![](https://pratidhvani.com/wp-content/uploads/2025/02/WhatsApp-Image-2022-10-17-at-21.15-13-1024x565.jpg)
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಿಯೇ ಸಿದ್ಧ ಎಂದು ದೆಹಲಿಗೆ ತೆರಳಿದ್ದ ಬಂಡಾಯ ನಾಯಕರು ಬರಿಗೈಲಿ ವಾಪಸ್ ಆಗಿದ್ದಾರೆ. ಆದರೆ ದೆಹಲಿಯಿಂದ ವಾಪಾಸ್ ಬಂದ ರೆಬಲ್ಸ್ ಪಡೆ ಹಲವು ಲೆಕ್ಕಾಚಾರ ಹಾಕಿದೆ. ಫೆಬ್ರವರಿ 9ರಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಾತ್ರೆ ನಡೆಯಲಿದೆ. ಜಾತ್ರೆ ಮುಗಿಸಿ ಮತ್ತೆ ರೆಬೆಲ್ಸ್ ಟೀಂ ದೆಹಲಿಗೆ ಪ್ರಯಾಣ ಬೆಳೆಸಲಿದೆ ಎನ್ನಲಾಗ್ತಿದೆ. ಎಲ್ಲಾ ಅತೃಪ್ತ ನಾಯಕರೂ ಒಟ್ಟಾಗಿ ತೆರಳಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಫೆಬ್ರವರಿ 10ರಂದು ಕೇಂದ್ರ ಸಚಿವ ಸೋಮಣ್ಣ ನಿವಾಸದಲ್ಲಿ ಪೂಜೆಯ ನೆಪದಲ್ಲಿ ಹೋಗಲಿರುವ ರೆಬೆಲ್ಸ್ ಭಾಗಿಯಾಗಲಿದ್ದಾರೆ. ಫೆಬ್ರವರಿ 12ರವರೆಗೆ ದೆಹಲಿಯಲ್ಲೇ ಇರಲಿದ್ದು, ವರಿಷ್ಠರ ಜೊತೆ ಇನ್ನೊಂದು ಸುತ್ತಿನ ಮಾತುಕತೆಗೆ ಸಜ್ಜಾಗಿದ್ದಾರೆ.
ರೆಬೆಲ್ ನಾಯಕರ ಮಾತಿಗೆ ಹೈಕಮಾಂಡ್ನಲ್ಲಿ ಯಾವುದೇ ಸಾಥ್ ಸಿಕ್ಕಿಲ್ಲ ಅನ್ನೋದು ಗೊತ್ತಾಗ್ತಿದ್ದಂತೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಂಡಾಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಜಯೇಂದ್ರ, ಯಡಿಯೂರಪ್ಪ ಅವರ ತೇಜೋವಧೆ ಮಾಡ್ತಿದ್ದಾರೆ.. ರೆಬೆಲ್ಸ್ ಟೀಂಗೆ ಯಾರು ಬುದ್ಧಿ ಹೇಳ್ತಿಲ್ಲ. ಪಕ್ಷದ ಬಗ್ಗೆ ಹಿರಿಯರ ಬಗ್ಗೆ ಎಷ್ಟೇ ಲೂಸ್ ಟಾಕ್ ಮಾತಾಡಿದ್ರೂ ಸುಮ್ಮನಿದ್ದಾರೆ ಎಂದು ಪರೋಕ್ಷವಾಗಿ ಹೈಕಮಾಂಡ್ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಪಕ್ಷದಲ್ಲಿನ ಗಲಾಟೆ ಕಾರ್ಯಕರ್ತರನ್ನು ಘಾಸಿ ಮಾಡ್ತಿದೆ. ದಿನಕ್ಕೊಂದು ಹೇಳಿಕೆ ನೀಡೋದು ಗೌರವ ತರಲ್ಲ ಎಂದು ರೆಬೆಲ್ಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
![](https://pratidhvani.com/wp-content/uploads/2025/02/BJP-Rebel-Leaders-Meeting-In-Kumar-Bangarappas-Residence.webp)
ವಿಜಯೇಂದ್ರಗೆ ಅನುಭವದ ಕೊರತೆ ಎಂದಿದ್ದ ಮಾಜಿ ಸಚಿವ ಶ್ರೀರಾಮುಲು ಹೇಳಿಕೆಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದ್ದಾರೆ. ಅವರಷ್ಟು ಅನುಭವ ನನಗೆ ಇಲ್ಲ ಅನ್ನೋದು ಸತ್ಯ.. ಆದ್ರೆ ಒಬ್ಬ ಕಾರ್ಯಕರ್ತನಾಗಿ ನನಗೆ ಅನುಭವ ಇದೆ. ಲಕ್ಷಾಂತರ ಕಾರ್ಯಕರ್ತರ ಬೆಂಬಲ ನನಗೆ ಇದೆ.. ಕಾರ್ಯಕರ್ತರ ಅಭಿಪ್ರಾಯದಂತೆಯೇ ರಾಜ್ಯಾಧ್ಯಕ್ಷ ಪಟ್ಟ ಸಿಗುತ್ತದೆ ಎಂದು ಶ್ರೀರಾಮುಲು ಹೇಳಿಕೆಗೆ ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ. ಹಲವು ನಾಯಕರು ಯಡಿಯೂರಪ್ಪ ಜೊತೆಗೆ ಅಧಿಕಾರ ಮಾಡಿದ್ದಾರೆ, ಪಕ್ಷ ಕಟ್ಟಿದ್ದಾರೆ. ಅವರಷ್ಟು ಅನುಭವ ನನಗೆ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ.
![](https://pratidhvani.com/wp-content/uploads/2025/02/BJP_Karnataka_1.max-1280x720-1-1024x576.jpg)
ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಬಡಿದಾಟ ವಿಚಾರದ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಪಕ್ಷದಲ್ಲಿ ಗುಂಪುಗಾರಿಕೆ, ಎರಡೂ ಬಣ ಮಾಡಿರೋದು ಒಳ್ಳೆಯದಲ್ಲ. ನಾನು ಪಾರ್ಟಿಗೆ ಬಂದು 50 ವರ್ಷ ಆಗಿದೆ. 18 ವರ್ಷ ವಯಸ್ಸಿನಲ್ಲೇ ನಾನು ಬಿಜೆಪಿಗೆ ಸೇರಿದ್ದೆ. ಅಲ್ಲಿಂದ ಇಲ್ಲಿಯವರೆಗೂ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈ ರೀತಿ ಗುಂಪುಗಾರಿಗೆ ಮಾಡಿದ್ರೆ ಮುಂದೆ ಪಕ್ಷಕ್ಕೆ ಹಾಗು ರಾಜ್ಯದ ಜನರಿಗೆ ಒಳ್ಳೆಯದಲ್ಲ. ಎಲ್ಲರೂ ಒಟ್ಟಾಗಿ ಪಾರ್ಟಿಗಾಗಿ ಕೆಲಸ ಮಾಡ್ಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗಬೇಕು ಅಂತ ಹೈಕಮಾಂಡ್ ನಾಯಕರು ತೀರ್ಮಾನಿಸ್ತಾರೆ ಎಂದಿದ್ದಾರೆ.
![](https://pratidhvani.com/wp-content/uploads/2025/02/117970432.webp)