ಇನ್ವೆಸ್ಟಿಗೇಶನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಂದ ಅನಾವರಣ .

ಇತ್ತೀಚಿಗೆ “ಪ್ರತ್ಯರ್ಥ” ಚಿತ್ರದ ಟ್ರೇಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಉಡುಪಿಯ ಕಾರ್ಕಳ ಮೂಲದ ಅರ್ಜುನ್ ಕಾಮತ್ ನಿರ್ದೇಶಿಸಿರುವ ಈ ಚಿತ್ರ ಇದೇ 28ರಂದು ತೆರೆಗೆ ಬರಲಿದೆ. ಚಿತ್ರದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಕನ್ನಡ ಸಿನಿಮಾದಲ್ಲಿ ಹೊಸ ತಂಡದಿಂದ ಜನರು ಏನನ್ನು ನಿರೀಕ್ಷೆ ಪಡುತ್ತಾರೋ ಆ ತರಹದ ಸಿನಿಮಾ ಪ್ರತ್ಯರ್ಥ. ಈ ಚಿತ್ರವನ್ನು ಕನ್ನಡಿಗರು ಹೆಮ್ಮೆಯಿಂದ ಅನ್ಯ ಭಾಷೆಯ ಪ್ರೇಕ್ಷಕರಿಗೆ ವೀಕ್ಷಿಸಲು ಸಲಹೆ ನೀಡಬಹುದು ಎಂದು ಮಾತನಾಡಿದ ನಿರ್ದೇಶಕ ಅರ್ಜುನ್ ಕಾಮತ್, ಇದೊಂದು ಇನ್ವೆಸ್ಟಿಗೇಶನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಪ್ರತಿಯೊಂದಕ್ಕೂ ಅರ್ಥ ಇರುವುದನ್ನು ಪ್ರತ್ಯರ್ಥ ಎನ್ನಲಾಗುತ್ತದೆ. ಹಾಗಾಗಿ ಇದು ಹಳೆಯ ಟೈಟಲ್ ಆದರೂ ಕೂಡ, ನಮ್ಮ ಸಿನಿಮಾಗೆ ಇದೇ ಶೀರ್ಷಿಕೆ ಸೂಕ್ತ ಎನಿಸಿತು. ಈಗಿನ ಯುವಜನತೆಗೆ ಯಾವ ತರಹದ ಕಥೆ ಬೇಕು ಎಂದು ತಿಳಿದುಕೊಂಡು, ಒಂದು ವರ್ಷ ಸಮಯ ತೆಗೆದುಕೊಂಡು, ನಾನು ಹಾಗೂ ರಾಮ್ ಮುಂತಾದ ಸ್ನೇಹಿತರು ಸೇರಿ ಈ ಚಿತ್ರದ ಕಥೆ ಬರೆದಿದ್ದೇವೆ. ನಮ್ಮ ಕಥೆಯನ್ನು ಸಿನಿಮಾ ರೂಪಕ್ಕೆ ತರಲು ನಿರ್ಮಾಪಕರಾದ ನಾಗೇಶ್ ಎಂ, ಜಯ್ ಆರ್ ಪ್ರಭು ಮುಂದಾದರು. ನಿತ್ಯಾನಂದ ಪೈ ಹಾಗೂ ಪ್ರೇಮಕುಮಾರ್ ವಿ, ಭರತ್ ಶೆಟ್ಟಿ ಸಹ ನಿರ್ಮಾಪಕರಾದರು. ಎರಡು ಶೇಡ್ ಗಳಲ್ಲಿ ಸಾಗುವ ಈ ಕಥೆಯ ನಾಯಕರಾಗಿ ರಾಮ್, ಅಕ್ಷಯ್ ಕಾರ್ಕಳ ನಟಿಸಿದ್ದಾರೆ. ನಾಯಕಿಯಾಗಿ ಶೃತಿ ಚಂದ್ರಶೇಖರ್ ಅಭಿನಯಿಸಿದ್ದಾರೆ. ಸುಮನ್ ತಲ್ವಾರ್, ನವೀನ್ ಡಿ ಪಡೀಲ್, ರಮೇಶ್ ಭಟ್, ದೀಪಕ್ ರೈ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ವಿನುತ್ ಛಾಯಾಗ್ರಾಹಕರಾಗಿದ್ದಾರೆ. ಟ್ರೇಲರ್ ಅನಾವರಣ ಮಾಡಿದ ಶ್ರೀಮುರಳಿ ಅವರಿಗೆ ಧನ್ಯವಾದ. ಇದೇ 28 ರಂದು ನಮ್ಮ ಚಿತ್ರ ತೆರೆಗೆ ಬರುತ್ತಿದೆ. ನೋಡಿ. ಪ್ರೋತ್ಸಾಹಿಸಿ ಎಂದರು ನಿರ್ದೇಶಕ ಅರ್ಜುನ್ ಕಾಮತ್.

ನನಗೆ ಸಿನಿಮಾ ಕ್ಷೇತ್ರ ಹೊಸತು. ಆದರೆ ನಾನು ಸಿನಿಮಾ ಪ್ರೇಮಿ. ಚಂದನ ವಾಹಿನಿಯಲ್ಲಿ ವಾರಕೊಮ್ಮೆ ಬರುತ್ತಿದ್ದ ಚಿತ್ರವನ್ನು ತಪ್ಪದೇ ನೋಡುತ್ತಿದ್ದವನು. ಸಿನಿಮಾ ಮೇಲಿನ ಪ್ರೀತಿಯಿಂದ ಮಾಡಿರುವ ಸಿನಿಮಾ ಇದು ಎಂದು ನಿರ್ಮಾಪಕರಲ್ಲೊಬ್ಬರಾದ ವಿಶಿಷ್ಟ ಫಿಲ್ಮ್ ನ ಜಯ್ ಆರ್ ಪ್ರಭು ತಿಳಿಸಿದರು.
ಹೊಸಬರು ಕನಸು ಕಂಡಿರುತ್ತಾರೆ. ಆ ಕನಸನ್ನು ನನಸು ಮಾಡುವುದು ನಿರ್ಮಾಪಕರು. ಹಾಗಾಗಿ ಅವರಿಗೆ ಮೊದಲು ಧನ್ಯವಾದ ಎಂದು ಮಾತನಾಡಿದ ನಟ ರಾಮ್, ನನ್ನದು ಈ ಚಿತ್ರದಲ್ಲಿ ಆಯುಷ್ ಎಂಬ ಕಾಲೇಜು ವಿದ್ಯಾರ್ಥಿ ಪಾತ್ರ. ನಿರ್ದೇಶಕರ ಜೊತೆಗೂಡಿ ಚಿತ್ರಕಥೆ ಕೂಡ ಬರೆದಿದ್ದೇನೆ ಎಂದರು.

ನಾನು ಸಹ ಸ್ಕ್ರಿಪ್ಟ್ ವರ್ಕ್ ಸಮಯದಿಂದಲೂ ಈ ತಂಡದ ಜೊತೆಗಿದ್ದೇನೆ. ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಟ ಅಕ್ಷಯ್ ಕಾರ್ಕಳ ಹೇಳಿದರು. ಪ್ರಿಯ ಎಂಬ ಪಾತ್ರದಲ್ಲಿ ಅಭಿನಯಿದ್ದೇನೆ ಎಂದರು ನಾಯಕಿ ಶೃತಿ ಚಂದ್ರಶೇಖರ್. ಚಿತ್ರದಲ್ಲಿ ಎರಡು ಹಾಡುಗಳಿದ್ದು, ವಾಸುಕಿ ವೈಭವ್ ಹಾಗು ರಜತ್ ಹೆಗಡೆ ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಸುನಾದ್ ಗೌತಮ್ ಮಾಹಿತಿ ನೀಡಿದರು.