣದಲ್ಲಿ ಪ್ರಧಾನವಾಗಿ ಕಾಣುವುದು ಕುಳಕುಂದ ಶಿವರಾಯರು, ಅಂದರೆ ʼ ನಿರಂಜನ ʼರು.

 ತಮ್ಮ ʼ ನಿರಂಜನ ʼ ಕಾವ್ಯನಾಮದಿಂದಲೇ ಪ್ರಸಿದ್ಧರಾದ ಶಿವರಾಯರನ್ನು ಒಂದು ನಿರ್ದಿಷ್ಟ ಕಾಲಘಟ್ಟದ ಸಾಹಿತ್ಯಕ ಪ್ರಕಾರಕ್ಕೆ ಅಥವಾ ಚಳುವಳಿಗೆ ಕಟ್ಟಿಹಾಕುವುದು ತಪ್ಪಾಗುತ್ತದೆ. ಅಂದಿನ ಸನ್ನಿವೇಶದಲ್ಲಿ ಸಮತಾವಾದ ಅಥವಾ ಮಾರ್ಕ್ಸ್‌ವಾದದ ಚಿಂತನೆಗಳಿಗೆ ಮುಕ್ತವಾಗಿ ತೆರೆದುಕೊಂಡಿದ್ದೇ ಅಲ್ಲದೆ, ಅದೇ ಸೈದ್ದಾಂತಿಕ ಚೌಕಟ್ಟಿನೊಳಗೆ ಭಾರತದ ಸಮಸ್ತ ಶ್ರಮಜೀವಿ ವರ್ಗಗಳತ್ತ ನೋಡುವ ಒಂದು ಸಾಹಿತ್ಯಕ ದೃಷ್ಟಿಕೋನವನ್ನು ಬೆಳೆಸಿದವರಲ್ಲಿ ನಿರಂಜನ ಮುಂಚೂಣಿಯಲ್ಲಿ ಕಾಣುತ್ತಾರೆ. ಬಸವರಾಜ ಕಟ್ಟಿಮನಿ ನಗರ ಕೇಂದ್ರಿತ ಶ್ರಮಿಕರತ್ತ ಗಮನಹರಿಸಿದಂತೆ ನಿರಂಜನ ಹಳ್ಳಿಗಾಡಿನ ರೈತ ಬಾಂಧವರೆಡೆಗೆ ತಮ್ಮ ಅಕ್ಷರ ಕೃಷಿಯನ್ನು ಕೊಂಡೊಯ್ಯುತ್ತಾರೆ. ಸ್ವಾತಂತ್ರ್ಯ ಸಂಗ್ರಾಮವನ್ನು ಮತ್ತು ತದನಂತರದ ಸಮಾಜವನ್ನು ತಳಸಮಾಜದ ನಡುವೆ ನಿಂತು ನೋಡುವ ಒಂದು ಚಿಂತನಾ ಕ್ರಮವನ್ನು ನಿರಂಜನರ ಸಾಹಿತ್ಯದಲ್ಲಿ ಗುರುತಿಸಬಹುದು.

 ಸೃಜನಶೀಲ ಕ್ರಾಂತಿಯ ದನಿ

 ತಮ್ಮ ಸಾಹಿತ್ಯಕ ಸೃಜನಶೀಲತೆಯನ್ನು ಸಮಾಜಮುಖಿಯಾಗಿಸುತ್ತಲೇ 13ನೇ ವಯಸ್ಸಿನಿಂದಲೇ ಅಕ್ಷರ ಕೃಷಿಯನ್ನು ಆರಂಭಿಸಿದ ನಿರಂಜನರ ಸಾಹಿತ್ಯಕ ವೈವಿಧ್ಯತೆ ಅಪಾರ. ಅನುವಾದ, ಕಥೆ, ಕಾದಂಬರಿ, ಚಾರಿತ್ರಿಕ ಕಥನ, ವಿಶ್ವಕೋಶ, ಸಂಪಾದನೆ ಹೀಗೆ ವಿಸ್ತರಿಸಿಕೊಳ್ಳುವ ನಿರಂಜನರು ಸಾಮಾನ್ಯವಾಗಿ ನೆನಪಾಗುವುದು ಅವರ ಚಿರಸ್ಮರಣೆ ಮತ್ತು ಮೃತ್ಯುಂಜಯ ಕಾದಂಬರಿಗಳಿಂದ. ಮಾಕ್ಸಿಂ ಗೋರ್ಕಿ ಅವರ ಮದರ್‌ ಕಾದಂಬರಿಯನ್ನು ಕನ್ನಡಕ್ಕೆ ʼ ತಾಯಿ ʼ ಹೆಸರಿನಲ್ಲಿ ಹೊರತಂದ ನಿರಂಜನರಿಗೆ ಸಮತಾವಾದ ಕೇವಲ ಬೌದ್ಧಿಕ ವಾಹಿನಿಯಾಗಿರಲಿಲ್ಲ. ಅದು ಭಾರತದ ಜನಸಾಮಾನ್ಯರ ನಿತ್ಯಬದುಕಿನಲ್ಲಿ ಕಾಣಬೇಕಾದ ಒಂದು ದರ್ಶನದಂತೆ ಭಾವಿಸಿದ್ದರು. ಈ ಕಾರಣಕ್ಕಾಗಿಯೇ ಅವರ ಕೃತಿಗಳಲ್ಲಿ ತಳಸಮುದಾಯಗಳ ಬದುಕು, ಸ್ವಾತಂತ್ರ್ಯ ಹೋರಾಟದ ವಿಭಿನ್ನ ಜನಾಂದೋಲನಗಳು, ಗ್ರಾಮೀಣ ಭಾರತದ ರೈತಾಪಿಯ ಜೀವನ ಇವೆಲ್ಲವೂ ಮೇಳೈಸುತ್ತವೆ. ಕನ್ನಡದ ವಿಮರ್ಶಾ ಲೋಕದ ಕಾಣ್ಕೆಗೆ ಗೋಚರಿಸದ ನಿರಂಜನರ ಸಾಹಿತ್ಯವನ್ನು ಭವಿಷ್ಯದ ತಲೆಮಾರಿಗಾದರೂ ದಾಟಿಸುವ ಗುರುತರ ಜವಾಬ್ದಾರಿ ವರ್ತಮಾನದ ಜವಾಬ್ದಾರಿ ಎನ್ನುವುದು ಸತ್ಯ.

 ನಿರಂಜನರು ರಚಿಸಿದ ಈಜಿಪ್ಟ್‌ ಕ್ರಾಂತಿಯ ಸುತ್ತ ಹೆಣೆದ ಮೃತ್ಯುಂಜಯ, ಕಯ್ಯೂರು ಹುತಾತ್ಮರ ವೀರೋಚಿತ ಹೋರಾಟವನ್ನು ದಾಖಲಿಸುವ ಚಿರಸ್ಮರಣೆ, ಅಮರಸುಳ್ಯ ದಂಗೆಯ ವಿಭಿನ್ನ ಆಯಾಮಗಳನ್ನು ತೆರೆದಿಡುವ ಸ್ವಾಮಿ ಅಪರಂಪಾರ ಮತ್ತು ಕಲ್ಯಾಣ ಸ್ವಾಮಿ ಈ ಕೃತಿಗಳು ಸಾರ್ವಕಾಲಿಕ ಶ್ರೇಷ್ಠತೆಯನ್ನು ಹೊಂದಿದ್ದರೂ, ಇವುಗಳನ್ನು ವಿಮರ್ಶಾತ್ಮಕವಾಗಿ ನೋಡಿ, ವರ್ತಮಾನದ ಸಾಹಿತ್ಯ ಜಗತ್ತಿನಲ್ಲಿ ಚರ್ಚೆಗೊಳಪಡಿಸುವ ಕೆಲಸಗಳು ಆಗಬೇಕಿವೆ. ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎನ್ನುವುದು ವಾಸ್ತವ. ರೈತ ಚಳುವಳಿಗಳನ್ನು ಈಗಲೂ ವಕ್ರದೃಷ್ಟಿಯಿಂದಲೇ ನೋಡುವ ಭಾರತದ ರಾಜಕೀಯ ಚಿಂತನೆಗಳ ನಡುವೆ, ಸ್ವಾತಂತ್ರ್ಯಪೂರ್ವದ ತೆಲಂಗಾಣ, ತೇಭಾಗದಿಂದ ಸ್ವಾತಂತ್ರ್ಯೋತ್ತರದ ರೈತ ಹೋರಾಟಗಳವರೆಗೂ ತಮ್ಮ ಒಳನೋಟಗಳನ್ನು ಸಾಹಿತ್ಯಕ ನೆಲೆಯಲ್ಲಿ ಬಿಟ್ಟುಹೋಗಿರುವುದು ನಿರಂಜನರ ಕ್ರಾಂತಿಕಾರಕ, ಜನಮುಖಿ ಚಹರೆಯನ್ನು ನಮಗೆ ಪರಿಚಯಿಸುತ್ತದೆ.

 ಒಂದು ದಾಖಲಾರ್ಹ ಕೃತಿಯ ಮೂಲಕ

 ಈ ದೃಷ್ಟಿಯಿಂದಲೇ ಸಮಕಾಲೀನ ರೈತ ಹೋರಾಟಗಳಲ್ಲಿ ಸಕ್ರಿಯವಾಗಿರುವ ಹಾಸನದ ಎಚ್.‌ ಆರ್.‌ ನವೀನ್‌ ಕುಮಾರ್‌ ಅವರು ತಮ್ಮ ʼ ಕದನ ಕಣ ʼದ ಮುಂದುವರಿಕೆಯಾಗಿ, ಕರ್ನಾಟಕದ ಅನ್ನದ ಕಣದಲ್ಲಿ ನಿರಂಜನ ಅವರ ʼ ರೈತ ಮುಖಿ ʼ ಸಾಹಿತ್ಯವನ್ನು ಪರಿಚಯಿಸುವ ಮಹತ್ತರ ಪ್ರಯತ್ನವನ್ನು ಮಾಡಿದ್ದಾರೆ. ನಿರಂಜನರು ಪ್ರತಿನಿಧಿಸಿದ್ದ ʼ ಪ್ರಗತಿಶೀಲ ʼ ಎಂಬ ಸಾಹಿತ್ಯ ಪ್ರಕಾರದೊಳಗೇ ಅವರಲ್ಲಿದ್ದ ರೈತಪರ ಕಾಳಜಿ ಮತ್ತು ರೈತರ ಬದುಕಿನ ಒಳಸುಳಿಗಳನ್ನು ನಿರಂಜನರ ಕಥೆಗಳು ಹೇಗೆ, ವಿಭಿನ್ನ ಆಯಾಮಗಳಲ್ಲಿ ಬಿಂಬಿಸುತ್ತವೆ ಎನ್ನುವುದನ್ನು ಹೊರತೆಗೆಯಲು ನವೀನ್‌ ಕುಮಾರ್‌ ಪ್ರಯತ್ನಿಸಿದ್ದಾರೆ. ನವ ಉದಾರವಾದಿ ಆರ್ಥಿಕತೆಯಲ್ಲಿ ಭಾರತೀಯ ರೈತರು ಆಳ್ವಿಕೆಯೊಡನೆ ನಿರಂತರ ಸಂಘರ್ಷದಲ್ಲಿರುವ ಈ ಹೊತ್ತಿನಲ್ಲಿ, ನಿರಂಜನರ ಕಥೆಗಳಲ್ಲಿನ ಒಳನೋಟಗಳನ್ನು ವರ್ತಮಾನದಲ್ಲಿಟ್ಟು ನೋಡುವುದು ಅಗತ್ಯವೂ ಹೌದು.

 ಈ ನೆಲೆಯಲ್ಲಿ ನವೀನ್‌ ಕುಮಾರ್‌ ಅವರ ಪ್ರಯತ್ನ ಶ್ಲಾಘನೀಯ-ಸ್ವಾಗತಾರ್ಹ. ಸುಮಾರು 150 ಪುಟಗಳ ಪುಟ್ಟ ಕೃತಿಯೊಳಗೆ ನಿರಂಜನರ ಕಥೆಗಳಲ್ಲಿ ಬರುವ ರೈತಾಪಿಯ ಬದುಕು, ವ್ಯಕ್ತಿತ್ವ ಹಾಗೂ ಸಾಮಾಜಿಕ-ಆರ್ಥಿಕ ಪರಿಸರವನ್ನು ಪರಿಚಯಿಸುವ ಕೆಲಸವನ್ನು ನವೀನ್‌ ಮಾಡಿದ್ದಾರೆ. ಈ ವೇಳೆಗಾಗಲೇ ವಿಮರ್ಶೆಗೊಳಗಾಗಬೇಕಾಗಿದ್ದ ಈ ಕಥೆಗಳನ್ನು ಮರು ಓದಿಗೆ ಒಪ್ಪಿಸುವ ಮೂಲಕ ನವೀನ್‌ ಕುಮಾರ್‌, ನಿರಂಜನರ ಸೈದ್ಧಾಂತಿಕ ಚಿಂತನಾಧಾರೆಯನ್ನೂ ಈ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಿದ್ದಾರೆ. “ ರೈತರಿಗಾಗಿ ನಿರಂಜನ ಯಾಕೆ ” ಎಂಬ ಪ್ರವೇಶಿಕೆಯ ಮೂಲಕ ಆರಂಭಿಸುವ ನವೀನ್‌ ಕುಮಾರ್‌, ಈ ಅಧ್ಯಾಯದಲ್ಲೇ ನಿರಂಜನರ ಬಾಲ್ಯ ಮತ್ತು  ಕಮ್ಯುನಿಸ್ಟ್‌ ಹೋರಾಟಗಳ ಹಿನ್ನೆಲೆ, ಭೂಗತ ಬದುಕು, ಅದರ ನಡುವೆ ನಡೆಸಿದ ಕೃಷಿ ಬೇಸಾಯ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅವರು ತೊಡಗಿಕೊಂಡ ಮಾರ್ಕ್ಸ್‌ವಾದಿ-ಜನಪರ ಆಂದೋಲನಗಳು ಇವೆಲ್ಲವನ್ನೂ ಪರಿಚಯಿಸಿರುವುದು, ಸಾಹಿತ್ಯಾಸಕ್ತರಿಗೆ ಮತ್ತು ಅಧ್ಯಯನಶೀಲ ಸಂಶೋಧಕರಿಗೆ ನೆರವಾಗುವಂತಿದೆ.

 ʼ ಪ್ರಗತಿಶೀಲ ʼ ಎಂಬ ಕಡಿಮೆ ವ್ಯಾಪ್ತಿಯಿಂದ ದಾಟಿ ನೋಡಿದಾಗ ನಿರಂಜನ ನಮಗೆ ಕ್ರಾಂತಿಕಾರಿ ಸಾಹಿತಿ-ಬರಹಗಾರ-ಅಂಕಣಕಾರರಾಗಿ ಕಾಣಲು ಸಾಧ್ಯ. ಆದರೆ ಕನ್ನಡ ಸಾಹಿತ್ಯದಲ್ಲಿ ಈ ಒಂದು                     ʼ ಪ್ರಕಾರ ʼ ಈವರೆಗೂ ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲವಾದ್ದರಿಂದ, ದಲಿತ-ಬಂಡಾಯ ಸಂದರ್ಭದ ಕ್ರಾಂತಿಕಾರಿ ಸಾಹಿತ್ಯವೂ ಸಹ ʼಬಂಡಾಯʼ ಎಂಬ ಬ್ರಾಕೆಟ್‌ನ ಒಳಗೇ ನಿರ್ವಚಿಸಲ್ಪಟ್ಟಿದೆ. ಇದು ನಿರಂಜನರ ಕಾಲಘಟ್ಟಕ್ಕೂ ಸತ್ಯ. ಸಹಜವಾಗಿಯೇ ನವೀನ್‌ ಕುಮಾರ್‌ ನಿರಂಜನರ ʼ ಚಿರಸ್ಮರಣೆ ʼ,                    ʼ ಮೃತ್ಯುಂಜಯ ʼ,  ಕೃತಿಗಳನ್ನು ʼ ಕಲ್ಯಾಣಸ್ವಾಮಿ-ಸ್ವಾಮಿ ಅಪರಂಪಾರ ʼ ಪರಿಚಯಿಸುವ ಮೂಲಕ ಈವರೆಗಿನ ಹೆಜ್ಜೆಗಳೊಂದಿಗೆ ಹೆಜ್ಜೆ ಹಾಕಿದ್ದಾರೆ. ಆದರೆ ನವೀನ್‌ ಕುಮಾರ್‌ ಅವರ ಈ ಕೃತಿ ಮುಖ್ಯವಾಗುವುದು ಇಲ್ಲಿ ಪ್ರಕಟಿಸಲಾಗಿರುವ ನಿರಂಜನರ ರೈತ ಕಥೆಗಳು ಮತ್ತು ಅವುಗಳ ಪ್ರಸ್ತುತತೆಗಾಗಿ.

 ರೈತ ಬದುಕಿನ ಸಮಕಾಲೀನತೆ

 ಸಮಕಾಲೀನ ಸಂದರ್ಭದಲ್ಲಿ ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ಒಂದು ವರ್ಷದ ಕಾಲ ನಡೆದ ರೈತ ಮುಷ್ಕರ ಸ್ವತಂತ್ರ ಭಾರತದ ಅತಿ ದೀರ್ಘ ಜನಾಂದೋಲನ. ಈ ಸಂಘರ್ಷವು ಹುಟ್ಟುಹಾಕಿದ ಪ್ರಶ್ನೆಗಳು, ತಾತ್ವಿಕವಾಗಿ ಹಾಗೂ ಹೋರಾಟಗಳ ನೆಲೆಯಲ್ಲಿ ಸಾರ್ವಕಾಲಿಕವಾಗಿ ಭಾರತವನ್ನು ಕಾಡಲಿರುವುದು ಸ್ಪಷ್ಟ. ಆದರೆ ಈ ನಾಲ್ಕು ವರ್ಷಗಳಲ್ಲಿ ರೈತ ಮುಷ್ಕರ-ಕೋವಿದ್‌ ಸಂದರ್ಭದ ವಲಸೆ ಕಾರ್ಮಿಕರ ಸುತ್ತ ಸಾಹಿತ್ಯಕ ಕೃತಿಗಳು ಮೂಡಿಬರದೆ ಇರುವುದು ದೊಡ್ಡ ಕೊರತೆ. ಅಲ್ಲಲ್ಲಿ ಕವಿತೆ, ಸಣ್ಣ ಕಥೆಗಳು ಬಂದಿದ್ದರೂ, ನವ ಉದಾರವಾದದ ಮಾರುಕಟ್ಟೆ ಪರಿಸರದಲ್ಲಿ ರೈತಾಪಿ ಎದುರಿಸುತ್ತಿರುವ ಜೀವನ-ಜೀವನೋಪಾಯದ ಸಿಕ್ಕುಗಳನ್ನು ಸಮಾಜದ ಮುಂದಿಡುವ ಒಂದು ಸಾಹಿತ್ಯಕ ಪ್ರಯತ್ನಮ ಕಾದಂಬರಿಯ ರೂಪದಲ್ಲಿ ಕನ್ನಡದ ಬೌದ್ಧಿಕ ವಲಯವನ್ನು ಅಲಂಕರಿಸಬೇಕಿದೆ ಅಥವಾ ಇನ್ನೂ ಬರುವ ನಿರೀಕ್ಷೆಯಲ್ಲಿರಬೇಕೆನಿಸುತ್ತದೆ.

ಈ ಕೊರತೆಯ ನಡುವೆಯೇ ನವೀನ್‌ ಕುಮಾರ್‌ ʼ ರೈತರಿಗಾಗಿ ನಿರಂಜನ ʼ ಕೃತಿ ಮೂಲಕ, ರೈತರ ಬದುಕನ್ನು ಹಾಗೂ ಸಮಸ್ಯೆಗಳನ್ನು ಒಳಹೊಕ್ಕು ನೋಡುವ ನಿರಂಜನರ ತೀಕ್ಷ್ಮಮತಿ ಸೈದ್ಧಾಂತಿಕ ಚಿಂತನೆಗಳನ್ನು ಅವರ ರೈತರ ಕಥೆಗಳ ಮೂಲಕ ಓದುಗರ ಮುಂದಿರಿಸಿದ್ದಾರೆ.  ನಿರಂಜನರ ಹನ್ನೊಂದು ರೈತ ಕಥೆಗಳನ್ನು ಆರಂಭದಲ್ಲಿ ಪರಿಚಯಿಸಿ ನಂತರ ಪ್ರಕಟಿಸಿರುವುದು ಒಂದು ರೀತಿಯಲ್ಲಿ ಓದುಗರಿಗೆ ಪ್ರವೇಶಿಕೆಯಂತೆ ಕಾಣಬಹುದು. ಆದರೆ 21ನೇ ಶತಮಾನದಲ್ಲೂ ಭಾರತದ ರೈತರು ಎದುರಿಸುತ್ತಿರುವ ಬರಗಾಲ, ಸಾಲದ ಹೊರೆ, ತುಂಡುಭೂಮಿ ಉಳಿಸಿಕೊಳ್ಳುವ ಹೋರಾಟ, ಊಳಿಗಮಾನ್ಯದ ವಿರುದ್ಧ ಸಂಘರ್ಷ, ರೈತ ಸಂಘಟನೆಯ ರಚನಾತ್ಮಕ ಸಮಸ್ಯೆಗಳು, ಭೂಮಿಗಾಗಿ ಪರಿತಪಿಸುವ ಭೂರಹಿತರ ಹಪಹಪಿ ಹೀಗೆ ಎಲ್ಲ ಸಮಸ್ಯೆಗಳನ್ನೂ ನಿರಂಜನರ ಈ ಹನ್ನೊಂದು ಕಥೆಗಳಲ್ಲಿ, ವಿಭಿನ್ನ ಕಥಾವಸ್ತುಗಳ ಮೂಲಕ ಕಾಣಬಹುದು. 77 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಈ ಸಮಸ್ಯೆಗಳ ಸಂಕೀರ್ಣ-ಜಟಿಲ ಸ್ವರೂಪ ಬಹುಮಟ್ಟಿಗೆ ಯಥಾಸ್ಥಿತಿಯಲ್ಲಿರುವುದು, ಭಾರತದ ಅಭಿವೃದ್ಧಿ ಪಥವನ್ನು ಮರುಪರಿಶೀಲನೆಗೊಳಪಡಿಸುವಂತೆ ಮಾಡುತ್ತದೆ.

 ಸ್ವಾತಂತ್ರ್ಯಪೂರ್ವದಲ್ಲಿ ವಸಾಹತು ಆಳ್ವಿಕೆಯೊಂದಿಗೆ ಸಂಘರ್ಷದಲ್ಲಿದ್ದ ಭಾರತದ ರೈತರು, ಲಕ್ಷಾಂತರ ಆತ್ಮಹತ್ಯೆಗಳ ನಡುವೆಯೂ, ಪ್ರಜಾಸತ್ತಾತ್ಮಕ ಆಳ್ವಿಕೆಯ ವಿರುದ್ಧ, ಬೆಂಬಲ ಬೆಲೆಗಾಗಿ, ಭೂಮಿಗಾಗಿ, ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರಕ್ಕಾಗಿ, ಸೂಕ್ತ ಸಾಲ ಸೌಲಭ್ಯಗಳಿಗಾಗಿ ಹೋರಾಡುತ್ತಲೇ ಇರುವುದು ಚಾರಿತ್ರಿಕ ವಿಡಂಬನೆ ಎನಿಸಿದರೂ ವಾಸ್ತವ. ಗ್ರಾಮೀಣ ರೈತರ ಬದುಕಿನಲ್ಲಿ ಎದುರಾಗುವ ಅಪೌಷ್ಟಿಕತೆ, ಶಿಕ್ಷಣದ ಕೊರತೆ, ನಿರಕ್ಷರತೆ, ಯುವ ಸಮೂಹದ ನಿರುದ್ಯೋಗ ಹಾಗೂ ಎಲ್ಲಕ್ಕಿಂತಲೂ ಮಿಗಿಲಾಗಿ ಮಹಿಳಾ ಕೃಷಿಕರು ಎದುರಿಸುವ ಪಿತೃಪ್ರಧಾನತೆ ಮತ್ತು ಜಾತಿ ದಬ್ಬಾಳಿಕೆಗಳನ್ನು ನಾವು ಒಳಹೊಕ್ಕು ನೋಡಬೇಕಿದೆ. ನಿರಂಜನರ ಕಥೆಗಳಲ್ಲಿ ಇದರ ಚಾರಿತ್ರಿಕ ಸುಳಿವು ಕಾಣುತ್ತದೆ. ಆದರೆ ವರ್ತಮಾನದಲ್ಲಿ ರೂಪಾಂತರಗೊಂಡ ಶೋಷಣೆಯ ಮಾರ್ಗಗಳನ್ನು ನಾವು ಮರುಪರಿಷ್ಕರಣೆಗೊಳಪಡಿಸಿ, ರೈತರ ನಡುವೆ ನಿಂತು ನೆಲದ ವಾಸ್ತವಗಳನ್ನು ಅರ್ಥಮಾಡಿಕೊಳ್ಳಬೇಕಿದೆ.

 ಕೃತಿಯ ಸಮಕಾಲೀನ ಪ್ರಸ್ತುತತೆ

 ಈ ದೃಷ್ಟಿಯಿಂದ ನೋಡಿದಾಗ ನವೀನ್‌ ಕುಮಾರ್‌ ಅವರ ʼ ರೈತರಿಗಾಗಿ ನಿರಂಜನ ʼ ಕೃತಿಯು ನಿರಂಜನರ ಕಣ್ಣೋಟ-ಒಳನೋಟವನ್ನು ನಮ್ಮ ಮುಂದಿರಿಸುತ್ತದೆ. ಅಂದಿನ ಪರಿಹಾರೋಪಾಯಗಳು ಇಂದು ಯಥಾವತ್ತಾಗಿ ಪ್ರಸ್ತುತ ಎನಿಸದಿದ್ದರೂ, ಸಮಸ್ಯೆಗಳ ಪ್ರಸ್ತುತತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಇದು ನಾವು ನೋಡುವ ದೃಷ್ಟಿಯನ್ನು ಅವಲಂಬಿಸುತ್ತದೆ. ದೆಹಲಿ ರೈತ ಮುಷ್ಕರದ ಸಂದರ್ಭದಲ್ಲಿ ಭಾರತದ ಮೇಲ್ಪದರದ ಗಣ್ಯ ಸಮಾಜ ಮತ್ತು ಕನ್ನಡದ ಸ್ಥಾಪಿತ ಸಾಹಿತ್ಯ ವಲಯ ಸ್ಪಂದಿಸಿದ ಪರಿಯನ್ನು ನಾವು ಕಂಡಿದ್ದೇವೆ. ಆ ಕಣ್ಣೋಟವೇನೂ ಬದಲಾಗಿಲ್ಲ. ಆದರೆ ಮುಂದಿನ ತಲೆಮಾರಿಗಾಗಿ ಈ ಕಣ್ಣೋಟಕ್ಕೆ ಹೊಸ ದಿಕ್ಕು, ಸ್ಪರ್ಶ ನೀಡುವ ಅವಶ್ಯಕತೆ ಇದೆ. ಮಣ್ಣಲ್ಲೇ ಬದುಕಿ ದೇಶಕ್ಕೆ ಅನ್ನ ನೀಡುವ ರೈತ-ಕಾರ್ಮಿಕರ ಬದುಕಿನ ಒಳಸೂಕ್ಷ್ಮಗಳನ್ನು ಅರಿಯಬೇಕಾದರೆ, ಮೇಲ್ಪದರದ ಸಮಾಜದ ನೆಲದ ಮೇಲೆ ನಿಂತು ಯೋಚಿಸಬೇಕಾಗುತ್ತದೆ.

 ಎಚ್.‌ ಆರ್.‌ ನವೀನ್‌ ಕುಮಾರ್‌ ನಿರಂಜನರ ರೈತ ಕಥೆಗಳನ್ನು ಹೊರತೆಗೆದು ಓದುಗರ ಮುಂದಿಟ್ಟಿರುವುದು ಈ ದೃಷ್ಟಿಯಿಂದ ಮಹತ್ವದ ಸಾಹಿತ್ಯಕ ಸೇವೆ.  ನಾವು ನಿರಂಜನರನ್ನೇ ಇನ್ನೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳಬೇಕಿದೆ, ವಿಮರ್ಶಿಸಬೇಕಿದೆ, ಅವರೊಂದಿಗೆ ಸೈದ್ಧಾಂತಿಕವಾಗಿ ಮುಖಾಮುಖಿಯಾಗಬೇಕಿದೆ. ಇದು ಸ್ಥಾಪಿತ ಸಾಹಿತ್ಯ ವಲಯದಿಂದ ಆಗದೆ ಹೋದರೂ, ಸಾಮಾಜಿಕ ನೆಲೆಯಲ್ಲಿ ಯುವ ಸಮೂಹ ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದೆ. ಪರ್ವಕಾಲದಲ್ಲಿರುವ ವಿಕಸಿತ ಭಾರತಕ್ಕೆ ಇದು ಅತ್ಯವಶ್ಯವಾದ ಒಂದು ಹಾದಿಯೂ ಆಗಿದೆ. ಈ ನೆಲೆಯಲ್ಲಿ ನಿಂತಾಗ, ನವೀನ್‌ ಕುಮಾರ್‌ ಅವರ                 ʼ ರೈತರಿಗಾಗಿ ನಿರಂಜನ ʼ ಪುಸ್ತಕವು ಒಂದು ಚಾರಿತ್ರಿಕ ದಾಖಲೆಯಾಗಿ ಉಳಿಯಲಿದೆ. ಇದನ್ನು ಹೋರಾಟ ನಿರತರಷ್ಟೇ ಅಲ್ಲದೆ, ಸಾಮಾಜಿಕ ಕಳಕಳಿ ಇರುವ, ಅನ್ಯಾಯಗಳ ವಿರುದ್ಧ ಹೋರಾಡುವ ಮನಸ್ಸಿರುವ ಪ್ರತಿ ವ್ಯಕ್ತಿಯೂ ಓದಬೇಕಿದೆ, ಚರ್ಚಿಸಬೇಕಿದೆ ಮತ್ತು ನಿರಂಜನರ ಚಿಂತನೆಗಳನ್ನು ಮುಂದೊಯ್ಯಬೇಕಿದೆ.

 ʼ ರೈತರಿಗಾಗಿ ನಿರಂಜನ ʼ ಈ ದೃಷ್ಟಿಯಿಂದ ಒಂದು ಪ್ರಶಂಸಾರ್ಹ ಬೌದ್ಧಿಕ ಕ್ರಿಯೆ. ಯುವ ಲೇಖಕ ಎಚ್.‌ ಆರ್.‌ ನವೀನ್‌ ಕುಮಾರ್‌ ಅಭಿನಂದನಾರ್ಹರು. ನವೀನ್‌ ಅವರ ಸಾಹಿತ್ಯ ಕೃಷಿ ಮತ್ತು ಕೃಷಿ ಸಾಹಿತ್ಯ ಇನ್ನಷ್ಟು ವೃದ್ಧಿಸಿ ಸಮೃದ್ಧವಾಗಲಿ ಎಂದು ಹಾರೈಸುತ್ತೇನೆ.

Tags: anupama niranjanaanupama niranjana books in kannadaanupama niranjana stories in kannadaanupama niranjana wikipedia in kannadadr. anupama niranjanadr. anupama niranjana kannadaKannadakannada bhavageethegalukannada folk songsKannada Sahitya Parishatkannada sahitya parishathkannada songskannada storykannada writer dr. anupama niranjananiranjan pandyaniranjana
Previous Post

ಗಾರ್ಡ್ನರ್ ಮಿಂಚು: RCB ವಿರುದ್ಧ Gujarat Giants ಗೆಲುವಿನ ಹಾದಿ

Next Post

ಸಾಹುಕಾರ್​ ಮನೆಗೆ ಡಿ.ಕೆ ಸುರೇಶ್​ ಓಡೋಡಿ ಬಂದಿದ್ಯಾಕೆ..?

Related Posts

Top Story

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಸ್ಪಷ್ಟನೆ ನೀಡಿದ ಪ್ರಹ್ಲಾದ್ ಜೋಶಿ

by ಪ್ರತಿಧ್ವನಿ
July 22, 2025
0

– ಬೇರೆ ಯಾವ ರಾಜ್ಯದಲ್ಲಿ ಇಲ್ಲದ ನೋಟಿಸ್ ಇಲ್ಲೇಕೆ?; ಜನರ ಕಣ್ಣಿಗೆ ಮಣ್ಣೆರೆಚೋ ಕೆಲಸವೆಂದ ಪ್ರಹ್ಲಾದ್ ಜೋಶಿ. ರಾಜ್ಯದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ (GST) ನೋಟಿಸ್ ನೀಡುತ್ತಿರುವುದು...

Read moreDetails
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

July 22, 2025
ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

July 22, 2025
ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ

ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ

July 22, 2025
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 

July 22, 2025
Next Post
ಸಾಹುಕಾರ್​ ಮನೆಗೆ ಡಿ.ಕೆ ಸುರೇಶ್​ ಓಡೋಡಿ ಬಂದಿದ್ಯಾಕೆ..?

ಸಾಹುಕಾರ್​ ಮನೆಗೆ ಡಿ.ಕೆ ಸುರೇಶ್​ ಓಡೋಡಿ ಬಂದಿದ್ಯಾಕೆ..?

Recent News

Top Story

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಸ್ಪಷ್ಟನೆ ನೀಡಿದ ಪ್ರಹ್ಲಾದ್ ಜೋಶಿ

by ಪ್ರತಿಧ್ವನಿ
July 22, 2025
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್
Top Story

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

by Shivakumar A
July 22, 2025
ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 
Top Story

ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

by Chetan
July 22, 2025
ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ
Top Story

ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ

by Shivakumar A
July 22, 2025
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 
Top Story

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 

by Chetan
July 22, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಸ್ಪಷ್ಟನೆ ನೀಡಿದ ಪ್ರಹ್ಲಾದ್ ಜೋಶಿ

July 22, 2025
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

July 22, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada