• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ರಾಜಕೀಯ ಅಪರಾಧೀಕರಣ ಮತ್ತು ಪ್ರಜಾಪ್ರಭುತ್ವ

ನಾ ದಿವಾಕರ by ನಾ ದಿವಾಕರ
February 14, 2025
in ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ಶೋಧ
0
ರಾಜಕೀಯ ಅಪರಾಧೀಕರಣ ಮತ್ತು ಪ್ರಜಾಪ್ರಭುತ್ವ
Share on WhatsAppShare on FacebookShare on Telegram

—–ನಾ ದಿವಾಕರ—-

ADVERTISEMENT

ಆರೋಪಿ – ಅಪರಾಧಿಯ ನಡುವಿನ ತೆಳುಗೆರೆ ಪ್ರಜಾತಂತ್ರಕ್ಕೆ ಅಪಾಯಕಾರಿಯಾಗಕೂಡದು

ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳೇ ಅತಿ ಹೆಚ್ಚು ಪ್ರಧಾನವಾಗಿ ಪರಿಗಣಿಸಲ್ಪಟ್ಟರೂ, ಈ ಮೌಲ್ಯಗಳಿಗೆ ಅನುಗುಣವಾದ ರಾಜಕೀಯ ವರ್ತನೆ ಅಥವಾ ಧೋರಣೆಯನ್ನು ಅನುಸರಿಸುವುದರಲ್ಲಿ ನಮ್ಮ ರಾಜಕೀಯ ಪಕ್ಷಗಳು ಸೋತಿವೆ. ಡಾ. ಬಿ.ಆರ್.‌ ಅಂಬೇಡ್ಕರ್‌ ಮತ್ತೆ ಮತ್ತೆ ನೆನಪಿಸುತ್ತಿದ್ದ ಸಾಂವಿಧಾನಿಕ ನೈತಿಕತೆ (Constitutional Morality) ಸಕ್ರಿಯ ಅಧಿಕಾರ ರಾಜಕಾರಣದಲ್ಲಿ ಸವಕಲು ಪದವಾಗಿಹೋಗಿದ್ದು, ವ್ಯಕ್ತಿಗತವಾಗಿ, ವೈಯುಕ್ತಿಕ ನೆಲೆಯಲ್ಲಿ ಹಾಗೂ ಆಡಳಿತಾತ್ಮಕವಾಗಿಯೂ ʼಅಧಿಕಾರ ಕೇಂದ್ರೀಕರಣʼ (Centralisation of Power) ನಮ್ಮ ಪ್ರಜಾಪ್ರಭುತ್ವವನ್ನು ನಿರಂತರವಾಗಿ ಶಿಥಿಲಗೊಳಿಸುತ್ತಿದೆ. ಹಾಗಾಗಿಯೇ ದಿನದಿಂದ ದಿನಕ್ಕೆ ಪ್ರಜಾಸತ್ತಾತ್ಮಕ ಚುನಾವಣೆಗಳೂ ಸಹ ತಮ್ಮ ಸಾಂವಿಧಾನಿಕ ಚೌಕಟ್ಟಿನಿಂದ ಹೊರಗುಳಿಯುತ್ತಿದೆ.

 ಇತ್ತೀಚೆಗೆ ನಡೆದ ದೆಹಲಿ ಚುನಾವಣೆಗಳ ಕಣದಲ್ಲಿದ್ದ 699 ಅಭ್ಯರ್ಥಿಗಳ ಪೈಕಿ 132 ಜನರು ಅಪರಾಧ ಹಿನ್ನೆಲೆ ಉಳ್ಳವರು ಎಂದು ಅವರೇ ಸಲ್ಲಿಸಿರುವ ಪ್ರಮಾಣ ಪತ್ರಗಳ ಮೂಲಕ ಪ್ರಕಟವಾಗಿದೆ. ಇವರ ಪೈಕಿ 81 ಜನರ ವಿರುದ್ಧ ಗಂಭೀರ ಅಪರಾಧದ ಆರೋಪಗಳಿವೆ. ಆಮ್‌ ಆದ್ಮಿ ಪಕ್ಷದ 44, ಕಾಂಗ್ರೆಸ್‌ನ 70 ಮತ್ತು ಬಿಜೆಪಿಯ 20 ಅಭ್ಯರ್ಥಿಗಳು ಅಪರಾಧದ ಹಿನ್ನೆಲೆಯುಳ್ಳವರಾಗಿದ್ದರು. ಇವರ ಪೈಕಿ ಆಮ್‌ ಆದ್ಮಿ ಪಕ್ಷದಿಂದ 15, ಬಿಜೆಪಿಯ 16 ಶಾಸಕರು ಚುನಾಯಿತರಾಗಿದ್ದಾರೆ. 2024ರ ಲೋಕಸಭಾ ಚುನಾವಣೆಗಳಲ್ಲಿ ಆಯ್ಕೆಯಾದ 543 ಸಂಸದರ ಪೈಕಿ 251 ಸದಸ್ಯರು ಅಪರಾಧದ ಹಿನ್ನೆಲೆಯುಳ್ಳವರಾಗಿದ್ದಾರೆ. ಇವರ ಪೈಕಿ 171 ಜನರ ವಿರುದ್ಧ ಗಂಭೀರ ಅಪರಾಧಗಳ (ಅಂದರೆ ಅತ್ಯಾಚಾರ, ಕೊಲೆ ಪ್ರಯತ್ನ, ಅಪಹರಣ ಇತ್ಯಾದಿ) ಆರೋಪಗಳಿವೆ. ಇಲ್ಲಿ ಅಪರಾಧದ ಸ್ವರೂಪ ಮತ್ತು ಅದರ ಹಿಂದಿನ ರಾಜಕೀಯ ಪಿತೂರಿಗಳು ಏನೇ ಇದ್ದರೂ ಅದು, ತಳಸಮಾಜದ ಸಾಮಾನ್ಯರಿಗೆ ಅಪ್ರಸ್ತುತವೆನಿಸುತ್ತದೆ. ಏಕೆಂದರೆ ನಿರಪರಾಧಿತ್ವ ಸಾಬೀತಾಗುವುದು ನ್ಯಾಯಾಂಗದ ಆವರಣದಲ್ಲಿ.

 ಅಪರಾಧೀಕರಣದ ವ್ಯಾಖ್ಯಾನ

 ಈ ಹಿನ್ನೆಲೆಯಲ್ಲೇ ʼ ರಾಜಕೀಯ ಅಪರಾಧೀಕರಣ ʼ (Criminalisation of Politics) ಎಂಬ ವಿದ್ಯಮಾನವನ್ನೂ ಪರಾಮರ್ಶಿಸಬೇಕಿದೆ. ವಿಕಸನದ ಹಾದಿಯಲ್ಲಿರುವ ಒಂದು ಪ್ರಜಾಪ್ರಭುತ್ವ ದೇಶವಾಗಿ ಭಾರತವನ್ನು ಈ ಹಂತದಲ್ಲಿ ಸರಿಪಡಿಸದೆ ಹೋದರೆ, ಭವಿಷ್ಯದ ತಲೆಮಾರಿಗೆ, ಈ ವಾತಾವರಣವೇ ಸ್ವೀಕೃತವೂ, ಸಹಜವೂ ಆಗಿ ರೂಪಾಂತರಗೊಳ್ಳುವ ಅಪಾಯವಿದೆ. ಕಳೆದ ನಾಲ್ಕೈದು ದಶಕಗಳಲ್ಲಿ ಭಾರತದ ಸಂಸದೀಯ ಪ್ರಜಾತಂತ್ರದಲ್ಲಿ ರೂಪುಗೊಂಡಿರುವ ʼಪರ್ಯಾಯ ರಾಜಕಾರಣʼ ದ (Alternative Politics) ಮಾದರಿಗಳೂ ಸಹ ಈ ವಿಷವರ್ತುಲದಿಂದ ಮುಕ್ತವಾಗಿ ಜನರ ನಡುವೆ ಗುರುತಿಸಿಕೊಂಡಿಲ್ಲ. ಜಾತಿ ಅಥವಾ ಮತೀಯ ಅಸ್ಮಿತೆಗಳ ಮೂಲಕ, ಪ್ರಾದೇಶಿಕತೆಯ ಮೂಲಕ ಗುರುತಿಸಿಕೊಂಡ ಸಂಸದೀಯ ಪಕ್ಷಗಳು, ಚುನಾವಣಾ ರಾಜಕಾರಣದ ಪ್ರಶ್ನೆ ಎದುರಾದಾಗ, ಅಪರಾಧೀಕರಣವನ್ನು ವಿರೋಧಿಸುವ ತಾತ್ವಿಕ ನೆಲೆಗಳನ್ನು ಕಂಡುಕೊಂಡಿಲ್ಲ. ಇಲ್ಲಿ ಪ್ರಬಲ ಜಾತಿ ಅಥವಾ ಮತೀಯ ಅಸ್ಮಿತೆಗಳು ಪ್ರಾಬಲ್ಯ ಸಾಧಿಸುತ್ತವೆ.

 ಆದರೆ ತಳಸಮಾಜದ ಸಾಮಾನ್ಯ ಮತದಾರರ ದೃಷ್ಟಿಯಲ್ಲಿ ಶಾಸನಸಭೆಗಳನ್ನು ಪ್ರವೇಶಿಸಲು ಮತಯಾಚನೆ ಮಾಡುವ ಅಭ್ಯರ್ಥಿಗಳ ಪ್ರಾಮಾಣಿಕ ಸಚ್ಚಾರಿತ್ರ್ಯದ ಹಿನ್ನೆಲೆ ಮುಖ್ಯವಾಗುತ್ತದೆ. ರಾಜಕೀಯ ಅಪರಾಧೀಕರಣವನ್ನು ವಿಶಾಲ ನೆಲೆಗಟ್ಟಿನಲ್ಲಿ ನೋಡಿದಾಗ ʼಅಧಿಕಾರ ರಾಜಕಾರಣʼವು ಬಲವಾಗಿ ಪ್ರತಿಪಾದಿಸುವ ಅಧಿಕಾರ ಮತ್ತು ಆಡಳಿತ ಕೇಂದ್ರೀಕರಣದ ಪರಿಕಲ್ಪನೆಯೇ ವ್ಯಕ್ತಿಗತ ನೆಲೆಗೂ ವಿಸ್ತರಿಸುತ್ತದೆ. ಪ್ರಬಲ ಜಾತಿಗಳಂತೆಯೇ ಪ್ರಬಲ ವ್ಯಕ್ತಿಗಳೂ ತಮ್ಮೊಳಗೇ ಕೇಂದ್ರೀಕರಿಸಿಕೊಳ್ಳುವ ಅಧಿಕಾರದ ಚೌಕಟ್ಟುಗಳ ಸುತ್ತ ಸಣ್ಣ ಗುಂಪುಗಳನ್ನು (Coteries) ರಚಿಸಿಕೊಳ್ಳುವ ಮೂಲಕ ವೈಯುಕ್ತಿಕ ರಾಜಕೀಯ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಾರೆ. ಭಾರತದ ರಾಜಕಾರಣದಲ್ಲಿ ಸಾಮಾನ್ಯೀಕರಿಸಬಹುದಾದ (Generalise) ಈ ಲಕ್ಷಣವನ್ನು ಮೀರುವ ಒಂದು ಆಂತರಿಕ ಪ್ರಜಾಪ್ರಭುತ್ವದ ಮೌಲ್ಯಗಳು ಬಹುಮಟ್ಟಿಗೆ ನಶಿಸಿಹೋಗಿರುವುದು ವಾಸ್ತವ.

ನ್ಯಾಯಾಂಗ ಮತ್ತು ಜನಪ್ರಾತಿನಿಧ್ಯ ಕಾಯ್ದೆ

 ಈ ಹಿನ್ನೆಲೆಯಲ್ಲೇ ಸುಪ್ರೀಂಕೋರ್ಟ್‌ ಅಶ್ವಿನ್‌ ಉಪಾಧ್ಯಾಯ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಚಾರಣೆ ನಡೆಸುತ್ತಿದ್ದು, ನ್ಯಾಯಪೀಠವು “ ಶಿಕ್ಷೆಗೊಳಗಾಗಿರುವ ವ್ಯಕ್ತಿ , ಶಿಕ್ಷೆಯನ್ನು ನ್ಯಾಯಾಲಯಗಳು ಎತ್ತಿಹಿಡಿದ ನಂತರವೂ ಹೇಗೆ ಸಂಸತ್ತನ್ನು/ವಿಧಾನಸಭೆಯನ್ನು ಪ್ರವೇಶಿಸಲು ಸಾಧ್ಯ ? ಇದಕ್ಕೆ ಅವರೇ ಉತ್ತರ ನೀಡಬೇಕು ” ಎಂದು ಹೇಳಿದೆ. ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಜೀವನಪರ್ಯಂತ ಚುನಾವಣೆಗಳಿಂದ ನಿಷೇಧಿಸಲು ಆಗ್ರಹಿಸಿ  ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ರೀತಿ ಶಿಕ್ಷೆಗೊಳಗಾದ ವ್ಯಕ್ತಿಗಳು ಕೆಳಹಂತದ ನೌಕರಿಗೂ ಅರ್ಹತೆ ಪಡೆಯಲು ಅಸಾಧ್ಯವಾಗಿರುವಾಗ, ಆರು ವರ್ಷ ಶಿಕ್ಷೆ ಅನುಭವಿಸಿದ ನಂತರ ಹೇಗೆ ಶಾಸಕ/ಸಂಸದರಾಗಲು ಸಾಧ್ಯ ಎಂಬ ಅರ್ಜಿದಾರರ ಪ್ರಶ್ನೆ ಮೌಲಿಕವಾಗಿದ್ದು, ಇದು ನ್ಯಾಯಾಂಗದ ನಿಷ್ಕರ್ಷೆಗೊಳಗಾಗಿದೆ.

Dk shivakumar : ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚೆ ಮಾಡ್ತೀನಿ #pratidhvani #students #student #educaton

 ಭಾರತ ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ಕೂಡಲೇ ಜಾರಿಗೊಳಿಸಿದ ಜನಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್‌ 8(3)ರ ಅನ್ವಯ, ಕ್ರಿಮಿನಲ್‌ ಅಪರಾಧಕ್ಕಾಗಿ ಶಿಕ್ಷೆಗೊಳಗಾದ ಮತ್ತು ಕನಿಷ್ಠ ಎರಡು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಲಾಗುತ್ತಿತ್ತು. ಇಂತಹ ವ್ಯಕ್ತಿಗಳು ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವ ಅರ್ಹತೆ ಹೊಂದಿರುತ್ತಿರಲಿಲ್ಲ. ಇದೇ ಕಾಯ್ದೆಯ ಸೆಕ್ಷನ್‌ 8(1)ರ ಅನ್ವಯ ಗಂಭೀರ ಸ್ವರೂಪದ ಅಪರಾಧಗಳಾದ,  ಅತ್ಯಾಚಾರ, ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆಯ ಉಲ್ಲಂಘನೆ, ಅಸ್ಪೃಶ್ಯತೆಯ ಆಚರಣೆ , ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮುಂತಾದ ಕೃತ್ಯಗಳಿಗೆ ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಈ ಅವಧಿಯ ಪರಿಗಣನೆ ಇಲ್ಲದೆಯೇ ಅನರ್ಹಗೊಳಿಸಬಹುದಿತ್ತು. ಆದರೆ ಈ ಕಾಯ್ದೆಗೆ ಹಲವು ತಿದ್ದುಪಡಿಗಳನ್ನು ಮಾಡಲಾಗಿದೆ.  2013ರ ಲಿಲಿ ಥಾಮಸ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಶಿಕ್ಷೆಗೊಳಗಾಗಿರುವ ಚುನಾಯಿತ ಶಾಸಕರು ಮೇಲ್ಮನವಿ ಸಲ್ಲಿಸಿದ್ದ ಪಕ್ಷದಲ್ಲಿ , ತಮ್ಮ ಹುದ್ದೆಯಲ್ಲಿ ಮುಂದುವರೆಯಬಹುದು ಎಂದು ಹೇಳುವ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 8(4)ನ್ನು ಅನೂರ್ಜಿತಗೊಳಿಸಿತ್ತು. ಈ ತೀರ್ಪಿನ ನಂತರದಲ್ಲಿ ಶಿಕ್ಷೆಗೊಳಗಾದ ಜನಪ್ರತಿನಿಧಿಯನ್ನು ಕೂಡಲೇ ಅನರ್ಹಗೊಳಿಸುವುದು ಜಾರಿಗೆ ಬಂದಿತ್ತು.

 ಆದಾಗ್ಯೂ ಇದೇ ಕಾಯ್ದೆಯ ಸೆಕ್ಷನ್‌ 11ರ ಅನ್ವಯ, ಶಿಕ್ಷೆಗೊಳಗಾದ ವ್ಯಕ್ತಿಯ ಅನರ್ಹತೆಯನ್ನೇ ರದ್ದುಪಡಿಸುವ ಅಥವಾ ಅನರ್ಹತೆಯ ಅವಧಿಯನ್ನು ಕಡಿಮೆ ಮಾಡುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ಇದೇ ಅಧಿಕಾರವನ್ನು ಉಪಯೋಗಿಸಿಕೊಂಡು, 2019ರಲ್ಲಿ ಚುನಾವಣಾ ಆಯೋಗವು ಸಿಕ್ಕಿಂನ ಹಾಲಿ ಮುಖ್ಯಮಂತ್ರಿಯಾಗಿದ್ದ ಪ್ರೇಮ್‌ ಸಿಂಗ್‌ ತಮಾಂಗ್‌ ಅವರ ಅನರ್ಹತೆಯ ಅವಧಿಯನ್ನು ಆರು ವರ್ಷಗಳಿಂದ 13 ತಿಂಗಳುಗಳಿಗೆ ಇಳಿಸಿತ್ತು. ʼರಾಜಕೀಯ ಅಪರಾಧೀಕರಣʼವನ್ನು ನಿಗ್ರಹಿಸುವ ಹಾದಿಯಲ್ಲಿ ಸಾಂವಿಧಾನಿಕ ಸಂಸ್ಥೆಗಳ ಇಂತಹ ನಿರ್ಧಾರಗಳು ತಡೆಗೋಡೆಗಳಾಗಿ ಪರಿಣಮಿಸುತ್ತವೆ. ಇದಕ್ಕೂ ಮುನ್ನ 2013ರ ಜನ್‌ ಚೌಕಿದಾರ್‌ vs ಚುನಾವಣಾ ಆಯೋಗ ಪ್ರಕರಣದಲ್ಲಿ, ಸುಪ್ರೀಂಕೋರ್ಟ್‌ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 62(5)ರ ಸೃಜನಶೀಲ ವ್ಯಾಖ್ಯಾನವನ್ನು ಎತ್ತಿಹಿಡಿದಿತ್ತು.

 “ ಚುನಾವಣೆಗಳಲ್ಲಿ ಸ್ಪರ್ಧಿಸುವ ವ್ಯಕ್ತಿ ಮೂಲತಃ ಮತದಾರ (Elector) ಆಗಿ ಅರ್ಹತೆ ಹೊಂದಿರಬೇಕು. ಸೆಕ್ಷನ್‌ 62(5)ರ ಪ್ರಕಾರ ಜೈಲು ಶಿಕ್ಷೆಗೊಳಗಾಗಿರುವ ವ್ಯಕ್ತಿಯು ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕನ್ನೂ ಹೊಂದಿರುವುದಿಲ್ಲ. ಹೀಗಿರುವಾಗ, ಸೆರೆವಾಸದಲ್ಲಿರುವ ವಿಚಾರಣಾಧೀನ ಅಪರಾಧಿಗಳು ಮತದಾರರ ಹಕ್ಕನ್ನು ಕಳೆದುಕೊಳ್ಳುವುದರಿಂದ, ಅಂಥವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಸಹ ಇರುವುದಿಲ್ಲ  ” ಎಂದು ಸುಪ್ರೀಂಕೋರ್ಟ್‌ ಹೇಳಿತ್ತು. ಆದರೆ 2013ರಲ್ಲಿ ಸಂಸತ್ತಿನ ತಿದ್ದುಪಡಿಯ ಮೂಲಕ ಈ ನಿಯಮವನ್ನು ಬದಲಿಸಿ, ಜೈಲಿನಲ್ಲಿರುವ ವ್ಯಕ್ತಿಗಳೂ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಕೂಲ ಮಾಡಿಕೊಡಲಾಗಿತ್ತು. ಭಾರತದ ಸಂಸದೀಯ ಇತಿಹಾಸದಲ್ಲಿ, ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳ ದೃಷ್ಟಿಯಿಂದ ನೋಡಿದಾಗ, ಇಂತಹ ಪ್ರಸಂಗಗಳು ಅಪ್ರಜಾಸತ್ತಾತ್ಮಕವಾಗಿ ಕಾಣುತ್ತವೆ. ಆದರೆ ಮುಖ್ಯವಾಹಿನಿಯ ಎಲ್ಲ ರಾಜಕೀಯ ಪಕ್ಷಗಳೂ ಇದಕ್ಕೆ ಸಮ್ಮತಿಸುತ್ತವೆ !!!

 ರಾಜಕೀಯ ಅಪರಾಧೀಕರಣದ ಮರುವ್ಯಾಖ್ಯಾನ

 ಈ ನಿಟ್ಟಿನಲ್ಲಿ ರಾಜಕಾರಣವನ್ನು ಅಪರಾಧೀಕರಣದಿಂದ ಮುಕ್ತಗೊಳಿಸುವ ಪ್ರಯತ್ನಗಳು ನಡೆದಿಲ್ಲವೆಂದೂ ಹೇಳಲಾಗುವುದಿಲ್ಲ. ಆದರೆ ಇದನ್ನು ಭಂಗಗೊಳಿಸುವ ಹಿತಾಸಕ್ತಿಗಳು ಭಾರತದ             ʼ ಅಧಿಕಾರ ರಾಜಕಾರಣ ʼವನ್ನು (Power Politics) ತಮ್ಮ ಹಿಡಿತದಲ್ಲಿರಿಸಿಕೊಂಡಿವೆ. 1999ರಲ್ಲಿ ಮತ್ತು 2004ರಲ್ಲಿ ಭಾರತದ ಕಾನೂನು ಆಯೋಗವು ʼ ರಾಜಕೀಯ ಅಪರಾಧೀಕರಣ ʼ ವನ್ನು ನಿಯಂತ್ರಿಸಲು ಹಲವು ಶಿಫಾರಸುಗಳನ್ನು ಮಾಡಿತ್ತು. ಅಂದಿನ ಚುನಾವಣಾ ಆಯೋಗವೂ ಇದನ್ನು ಅನುಮೋದಿಸಿತ್ತು. ಈ ಶಿಫಾರಸುಗಳ ಅನುಸಾರ ಸಮರ್ಥ ನ್ಯಾಯಾಲಯವೊಂದು (Competent Court) , ಅಪರಾಧಿಗಳ ವಿರುದ್ಧ ಐದು ವರ್ಷಗಳಿಗೂ ಹೆಚ್ಚಿನ ಅವಧಿಯ ಶಿಕ್ಷೆಗೆ ಅರ್ಹವಾಗುವ ಆರೋಪಗಳನ್ನು ಮಾಡಿದ್ದಲ್ಲಿ, ಅಂತಹ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇರಕೂಡದು ಎಂದು ಹೇಳಲಾಗಿತ್ತು.

ಆದರೆ ಇಂತಹ ಆದರ್ಶಪ್ರಾಯ ಶಿಫಾರಸುಗಳ ಬಗ್ಗೆ ರಾಜಕೀಯ ಪಕ್ಷಗಳ ನಡುವೆ ಇಂದಿಗೂ ಒಮ್ಮತ ಕಂಡುಬರುವುದಿಲ್ಲ. ಇದರ ದುರ್ಬಳಕೆಯ ಸಾಧ್ಯತೆಗಳನ್ನೇ ನೆಪವಾಗಿಸಿಕೊಂಡು, ಎಲ್ಲ ಪಕ್ಷಗಳೂ ಈ ಶಿಫಾರಸುಗಳನ್ನು ವಿರೋಧಿಸುತ್ತವೆ. ಇಲ್ಲಿ ʼರಾಜಕೀಯ ಅಪರಾಧೀಕರಣʼ  ಮತ್ತು ʼಅಧಿಕಾರ ರಾಜಕಾರಣʼದ ನಡುವೆ ಇರುವ ಸೂಕ್ಷ್ಮ ಸಂಬಂಧಗಳು ಅನಾವರಣಗೊಳ್ಳುತ್ತವೆ. ಹೇಗಾದರೂ ಮಾಡಿ ಅಧಿಕಾರವನ್ನು ಉಳಿಸಿಕೊಳ್ಳುವ ಮಾರ್ಗೋಪಾಯಗಳನ್ನು ರಾಜಕೀಯ ಪಕ್ಷಗಳು ಅನುಸರಿಸುವ ಹಾಗೆಯೇ, ಶತಾಯಗತಾಯ ಅಧಿಕಾರ ರಾಜಕಾರಣದ ಒಂದು ಭಾಗವಾಗುವ ಮಾರ್ಗಗಳನ್ನು ಶಾಸಕರು, ಸಂಸದರೂ ಕಂಡುಕೊಳ್ಳುತ್ತಾರೆ. ಮೇಲ್ಮಟ್ಟದ ರಾಜಕಾರಣದಲ್ಲಿ (Macro level politics) ಇದನ್ನು ಸಮರ್ಥಿಸಿಕೊಳ್ಳಲು ಹಲವು ಕಾರಣಗಳು ಇರುತ್ತವೆ. ಆದರೆ ತಳಸ್ತರದ ರಾಜಕಾರಣದಲ್ಲಿ ( Micro level politics) ಶಾಸನಸಭೆಗಳಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾರರ ದೃಷ್ಟಿಯಲ್ಲಿ ರಾಜಕೀಯ ಹೇಗೆ ಕಾಣುತ್ತದೆ ?

 ಈ ಪ್ರಶ್ನೆಗೆ ಇಡೀ ರಾಜಕೀಯ ವ್ಯವಸ್ಥೆಯೇ ಗಂಭೀರವಾಗಿ ಯೋಚಿಸಿ ಉತ್ತರಿಸಬೇಕಿದೆ. ಗ್ರಾಮಸಭೆಯಿಂದ ಸಂಸತ್ತಿನವರೆಗೆ ವ್ಯಾಪಿಸಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ದ್ವೇಷ ರಾಜಕಾರಣ ಮತ್ತು ಅಪರಾಧದ ನೆಲೆಗಳು ಜನಸಾಮಾನ್ಯರನ್ನು ಭ್ರಮನಿರಸನಗೊಳಿಸುತ್ತವೆ. ಪಕ್ಷಗಳ ಸೈದ್ಧಾಂತಿಕ-ತಾತ್ವಿಕ ಭೂಮಿಕೆಗಳು ಮತ್ತು ಜಾತಿ-ಮತದ ಅಸ್ಮಿತೆಗಳು ಅದರದೇ ಆದ ಮತಬ್ಯಾಂಕುಗಳನ್ನು ಸೃಷ್ಟಿಸಿಕೊಂಡಿದ್ದರೂ, ಈ ಮತಬ್ಯಾಂಕಿನಿಂದಾಚೆಗೂ ಒಂದು ಸಮಾಜ ನಮ್ಮ ನಡುವೆ ಇನ್ನೂ ಜೀವಂತವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಪ್ರಜ್ಞಾವಂತ ಸಮಾಜದಲ್ಲೇ ಅಂಬೇಡ್ಕರ್‌, ಗಾಂಧಿ, ಲೋಹಿಯಾ, ಮಾರ್ಕ್ಸ್‌ ಮುಂತಾದ ದಾರ್ಶನಿಕರು, ಮಾರ್ಗದರ್ಶಕರಾಗಿ ಅಥವಾ ಪ್ರೇರಕ ಶಕ್ತಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಘನತೆ, ಆರ್ಥಿಕ ಸಮಾನತೆ, ಮತೀಯ ಸೌಹಾರ್ದತೆ, ಜಾತಿ ಸಮನ್ವಯತೆಗಾಗಿ ನಿರಂತರ ಹೋರಾಟದಲ್ಲಿರುವ ಈ ಸಮಾಜವು ʼ ರಾಜಕೀಯ ಅಪರಾಧೀಕರಣ ʼವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.

 ತಳಸಮಾಜದ ಆದ್ಯತೆ-ಆಯ್ಕೆಗಳು

 ತಳಸಮಾಜದ ಸಾಧಾರಣ ವ್ಯಕ್ತಿಯೊಬ್ಬ ಮೇಲ್ಪದರದ ರಾಜಕಾರಣವನ್ನು ತಲುಪುವುದು ಅಸಾಧ್ಯ ಎನ್ನುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿರುವ ಭಾರತದ ʼ ಅಧಿಕಾರ ರಾಜಕಾರಣ ʼ ನೆಲದ ವಾಸ್ತವಗಳನ್ನು ಅರಿತು ತನ್ನ ಸ್ವಾರ್ಥ ಹಿತಾಸಕ್ತಿಗಳ ಪೊರೆಯನ್ನು ಕಳಚಿಕೊಂಡು, ತತ್ವಹೀನ ರಾಜಕಾರಣದಿಂದ ಹೊರಬಂದು, ಸತ್ವಯುತ ಪ್ರಜಾಪ್ರಭುತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಸಾಗುವುದು ವರ್ತಮಾನದ ತುರ್ತು. ಇದು ವಿಕಸಿತ ಭಾರತದ ಮುಂದಿನ ತಲೆಮಾರುಗಳಿಗೆ ನಾವು ಬಿಟ್ಟು ಹೋಗಬಹುದಾದ ಒಂದು ಸುಂದರ ಕನಸು. ವರ್ತಮಾನದ ರಾಜಕೀಯ ವಾತಾವರಣದಲ್ಲಿ ಸ್ವಲ್ಪ ಮಟ್ಟಿಗಾದರೂ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಉಳಿಸಿಕೊಂಡಿರುವ ಕೆಲವೇ ರಾಜಕೀಯ ನಾಯಕರು ಈ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇರಿಸಲು ಸಾಧ್ಯವೇ ? ಅಥವಾ ಪ್ರಜಾಪ್ರಭುತ್ವವನ್ನು ಕಾಪಾಡುವ, ಸಂವಿಧಾನವನ್ನು ಗೌರವಿಸುವ ಪಕ್ಷಗಳು ತಮ್ಮ ಪಕ್ಷದ ಸಂವಿಧಾನದಲ್ಲಿ, ಪ್ರಣಾಳಿಕೆಗಳಲ್ಲಿ, ಅಪರಾಧ ಮುಕ್ತ ರಾಜಕೀಯವನ್ನು ಪ್ರಧಾನ ಗುರಿಯಾಗಿ ಘೋಷಿಸಲು ಸಾಧ್ಯವೇ ?

C M Siddaramaiah ದೇವರಾಜು ಅರಸು ದಾಖಲೆ ಮುರಿಯಬೇಕು ಅಂತಿದ್ದಾರಂತೆ..! DK Suresh ಹೇಳಿದ್ದೇನು? #pratidhvani

 ಈ ಪ್ರಶ್ನೆಗಳಿಗೆ ಉತ್ತರವನ್ನು ನಿರೀಕ್ಷಿಸುತ್ತಲೇ, ಪ್ರಗತಿಪರ ಎಂದೆನಿಸಿಕೊಂಡು ಸಾಮಾಜಿಕ-ಸಾಂಸ್ಕೃತಿಕ ವಲಯದಲ್ಲಿ ತಳಸಮಾಜದ ಜನತೆಯನ್ನು ಪ್ರತಿನಿಧಿಸುವ ಪಕ್ಷ-ಗುಂಪು-ಸಂಘಟನೆಗಳು ಇನ್ನೂ ಹೆಚ್ಚಿನ ಕ್ರಿಯಾಶೀಲತೆಯೊಂದಿಗೆ ಕಾರ್ಯೊನ್ಮುಖವಾಗಬೇಕಿದೆ. ಇದು ಸೆಮಿನಾರ್‌                     ಹಾಲ್‌ಗಳಲ್ಲಿ, ಉಪನ್ಯಾಸಗಳ ಮೂಲಕ ಸಾಧಿಸಲಾಗದ ಒಂದು ಕೆಲಸ. ನಾವು ಭಾರತದ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಬಹುಸಂಖ್ಯಾತ ಜನತೆಯನ್ನು ಭೌತಿಕವಾಗಿ ತಲುಪಬೇಕಿದೆ. ಬೌದ್ಧಿಕವಾಗಿ ಆ ಸಮಾಜವನ್ನು ಒಳಗೊಳ್ಳಬೇಕಿದೆ. ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳೊಂದಿಗೆ, ಸ್ವಾತಂತ್ರ್ಯದ ಪೂರ್ವಸೂರಿಗಳು ಬಿಟ್ಟುಹೋಗಿರುವ ಹಾದಿ ಇನ್ನೂ ಉಸಿರಾಡುತ್ತಿದೆ. ಈ ಹಾದಿಯಲ್ಲಿ ಕ್ರಮಿಸುವ ಆಲೋಚನೆ ಮಾಡಬೇಕಿದೆ. ಆಗ ಇತಿಹಾಸ ನಮ್ಮನ್ನು ಸ್ಮರಿಸುತ್ತದೆ ಇಲ್ಲವಾದರೆ ವಿಸ್ಮೃತಿಯ ಕೂಪಕ್ಕೆ ಜಾರಿಬಿಡುತ್ತೇವೆ. ಹೌದಲ್ಲವೇ ?

 (ಈ ಲೇಖನದ ಪ್ರೇರಣೆ ಮತ್ತು ಮಾಹಿತಿ ದತ್ತಾಂಶಗಳಿಗೆ ಆಧಾರ ದ ಹಿಂದೂ ಪತ್ರಿಕೆ , 14 ಫೆಬ್ರವರಿ 2025ರಂದು ಪ್ರಕಟವಾದ ಲೇಖನ : Should Convicted persons Contest Elections ? ಆರ್‌ ರಂಗರಾಜನ್‌ )

Tags: Democracydemocracy in indiaIndiaIndia Politicsindia's political landscapeindian democracyindian democracy and electionsindian democracy explainedindian democracy in actionindian parliamentindian political systemindian political womenIndian Politicsindian politics 2024indian politics and societypolitical system in indiapolitical system of indiapolitical system of india in hindiPoliticspolitics in india
Previous Post

ದೇಶದಲ್ಲಿ ಸಂವಿಧಾನ ಇಲ್ವಾ? ಕೋರ್ಟ್ ‌ಇಲ್ವಾ? ಇದೇನು ಪಾಕಿಸ್ತಾನನಾ..?! – ಮುತಾಲಿಕ್ ಕಿಡಿ 

Next Post

ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರವೇ ಅಡ್ಡಿ; ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿ

Related Posts

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
0

ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲೆಗಳಲ್ಲಿ ಹೊಸ ಬೆಂಗಳೂರು ನಿರ್ಮಾಣ: ಡಿಸಿಎಂ ಡಿ.ಕೆ. ಶಿವಕುಮಾರ್ ದೇವನಹಳ್ಳಿಗೆ ಕಾವೇರಿ, ಎತ್ತಿನಹೊಳೆ ನೀರು *ಯೋಜನಾ ಪ್ರಾಧಿಕಾರದಿಂದ 30-40 ಮೀಟರ್ ರಸ್ತೆ...

Read moreDetails
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ

December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

December 13, 2025
Next Post

ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರವೇ ಅಡ್ಡಿ; ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿ

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada