—-ನಾ ದಿವಾಕರ—-
ದೇಶಾದ್ಯಂತ ತಳಸಮಾಜದಲ್ಲಿ ಸಾಮಾನ್ಯ ನಡುವೆ ಆಚರಿಸಲಾಗುವುದು ಈ ಹಬ್ಬದ ವಿಶಿಷ್ಟ ಲಕ್ಷಣ

(ವೈಜ್ಞಾನಿಕ ಟಿಪ್ಪಣಿಗಳು ಗೆಳೆಯ ವಿ.ಎಸ್. ಶಾಸ್ತ್ರಿ ಕೋಲಾರ )
ಭಾರತೀಯ ಸಂಸ್ಕೃತಿ ಹಬ್ಬಗಳಿಂದ ಕೂಡಿದ ಒಂದು ವಿಶಿಷ್ಟ ಲಕ್ಷಣವನ್ನು ಜನಪದೀಯ ಕಾಲಘಟ್ಟದಿಂದಲೂ ರೂಢಿಸಿಕೊಂಡುಬಂದಿದೆ. ಮೂಲತಃ ಬುಡಕಟ್ಟು ಸಮುದಾಯಗಳಲ್ಲಿ ಉಗಮಿಸಿದ ನಿಸರ್ಗವನ್ನು ಪೂಜಿಸುವ ಹಾಗೂ ನೈಸರ್ಗಿಕ ಪ್ರಕ್ರಿಯೆಗಳನ್ನು ಆರಾಧಿಸುವ ಒಂದು ಪರಂಪರೆ ಶತಮಾನಗಳು ಕಳೆದಂತೆ ರೂಪಾಂತರವಾಗುತ್ತಲೇ ಬಂದಿದೆ. ಸಮಾಜವು ನಿಸರ್ಗವನ್ನೇ ಅವಲಂಬಿಸಿ ಜೀವನೋಪಾಯ ಮಾರ್ಗವನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲೇ ಸೃಷ್ಟಿಯಾದ ಸಾಮಾಜಿಕ ಸಂಬಂಧಗಳು ಈ ಪರಂಪರೆಗಳನ್ನು ಸಹ ತನ್ನೊಡನೆಯೇ ಆಧುನಿಕೀಕರಣಗೊಳಿಸುತ್ತಾ, ಅಗೋಚರ-ನಿರೂಪ ನಿಸರ್ಗ ಶಕ್ತಿಗಳಿಗೆ ಲೌಕಿಕ ಸ್ವರೂಪವನ್ನು ನೀಡತೊಡಗಿದ್ದು ಮಾನವ ಕುಲದ ಅಭ್ಯುದಯದ ಹಾದಿಯಲ್ಲಿ ಗಮನಿಸಬಹುದಾದ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲೇ ಉದ್ಬವಿಸಿದ್ದು ದೈವತ್ವದ ಪರಿಕಲ್ಪನೆ ಮತ್ತು ಅತೀತ ಶಕ್ತಿಗಳಿಗೆ ಮಾನವ ರೂಪ ನೀಡುವ ಒಂದು ಸಾಂಪ್ರದಾಯಿಕ ಕಲ್ಪನೆ.
ಇಂದಿಗೂ ಬಹುಮಟ್ಟಿಗೆ ತನ್ನ ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡೇ ಬಂದಿರುವ ಭಾರತೀಯ ಸಮಾಜದ ಕೌಟುಂಬಿಕ ಬದುಕಿನಲ್ಲಿ ಹಬ್ಬಗಳ ಆಚರಣೆಯನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಪ್ರತ್ಯೇಕಿಸಿ ನೋಡಿದಾಗ, ಅಲ್ಲಿ ನಮಗೆ ತಳಸಮಾಜದ ಶ್ರೀ ಸಾಮಾನ್ಯರ ಜೀವನದ ಒಂದು ಪ್ರಮುಖ ಭಾಗವಾಗಿ ಈ ಹಬ್ಬಗಳು ಕಾಣುತ್ತವೆ. ಸಂಕ್ರಾಂತಿಯಿಂದ ದೀಪಾವಳಿಯವರೆಗೂ ಇದನ್ನು ಗುರುತಿಸಬಹುದು. ಆದರೆ ಧಾರ್ಮಿಕ ನೆಲೆಯಲ್ಲಿ ಈ ಆಚರಣೆಗಳು ರೂಪಾಂತರಗೊಂಡು, ವ್ಯಕ್ತಿಗತ ವಿಧಿವಿಧಾನಗಳಲ್ಲಿ, ಶ್ರದ್ಧಾನಂಬಿಕೆಗಳಲ್ಲಿ, ವಿಭಜಿತ ಚೌಕಟ್ಟುಗಳಲ್ಲಿ ಹಾಗೂ ಸಾಮಾಜಿಕ ಬಿರುಕುಗಳಲ್ಲಿ ಕಾಣತೊಡಗುತ್ತವೆ. ಜನಪದೀಯ ಸಂಸ್ಕೃತಿಯ ಎಷ್ಟೋ ಹಬ್ಬ-ಆಚರಣೆಗಳು ಹೀಗೆ ವೈದೀಕೀಕರಣಕ್ಕೊಳಗಾಗಿ ತಮ್ಮ ಮೂಲ ತಾತ್ವಿಕ ನೆಲೆಗಳನ್ನು ಕಳೆದುಕೊಂಡಿವೆ. ಶಿವರಾತ್ರಿಯೂ ಅಂತಹ ಹಬ್ಬಗಳಲ್ಲಿ ಒಂದು.
ಶಿವರಾತ್ರಿ ಪಾರಂಪರಿಕ ದೃಷ್ಟಿಯಲ್ಲಿ

ಮಹಾ ಶಿವರಾತ್ರಿ ದೇಶಾದ್ಯಂತ ಆಚರಿಸಲಾಗುವ ಒಂದು ಹಬ್ಬ. ಸಾಮಾನ್ಯವಾಗಿ ಅಹೋರಾತ್ರಿಯ ಪೂಜೆ, ಉಪವಾಸ, ಜಾಗರಣೆ ಈ ಹಬ್ಬದ ವಿಶಿಷ್ಟ ಲಕ್ಷಣಗಳಾಗಿ ಕಾಣುತ್ತವೆ. ಫೆಬ್ರವರಿ ತಿಂಗಳಿನ ಅಮಾವಾಸ್ಯೆಯ ಆಸುಪಾಸಿನಲ್ಲಿ ಬರುವ ಈ ದಿನಗಳಲ್ಲಿ ಆಕಾಶದತ್ತ ಮುಖ ಮಾಡಿದರೆ, ಪ್ರಧಾನವಾದ ನಕ್ಷತ್ರ ಪುಂಜವೊಂದು ಗೋಚರಿಸುತ್ತದೆ. ಇದನ್ನು ವೈಜ್ಞಾನಿಕವಾಗಿ ಓರಿಯನ್ (Orien) ಎಂದು ಕರೆಯಲಾಗುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಮಹಾವ್ಯಾಧ ಎನ್ನಲಾಗುತ್ತದೆ. ಒಂದು ಕೈಯ್ಯಲ್ಲಿ ಎತ್ತಿಹಿಡಿದ ಬಡಿಗೆ, ಮತ್ತೊಂದು ಕೈಯ್ಯಲ್ಲಿ ಪ್ರಾಣಿಯ ಚರ್ಮ, ಸೊಂಟಕ್ಕೊಂದು ಪಟ್ಟಿ, ಪಟ್ಟಿಗೆ ತೂಗಿದ ಕತ್ತಿ, ಶಿರದಲ್ಲಿ ಹೊಳೆಯುವ ಕೆಂಪು ನಕ್ಷತ್ರ ಮತ್ತು ಕಾಲುಗಳನ್ನು ಅಗಲಿಸಿ ನಿಂತ ಭಂಗಿ ಹೀಗೆ ನಕ್ಷತ್ರ ಪುಂಜವನ್ನು ಚಿತ್ರಿಸಿಕೊಳ್ಳಲಾಗುತ್ತದೆ.
ಈ ನಕ್ಷತ್ರ ಪುಂಜವು ತಡರಾತ್ರಿಯವರೆಗೂ ಮರೆಯಾಗುವುದಿಲ್ಲ. ವಿದ್ವಾಂಸರ ಅಭಿಪ್ರಾಯದಲ್ಲಿ ಶಿವರಾತ್ರಿಯ ಆಚರಣೆ ಈ ನಕ್ಷತ್ರ ಪುಂಜಕ್ಕೆ ಆರಾಧಿಸುವ ಬಗೆಯಲ್ಲಿ ಆರಂಭವಾಯಿತು. ಪ್ರಧಾನ ದೇವರಿಗೆ ಒಂದು ನಕ್ಷತ್ರ ಪುಂಜ ಇರುವ ಕಲ್ಪನೆಯನ್ನು ಶೇಷಶಾಯಿ ವಿಷ್ಣು ಅಥವಾ ತಿರುಪತಿಯ ತಿಮ್ಮಪ್ಪನ ಚಿತ್ರಗಳಲ್ಲಿ ಕಾಣಲಾಗುವುದಿಲ್ಲ. ಭಾರತದಲ್ಲಿರುವ ಅನೇಕ ಸಂಪ್ರದಾಯಗಳಲ್ಲಿ ( ವೈದಿಕ, ಅವೈದಿಕ, ಜಾನಪದ, ಬುಡಕಟ್ಟು ಇತ್ಯಾದಿ) ಓರಿಯನ್ ನಕ್ಷತ್ರ ಪುಂಜಕ್ಕೆ ಬೇಟೆಯಾಡುವ ದೇವತೆಯ ಕಲ್ಪನೆ ಇದೆ. ಹಾಗಾಗಿ ಪುರಾಣ ಕಥೆಗಳಲ್ಲಿ ಹಲವು ವ್ಯತ್ಯಾಸಗಳಿದ್ದರೂ ಶಿವರಾತ್ರಿ ದೇಶಾದ್ಯಂತ ಆಚರಿಸಲಾಗುತ್ತದೆ. ಇಡೀ ರಾತ್ರಿ ಆಕಾಶ ನೋಡುತ್ತಾ ಜಾಗರಣೆ ಮಾಡುವುದರ ಹಿನ್ನೆಲೆಯೂ ಇದೇ ಆಗಿದೆ. ಆದರೆ ಡಿಜಿಟಲ್ ಯುಗದ ಭಾರತದಲ್ಲಿ ಜಾಗರಣೆ ಎಂದರೆ ಸಿನಿಮಾ, ಮನರಂಜನೆ, ಆರ್ಕೆಸ್ಟ್ರಾ ಇತ್ಯಾದಿಗಳಾಗಿವೆ.

ಪ್ರತಿ ವರ್ಷ ಡಿಸೆಂಬರ್ 22ರಂದು ಸಂಕ್ರಮಣವಾಗುತ್ತದೆ. ಸೂರ್ಯನು ಉತ್ತರ ದಿಕ್ಕಿಗೆ ಚಲಿಸಲು ಪ್ರಾರಂಭಿಸುತ್ತಾನೆ. ಮಾಗಿ ಚಳಿಯ ರಾತ್ರಿಯ ಮಂಜು ಕರಗಿ ರಾತ್ರಿ ಶುಭ್ರವಾಗಿರುವುದರಿಂದ ನಕ್ಷತ್ರಗಳು ಸ್ಪಷ್ಟವಾಗಿ ಕಾಣುತ್ತವೆ. ಹಾಗಾಗಿ ಶಿವರಾತ್ರಿ ಎಂದರೆ ಆಕಾಶದ ನಕ್ಷತ್ರಗಳತ್ತ ನೋಡುತ್ತಾ ಬೆರಗುಗೊಳ್ಳುವ ಒಂದು ಹಬ್ಬವಾಗಿ ಕಾಣಬಹುದು. ಅಲ್ಲದೆ ಶಿವ ಭಾರತೀಯ ಸಮಾಜದಲ್ಲಿ ನೆಲದ ದೇವರು ಎಂದೇ ಭಾವಿಸಲ್ಪಡುತ್ತಾನೆ. ಅವನಿಗೆ ಮೂರ್ತಿ ಶಿಲ್ಪದ ನೇಮನಿಯಮಗಳು ಅನ್ವಯಿಸುವುದಿಲ್ಲ. ಶಿವನನ್ನು ಮರಳುಗುಪ್ಪೆ ಮಾಡಿ ಪೂಜಿಸಿದ ಪುರಾಣ ಕಥೆಯೂ ಒಂದಿದೆ. ಹಾಗೆಯೇ ಶಿವನಿಗೆ ಇಂತಹ ವಿಧಾನದಲ್ಲೇ ಪೂಜೆ ಸಲ್ಲಿಸಬೇಕು, ಇಂತಹುದೇ ನೈವೈದ್ಯ ಇತ್ಯಾದಿಗಳನ್ನು ಅರ್ಪಿಸಬೇಕು ಎಂಬ ನಿಯಮಗಳಿಲ್ಲ. ಬೇಡರ ಕಣ್ಣಪ್ಪನ ಮಾರ್ಗದಲ್ಲಿ ಶಿವಪೂಜೆ ಮಾಡಿದ ಭಕ್ತರು ಲಿಂಗದ ಮೇಲೆ ನೀರು ಸುರಿದು ಪೂಜಿಸುತ್ತಾರೆ.
ಸಾಮಾನ್ಯರ ಕಲ್ಪನೆ ಮತ್ತು ಆಧುನಿಕ ಸಮಾಜ
ಸಾಮಾನ್ಯವಾಗಿ ಶಿವನನ್ನು ಬಡಜನರ ದೇವರು ಎಂದೇ ಪರಿಗಣಿಸಲಾಗುತ್ತದೆ. ಆಭರಣಗಳಾಗಲೀ, ವಸ್ತ್ರಾದಿಗಳಾಗಲೀ, ಭರ್ಜರಿ ಪ್ರಸಾದಗಳಾಗಲೀ ಇಲ್ಲಿ ಅಪ್ರಸ್ತುತವಾಗಿಬಿಡುತ್ತದೆ. ಪಟ್ಟೆ ಪೀತಾಂಬರಗಳಿಗೆ ಶಿವಪೂಜೆಯಲ್ಲಿ ಅವಕಾಶವೇ ಇರುವುದಿಲ್ಲ. ಆಧುನಿಕ ತಿನಿಸುಗಳಾದ ಲಡ್ಡು, ಬರ್ಫಿ ಇತ್ಯಾದಿಗಳಿಗೆ ಚಾನ್ಸೇ ಇರುವುದಿಲ್ಲ. ಆರಂಭದ ದಿನಗಳಲ್ಲಿ ಶಿವನಿಗೆ ದೇವಾಲಯಗಳೇ ಇರಲಿಲ್ಲ. ಅವನನ್ನು ಬಯಲು ದೇವತೆ ಎಂದೇ ಪರಿಗಣಿಸಲಾಗುತ್ತಿತ್ತು. (ವಿವರಗಳಿಗಾಗಿ ನೋಡಿ “ ಮೂರ್ತಿ ಶಿಲ್ಪ ನೆಲೆ ಹಿನ್ನಲೆ ”– ಎಸ್. ಕೆ. ರಾಮಚಂದ್ರರಾವ್ ). ಇಂದಿಗೂ ಸಹ ಕೈಲಾಸ ಬೆಟ್ಟವನ್ನೇ ಶಿವನ ಆವಾಸಸ್ಥಾನ ಎಂದು ನಂಬಿರುವ ಜನರು ಪರ್ವತವನ್ನೇ ಸಾಂಕೇತಿಕವಾಗಿ ಪೂಜಿಸುವುದುಂಟು.

ಬದಲಾಗುತ್ತಿರುವ ಆಧುನಿಕ ಭಾರತದಲ್ಲಿ ಜನಪದೀಯ ಆಚರಣೆಗಳೆಲ್ಲವೂ ನಗರೀಕರಣಕ್ಕೊಳಗಾಗಿ, ತಳಸಮಾಜದಿಂದ ಮೇಲ್ಜಾತಿಯ ಮೇಲ್ಪದರ ಸಮಾಜದ ಅಂಗಳಕ್ಕೆ ವರ್ಗಾಯಿಸಲ್ಪಟ್ಟಿರುವುದರಿಂದ, ಶಿವರಾತ್ರಿಯಂತಹ ಜನರ ಹಬ್ಬವೂ ವೈಭವ, ಆಡಂಬರ, ಶಾಮಿಯಾನ, ಪ್ರಸಾದ ಹಂಚಿಕೆ ಇತ್ಯಾದಿಗಳಲ್ಲಿ ಕಂಡುಬರುತ್ತದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಸಹ ನಶಿಸಿಹೋಗುತ್ತಿರುವ ಸಾಂಪ್ರದಾಯಿಕ ಕಲೆಗಳಾದ ಹರಿಕಥೆ-ಗಾಯನ-ವಾಚನ ಮುಂತಾದವುಗಳಿಗೆ ವೇದಿಕೆ ಇರುವುದಿಲ್ಲ. ಐದು ದಶಕಗಳ ಹಿಂದಿನ ಬಾಲ್ಯದ ದಿನಗಳತ್ತ ಹಿಂತಿರುಗಿ ನೋಡಿದಾಗ, ಮಾಲೂರು ಸೊಣ್ಣಪ್ಪ (ಇವರು ಗಂಧದ ಗುಡಿ ಸಿನಿಮಾದಲ್ಲೂ ನಟಿಸಿದ್ದರು), ಗುರುರಾಜುಲು ನಾಯ್ಡು ಮೊದಲಾದ ಕಲಾವಿದರ ಅಹೋರಾತ್ರ ಹರಿಕಥೆಗಳು ನೆನಪಾಗುತ್ತವೆ. ಹಾಗೆಯೇ ಚಿತ್ರಮಂದಿರಗಳಲ್ಲಿ ರಾತ್ರಿಯಿಡೀ ಪ್ರದರ್ಶನಗಳೂ ಇರುತ್ತಿದ್ದವು. ಮನೆಯೊಳಗೆ ಅಹೋರಾತ್ರ ಅಭಿಷೇಕ ಇತ್ಯಾದಿಗಳೂ ನಡೆಯುತ್ತಿದ್ದವು. ಈ ದಿನಗಳಲ್ಲೂ ಒಂದು ನಿಸ್ಪೃಹ ಸೌಂದರ್ಯ ಇದ್ದುದನ್ನು ಅಲ್ಲಗಳೆಯಲಾಗುವುದಿಲ್ಲ.

ಭಾರತೀಯ ಸಮಾಜ ಆಧುನಿಕತೆಗೆ ತೆರೆದುಕೊಳ್ಳುತ್ತಿರುವಂತೆಯೇ, ಸಹಜವಾಗಿ ಭಕ್ತಿ-ಶ್ರದ್ಧೆ ಮತ್ತು ನಂಬಿಕೆಗಳು ಲೌಕಿಕ ಆಚರಣೆಗಳಲ್ಲೇ ಸಿಲುಕಿ, ನಿರ್ಗುಣ-ನಿರಾಭರಣ-ನಿರಾಕಾರ ಶಿವನೂ ಸಹ ಗೋಪುರ- ಗರ್ಭಗುಡಿಗಳಲ್ಲಿ ಬಂದಿಯಾಗಿದ್ದಾನೆ. ತಮ್ಮ ನಾಲ್ಕು ಗೋಡೆಗಳಿಂದಾಚೆಗೆ ಎಲ್ಲಾ ಧಾರ್ಮಿಕ ಆಚರಣೆಗಳೂ ಸಹಜವಾಗಿ ವಾಣೀಜ್ಯೀಕರಣಕ್ಕೊಳಗಾಗುವಂತೆ, ಶಿವರಾತ್ರಿ ಆಚರಣೆಯೂ ಆಗಿದೆ. ಪ್ರತಿ ಆಚರಣೆಯ ನೆಲೆಯಲ್ಲೂ ಹಿತಾಸಕ್ತಿಗಳೂ ಸೃಷ್ಟಿಯಾಗುತ್ತವೆ. ಆದರೆ ಭಾರತದ ಗ್ರಾಮೀಣರ ಬದುಕಿನಲ್ಲಿ ಈ ಸಾಂಪ್ರದಾಯಿಕ ಹಬ್ಬ ಆಚರಣೆಗಳು ಕೊಂಚಮಟ್ಟಿಗಾದರೂ ತಮ್ಮ ಅಂತಃಸತ್ವವನ್ನು ಉಳಿಸಿಕೊಂಡುಬಂದಿವೆ. ಶಿವನ ಕಥೆಗಳ ಸುತ್ತ ಪವಾಡಗಳ ಕಥನಗಳು ಇಲ್ಲವಾದ್ದರಿಂದ, ಮೌಢ್ಯಾಚರಣೆಗಳೂ ಸಹ , ಇಲ್ಲವೇ ಇಲ್ಲ ಎನ್ನಲಾಗದಿದ್ದರೂ, ತುಲನಾತ್ಮಕವಾಗಿ ಕಡಿಮೆ ಪ್ರಮಾಣದಲ್ಲೇ ಕಾಣುತ್ತವೆ.
“ ಆಚರಿಸುವ ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು”
-೦-೦-೦-೦-.