
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದೆ. ರಾಜ್ಯದ ಜನರು ಭರ್ಜರಿ ಬಹುಮತ ಕೊಟ್ಟು ಅಧಿಕಾರ ಹಿಡಿಯುವಂತೆ ಮಾಡಿದ್ದಾರೆ. ಇನ್ನು ರಾಜ್ಯ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಸಂಸದರಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾಗಿರುವ ಕುಮಾರಸ್ವಾಮಿ ಕೂಡ ಉತ್ತಮ ಅಧಿಕಾರದಲ್ಲಿ ಇದ್ದಾರೆ. ಕಾಂಗ್ರೆಸ್ ಸರ್ಕಾರ ಮನಸ್ಸು ಮಾಡಿದರೆ ಕೇಂದ್ರದಿಂದ ಹಲವಾರು ಯೋಜನೆಗಳಿಗೆ ಹಸಿರು ನಿಶಾನೆ ಪಡೆಯುವುದು ದೊಡ್ಡ ವಿಚಾರವೇನಲ್ಲ. ಮೋದಿ ಮುಂದೆ ಬಿಜೆಪಿ ನಾಯಕರು ಮಾತನಾಡದೆ ಇರಬಹುದು. ಆದರೆ ಕುಮಾರಸ್ವಾಮಿ ಮೋದಿ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬೇಕಾದ ಕೆಲಸ ಕಾರ್ಯಗಳನ್ನು ನೇರವಾಗಿ ಭೇಟಿಯಾಗಿ ಮಾಡಿಸಲು ಶಕ್ತರಾಗಿದ್ದಾರೆ. ಅದೇ ರೀತಿ ಕೇಂದ್ರದಿಂದ ರಾಜ್ಯಕ್ಕೆ ತರಬಹುದಾದ ಯೋಜನೆಗಳನ್ನು ಕರುನಾಡಿಗೆ ತಂದು ಬೀಗುವುದು ಕುಮಾರಸ್ವಾಮಿಗೂ ಕಷ್ಟವೇನಲ್ಲ. ಆದರೆ ಇಬ್ಬರಿಗೂ ಮೀಸೆ ಮಣ್ಣಾಗುವ ಭೀತಿ.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಒಮ್ಮೆ ಮಾತ್ರ ದೆಹಲಿಯಲ್ಲಿ ಸಚಿವರು, ಸಂಸದರ ಸಭೆ ಕರೆದಿದ್ದ ಸಿಎಂ Siddaramaiah ಹಾಗು ಡಿಸಿಎಂ DK Shivakumar , ಆ ಬಳಿಕ ಮತ್ತೆಂದೂ ಸಭೆ ಮಾಡಿ ಕೇಂದ್ರ ಸರ್ಕಾರದಿಂದ ಕೆಲಸಗಳನ್ನು ಮಾಡಿಸಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ. ಅದೂ ಅಲ್ಲದೇ ಮೊದಲ ಸಭೆಯಲ್ಲೇ ಕುಮಾರಸ್ವಾಮಿಯನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಅನ್ನೋ ಮಾತುಗಳೂ ಕೇಳಿ ಬಂದಿದ್ದವು. ಸಂಬಂಧ ಕುದಿರಿಸಿಕೊಳ್ಳಲು ದೆಹಲಿಯಲ್ಲಿ ಕರೆದಿದ್ದ ಸಭೆ, ಮತ್ತಷ್ಟು ಸಂಬಂಧ ಹಳಸುವಂತೆ ಮಾಡಿದ್ದೂ ಸುಳ್ಳಲ್ಲ. ಇದೀಗ ನಾನೊಂದು ತೀರ.. ನೀನೊಂದು ತೀರ..

ನನಗೆ ಅಧಿಕಾರದ ವ್ಯಾಮೋಹ ಇಲ್ಲ, ನಾನು ಬದುಕಿರುವ ತನಕ ಜನರಿಗಾಗಿ ಕೆಲಸ ಮಾಡಬೇಕು, ಜನರ ಮನಸ್ಸಿನಲ್ಲಿ ಉಳಿಯುವಂತೆ ನಾನು ಏನನ್ನಾದರೂ ಸಾಧಿಸಬೇಕು ಎಂದುಆಸ್ಪತ್ರೆಯಿಂದ ಹೊರ ಬಂದ ಬಳಿಕ ಕುಮಾರಸ್ವಾಮಿ ಕನಸು ಬಿತ್ತಿದ್ದರು. ಆದರೆ ಆ ಮಾತನ್ನು ಈಗ H D Kumaraswamy ಮರೆತಿರುವಂತೆ ಕಾಣ್ತಿದೆ. ಆದರೆ ಕೇಂದ್ರ ಸರ್ಕಾರದ ಮಂತ್ರಿ ಆಗಿರುವ ಜನನಾಯಕ ಕುಮಾರಸ್ವಾಮಿ ಕೆಲಸ ಮಾಡ್ತಿದ್ದಾರೆ. ಆದರೆ ಕರ್ನಾಟಕಕ್ಕಲ್ಲ, ಪಕ್ಕದ ಆಂದ್ರಪ್ರದೇಶಕ್ಕೆ.. ಅಲ್ಲಿ ಅವರಿಗೂ ಗೌರವ ಸಿಗ್ತಿದೆ, ಸರ್ಕಾರವೂ ಸ್ಪಂದಿಸ್ತಿದೆ ಅನ್ನೋದು ಕೂಡ ಸತ್ಯ. ಮೊನ್ನೆಯಷ್ಟೇ ಸಿಎಂ ಚಂದ್ರಬಾಬು ನಾಯ್ಡು ಪುತ್ರ ದೆಹಲಿಯಲ್ಲಿ ಭೇಟಿ ಮಾಡಿ ಸನ್ಮಾನ ಮಾಡಿದ್ದರು.

ನಮಗೂ ಯಾವುದಾದರೂ ದೊಡ್ಡದೊಂದು ಉದ್ಯಮ ತರುವ ನಿರೀಕ್ಷೆಯಲ್ಲಿ ಮಂಡ್ಯ ಜನರಿದ್ದಾರೆ. ಮಂಡ್ಯ ಅಷ್ಟೇ ಅಲ್ಲ, ಇಡೀ ಕರ್ನಾಟಕದ ಯಾವುದೇ ಭಾಗಕ್ಕಾದರೂ ಒಂದು ಬೃಹತ್ ಉದ್ಯಮ ತರುವ ಕೆಲಸವನ್ನು ಕುಮಾರಸ್ವಾಮಿ ಮಾಡಬೇಕಿದೆ. ಕಾಂಗ್ರೆಸ್ ಸರ್ಕಾರ ಸ್ಪಂದಿಸ್ತಿಲ್ಲ ಅನ್ನೋದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಆದರೆ ಕೇಂದ್ರ ಸರ್ಕಾದ ಮುಂದೆ ನಾವು ಕೈ ಚಾಚಬೇಕಾ..? ಅವರ ಮನೆ ಮುಂದೆ ನಿಲ್ಲಬೇಕಾ..? ಎಂದು ಹಳೇ ಮಿತ್ರರು ಟಾಂಗ್ ಕೊಟ್ಟಿದ್ದಾರೆ. ಆದರೆ ಸಿಎಂ, ಡಿಸಿಎಂ ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಕಾಂಗ್ರೆಸ್ ಹಾಗು ಜೆಡಿಎಸ್ ನಡುವೆ ಹೇಳಿಕೊಳ್ಳುವಂತಹ ಸೈಂದಾಂತಿಕ ಭಿನ್ನಾಭಿಪ್ರಾಯ ಇಲ್ಲ. ಆದರೆ ಬಿಜೆಪಿ ಜೊತೆಗೆ ಹೋಗಿದ್ದಾರೆ ಅನ್ನೋ ಕಾರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸಿಡಿಯುತ್ತಿದೆ. ಆದರೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇಬ್ಬರೂ ಒಂದೊಂದು ಹೆಜ್ಜೆ ಮುಂದಿಟ್ಟರೆ ರಾಜ್ಯದ ಜನತೆಗೆ ಅನುಕೂಲ ಆಗುತ್ತದೆ ಅನ್ನೋದನ್ನು ಇಬ್ಬರೂ ಮರೆತಿದ್ದಾರೆ. ನಾನು ಮಾತನಾಡುವುದು ಏನಿದೆ..? ಅನ್ನೋದು ಕುಮಾರಸ್ವಾಮಿ ವರಸೆ.. ನಾವು ಯಾಕೆ ಮಾತನಾಡಿಸಬೇಕು ಅನ್ನೋದು ಕಾಂಗ್ರೆಸ್ ವರಸೆ. ಇಬ್ಬರ ಹಗ್ಗಾಜಗ್ಗಾಟದಲ್ಲಿ ಅಭಿವೃದ್ಧಿ ಕುಂಠಿತ ಆಗುತ್ತಿದೆ.

ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ ಅನ್ನೋ ಮಾತಿದೆ. ಈ ಮಾತಿಗೆ ಅನ್ವರ್ಥ ಎನ್ನುವಂತೆ ಈಗಾಗಲೇ ಇಬ್ಬರೂ ಜೊತೆಗೂಡಿ ದೋಸ್ತಿ ಸರ್ಕಾರ ಮಾಡಿದ್ದೂ ಇದೆ. ಸದನದಲ್ಲಿ ಕೈ ಕೈ ಹಿಡಿದು ಜೋಡೆತ್ತುಗಳು ಎಂದು ಹೇಳಿಕೊಂಡಿದ್ದನ್ನೂ ರಾಜ್ಯದ ಜನ ನೋಡಿದ್ದಾರೆ. ಆದರೆ ಈಗ ಜನರು ಸಂಪೂರ್ಣ ಬಹುಮತ ಕೊಟ್ಟಿರುವ ಕಾರಣಕ್ಕೆ ಕಾಂಗ್ರೆಸ್ ಕೂಡ ಮೀಸೆ ತಿರುವುತ್ತಿರುವುದು ಸರಿಯಲ್ಲ. ಗ್ರಹಚಾರ ಕೆಟ್ಟರೆ ಮುಂದಿನ ಬಾರಿಯೇ ಜೆಡಿಎಸ್ ಜೊತೆಗೆ ಹೋಗುವ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ. ಬಿಜೆಪಿ ಜೊತೆಗಿನ ಮೈತ್ರಿ ಏನು ಶಾಶ್ವತವೇ..? ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶದಿಂದ ಕೈ ಜೋಡಿಸಿದ್ದಾರೆ. ಹೀಗಾಗಿ ದ್ವೇಷ ಸಾಧಿಸುವುದರಿಂದ ಏನೂ ಪ್ರಯೋಜನ ಇಲ್ಲ.. ಪ್ರೀತಿಯಿಂದ ರಾಜ್ಯದ ಕೆಲಸಗಳನ್ನು ಮಾಡಿಸಿಕೊಳ್ಳುವುದು ಉತ್ತಮ.

ಕಾವೇರಿ, ಮಹದಾಯಿ, ಮೇಕೆದಾಟು ಸೇರಿದಂತೆ ಸಾಕಷ್ಟು ವಿಚಾರಗಳು ಕೇಂದ್ರದ ಮಧ್ಯಸ್ಥಿಕೆಯಲ್ಲೇ ಆಗಬೇಕಿರುವ ಕೆಲಸಗಳು. ರಾಜ್ಯ ಸರ್ಕಾರ ಇಲ್ಲಿ ಕುಳಿತು ವಾಗ್ದಾಳಿ ಮಾಡಿದಾಕ್ಷಣ ಯಾರೂ ಕೂಡ ಓಡೋಡಿ ಬಂದು ಕೆಲಸ ಮಾಡುವುದಿಲ್ಲ. ನಾವು ಅವರ ಮನೆ ಬಾಗಿಲಿಗೆ ಹೋಗಬೇಕಾ..? ಎನ್ನುವ ಪ್ರಶ್ನೆ ಕಾರ್ಯಕರ್ತರ ಸಭೆಯಲ್ಲಿ ಕೇಳುವುದಕ್ಕೆ.. ಚಪ್ಪಾಳೆ ತಟ್ಟಿಸಿಕೊಳ್ಳುವುದಕ್ಕೆ ಚಂದ.. ಆದರೆ ನಮ್ಮ ಕೆಲಸ ಆಗಬೇಕಿದ್ದಾಗ ನಾವೇ ಹೋಗಬೇಕು ಅನ್ನೋದೂ ಕೂಡ ಅಷ್ಟೇ ಸತ್ಯ.
ನಮ್ಮ ಮನೆಯಲ್ಲಿ ಮದುವೆ ಮಾಡಿದಾಗ, ಅಣ್ಣ, ತಮ್ಮ, ಅಕ್ಕ, ತಂಗಿ ಮಾತನಾಡದೆ ಇದ್ದರೂ ಹೋಗಿ ಮಾತನಾಡಿಸಿ ಒಂದು ಕಪ್ ಕಾಫಿ ಕುಡಿದು ಆಹ್ವಾನ ಕೊಡುವುದಿಲ್ಲವೇ..? ಅದೇ ರೀತಿ ಎಲ್ಲಾ ದ್ವೇಷ ಮರೆತು ಮದುವೆಯಲ್ಲಿ ಬಂದು ಭಾಗಿಯಾಗುವುದಿಲ್ಲವೇ..? ಅದೇ ರೀತಿ ರಾಜಕಾರಣ. ಚುನಾವಣೆ ಮುಗಿಯುವ ತನಕ ಶತ್ರುತ್ವ.. ಚುನಾವಣೆ ಮುಗಿದ ಬಳಿಕ ಅಭಿವೃದ್ಧಿಗಾಗಿ ಮಿತ್ರತ್ವ.. ಈ ಪಾಲಿಸಿಯನ್ನು ಎಲ್ಲರೂ ಪಾಲಿಸಬೇಕಿದೆ. ಇಲ್ಲದಿದ್ರೆ ಬದುಕಿದ್ದು ಏನು ಪ್ರಯೋಜನ..? ಎಲ್ಲರೂ ಒಂದಲ್ಲ ಒಂದು ದಿನ ಸಮಯ ಬಂದಾಗ ಗಂಟು ಮೂಟೆ ಕಟ್ಟಲೇಬೇಕು. ಅಲ್ಲವೇ..?

ಮಂಜೇಗೌಡ