
ಗೃಹಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ತನಕ ಫ್ರೀ ಕರೆಂಟ್ ಕೊಡುತ್ತಿದ್ದು, ಇನ್ಮುಂದೆ ಅದಕ್ಕೂ ಕೊಕ್ಕೆ ಬೀಳುವ ಸಾಧ್ಯತೆ ಇದೆ ಅನ್ನೋ ಬಗ್ಗೆ ವರದಿ ಆಗಿತ್ತು. ಜನರಿಂದಲೇ ವಿದ್ಯುತ್ ಬಿಲ್ ಸಂಗ್ರಹಕ್ಕೆ ಅವಕಾಶ ಕೊಡುವಂತೆ ಪ್ರಸ್ತಾವನೆ ಸಲ್ಲಿಕೆ ಆಗಿದೆ. ಸರ್ಕಾರ ಮುಂಗಡವಾಗಿ ಪಾವತಿಸಲಿ, ಇಲ್ಲವೇ ಗ್ರಾಹಕರಿಂದ ಬಿಲ್ ಕಲೆಕ್ಟ್ ಮಾಡಲು ಅವಕಾಶ ಕೊಡಲಿ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಗೆ ಮನವಿ ಮಾಡಿದ್ದಾರೆ. ಒಂದು ವೇಳೆ ಎಸ್ಕಾಂಗಳ ಮನವಿಗೆ KERC ಒಪ್ಪಿಗೆ ಕೊಟ್ಟರೆ ‘ಗ್ಯಾರಂಟಿ’ಗೆ ಸಂಕಷ್ಟ ಎದುರಾಗುತ್ತದೆ ಅನ್ನೋ ಬಗ್ಗೆ ವರದಿ ಆಗಿತ್ತು.

ಮೊದಲು ಬಿಲ್ ಪಾವತಿಸಿ, ಸರ್ಕಾರದಿಂದ ಬಿಲ್ ಕ್ಲೇಮ್ ಮಾಡಬೇಕು ಅನ್ನೋ ವಿಚಾರವಾಗಿ ಬಿ. ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಎಸ್ಕಾಂಗಳ ಪ್ರಸ್ತಾವನೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಖಂಡನೆ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಉತ್ತರ ಕೊಡಬೇಕಿದೆ. ‘ಆಲ್ ಈಸ್ ವೆಲ್’ ಭಾವನೆಯಿಂದ ಹೊರ ಬರಬೇಕು. ಸಾರಿಗೆ ಸಂಸ್ಥೆಗಳಿಗೂ 7 ಸಾವಿರ ಕೋಟಿ ಬಾಕಿ ಕೊಡಬೇಕಿದೆ. ವಿದ್ಯುತ್ ಕಂಪನಿಗಳಿಗೆ 6 ಸಾವಿರ ಕೋಟಿ ಹಣ ಬಾಕಿ ಕೊಡಬೇಕಿದೆ. ಗ್ಯಾರಂಟಿ ಯೋಜನೆ ನಿಲ್ಲಿಸಲು ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡ್ತೇವೆ ಎಂದಿದ್ದಾರೆ ಬಿ.ವೈ ವಿಜಯೇಂದ್ರ.

ಗೃಹಜ್ಯೋತಿಗೆ ಕರೆಂಟ್ ದರ ಏರಿಸಿದ ಬಳಿಕ ಗ್ರಾಹಕರಿಂದಲೇ ಹಣ ವಸೂಲಿ ಅನ್ನೋ ವರದಿಗೆ ರಾಜ್ಯದ ಜನರಿಗೆ ಸ್ಪಷ್ಟನೆ ನೀಡಿದ್ದಾರೆ ಇಂಧನ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ. ಗೃಹಜ್ಯೋತಿಗೆ ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ. ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಇಡೀ ವರ್ಷ ಯೋಜನೆ ನಡೆಸಲು ಹಣ ಕೊಟ್ಟಿದ್ದಾರೆ. ದರ ಏರಿಕೆ ಮಾಡುವ ಸಲುವಾಗಿ ಎಸ್ಕಾಂ ಸಂಸ್ಥೆಗಳು ಕೆಇಆರ್‌ಸಿಗೆ ಪ್ರಸ್ತಾವನೆ ಕೊಟ್ಟಿದೆ. ಕಳೆದ ವರ್ಷ ನಾವೇ ದರ ಏರಿಕೆ ಮಾಡೋದು ಬೇಡ ಅಂತ ಕೈ ಬಿಟ್ಟಿದ್ವಿ. ಈಗ ವಿದ್ಯುತ್ ದರ ಏರಿಕೆ ಮಾಡಿ ಎರಡು ವರ್ಷ ಆಗಿದೆ ಎಂದಿದ್ದಾರೆ.

ಆದರೆ ಗ್ಯಾರಂಟಿ ಯೋಜನೆಗೆ ಯಾವುದೇ ಸಂಕಷ್ಟ ಇಲ್ಲ ಎಂದಿರುವ ಸಚಿವ ಕೆ.ಜೆ ಜಾರ್ಜ್, ಈಗ ಎದ್ದಿರುವ ವದಂತಿಯನ್ನು ನಮ್ಮ ವಿರೋಧಿಗಳು ಹರಿಬಿಟ್ಟಿರಬಹುದು. ಈ ಹಿಂದೆ ಗ್ಯಾರಂಟಿ ಯೋಜನೆ ಜಾರಿ ಆದಾಗ ರಾಜ್ಯ ದಿವಾಳಿ ಆಗುತ್ತೆ ಅಂತ ಹೇಳಿದ್ರಲ್ವಾ.. ಅವರೇ ಈಗ ಗ್ಯಾರಂಟಿ ಯೋಜನೆ ಬಗ್ಗೆ ಸುಳ್ಳು ಸುದ್ದಿಯನ್ನು ಹರಿಬಿಟ್ಟಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ದರ ಏರಿಕೆಗೆ ಪ್ರಸ್ತಾವನೆಯನ್ನು ಎಸ್ಕಾಂಗಳು ಕೆಇಆರ್‌ಸಿಗೆ ಕೊಟ್ಟಿದೆ. ಅದನ್ನು ಕೆಇಆರ್ಸಿ ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತದೆ. ದರ ಏರಿಕೆ ಪ್ರಸ್ತಾಪ ನಮ್ಮ ಕೈಗೆ ಬಂದ ಮೇಲೆ ದರ ಏರಿಕೆ ಮಾಡಬೇಕೋ ಬೇಡವೋ ಅಂತ ಯೋಚನೆ ಮಾಡ್ತೀವಿ ಎಂದಿದ್ದಾರೆ.