
ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿಗಳು ಸರಿಯಾಗಿ ಜಾರಿ ಆಗ್ತಿಲ್ಲ ಎನ್ನುವ ಆಕ್ರೋಶ ವ್ಯಕ್ತವಾಗಿದೆ. ಕಳೆದ ನಾಲ್ಕು ತಿಂಗಳಿಂದ ಅನ್ನಭಾಗ್ಯ ಹಾಗು ಗೃಹಲಕ್ಷ್ಮೀ ಹಣ ಬಿಡುಗಡೆ ಆಗಿಲ್ಲ. ಜನಾಕ್ರೋಶ ವ್ಯಕ್ತವಾಗ್ತಿದ್ದ ಹಾಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಗೃಹಲಕ್ಷ್ಮಿ ಹಾಗೂ ಅನ್ನ ಭಾಗ್ಯ ತಡವಾಗ್ತಿರುವ ವಿಚಾರವಾಗಿ ಮಾತನಾಡಿ, ಅವರಿಗೆ ಕೊಡೋದಕ್ಕೆ ಹೇಳಿದೀನಿ ಕೊಡುತ್ತಾರೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಗೃಹ ಲಕ್ಷ್ಮೀ ಹಾಗೂ ಅನ್ನ ಭಾಗ್ಯದ ಬಾಕಿ ಬಿಡುಗಡೆ ವಿಷಯವಾಗಿ ಈಶ್ವರಪ್ಪ ವಾಗ್ದಾಳಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ನನಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ. ಹಣಕಾಸು ಮಂತ್ರಿಯಾಗಿ ಅವರಿಗೆ ಈ ವಿಷಯ ಗೊತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ ಮಾತನಾಡಿ, ಗೃಹ ಜ್ಯೋತಿ ಯೋಜನೆ ಪ್ರತಿ ತಿಂಗಳು ಮನೆಗೆ ಶೂನ್ಯ ಬಿಲ್ ಹೋಗುತ್ತಿದೆ. ಬೇರೆ ಯೋಜನೆ ಬೇರೆ ಇಲಾಖೆಗೆ ಬರುತ್ತದೆ ಅವರನ್ನ ಕೇಳಿ. ಹಣಕಾಸು ಸಚಿವರಾಗಲು ಸಿದ್ದರಾಮಯ್ಯ ನಾಲಾಯಕ್ ಎಂಬ ಕೆ.ಎಸ್. ಈಶ್ವರಪ್ಪ ಹೇಳಿಕೆ ತಿರುಗೇಟು ನೀಡಿದ್ದು, ಈಶ್ವರಪ್ಪ ಅವರು ಯಾವುದಕ್ಕೆ ಲಾಯಕ್ ಎಂದು ನಿಮಗೆ ಗೊತ್ತಿದೆ. ಇವತ್ತು ಜನ ಅವರನ್ನ ಸೋಲಿಸಿದ್ದಾರೆ, ಸಿದ್ದರಾಮಯ್ಯ ಎಂಥ ದಕ್ಷ ನಾಯಕ ಎಂದು ಪ್ರಪಂಚಕ್ಕೆ ಗೊತ್ತಿದೆ ಎಂದಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಮೂರ್ನಾಲ್ಕು ತಿಂಗಳಿಂದ ಅನುದಾನ ಬಿಡುಗಡೆ ಆಗುತ್ತಿಲ್ಲ ಎನ್ನುವ ವಿಚಾರವಾಗಿ ಬಾಗಲಕೋಟೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ. ಈಗ ಮಾರ್ಚ್ ಬರುತ್ತಿದೆ, ಎಲ್ಲ ದುಡ್ಡು ಬಿಡುಗಡೆ ಆಗುತ್ತದೆ. ಕೊಟ್ಟ ಮಾತು ಉಳಿಸಿಕೊಂಡು ಹೋಗುವ ಸರ್ಕಾರ ನಮ್ಮದು. ಸರ್ಕಾರದ ಯೋಜನೆಗಳಲ್ಲಿ ಹೀಗಾಗುತ್ತದೆ. ವಿಧವಾ ವೇತನ ಪ್ರತಿ ತಿಂಗಳು ಬರುವುದಿಲ್ಲ. ಎರಡು, ಮೂರು, ನಾಲ್ಕು ತಿಂಗಳಿಗೊಮ್ಮೆ ಬಿಡುಗಡೆ ಆಗುತ್ತದೆ. ನಮ್ಮ ವ್ಯವಸ್ಥೆಗಳಲ್ಲಿ ಅದನ್ನು ಸರಿದೂಗಿಸಿಕೊಂಡು ಹೋಗಬೇಕು. ಅದು ಸರಿ ಇದೆ ಅಂತ ನಾನು ಹೇಳಲ್ಲ. ಆದರೆ, ಹಣ ಅಂತೂ ಈ ತಿಂಗಳು ಖಂಡಿತ ಬಿಡುಗಡೆ ಆಗುತ್ತದೆ ಎಂದಿದ್ದಾರೆ.

ಗ್ಯಾರಂಟಿ ಯೋಜನೆಗಳ ವಿಳಂಬದ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಮುಗಿ ಬೀಳುವುದಕ್ಕೆ ತಯಾರಿ ಮಾಡ್ಕೊಳ್ತಿದೆ. ಈ ಬಗ್ಗೆ ಬೆಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ಈ ಬಗ್ಗೆ ನಾಳೆ ಸುದ್ದಿಗೋಷ್ಟಿ ಕರೆಯುತ್ತಿದ್ದೇನೆ. ರಾಜ್ಯದಲ್ಲಿನ ಗ್ಯಾರಂಟಿ ಯೋಜನೆಗಳ ಸಮಸ್ಯೆ ಹಾಗೂ ಪೊಲಿಟಿಕಲ್ ವಿಚಾರವಾಗಿ ನಾಳೆ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.