• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸತ್ಯೋತ್ತರ ಯುಗದಲ್ಲಿ ʼ ಗಾಂಧಿ ʼ ಎಂಬ ರೂಪಕ —-ನಾ ದಿವಾಕರ —

ನಾ ದಿವಾಕರ by ನಾ ದಿವಾಕರ
January 29, 2025
in ದೇಶ, ರಾಜಕೀಯ, ವಿಶೇಷ, ಶೋಧ
0
ಸತ್ಯೋತ್ತರ ಯುಗದಲ್ಲಿ ʼ ಗಾಂಧಿ ʼ ಎಂಬ ರೂಪಕ                                                  —-ನಾ ದಿವಾಕರ —
Share on WhatsAppShare on FacebookShare on Telegram

ADVERTISEMENT

ಮತಾಂಧತೆಗೆ ಬಲಿಯಾದ ಗಾಂಧಿ ವರ್ತಮಾನದಲ್ಲಿ ಸೌಹಾರ್ದತೆಯ ಪ್ರತಿಮೆಯಾಗಿ ಕಾಣಬೇಕಿದೆ

21ನೇ ಶತಮಾನದ ಡಿಜಿಟಲ್‌ ಜಗತ್ತು ಜಾಗತಿಕ ಬೌದ್ಧಿಕ ಸಂಕಥನಗಳಲ್ಲಿ ಸತ್ಯೋತ್ತರ ಯುಗ ಎಂದೇ ಗುರುತಿಸಲ್ಪಟ್ಟಿದೆ. ಅಂದರೆ ಸತ್ಯದ ಯುಗವನ್ನು ದಾಟಿದ್ದೇವೆ ಎಂದೇನೂ ಅರ್ಥೈಸಬೇಕಿಲ್ಲ. 20ನೇ ಶತಮಾನವನ್ನು ದಾಟುವವರೆಗೂ ಜಗತ್ತಿನ, ವಿಶೇಷವಾಗಿ ಭಾರತದ ಸಾಮಾಜಿಕ ಚರ್ಚೆಗಳಲ್ಲಿ, ಬೌದ್ಧಿಕ ಸಂವಾದ ಮತ್ತು ಸಂಕಥನಗಳಲ್ಲಿ ಸ್ವಲ್ಪಮಟ್ಟಿಗಾದರೂ ಕಾಣಬಹುದಾಗಿದ್ದ ಸತ್ಯದ ಸುಳಿಗಳು ಕಳೆದ ಎರಡು ದಶಕಗಳಲ್ಲಿ ಮರೆಯಾಗಿ ಹೋಗಿವೆ. ಈಗ ಭಾರತ ಸುಳ್ಳುಗಳ ನಡುವೆ ಬದುಕುತ್ತಿದೆ. ಪೌರಾಣಿಕ ಮಿಥ್ಯೆಗಳನ್ನು ಸತ್ಯ ಎನಿಸಲಾಗುತ್ತಿದೆ. ಕಣ್ಣೆದುರಿನ ವಾಸ್ತವಗಳನ್ನು ಸುಳ್ಳು ಎನ್ನಲಾಗುತ್ತಿದೆ. ಡಿಜಿಟಲ್‌ ಯುಗದ ಆಧುನಿಕ ಅವಿಷ್ಕಾರಗಳ ಪ್ರಮುಖ ಫಲಾನುಭವಿಯಾಗಿ ಭಾರತದ ʼ ವಾಟ್ಸಾಪ್‌ ವಿಶ್ವವಿದ್ಯಾಲಯ ʼ ಈ ಮಿಥ್ಯಾಲೋಕದ ಯಜಮಾನಿಕೆ ವಹಿಸಿಕೊಂಡಿರುವುದು, ಭಾರತದ ಯುವ ಸಮೂಹವನ್ನು ಭ್ರಮಾಧೀನಗೊಳಿಸುತ್ತಿದೆ.

ಈ ಭ್ರಮಾಲೋಕದ ಕಲುಷಿತ ವಾತಾವರಣದಲ್ಲೇ ಭಾರತ ಮತ್ತೊಂದು ಹುತಾತ್ಮ ದಿನವನ್ನು ಆಚರಿಸುತ್ತಿದೆ. ಸತ್ಯದ ಹಾದಿಯಲ್ಲೇ ನಡೆದು ಅಂತಿಮ ಕ್ಷಣದವರೆಗೂ ಸತ್ಯವನ್ನೇ ಪ್ರಮಾಣೀಕರಿಸಿ ಅಹಿಂಸಾತ್ಮಕ ಸೌಹಾರ್ದತೆಗಾಗಿ ಬದುಕಿದ ಮಹಾತ್ಮ ಗಾಂಧಿ, ದ್ವೇಷಾಸೂಯೆ ಮತ್ತು ಹಿಂಸೆಯ ರಾಜಕಾರಣಕ್ಕೆ ಬಲಿಯಾಗಿದ್ದು ಸಮಕಾಲೀನ ಭಾರತದ ದುರಂತಗಳಲ್ಲೊಂದು. ಕಳೆದ 76 ವರ್ಷಗಳಲ್ಲಿ ಭಾರತ ಗಾಂಧಿ ಹತ್ಯೆಗೀಡಾದ ಈ ದಿನವನ್ನು ನೆನಪಿಸಿಕೊಳ್ಳುತ್ತಲೇ ಬಂದಿದೆ. ಆಚರಣಾತ್ಮಕವಾಗಿ ಶ್ರದ್ದಾಭಕ್ತಿಗಳಿಂದ ಮಹಾತ್ಮನಿಗೆ ಗೌರವಯುತ ಶ್ರದ್ಧಾಂಜಲಿ ಅರ್ಪಿಸುತ್ತಾ ಬಂದಿರುವ ಭಾರತದ ಅಧಿಕಾರ ರಾಜಕಾರಣ ಮತ್ತು ಅದನ್ನು ನಿರ್ದೇಶಿಸುವ ಸಾಮಾಜಿಕ-ಸಾಂಸ್ಕೃತಿಕ ಪರಿಸರಗಳು ಗಾಂಧಿ ಪ್ರಣೀತ ಮೌಲ್ಯಗಳನ್ನು, ತಾತ್ವಿಕ ನೆಲೆಗಳನ್ನು ನಿರಾಕರಿಸುತ್ತಾ , ಅಲ್ಲಗಳೆಯುತ್ತಾ, ಕಡೆಗಣಿಸುತ್ತಾ ಸತ್ಯೋತ್ತರ ಯುಗವನ್ನು ತಲುಪಿದೆ.

Dr K Sudhakar: ವಿಜಯೇಂದ್ರ ಬಾಯಿಗೆ ಬಂದಂತೆ ಬೈದ ಸಂಸದ ಸುಧಾಕರ್..! #byvijayendra #bjp #sriramulu

ಹತ್ಯೆಗೀಡಾದ ತತ್ವಾದರ್ಶಗಳು

ಗಾಂಧಿ ಯಾರಿಂದ ಹತ್ಯೆಗೀಡಾದರು ಎಂಬ ಪ್ರಶ್ನೆಗೆ ವ್ಯಕ್ತಿಗತ ನೆಲೆಯಲ್ಲಿ ಉತ್ತರ ಶೋಧಿಸಿದಾಗ ಹಂತಕ ಗೋಡ್ಸೆ ಕಾಣುತ್ತಾನೆ. ಆದರೆ ಈ ಸತ್ಯದ ಪ್ರವಾದಿಯ ಹತ್ಯೆಯಾಗಿದ್ದು ಒಂದು ಸುಪ್ತ ವ್ಯವಸ್ಥೆಯ ಗುಪ್ತಗಾಮಿನಿಯಿಂದ ಎಂಬ ವಾಸ್ತವವನ್ನು ಒಪ್ಪಲೇಬೇಕಿದೆ. ಏಕೆಂದರೆ ಆ ಗುಪ್ತಗಾಮಿನಿ ಭಾರತೀಯ ಸಮಾಜದಲ್ಲಿ, ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ಅಂತರ್ಗಾಮಿಯ ಹಾಗೆ ಚಲನಶೀಲತೆಯನ್ನು ಉಳಿಸಿಕೊಂಡೇ ಬಂದಿದೆ. ಏಳು ದಶಕಗಳ ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯಲ್ಲಿ ಭಾರತ ತನ್ನ ಪ್ರಾಚೀನ ಹಿಂಸಾತ್ಮಕ ಮನಸ್ಥಿತಿ ಮತ್ತು ದ್ವೇಷಾಸೂಯೆಗಳ ನೆರಳಿನಿಂದ ಸಂಪೂರ್ಣವಾಗಿ ಹೊರಬರಬೇಕಿತ್ತು. ಆಧುನಿಕ ನಾಗರಿಕತೆ ಮತ್ತು ಶೈಕ್ಷಣಿಕ ವೈಚಾರಿಕತೆ ಭಾರತೀಯ ಸಮಾಜವನ್ನು ಈ ವೇಳೆಗೆ ಅಮಾನುಷತೆಯಿಂದ, ಅಪ್ರಾಮಾಣಿಕತೆಯಿಂದ ಮುಕ್ತಗೊಳಿಸಬೇಕಿತ್ತು. ಹಾಗಾಗಿದ್ದರೆ ಜನವರಿ 30ರಂದು ನಾವು ಸತ್ಯದ ಪ್ರವಾದಿಗೆ ಸಲ್ಲಿಸುವ ಭಾಷ್ಪಾಂಜಲಿಯೂ ಸಾರ್ಥಕವಾಗುತ್ತಿತ್ತು.

ಆದರೆ ವರ್ತಮಾನದ ಭಾರತದಲ್ಲಿ ಹಿಂಸೆ, ದ್ವೇಷ, ಕ್ರೌರ್ಯ ಹಾಗೂ ಪರಮತ ಅಸಹಿಷ್ಣುತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಅವಗುಣಗಳನ್ನು ವೈಭವೀಕರಿಸುವ ಒಂದು ರಾಜಕೀಯ ಶಕ್ತಿ ಸಮಾಜದ ತಳಪಾಯವನ್ನೂ ತಲುಪುತ್ತಿರುವಂತೆಯೇ, ಸಾಂಸ್ಕೃತಿಕವಾಗಿ ಗಾಂಧಿ ಹತ್ಯೆಯನ್ನೂ ಸಮರ್ಥಿಸುವ ಮೂಲಕ ಹಿಂಸೆಯನ್ನು ಸಾಮಾನ್ಯೀಕರಿಸುವ ಪ್ರವೃತ್ತಿ ಸಮಾಜದ ಎಲ್ಲ ಸ್ತರಗಳಲ್ಲೂ ಆವರಿಸುತ್ತಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸೌಹಾರ್ದತೆ ಮತ್ತು ಅಹಿಂಸೆಯ ಎರಡು ಧೃವಗಳಾಗಿ ಕಾಣುವ ಡಾ. ಬಿ. ಆರ್.‌ ಅಂಬೇಡ್ಕರ್‌ ಹಾಗೂ ಮಹಾತ್ಮ ಗಾಂಧಿ ಸಾಮಾಜಿಕ ಪಿರಮಿಡ್ಡಿನ ತಳಸ್ತರದ ಜನಸಮುದಾಯಗಳನ್ನು ತಲುಪುವ ಮುನ್ನವೇ ಡಿಜಿಟಲ್‌ ಯುಗದ ಸಂವಹನ ಮಾಧ್ಯಮಗಳು ʼ ವಾಟ್ಸಾಪ್‌ ವಿಶ್ವವಿದ್ಯಾಲಯದ ʼ ಮೂಲಕ ಅಲ್ಲಿಗೆ ತಲುಪಿರುತ್ತವೆ.

ಇಲ್ಲಿ ಉತ್ಪತ್ತಿಯಾಗುವ ಸುಳ್ಳುಗಳು ಭಾರತದ ಸತ್ಯೋತ್ತರ ಯುಗದ ಅಧಿಕಾರ ರಾಜಕಾರಣಕ್ಕೆ ಮತ್ತು ಸಾಂಸ್ಕೃತಿಕ ರಾಜಕೀಯಕ್ಕೆ ಬುನಾದಿಯಾಗಿ ಪರಿಣಮಿಸಿದೆ. ಇಲ್ಲಿ ನಮಗೆ ಗಾಂಧಿ ಹೆಚ್ಚು ಪ್ರಸ್ತುತ ಎನಿಸುತ್ತಾರೆ. ಹುತಾತ್ಮ ದಿನದಂದು ಗಾಂಧಿಯವರನ್ನು ಸ್ಮರಿಸುವ ಮುನ್ನ ಭಾರತ ನಡೆದುಬಂದ ಹಾದಿಯನ್ನು ಗಮನಿಸಿದರೆ, ಬಹಳ ವರ್ಷಗಳ ಹಿಂದೆಯೇ ಮಹಾತ್ಮನ ಹೆಜ್ಜೆಗುರುತುಗಳನ್ನು ಅಳಿಸಿ ಹಾಕಿರುವುದು ಸ್ಪಷ್ಟವಾಗಿ ಕಾಣುತ್ತದೆ. ನವ ಉದಾರವಾದಿ ಬಂಡವಾಳಶಾಹಿಯ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯಲ್ಲಿ , ಗಾಂಧಿ ಪ್ರಣೀತ ಗ್ರಾಮೀಣ ಆರ್ಥಿಕತೆಯು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ, ಈ ಅರ್ಥವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಹಿಂಸೆ ಮತ್ತು ಕ್ರೌರ್ಯ ದೇಶದ ನಿರ್ಗತಿಕ ಜನತೆಯನ್ನು ಮತ್ತಷ್ಟು ಸಂಕಷ್ಟಗಳಿಗೆ ದೂಡುತ್ತಿದೆ. ಆತ್ಮಹತ್ಯೆಗೆ ಶರಣಾಗುತ್ತಿರುವ ಲಕ್ಷಾಂತರ ರೈತರು, ಮೈಕ್ರೋ ಫೈನಾನ್ಸ್‌ ಪೀಡಿತರು ಈ ಹಿಂಸೆಯ ಒಂದು ಆಯಾಮವನ್ನು ಬಿಂಬಿಸುತ್ತಾರೆ.

ಅಂತರ್ಗತವಾಗಬೇಕಾದ ಗಾಂಧಿ

ಈ ಭೌತಿಕ ಬೆಳವಣಿಗೆಗಳಿಂದಾಚೆಗೆ ಗಾಂಧಿ ನೆನಪಾಗಬೇಕಿರುವುದು ಮನುಷ್ಯನೊಳಗಿನ ಬೌದ್ಧಿಕ ಕ್ರೌರ್ಯ ಮತ್ತು ಅದರಿಂದಲೇ ಉತ್ಪತ್ತಿಯಾಗುವ ಭೌತಿಕ ಹಿಂಸೆಯ ಪ್ರತೀಕಗಳು ಅನಾವರಣಗೊಳ್ಳುತ್ತಿರುವ ಈ ವಾತಾವರಣದಲ್ಲಿ. ಇತ್ತೀಚಿನ ಕೆಲವು ಸಾಮಾಜಿಕ ಬೆಳವಣಿಗೆಗಳನ್ನು ಗಮನಿಸಿದರೆ ಭಾರತೀಯ ಸಮಾಜದಲ್ಲಿ ಹಿಂಸೆ ಮತ್ತು ಕ್ರೌರ್ಯ ಒಂದು ವ್ಯಾಧಿಯಂತೆ ಹರಡುತ್ತಿರುವುದು ಸ್ಪಷ್ಟವಾಗುತ್ತದೆ. ಇದು ಸಾಂಸ್ಕೃತಿಕವಾಗಿ ವ್ಯಸನವಾಗಿ ಪರಿಣಮಿಸುತ್ತಿದೆ. ಇದಕ್ಕೆ ಬಲಿಯಾಗುತ್ತಿರುವುದು ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು, ತಳಸಮುದಾಯಗಳು ಮತ್ತು ಅಂಚಿನಲ್ಲಿರುವ ಸಾಮಾನ್ಯ ಜನತೆ. ಹೆಣ್ಣು ಭ್ರೂಣ ಹತ್ಯೆಯಂತಹ ಕ್ರೂರ ನಡವಳಿಕೆಗಳು ಒಂದೆಡೆಯಾದರೆ, ಹೆಣ್ಣು ಮಕ್ಕಳನ್ನು ಕೊಂದು, ಕುಕ್ಕರ್‌ನಲ್ಲಿ ಬೇಯಿಸಿ, ಫ್ರಿಡ್ಜ್‌ಗಳಲ್ಲಿಟ್ಟು ವಿಲೇವಾರಿ ಮಾಡುವ ಒಂದು ಕ್ರೂರ ಜಗತ್ತಿಗೆ ನವ ಭಾರತ ಸಾಕ್ಷಿಯಾಗುತ್ತಿದೆ.

ಈ ಹಿಂಸಾತ್ಮಕ ಮನಸ್ಥಿತಿಯ ಕಾರಣಗಳನ್ನು ಸಮಾಜಶಾಸ್ತ್ರೀಯ ನೆಲೆಯಲ್ಲಿ ನೋಡಿದಾಗ ನಮ್ಮ ಸಮಾಜವನ್ನು ಕಾಡುತ್ತಿರುವ ಪಿತೃಪ್ರಧಾನತೆ ಮತ್ತು ಸಾಂಸ್ಕೃತಿಕ ಜಾತಿ ಶ್ರೇಷ್ಠತೆಯಲ್ಲಿ ಗುರುತಿಸಬಹುದು. ಈ ಮನಸ್ಥಿತಿಯನ್ನು ಹೋಗಲಾಡಿಸುವ ಪ್ರಯತ್ನಗಳು ನಮ್ಮ ನಡುವೆ ನಡೆಯುತ್ತಿದೆಯೇ ? ಈ ಪ್ರಶ್ನೆಗೆ ನಾವು ನಿರುತ್ತರರಾಗುತ್ತೇವೆ. ಏಕೆಂದರೆ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಜವಾಬ್ದಾರಿ ಹೊತ್ತಿರುವ ಚುನಾಯಿತ/ಪರಾಜಿತ ಜನಪ್ರತಿನಿಧಿಗಳೂ ಇಂದು ಹಿಂಸೆಯನ್ನು ಸಮ್ಮತಿಸುತ್ತಿದ್ದಾರೆ. ಅಥವಾ ದೇಶದ ಅಭಿವೃದ್ಧಿಗಾಗಿ ತಳಸ್ತರದ ಸಮಾಜದಲ್ಲಿ ವ್ಯಕ್ತವಾಗುವ ಹಿಂಸೆಯನ್ನು ಸಹನೀಯಗೊಳಿಸುತ್ತಿದ್ದಾರೆ. ರೈತರ ಆತ್ಮಹತ್ಯೆಗಳು ಇದಕ್ಕೊಂದು ಸ್ಪಷ್ಟ ನಿದರ್ಶನ. ಮಹಿಳೆಯ ಮೇಲೆ ನಡೆಯುವ ದೌರ್ಜನ್ಯ ಮತ್ತು ಹಿಂಸೆಯನ್ನು ಮತೀಯ ದೃಷ್ಟಿಕೋನದಿಂದ, ಜಾತಿ ಆಯಾಮದಲ್ಲಿ ಸಾಪೇಕ್ಷವಾಗಿ ನೋಡುವ ಮೂಲಕ, ಅತ್ಯಾಚಾರ-ದೌರ್ಜನ್ಯದಂತಹ ಕ್ರೌರ್ಯವನ್ನೂ ಸಹನೀಯಗೊಳಿಸಲಾಗುತ್ತಿದೆ.

ಈ ವಿಕೃತ ಬೆಳವಣಿಗೆಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಸತ್ಯದ ಹಾದಿಯನ್ನು ಭಾರತೀಯ ಸಮಾಜ ಎಂದೋ ತೊರೆದಿದೆ. ಹಾಗಾಗಿಯೇ ಗಾಂಧಿ ಸೃಜಿಸಿದ ಸತ್ಯದ ಹಾದಿಗಳೆಲ್ಲವೂ ಮುಚ್ಚಿಹೋಗುತ್ತಿವೆ. ಸಾಂಸ್ಕೃತಿಕವಾಗಿ ಪುರಾಣ ಮಿಥ್ಯೆಗಳನ್ನು ಸಮಕಾಲೀನಗೊಳಿಸುವ ಪ್ರಯತ್ನಗಳು ಸಮಾಜವನ್ನು ಆವರಿಸುತ್ತಿರುವಂತೆಯೇ, ಪ್ರಾಚೀನ ನಂಬಿಕೆಗಳು ಸೃಜಿಸಿದಂತಹ ಅವೈಚಾರಿಕ-ಅವೈಜ್ಞಾನಿಕ ಚಿಂತನಾಧಾರೆಗಳಿಗೆ ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳೂ ಆಸರೆ ನೀಡಲಾರಂಭಿಸಿವೆ. ವೈಚಾರಿಕತೆಯಿಂದ ವಿಮುಖವಾದ ಯಾವುದೇ ಸಮಾಜವೂ ಸತ್ಯದ ಹಾದಿಯಲ್ಲಿ ನಡೆಯಲಾಗುವುದಿಲ್ಲ ಎಂಬ ಸರಳ ವಾಸ್ತವವನ್ನು ಗ್ರಹಿಸುವುದರಲ್ಲಿ ಭಾರತೀಯ ಸಮಾಜ ವಿಫಲವಾಗಿದೆ. ಹಾಗಾಗಿಯೇ ಭವಿಷ್ಯ ಭಾರತವನ್ನು ಪ್ರತಿನಿಧಿಸಬೇಕಾದ ಬೃಹತ್‌ ಯುವ ಸಮೂಹವನ್ನು ಮೌಢ್ಯದ ಕೂಪಕ್ಕೆ ನೂಕಲಾಗುತ್ತಿದೆ. ಗಾಂಧಿಯವರನ್ನು ಆ ಸಮಾಜದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವೇ ?

ಹಿಂಸೆ-ಕ್ರೌರ್ಯದ ಭಿನ್ನ ಆಯಾಮಗಳು

ಇತ್ತೀಚಿನ ಎರಡು ಘಟನೆಗಳು ಈ ಸಂದರ್ಭದಲ್ಲಿ ಉಲ್ಲೇಖನಾರ್ಹ. ಹರಿಯಾಣದ ಮಿತ್ರೊಲ್‌ ಎಂಬ ಗ್ರಾಮದಲ್ಲಿ ತಾನೇ ಸಾಕಿದ ಗೋವುಗಳನ್ನು ವಾಹವನೊಂದರಲ್ಲಿ ಸಾಗಿಸುತ್ತಿದ್ದ 45 ವರ್ಷದ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಇಲ್ಲಿ ಸತ್ತ ವ್ಯಕ್ತಿ ಮುಸ್ಲಿಂ ಅಥವಾ ಕೊಂದವರು ಗೊರಕ್ಷಕ ಪಡೆಯ ಹಿಂದೂಗಳು ಎನ್ನುವುದು ವಾಸ್ತವ. ಆದರೆ ನಮಗೆ ಇಲ್ಲಿ ಕಾಣಬೇಕಿರುವುದು ಆ ಘಟನೆಯ ಹಿಂದೆ ಅಡಗಿರುವ ಮಾನಸಿಕ ಕ್ರೌರ್ಯ ಮತ್ತು ಹಿಂಸೆ ಎಂಬ ಅದರ ಉತ್ಪನ್ನ. ಕಾನೂನಾತ್ಮಕ ನೆಲೆಯಿಂದಾಚೆ ನೋಡಿದಾಗ ಈ ಘಟನೆಯ ಹಿಂದೆ ನಮಗೆ ಹಿಂಸೆ-ಕ್ರೌರ್ಯ ಒಂದು ಸಾಮಾಜಿಕ ವ್ಯಾಧಿಯಾಗಿ ಕಾಣುತ್ತದೆ. ಮತ್ತೊಂದು ಘಟನೆ, ಕರ್ನಾಟಕದ ವಿಜಯಪುರ ಜಿಲ್ಲೆಯ ಇಟ್ಟಿಗೆ ಕಾರ್ಖಾನೆಯೊಂದರ ಕಾರ್ಮಿಕರ ಮೇಲೆ ನಡೆದ ಭೀಕರ ಹಲ್ಲೆ. ಅನುಮತಿ ಪಡೆಯದೆ ನೌಕರಿಗೆ ಗೈರಾದ ಕಾರಣಕ್ಕೆ ಅಮಾನುಷ ರೀತಿಯಲ್ಲಿ ಶಿಕ್ಷೆಗೊಳಗಾದ ಕಾರ್ಮಿಕರು ದಲಿತರು ಎನ್ನುವುದು ಕಾಕತಾಳೀಯವೇನಲ್ಲ.
ಈ ಘಟನೆಗಳು ಏನನ್ನು ಸೂಚಿಸುತ್ತವೆ ಎನ್ನುವುದಕ್ಕಿಂತಲೂ, ಇಂತಹ ಅಮಾನುಷ ಘಟನೆಗಳಿಗೆ ನಮ್ಮ ಸಮಾಜದಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಯತ್ತ ಗಮನಹರಿಸಬೇಕಿದೆ. ಇಲ್ಲಿ ಗಾಂಧಿ ನೆನಪಾಗುತ್ತಾರೆ. ಗೋವುಗಳ ರಕ್ಷಣೆಗಾಗಿ ಮನುಷ್ಯರನ್ನು ಕೊಲ್ಲುವುದು, ಸಿರಿವಂತಿಕೆಯ ದರ್ಪದಿಂದ ಮನುಷ್ಯರನ್ನು ಪ್ರಾಣಿಗಳನ್ನು ಬಡಿದಂತೆ ಬಡಿಯುವುದು, ಜಾತಿಯ ಕಾರಣಕ್ಕಾಗಿ ಹೆತ್ತ ಮಕ್ಕಳನ್ನೇ ಪೋಷಕರು ಕೊಲೆ ಮಾಡುವುದು, ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳನ್ನು ಕೊಂದು ಬಿಸಾಡುವುದು ಇವೆಲ್ಲವೂ ಗಾಂಧಿ ಬಿಟ್ಟುಹೋದ ಸತ್ಯದ ಹಾದಿಯನ್ನು ಮತ್ತಷ್ಟು ವಿಕೃತಗೊಳಿಸುವ ಬೆಳವಣಿಗೆಗಳು. ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕೀಯದ ವಾತಾವರಣದಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಗಾಂಧಿ ಮಾಂಸಾಹಾರಿಯಲ್ಲ ಆದರೆ ಮಾಂಸ ಸೇವನೆಯನ್ನು ಶಿಕ್ಷಾರ್ಹ ಅಪರಾಧ ಎಂದು ಯಾವುದೇ ಕ್ಷಣದಲ್ಲೂ ಭಾವಿಸಿರಲಿಲ್ಲ. ಆದರೂ ಗಾಂಧಿ ಜಯಂತಿಯಂದು, ಹುತಾತ್ಮ ದಿನದಂದು ಮಾಂಸ ಮಾರಾಟವನ್ನು ನಿಷೇಧಿಸಲಾಗುತ್ತದೆ. ಈ ವಿಡಂಬನೆಯಿಂದಾಚೆ ನೋಡಿದಾಗ, ಆಹಾರ ಪದ್ಧತಿ ಮನುಷ್ಯ ಸಮಾಜವನ್ನು ವಿಭಜಿಸುವ ಅಸ್ತ್ರವಾಗಿರುವ ಸನ್ನಿವೇಶ ನಮಗೆ ಎದುರಾಗುತ್ತದೆ.

ಇದು ಮಹಾತ್ಮನಿಗೆ ನಾವು ಮಾಡುವ ಬಹುದೊಡ್ಡ ಅಪಚಾರ ಅಲ್ಲವೇ ? ಇದಕ್ಕಿಂತಲೂ ದೊಡ್ಡ ಅಪಚಾರ ಎನಿಸುವುದು ಭಾರತದ ರಾಜಕೀಯವನ್ನು ಆವರಿಸಿರುವ ದ್ವೇಷ ರಾಜಕಾರಣ ಮತ್ತು ಅಪ್ರಾಮಾಣಿಕತೆ. ಚುನಾವಣೆಗಳಲ್ಲಿ ಸುಳ್ಳು ಆಶ್ವಾಸನೆಗಳನ್ನು ನೀಡುವ ಒಂದು ಸಹಜ ಪರಂಪರೆಯನ್ನೇ ನಾವು ಅನುಸರಿಸಿಕೊಂಡು ಬಂದಿದ್ದೇವೆ. ಆದರೆ ನವ ಭಾರತದ ಪ್ರಜಾತಂತ್ರದಲ್ಲಿ ಚಾರಿತ್ರಿಕ ಸತ್ಯ ಘಟನೆಗಳನ್ನು ಸುಳ್ಳಾಗಿಸುವ ಹಾಗೂ ಐತಿಹಾಸಿಕ ಸುಳ್ಳುಗಳನ್ನು ಜನರ ನಡುವೆ ಬಿತ್ತುವ ಒಂದು ಹೊಸ ಪರಂಪರೆಯನ್ನು ನಾವು ಎದುರಿಸುತ್ತಿದ್ದೇವೆ. ತನ್ಮೂಲಕ ಸ್ವತಃ ಮಹಾತ್ಮ ಗಾಂಧಿ ಸೇರಿದಂತೆ, ಸ್ವಾತಂತ್ರ್ಯ ಪೂರ್ವ ಭಾರತದ ಅನೇಕ ದಾರ್ಶನಿಕರ ತತ್ವ ದರ್ಶನಗಳನ್ನು ಅಪಭ್ರಂಶಗೊಳಿಸಲಾಗುತ್ತಿದೆ. ಈ ಸುಳ್ಳುಗಳೇ ದೇಶದ ಯುವ ಸಮೂಹವನ್ನು ದಿಕ್ಕು ತಪ್ಪಿಸುತ್ತಿದೆ.

ಇದರೊಡನೆ ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸುತ್ತಿರುವ ತಳಸ್ತರದ ಅಸಮಾನತೆಗಳನ್ನು, ಅಭಿವೃದ್ಧಿ ಪಥದ ಅನಿವಾರ್ಯತೆ ಎಂಬ ಮಿಥ್ಯೆಯನ್ನೂ ಸಮಾಜದಲ್ಲಿ ಬಿತ್ತಲಾಗುತ್ತಿದೆ. ಹಾಗಾಗಿಯೇ ದೇಶದ ಸುಶಿಕ್ಷಿತ ಮಧ್ಯಮ ವರ್ಗಗಳೂ ಸಹ ತಾವು ಎದುರಿಸುತ್ತಿರುವ ಅನಿಶ್ಚಿತತೆ-ಅಭದ್ರತೆಯನ್ನು ಮನಗಾಣದಂತಾಗಿದೆ. ನಿರುದ್ಯೋಗ, ನಿರ್ವಸತಿಕತೆಯಿಂದ ಬಳಲುತ್ತಿರುವ ಯುವಸ್ತೋಮ ನವ ಉದಾರವಾದದ ಭ್ರಮಾಲೋಕದಲ್ಲಿ ಬಂಧಿಯಾಗಿದ್ದು, ತನ್ನ ಸುತ್ತಲಿನ ವಾಸ್ತವಗಳನ್ನೂ ಗಮನಿಸದಂತಾಗಿದೆ. ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯದ ದುಡಿಮೆಗಾರರು ಎದುರಿಸುತ್ತಿರುವ ದುರ್ಭರ ಬದುಕಿನ ಬಗ್ಗೆ ನಮ್ಮ ಸಮಾಜವಷ್ಟೇ ಅಲ್ಲದೆ, ಸಾಂಸ್ಕೃತಿಕವಾಗಿ ಸಾಹಿತ್ಯ ವಲಯವೂ ಸಹ ಮೌನ ವಹಿಸಿರುವುದು, ಸತ್ಯೋತ್ತರ ಯುಗದ ವಿಕೃತ ಆಯಾಮವಾಗಿ ಕಾಣುತ್ತಿದೆ.

ಶ್ರದ್ಧಾಂಜಲಿಗೂ ಮುನ್ನ ,,,,,

ಜನವರಿ 30ರಂದು ಗಾಂಧಿ ಹುತಾತ್ಮರಾದ ಆ ಭೀಕರ ಕ್ಷಣಗಳನ್ನು ವಿಷಾದದಿಂದ ಸ್ಮರಿಸುತ್ತಲೇ ನಾವು ಗಮನಿಸಬೇಕಿರುವುದು ನಮ್ಮ ಸಮಾಜ ತಲುಪಿರುವ ಈ ದುಸ್ಥಿತಿಯನ್ನು. ತಾತ್ವಿಕವಾಗಿ ಅಥವಾ ಸೈದ್ಧಾಂತಿಕವಾಗಿ ಗಾಂಧಿ ಸ್ವೀಕೃತರಾಗುವುದು ವ್ಯಕ್ತಿಗತ ಅಭಿಪ್ರಾಯಕ್ಕೆ ಬಿಟ್ಟ ವಿಚಾರ. ಆದರೆ ಗಾಂಧಿ ತಮ್ಮ ಜೀವನದುದ್ದಕ್ಕೂ ಅನುಸರಿಸಿದ ಸತ್ಯ ಶೋಧನೆಯ ಹಾದಿ, ಪ್ರಾಮಾಣಿಕ ಸರಳ ಜೀವನದ ಮಾರ್ಗ ಮತ್ತು ಅಹಿಂಸಾತ್ಮಕ ದಾರಿಯ ಸೌಹಾರ್ದ ಪರಂಪರೆ ಇವುಗಳನ್ನು ನಾವು ಕಡೆಗಣಿಸಲಾಗುವುದಿಲ್ಲ. ಏಕೆಂದರೆ ಆಧುನಿಕತೆಯತ್ತ ಸಾಗಬೇಕಾದ, ನಾಗರಿಕತೆಯ ಲಕ್ಷಣಗಳನ್ನು ಎತ್ತಿಹಿಡಿಯಬೇಕಾದ ಸಮಾಜವನ್ನು ಹಿಂಸೆ, ಕ್ರೌರ್ಯ ಮತ್ತು ಸುಳ್ಳುಗಳು ವ್ಯಾಧಿಯಂತೆ ಕಾಡುತ್ತಿರುವ ಈ ಹೊತ್ತಿನಲ್ಲಿ ಗಾಂಧಿ ಒಬ್ಬ ವ್ಯಕ್ತಿಯಾಗಿ ಪ್ರಸ್ತುತವಾಗುತ್ತಾರೆ.

ಗಾಂಧಿ ಹತ್ಯೆ ಸಮಕಾಲೀನ ಭಾರತದ ಒಂದು ಕರಾಳ ಗಳಿಗೆಯ ದುರ್ಘಟನೆ. ಅವರ ತತ್ವಾದರ್ಶಗಳನ್ನು ಕಡೆಗಣಿಸುತ್ತಲೇ ಬಂದಿರುವ ಭಾರತದ ರಾಜಕಾರಣ ಈ ದುರ್ಘಟನೆಯನ್ನು ಮತ್ತೆಮತ್ತೆ ನೆನಪಿಸುವುದೇ ಅಲ್ಲದೆ, ಪ್ರತಿ ಪ್ರಜೆಯನ್ನೂ ಆತ್ಮಾವಲೋಕನಕ್ಕೆ ಜಾರುವಂತೆ ಮಾಡುತ್ತದೆ. ಗಾಂಧಿ ಪ್ರತಿಪಾದಿಸಿದ ಸತ್ಯಾದರ್ಶಗಳಿಂದ ಬಹುದೂರ ಸಾಗಿರುವ ಸತ್ಯೋತ್ತರ ಯುಗದ ನವ ಭಾರತ ತನ್ನ ಸುಳ್ಳುಗಳ ಪೊರೆಯಿಂದ ಕಳಚಿಕೊಳ್ಳಬೇಕಿದೆ. ಹಾಗೆಯೇ ಹಿಂಸೆ ಮತ್ತು ಕ್ರೌರ್ಯದ ಸಾಮಾಜಿಕ ವ್ಯಾಧಿಯನ್ನು, ವ್ಯಸನವನ್ನು ಕೊನೆಗಾಣಿಸುವ ಹಾದಿಯಲ್ಲಿ, ಗಾಂಧಿಯವರನ್ನು ಅಂಬೇಡ್ಕರ್‌ ಅವರೊಡನೆಯೇ ಅವಲಂಬಿಸಬೇಕಿದೆ. ಆಗ ಭಾರತ ಹುತಾತ್ಮ ದಿನವನ್ನು ಆಚರಿಸುವ ನೈತಿಕ ಹಕ್ಕು ಪಡೆದುಕೊಳ್ಳುತ್ತದೆ. ಈ ಆತ್ಮವಿಮರ್ಶೆಗೆ ನಾವು ತಯಾರಾಗಲು ಇದು ಸಕಾಲ. ಆಗಿದ್ದೇವೆಯೇ ?????

Tags: abhijit chavda on the vishal hourapartheid in south africaapartheid in south africa lecturecrossing the linedepartment of dance at university of washingtonlife of an actorperformance and the afterlives of injusticethe open mind (tv program)the ranveer showthe ranveer show beerbicepsthe ranveer show clipsthe righteous mindthe saad truththe vishal houruniversity of washington deanvietnam war in hindivietnam war story in hindi
Previous Post

ಕುಂಭಮೇಳದಲ್ಲಿ ನಾಲ್ವರು ಕನ್ನಡಿಗರು ಸಾವು.. ತಲಾ 2 ಲಕ್ಷ ಪರಿಹಾರ ಘೋಷಣೆ

Next Post

ಪ್ರಯಾಗ್‌ರಾಜ್‌ ದುರಂತ ಅಚಾತುರ್ಯದಿಂದ ನಡೆದಿದೆ.. HDK

Related Posts

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
0

ಪಶ್ಚಿಮ ಬಂಗಾಳ: ಭಾರತೀಯ ರೈಲ್ವೆ ಇತಿಹಾಸದಲ್ಲಿ ಇಂದು ಮತ್ತೊಂದು ಮಹತ್ವದ ದಿನವಾಗಿದೆ. ಇಂದು ಪಶ್ಚಿಮ ಬಂಗಾಳದ ಮಾಲ್ಡಾಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ(Narendra Modi) ಭಾರತದ...

Read moreDetails
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

January 17, 2026
ಸಿಎಂ ತವರು ಜಿಲ್ಲೆಯಲ್ಲೇ  ಫ್ಲೆಕ್ಸ್ ಗಲಾಟೆ: ಕುಮಾರಸ್ವಾಮಿ ಬ್ಯಾನರ್ ಕಿತ್ತೆಸೆದು ವ್ಯಕ್ತಿ ಆಕ್ರೋಶ

ಸಿಎಂ ತವರು ಜಿಲ್ಲೆಯಲ್ಲೇ ಫ್ಲೆಕ್ಸ್ ಗಲಾಟೆ: ಕುಮಾರಸ್ವಾಮಿ ಬ್ಯಾನರ್ ಕಿತ್ತೆಸೆದು ವ್ಯಕ್ತಿ ಆಕ್ರೋಶ

January 17, 2026
ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

January 17, 2026
Bheemanna Khandre: ಶತಾಯುಷಿ ಭೀಮಣ್ಣ ಖಂಡ್ರೆ‌ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

Bheemanna Khandre: ಶತಾಯುಷಿ ಭೀಮಣ್ಣ ಖಂಡ್ರೆ‌ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

January 17, 2026
Next Post
ಪ್ರಯಾಗ್‌ರಾಜ್‌ ದುರಂತ ಅಚಾತುರ್ಯದಿಂದ ನಡೆದಿದೆ.. HDK

ಪ್ರಯಾಗ್‌ರಾಜ್‌ ದುರಂತ ಅಚಾತುರ್ಯದಿಂದ ನಡೆದಿದೆ.. HDK

Recent News

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್
Top Story

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

by ಪ್ರತಿಧ್ವನಿ
January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?
Top Story

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

January 17, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

January 17, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada