• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಗಾಂಧಿ ಇಲ್ಲದ ಕಾಂಗ್ರೆಸ್‌ಗೆ ಮಹಾತ್ಮ ಏನಾಗಬೇಕು ?

ಪ್ರತಿಧ್ವನಿ by ಪ್ರತಿಧ್ವನಿ
January 20, 2025
in ಕರ್ನಾಟಕ, ದೇಶ, ರಾಜಕೀಯ
0
ಗಾಂಧಿ ಇಲ್ಲದ ಕಾಂಗ್ರೆಸ್‌ಗೆ ಮಹಾತ್ಮ ಏನಾಗಬೇಕು ?
Share on WhatsAppShare on FacebookShare on Telegram

ADVERTISEMENT

—ನಾ ದಿವಾಕರ—-

ಬೌದ್ಧಿಕವಾಗಿ ಗಾಂಧಿಯನ್ನು ಕಳೆದುಕೊಂಡಿರುವ ವರ್ತಮಾನದ ಕಾಂಗ್ರೆಸ್‌ ಮತ್ತು ರಾಜಕಾರಣ

1924ರಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ 39ನೇ ಮಹಾಧಿವೇಶನದ ವೈಶಿಷ್ಟ್ಯ ಎಂದರೆ ಈ ಅಧಿವೇಶನದಲ್ಲಿ ಮಹಾತ್ಮ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಿ ಉಪಸ್ಥಿತರಿದ್ದುದು. 1924-25ರಲ್ಲಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಗಾಂಧಿ ನೇತೃತ್ವ ವಹಿಸಿದ್ದ ಏಕೈಕ ಮಹಾಧಿವೇಶನಕ್ಕೆ 1924ರ ಬೆಳಗಾವಿ ಸಾಕ್ಷಿಯಾಗಿತ್ತು. ಬೆಳಗಾವಿ ಅಧಿವೇಶನ ಎಂದೇ ಹೆಸರಾಗಿರುವ ಈ ಪ್ರಸಂಗಕ್ಕೆ ಈಗ ನೂರು ವರ್ಷ ತುಂಬಿದೆ. ಕರ್ನಾಟಕ ಸರ್ಕಾರ ಈ ಚಾರಿತ್ರಿಕ ಸಂದರ್ಭವನ್ನು ಸ್ಮರಿಸಲು ಹಾಗೂ ಭವಿಷ್ಯದ ತಲೆಮಾರಿಗೆ ಇದರ ಮಹತ್ವವನ್ನು ತಿಳಿಸಿಕೊಡಲು ಈ ಸಂದರ್ಭವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದೆ. ಗಾಂಧಿಯನ್ನು ರಾಷ್ಟ್ರದ ಇಂದಿನ ಅಗತ್ಯ  ಎಂದು ಬಿಂಬಿಸುವ ಪ್ರಯತ್ನದಲ್ಲಿ ಕಾಂಗ್ರೆಸ್‌ ಸರ್ಕಾರ ಗಾಂಧಿ ಆದರ್ಶನಗಳ ಅನುಸರಣೆ, ತಾತ್ವಿಕ ಅಳವಡಿಕೆ ಮತ್ತು ಅವರ ಕನಸು ನನಸಾಗುವ ಘೋಷ ವಾಕ್ಯಗಳನ್ನು ಹೊತ್ತು ಆಚರಿಸುತ್ತಿದೆ.

 ಪ್ರತಿಮೆ, ಆರಾಧನೆ ಮತ್ತು ಭವ್ಯ ಸೌಧದ ನಿರ್ಮಾಣ ಈ ಆಚರಣೆಗಳಿಂದಾಚೆಗೆ ಬೆಳಗಾವಿಯ ಸಮಾವೇಶ ಮತ್ತೇನನ್ನು ಸಾಧಿಸಲು ಹೊರಟಿದೆ ಎನ್ನುವುದು ವರ್ತಮಾನದ ಪ್ರಶ್ನೆಯಾಗಿದೆ. ಬಿಜೆಪಿ ನಾಯಕರು ಈ ಸಂದರ್ಭಲ್ಲೇ ಕಾಂಗ್ರೆಸ್‌ ಪಕ್ಷದೊಳಗಿನ ʼ ನಕಲಿ ಗಾಂಧಿ ʼಯನ್ನು ಶೋಧಿಸಿ ಲೇವಡಿ ಮಾಡತೊಡಗಿದ್ದಾರೆ. ʼಅಸಲಿ ಗಾಂಧಿʼಯನ್ನು ರಾಜಕೀಯ ಕಾರಣಗಳಿಗಾಗಿ ಅವಹೇಳನ ಮಾಡದಿದ್ದರೂ, ಆ ಶಾಂತಿ-ಸಹಬಾಳ್ವೆಯ ಚೇತನವನ್ನು ಅಮಾನುಷವಾಗಿ ಕೊನೆಗಾಣಿಸಿದ ದುಷ್ಟನೊಬ್ಬನನ್ನು ಇಂದಿಗೂ ಆಂತರಿಕವಾಗಿ ವೈಭವೀಕರಿಸುವ ರಾಜಕೀಯ ನಾಯಕರಿಗೆ ಯಾವ ಗಾಂಧಿ ಅಸಲಿಯಾಗಿ ಕಾಣಲು ಸಾಧ್ಯ ? ಅಥವಾ ʼ ನಕಲಿ ಗಾಂಧಿ ʼಯನ್ನು ಗುರುತಿಸುವುದು ಹೇಗೆ  ಸಾಧ್ಯ ? ಚಾರಿತ್ರಿಕ ವ್ಯಕ್ತಿಗಳು ವರ್ತಮಾನ ರಾಜಕಾರಣದ ಅಂಗಳದ ಚೆಂಡಿನಂತೆ ಬಳಕೆಯಾದರೆ ಅದರ ಪರಿಣಾಮ ಏನಾಗುತ್ತದೆ ಎನ್ನಲು ಗಾಂಧಿ ಸಹ ಉದಾಹರಣೆಯಾಗಿಬಿಟ್ಟಿದ್ದಾರೆ.

DK Shivakumar:ಕಾಂಗ್ರೆಸ್‌ ನಾಯಕರು BJPಗೆ ಸೇರ್ಪಡೆ ಡಿಕೆ ಶಿವಕುಮಾರ್‌ ಹೇಳಿದ್ದೇನು..! #yatnal #bjp #congress

 ಚಾರಿತ್ರಿಕ ಹಿನ್ನೋಟದಲ್ಲಿ

 ಈ ರಾಜಕೀಯ ಪ್ರಶ್ನೆಗಳನ್ನು ಬದಿಗಿಟ್ಟು, ನೂರು ವರ್ಷಗಳ ಹಿಂದೆ ನೋಟ ಹೊರಳಿಸಿದಾಗ, 1924ರ ಬೆಳಗಾವಿ ಅಧಿವೇಶನ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಒಂದು ಮಹತ್ತರ ಮೈಲಿಗಲ್ಲಿನಂತೆ ಕಾಣುತ್ತದೆ. ಅಂದಿನ ಕಾಂಗ್ರೆಸ್‌ ಎಂದರೆ ಅಧಿಕಾರ ಹಂಬಲದ, ಧನಾರ್ಜನೆಯ ಲಾಲಸೆಯ, ವ್ಯಕ್ತಿ ಪ್ರತಿಷ್ಠೆಯ ಆತ್ಮರತಿಯ, ಸ್ವಾರ್ಥ ರಾಜಕಾರಣಿಗಳ ಒಕ್ಕೂಟ ಅಲ್ಲ. ಆಂತರಿಕವಾಗಿ ಹಲವು ತಾತ್ವಿಕ ಭಿನ್ನಾಭಿಪ್ರಾಯಗಳು, ಸೈದ್ಧಾಂತಿಕ ವೈರುಧ್ಯಗಳು ಹಾಗೂ ವ್ಯಕ್ತಿಗತ ಪೈಪೋಟಿಯ ವಾತಾವರಣ ಇದ್ದಾಗ್ಯೂ 1924 ತನ್ನ ಚಾರಿತ್ರಿಕ ಮಹತ್ವವನ್ನು ದಾಖಲಿಸಿದ್ದಕ್ಕೆ ಕಾರಣ, ಅದು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿದ ಚಾಲನೆ ಮತ್ತು ರೂಪಿಸಿದ ಹಾದಿ. ವಸಾಹತು ದಾಸ್ಯದಿಂದ ವಿಮೋಚನೆ ಪಡೆಯುವುದೊಂದೇ ಧ್ಯೇಯವಾಗಿದ್ದ ಆ ಕಾಲಘಟ್ಟದಲ್ಲಿ ಭಾರತದ ಜನತೆ ವಿಮೋಚನೆಯ ಹೋರಾಟದಲ್ಲಿ ಅನುಸರಿಬೇಕಾದ ಅಹಿಂಸಾತ್ಮಕ ಮಾರ್ಗಕ್ಕೆ ಒಂದು ಮಾರ್ಗದರ್ಶಿ ಭೂಮಿಕೆಯನ್ನು ಒದಗಿಸಿದ್ದು ಬೆಳಗಾವಿ ಅಧಿವೇಶನ.

 ಗಾಂಧಿ ಪ್ರಥಮ ಬಾರಿ ಸಾಮಾಜಿಕ ಸುಧಾರಣೆಯ ಹಾದಿಯಲ್ಲಿ ಅಸ್ಪೃಶ್ಯತೆಯ ವಿರುದ್ಧ ತಾತ್ವಿಕವಾಗಿ ಹೋರಾಟಕ್ಕೆ ಕರೆ ನೀಡಿದ್ದೂ ಬೆಳಗಾವಿಯ ವೈಶಿಷ್ಟ್ಯ. ಅಸ್ಪೃಶ್ಯತೆಯ ನಿವಾರಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ ಮತ್ತು ಹಾದಿ ಅಂಬೇಡ್ಕರ್‌ ಅವರಿಂದ ಭಿನ್ನವಾಗಿದ್ದರೂ, ಉದ್ದೇಶದಲ್ಲಿ ವ್ಯತ್ಯಾಸವೇನೂ ಇರಲಿಲ್ಲ. ಡಾ. ಬಿ. ಆರ್.‌ ಅಂಬೇಡ್ಕರ್‌ ಅಸ್ಪೃಶ್ಯರ ನಡುವೆ ನಿಂತು ತಮ್ಮ ವಿಮೋಚನೆಯ ಹಾದಿ ಹುಡುಕಿದರೆ ಗಾಂಧಿ ಹೊರಪದರದಲ್ಲಿ (Peripherals) ನಿಂತು ಶೋಧಿಸಿದ್ದರು. ತಮ್ಮ ಅನುಭಾವದ ನೆಲೆಯನ್ನು ವಿಸ್ತರಿಸಿಕೊಳ್ಳುವ ಅವಕಾಶವೂ ಗಾಂಧಿಯವರಿಗೆ ಇರಲಿಲ್ಲ. ಆದರೂ ಅವರಲ್ಲುಂಟಾದ ಪರಿವರ್ತನೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷದೊಳಗೂ ಅಸ್ಪೃಶ್ಯತಾ ವಿರೋಧ ಚಿಂತನೆಗಳ ಬೀಜ ಬಿತ್ತಿದ್ದು ವಾಸ್ತವ.

ವಿಡಂಬನೆ ಎಂದರೆ ವಸಾಹತು ದಾಸ್ಯದಿಂದ ವಿಮೋಚನೆಗಾಗಿ ರೂಪುಗೊಂಡ ದೇಶವ್ಯಾಪಿ ಹೋರಾಟವೊಂದು ಸೈದ್ಧಾಂತಿಕ ನೆಲೆಗಳಲ್ಲಿ, ತಾತ್ವಿಕವಾಗಿ ಹಾಗೂ ಮತೀಯ ಚಿಂತನೆಗಳಿಗೀಡಾಗಿ ವಿಘಟನೆಯತ್ತ ಸಾಗಿದ್ದೂ ಈ ಬೆಳಗಾವಿ ಮಹಾಧಿವೇಶನದ ನಂತರದಲ್ಲೇ. ಬ್ರಿಟೀಷರ ವಿರುದ್ಧ ಹೋರಾಟದಲ್ಲಿ ಐಕ್ಯತೆ ಮತ್ತು ಐಕಮತ್ಯದಿಂದ ಕಡೆಯವರೆಗೂ ಸ್ವಾತಂತ್ರ್ಯ ಸಂಗ್ರಾಮವನ್ನು ಕೊಂಡೊಯ್ಯಲಾದರೂ, ಈ ಅಧಿವೇಶನದ ಆಸುಪಾಸಿನಲ್ಲೇ ಹೋರಾಟದ ಆಂತರಿಕ ಹಾದಿಗಳಲ್ಲಿ ಮತೀಯ ರಾಜಕಾರಣವೂ ಉಗಮಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಹಿಂದೂ ಮಹಾಸಭಾ ಕಾಂಗ್ರೆಸ್‌ ಪಕ್ಷದೊಡನೆ ಒಡನಾಟ ಹೊಂದಿದ್ದರೂ, ಹಿಂದೂ ಅಸ್ಮಿತೆಯನ್ನು ಒಂದು ರಾಷ್ಟ್ರ ನಿರ್ಮಾಣದ ಭೂಮಿಕೆಯನ್ನಾಗಿ ಪರಿವರ್ತಿಸುವ ಪ್ರಯತ್ನ ಸಾವರ್ಕರ್‌, ಮೂಂಜೆ ಮೊದಲಾದವರಿಂದ ಆರಂಭವಾಗಿದ್ದು ಇದೇ ಹಂತದಲ್ಲೇ.

 ತಾತ್ವಿಕ ಭಿನ್ನಾಭಿಪ್ರಾಯಗಳ ನಡುವೆ

1925ರಲ್ಲಿ ಹಿಂದುತ್ವದ ಉಗಮದೊಂದಿಗೆ ಆರಂಭವಾದ ಆರೆಸ್ಸೆಸ್‌ ಸೈದ್ಧಾಂತಿಕವಾಗಿ ಒಂದು ಧೃವವನ್ನು ಆಕ್ರಮಿಸಿದರೆ ಮತ್ತೊಂದು ಧೃವದಲ್ಲಿ ಮೊಹಮ್ಮದ್‌ ಅಲಿ ಜಿನ್ನಾ ಅವರ ಎರಡು ರಾಷ್ಟ್ರಗಳ ಪರಿಕಲ್ಪನೆ ಮೊದಲ ಬಾರಿಗೆ ಚಾಲನೆ ಪಡೆದುಕೊಂಡಿತ್ತು. ಈ ಎರಡು ಅತಿರೇಕಗಳ (Extremes) ನಡುವೆ ಭಾರತದ ಶ್ರಮಜೀವಿ ವರ್ಗವನ್ನು ಪ್ರತಿನಿಧಿಸುವ ಹಾಗೂ ವಸಾಹತು ವಿರೋಧಿ ಹೋರಾಟದಲ್ಲಿ ಬಂಡವಾಳಶಾಹಿ-ಸಾಮ್ರಾಜ್ಯಶಾಹಿಯನ್ನು ವಿರೋಧಿಸುವ ಕಮ್ಯುನಿಸ್ಟ್‌ ಪಕ್ಷದ ಉದಯವಾಗಿತ್ತು. ಕಾಕತಾಳೀಯವೆಂಬಂತೆ ಇದೇ ಸಮಯದಲ್ಲಿ, ಇಂದು ಭಾರತದ ಆಳ್ವಿಕೆಯನ್ನು ಬಹುಮಟ್ಟಿಗೆ ಆಕ್ರಮಿಸಿರುವ, ಹಿಂದುತ್ವ ರಾಜಕಾರಣದ ಬೇರುಗಳು ಆರೆಸ್ಸೆಸ್‌ ಸಂಘಟನೆಯ ಮೂಲಕ ಮೊಳಕೆಯೊಡೆದಿತ್ತು. ಇವುಗಳ ನಡುವೆ ಸಮಾಜವಾದಿ ಬಣಗಳು ತಮ್ಮದೇ ಆದ ರಾಜಕೀಯ ಧೋರಣೆಯನ್ನು ಪ್ರತಿಪಾದಿಸಲಾರಂಭಿಸಿದ್ದವು. ಡಾ ಬಿ.ಆರ್.‌ ಅಂಬೇಡ್ಕರ್‌ ಮತ್ತು ಗಾಂಧಿ ನಡುವಿನ ತಾತ್ವಿಕ ವಿರಸ ಉಲ್ಪಣಿಸಿದ್ದೂ ಈ ಸಮಯದಲ್ಲೇ.

 ಈ ಎಲ್ಲ ವೈರುಧ್ಯ ಮತ್ತು ವಿರೋಧಾಭಾಸಗಳ ನಡುವೆಯೇ ಮುಂದಿನ ಎರಡು ದಶಕಗಳ ಕಾಲ ದೇಶದ ಜನಸಾಮಾನ್ಯರನ್ನು ಸ್ವಾತಂತ್ರ್ಯ ಮತ್ತು ವಿಮೋಚನೆಯೆಡೆಗೆ ಕೊಂಡೊಯ್ದಿದ್ದು ʼ ಗಾಂಧಿ ʼ ಎಂಬ ಒಂದು ಆಯಸ್ಕಾಂತೀಯ ಶಕ್ತಿ. ಆರಾಧನಾ ಭಾವದಿಂದ ಮುಕ್ತವಾಗಿ ನೋಡಿದಾಗ ಈ ಮಹಾಧಿವೇಶನದ ನಂತರದಲ್ಲೇ ಉಗಮಿಸಿದ ಅಂಬೇಡ್ಕರ್‌ ಅವರ ನೇತೃತ್ವದ ದಮನಿತ ಸಮುದಾಯಗಳ ಹೋರಾಟಗಳು, ಭಗತ್‌ ಸಿಂಗ್‌ ಮತ್ತು ಸಹಚರರ ಕ್ರಾಂತಿಕಾರಿ ಆಂದೋಲನಗಳು, ಸುಭಾಷ್‌ ಚಂದ್ರಬೋಸ್‌ ಅವರ ಭಿನ್ನ ಹೋರಾಟದ ಮಾರ್ಗಗಳು ಸಹ ಭಾರತದ ಸ್ವಾತಂತ್ರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಸ್ವಾತಂತ್ರ್ಯಪೂರ್ವ ಭಾರತದ ಹೋರಾಟಗಳನ್ನು ಹಾಗೂ ಸಂಘರ್ಷಗಳನ್ನು ಏಕ ವ್ಯಕ್ತಿಗೆ ಆರೋಪಿಸದೆ ನೋಡಿದಾಗ, ʼ ಗಾಂಧಿ ʼ ಎಲ್ಲರನ್ನೂ ಒಳಗೊಳ್ಳುವ ಒಂದು ಶಕ್ತಿಯಾಗಿ ಕಾಣುತ್ತಾರೆ. ಈ ಆಯಸ್ಕಾಂತೀಯ ವ್ಯಕ್ತಿತ್ವ ಮತ್ತು ಅವರಲ್ಲಿದ್ದ ಚಿಕಿತ್ಸಕ ಲಕ್ಷಣಗಳನ್ನು ಸಮ್ಮಾನಿಸುತ್ತಲೇ, ಬೆಳಗಾವಿ ಮಹಾಧಿವೇಶನದ ಸಾರ್ಥಕ್ಯವನ್ನು ಪರಾಮರ್ಶಿಸಬೇಕಾಗುತ್ತದೆ.

 ವರ್ತಮಾನದ ನೆಲೆಯಲ್ಲಿ

 ಈ ಚಾರಿತ್ರಿಕ ಸಂದರ್ಭಗಳಿಂದ ಹೊರಬಂದು ವರ್ತಮಾನ ಭಾರತದತ್ತ ನೋಡಿದಾಗ ನಮಗೆ ಗಾಂಧಿ ಎಲ್ಲಿ ಕಾಣುತ್ತಾರೆ ? ಹೇಗೆ ಕಾಣುತ್ತಾರೆ ? ಬಹುತೇಕ 1990ರವರೆಗೂ ಭಾರತೀಯ ಸಮಾಜದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಸಂಕಥನಗಳಲ್ಲಿ ಕೇಂದ್ರ ಬಿಂದುವಾಗಿದ್ದ ಗಾಂಧಿ ತದನಂತರದಲ್ಲಿ ಹಿಂಬದಿಗೆ ಸರಿದಿದ್ದಾದರೂ ಏಕೆ ? ಈ ಪ್ರಶ್ನೆಗೆ ಉತ್ತರ ಡಾ. ಅಂಬೇಡ್ಕರ್‌ ಅವರಲ್ಲಿದೆ. ಭಾರತೀಯ ಸಮಾಜವನ್ನು ಅತಿಯಾಗಿ ಕಾಡುವ ಜಾತಿ ವ್ಯವಸ್ಥೆ, ಅದರೊಳಗಿನ ಮೇಲ್ಜಾತಿಗಳ ಮೇಲರಿಮೆ-ಶ್ರೇಷ್ಠತೆ ಮತ್ತು ಪಾರಮ್ಯ ಹಾಗೂ ಈ ವ್ಯವಸ್ಥೆಯಲ್ಲಿ ನಿರಂತರವಾಗಿ ವಂಚಿತವಾಗುತ್ತಲೇ ಇದ್ದ ತಳಸಮುದಾಯಗಳು, ವಿಶೇಷವಾಗಿ ಅಸ್ಪೃಶ್ಯ ಸಮಾಜಗಳು, ಸಾರ್ವಜನಿಕ ಸಂಕಥನಗಳನ್ನು ಆಕ್ರಮಿಸಿದ್ದು 1980ರ ದಶಕದ ಆಸುಪಾಸಿನಲ್ಲಿ. ಬಹುಶಃ ಅಂಬೇಡ್ಕರ್‌ ಅವರ ಪರಿಚಯ ಆಗದೆ ಹೋಗಿದ್ದರೆ, ವರ್ತಮಾನದ ವಿಶಾಲ ಸಮಾಜಕ್ಕೆ ಭಾರತೀಯ ಸಮಾಜದ ಒಳಸುಳಿಗಳೇ ಅರ್ಥವಾಗುತ್ತಿರಲಿಲ್ಲ.

ಇಂದು ಭಾರತ ಮತ್ತೊಂದು ಕವಲು ಹಾದಿಯಲ್ಲಿ ನಿಂತಿದೆ. ಸ್ವಾತಂತ್ರ್ಯ ಪಡೆದು 77 ವರ್ಷಗಳು ಸಂದಿವೆ. ಭಾರತದ ಗಣತಂತ್ರ ಕೆಲವೇ ದಿನಗಳಲ್ಲಿ ತನ್ನ ವಜ್ರ ಮಹೋತ್ಸವನ್ನು ಆಚರಿಸಲಿದೆ. ಆದರೆ ಭಾರತ ಎತ್ತ ಸಾಗುತ್ತಿದೆ ಅಥವಾ ಎತ್ತ ಹೊರಳುತ್ತಿದೆ ಎನ್ನುವುದು ಜಿಜ್ಞಾಸೆಯಾಗಿಯೇ ಉಳಿದಿದೆ. ತಮ್ಮ India is Broken ಕೃತಿಯಲ್ಲಿ ಅರ್ಥಶಾಸ್ತ್ರಜ್ಞ ಅಶೋಕ ಮೋದಿ ಈ ಜಿಜ್ಞಾಸೆಯನ್ನು ಹೀಗೆ ಬಣ್ಣಿಸುತ್ತಾರೆ :

 “ ಸ್ವಾತಂತ್ರ್ಯೋತ್ತರದ ಭಾರತದ 75 ವರ್ಷಗಳ ಪಯಣದ ಆರಂಭದಲ್ಲಿ (1950ರಲ್ಲಿ) ಭಾರತದ ಮುಂದೆ ಮೂರು ಸವಾಲುಗಳಿದ್ದವು. ಅವುಗಳೆಂದರೆ ಕೃಷಿ ಕ್ಷೇತ್ರಕ್ಕೆ ಮರುಜೀವ ಮತ್ತು ಶಕ್ತಿ ತುಂಬುವುದು, ನಗರಗಳಲ್ಲಿ ಉತ್ತೇಜಕ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಪಡೆಯುವುದು. 2020ರಲ್ಲಿ ನಿಂತು ನೋಡಿದಾಗ ನಮಗೆ ಕಾಣುವ ಸವಾಲುಗಳೆಂದರೆ, ಬಳಲುತ್ತಿರುವ ಕೃಷಿ ವಲಯವನ್ನು ಪುನಶ್ಚೇತನಗೊಳಿಸುವುದು, ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವ ಆರ್ಥಿಕತೆಯಲ್ಲಿ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುವುದು ಮತ್ತು ಹೆಚ್ಚು ಸಂಕೀರ್ಣವಾಗಿರುವ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಶಕ್ತಿ ಗಳಿಸುವುದು.  ಸ್ವಾತಂತ್ರ್ಯದ ದಿನಗಳಲ್ಲಿ ಭಾರತವನ್ನು ಸಾಮೂಹಿಕ ಅನಕ್ಷರತೆ ಕಾಡುತ್ತಿತ್ತು, ಕೋವಿದ್‌ 19 ನಂತರದಲ್ಲಿ ವರ್ತಮಾನದ ಭಾರತ ಸಾಮೂಹಿಕ ಅನಕ್ಷರತೆಯನ್ನು ಮತ್ತೊಮ್ಮೆ ಎದುರಿಸುತ್ತಿದೆ. ” (Ashoka Modi  ʼ India is Broken “ ಪುಟ396-97)

DK Shivakumar: ಸುರ್ಜೇವಾಲ ಅವರನ್ನ ಬದಲಾವಣೆ ಮಾಡ್ಬೇಕಂತೆ ನಿಮ್ಮ ಸಚಿವರು ಹೇಳ್ತಾರೆ..#surjewala #siddaramaiah

 ಈ ಮಾತುಗಳು ಭಾವನಾತ್ಮಕವಾಗಿ ಅತಿರೇಕ ಎನಿಸಬಹುದು. ಆದರೆ ವರ್ತಮಾನ ಭಾರತದ ಸುಡುವಾಸ್ತವಗಳನ್ನು ಕಾಣಲು ಕೊಂಚ ಒಳಹೊಕ್ಕು ನೋಡಬೇಕಿದೆ. ಈ ಸಂದರ್ಭದಲ್ಲೇ 1924ರ ಬೆಳಗಾವಿ ಮಹಾಧಿವೇಶನಕ್ಕೆ ಮರುಜೀವ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ. ಗಾಂಧಿ ಭಾರತವನ್ನು ಮರುನಿರ್ಮಿಸುವ ಉದಾತ್ತ ಘೋಷಣೆಯೊಂದಿಗೆ ಬೆಳಗಾವಿಯಲ್ಲಿ ಚರಿತ್ರೆಯ ಮರುನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ಆದರೆ  ʼ ಗಾಂಧಿ ಭಾರತ ʼ ಎಂದರೇನು ಎಂಬ ಪ್ರಶ್ನೆಗೆ ಬಹುಶಃ ಮುಖ್ಯವಾಹಿನಿಯ ಯಾವ ಪಕ್ಷಗಳಲ್ಲೂ ಉತ್ತರ ಸಿಗುವುದಿಲ್ಲ. ಗಾಂಧಿ ಆದರ್ಶಗಳನ್ನು ಅನುಸರಿಸುವುದು, ತತ್ವಗಳನ್ನು ಅಳವಡಿಸಿಕೊಳ್ಳುವುದು ಮತ್ತು ಕನಸನ್ನು ನನಸಾಗಿಸುವುದು, ಈ ಮೂರು ಘೋಷ ವಾಕ್ಯಗಳು ಮೊಳಗುತ್ತಿವೆ. ಆಚರಣಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ಇದು ಆಕರ್ಷಣೀಯವಾದರೂ ಭಾರತವನ್ನು ಆಳುತ್ತಿರುವ ಸರ್ಕಾರಗಳ ಸಾಮಾಜಿಕ ಧೋರಣೆ, ಆರ್ಥಿಕ ನೀತಿ ಮತ್ತು ಸಾಂಸ್ಕೃತಿಕ ನಡೆಯನ್ನು ಗಮನಿಸಿದಾಗ, ಈ ಮೂರೂ ಘೋಷಣೆಗಳು ಅಲಂಕಾರಿಕವಾಗಿ ಮಾತ್ರ ಕಾಣಲು ಸಾಧ್ಯ.

 ಗಾಂಧಿಯ ನೆನಪು ಮತ್ತು ಸಾಕ್ಷಾತ್ಕಾರ

 ಮೊದಲನೆಯದಾಗಿ ಗಾಂಧಿ ಆದರ್ಶಗಳ ಅನುಸರಣೆ ಎಂದರೇನು ? ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ, ಸರಳ ಜೀವನಶೈಲಿ ಮತ್ತು ಎಲ್ಲರನ್ನೊಳಗೊಳ್ಳುವ ಸಾಮಾಜಿಕ ಪರಿಸರ. ಇಂದು ದೇಶವನ್ನು ಆಳುತ್ತಿರುವ ರಾಜಕೀಯ ಪಕ್ಷಗಳು, ಕಾಂಗ್ರೆಸ್‌ ಒಳಗೊಂಡಂತೆ, ಈ ಮೂರು ಆದರ್ಶಗಳನ್ನು ಪುನರುಚ್ಛರಿಸುವ ನೈತಿಕತೆಯನ್ನು ಉಳಿಸಿಕೊಂಡಿವೆಯೇ ? ಕಳೆದ ಚುನಾವಣೆಗಳಲ್ಲಿ ಶಾಸನಸಭೆಗೆ ಆಯ್ಕೆಯಾದ ಜನಪ್ರತಿನಿಧಿಗಳ ಪೈಕಿ ಬಿಜೆಪಿಯ ಶೇಕಡಾ 58, ಕಾಂಗ್ರೆಸ್‌ನ ಶೇಕಡಾ 52 ಮತ್ತು ಜೆಡಿಎಸ್‌ನ ಶೇಕಡಾ 19ರಷ್ಟು ಅಭ್ಯರ್ಥಿಗಳು ಅಪರಾಧದ ಹಿನ್ನೆಲೆಯುಳ್ಳವರಾಗಿದ್ದಾರೆ. ಆಡಳಿತ-ಹಣಕಾಸು ಭ್ರಷ್ಟಾಚಾರವು ಇಂದು ಸರ್ವವ್ಯಾಪಿಯಾಗಿದ್ದು, ಭ್ರಷ್ಟತೆಯ ಪ್ರಮಾಣವನ್ನು ಆಧರಿಸಿ ಚುನಾಯಿತ/ಪದಚ್ಯುತ/ಪರಾಜಿತ ಜನಪ್ರತಿನಿಧಿಗಳನ್ನು ಶ್ರೇಣೀಕರಣಗೊಳಿಸಬಹುದಾಗಿದೆ.

 ಅಧಿಕಾರವಲಯವನ್ನು ಪ್ರವೇಶಿಸಲು ಬೇಕಿರುವ ಅರ್ಹತೆಯ ಮಾನದಂಡಗಳು ಸಮಾಜದ ಮಧ್ಯದಿಂದ ಮರೆಯಾಗಿ ಮಾರುಕಟ್ಟೆಯ ಅಂಗಳದಲ್ಲಿ ವಿರಾಜಮಾನವಾಗಿದೆ. ಇಂಜಿನಿಯರಿಂಗ್‌,ವೈದ್ಯಕೀಯ ಮುಂತಾದ ಶೈಕ್ಷಣಿಕ ಸಂಸ್ಥೆಗಳು, ರಿಯಲ್‌ ಎಸ್ಟೇಟ್‌ ಉದ್ಯಮ, ಲೋಕೋಪಯೋಗಿ ಕಾಮಗಾರಿಗಳ ಗುತ್ತಿಗೆ ಮತ್ತು ಇತರ ಔದ್ಯಮಿಕ ಸ್ಥಾನಮಾನಗಳು ಇಂದು ಮಾನದಂಡಗಳಾಗಿವೆ. ಇಲ್ಲಿಂದಲೇ ಉಗಮಿಸುವ ಭ್ರಷ್ಟತೆಯ ಬೇರುಗಳು ರಾಜ್ಯದ ವಿಶ್ವವಿದ್ಯಾಲಯಗಳನ್ನೂ ಒಳಗೊಂಡಂತೆ, ಇಡೀ ಶೈಕ್ಷಣಿಕ ವಲಯವನ್ನು ಆಕ್ರಮಿಸಿರುವುದಲ್ಲದೆ, ತಳಸಮಾಜಕ್ಕೆ ಹೆಗಲು ನೀಡಬೇಕಾದ ಸರ್ಕಾರಿ ನಿಗಮ, ಮಂಡಲಿಗಳನ್ನೂ, ಸಾಂಸ್ಕೃತಿಕ ಸಂಸ್ಥೆಗಳನ್ನೂ ಆವರಿಸಿದೆ. ಈ ವಿಕೃತಿಗಳ ನಡುವೆ ಗಾಂಧಿ ಆದರ್ಶಗಳನ್ನು ಎಲ್ಲಿ ಹುಡುಕುವುದು ?

 ಎರಡನೆಯ ಘೋಷವಾಕ್ಯ ಗಾಂಧಿ ತತ್ವದ ಅಳವಡಿಕೆ. ಸರಳ ಜೀವನ, ಸಹಬಾಳ್ವೆ, ಎಲ್ಲರನ್ನೂ ಒಳಗೊಳ್ಳುವ (Inclusive) ಮನಸ್ಥಿತಿ ಮತ್ತು ಸಾಮಾಜಿಕವಾಗಿ ನೆಲದ ಮೇಲೆ, ಅವಕಾಶವಂಚಿತರ ನಡುವೆ ನಿಂತು ಸುತ್ತಲಿನ ಸಮಾಜವನ್ನು ನೋಡುವ ವ್ಯವಧಾನ ಇವೆಲ್ಲವೂ ಗಾಂಧಿ ತತ್ವಗಳು. ಖಾದಿ ಒಂದು ಸಂಕೇತ ಮಾತ್ರ. ಇಂದಿನ ಸರ್ಕಾರವಾಗಲೀ, ಅಧಿಕಾರದಿಂದ ಹೊರಗಿರುವ ರಾಜಕೀಯ ನಾಯಕರಾಗಲೀ ಈ ವ್ಯವಧಾನವನ್ನು ರೂಢಿಸಿಕೊಂಡಿದ್ದಾರೆಯೇ ? ಸರಳತೆ ಮತ್ತು ಸಹಬಾಳ್ವೆಯನ್ನು ತಮ್ಮ ಜೀವನಾದರ್ಶವಾಗಿ ಪಾಲಿಸುತ್ತಿರುವ ಒಬ್ಬರಾದರೂ ನಮ್ಮ ನಡುವೆ ಕಾಣಲು ಸಾಧ್ಯವೇ ? ಹೋಗಲಿ ಮಾರುಕಟ್ಟೆಯ ಆಕ್ರಮಣದಿಂದ ಜರ್ಜರಿತರಾಗಿ ಸರಳ ಜೀವನವನ್ನೂ ನಡೆಸಲಾಗದ ಲಕ್ಷಾಂತರ ಮಂದಿಯ ಬದುಕನ್ನು ಸಮೀಪದಿಂದ ನೋಡುವ, ಸಾಂತ್ವನ ನೀಡುವ ಒಳನೋಟವನ್ನು ರೂಢಿಸಿಕೊಂಡಿದ್ದಾರೆಯೇ ? ಇದಾವುದೂ ಇಲ್ಲದೆ 1924ರ ಬೆಳಗಾವಿಯನ್ನು ನೆನೆಯುವುದು ಕೇವಲ ಆಡಂಬರದ ಆಡುಂಬೊಲ ಮಾತ್ರ ಆದೀತು.

 ಮೂರನೆಯ ಘೋಷವಾಕ್ಯ, ಗಾಂಧಿ ಕನಸನ್ನು ನನಸಾಗಿಸುವುದು. ಗಾಂಧಿಯ ಕನಸು ʼ ಗ್ರಾಮ ಭಾರತʼ. ತಾತ್ವಿಕವಾಗಿ ಗ್ರಾಮಭಾರತದ ಮೂಲ ತತ್ವಗಳು ವರ್ತಮಾನದ ಸಂದರ್ಭದಲ್ಲಿ ಪ್ರಶ್ನಾರ್ಹವಾಗಬಹುದಾದರೂ, ಇಂದಿಗೂ 6,49 481 ಗ್ರಾಮಗಳನ್ನು ತನ್ನ ಒಡಲಲ್ಲಿಟ್ಟುಕೊಂಡು, ವಿಶ್ವಗುರು ಆಗಲು ಹೊರಟಿರುವ ವಿಕಸಿತ ಭಾರತ ಈ ಗ್ರಾಮಗಳ ಆರ್ಥಿಕತೆಯನ್ನು ಎಷ್ಟು ಸುಧಾರಿಸಲು ಸಾಧ್ಯವಾಗಿದೆ. ಈ ಗ್ರಾಮಗಳಿಂದ ತಮ್ಮ ಅನಿಶ್ಚಿತ ಬದುಕನ್ನು ಕಟ್ಟಿಕೊಳ್ಳಲು ನಿರಂತರವಾಗಿ ವಲಸೆ ಹೋಗುವ ಯುವ ಸಮೂಹಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆಯೇ ? ಗ್ರಾಮಗಳಲ್ಲೇ ಕೃಷಿಯನ್ನೇ ಅವಲಂಬಿಸಿ, ತಮ್ಮ ಬದುಕು ಸವೆಸುವ ದೇಶದ ಶೇಕಡಾ ಲಕ್ಷಾಂತರ ರೈತರ ಜೀವನೋಪಾಯದ ಮಾರ್ಗಗಳನ್ನು ಸುಗಮಗೊಳಿಸಲಾಗಿದೆಯೇ ? ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (National Statistical Office) ನೀಡಿರುವ ಅಧಿಕೃತ ವರದಿಯ ಅನುಸಾರ ಭಾರತದಲ್ಲಿ 93 ದಶಲಕ್ಷ ಕೃಷಿ ಆಧಾರಿತ ಕುಟುಂಬಗಳಿವೆ. ಹದಿನೈದು ಕೋಟಿ ಜನಸಂಖ್ಯೆ ಸಂಪೂರ್ಣ ಕೃಷಿಯನ್ನೇ ಅವಲಂಬಿಸಿವೆ.

 ಈ ಬೃಹತ್‌ ಜನಸಂಖ್ಯೆಯ ಜೀವನ ಮತ್ತು ಜೀವನೋಪಾಯದ ಹಾದಿ ನವ ಉದಾರವಾದ ಮತ್ತು ಕಾರ್ಪೊರೇಟ್‌ ಮಾರುಕಟ್ಟೆಯ ಆಕ್ರಮಣದಿಂದ ದುರ್ಭರವಾಗುತ್ತಲೇ ಇದೆ. ಇಪ್ಪತ್ತೈದು ವರ್ಷಗಳಲ್ಲಿ ಮೂರು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಇದಕ್ಕೆ ಸಾಕ್ಷಿ. ವರ್ಷಾನುಗಟ್ಟಳೆ ತಮ್ಮ ಹಕ್ಕೊತ್ತಾಯಗಳಿಗಾಗಿ ಹೋರಾಡುವ ರೈತರನ್ನು ಕಣ್ಣೆತ್ತಿಯೂ ನೋಡದ ಆಡಳಿತ ವ್ಯವಸ್ಥೆ ನಮ್ಮನಡುವೆ ಇದೆ. ಗ್ರಾಮೀಣ ಗುಡಿ ಕೈಗಾರಿಕೆಗಳು, ಪಾರಂಪರಿಕ ಕಸುಬುಗಳು, ಗ್ರಾಮೀಣ ಕುಶಲ ಕರ್ಮಿಗಳು ನಗರದ ಆಧುನಿಕತೆಯಿಂದ ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ದೇಶದ ಬುಡಕಟ್ಟು ಸಮಾಜಗಳು ಕಾರ್ಪೊರೇಟ್‌ ಮಾರುಕಟ್ಟೆಯ ದಾಳಿಗೆ ಸಿಲುಕಿ ತಮ್ಮ ಜೀವನ-ಜೀವನೋಪಾಯ ಮತ್ತು ಸಾಂಸ್ಕೃತಿಕ ನೆಲೆಗಳನ್ನೂ ಕಳೆದುಕೊಳ್ಳುತ್ತಿದ್ದಾರೆ. ಎಲ್ಲ ಬೂರ್ಷ್ವಾ ಪಕ್ಷಗಳು ನವ ಉದಾರವಾದಿ ಕಾರ್ಪೋರೇಟ್‌ ಮಾರುಕಟ್ಟೆಯನ್ನು ಆರಾಧಿಸುತ್ತಿರುವ ಈ ಹೊತ್ತಿನಲ್ಲಿ, ಈ ವಂಚಿತ ಜನತೆ ಎತ್ತ ಹೋಗಬೇಕು ? ಗಾಂಧಿ ಇಲ್ಲಿ ತಾತ್ವಿಕವಾಗಿ ಪ್ರಸ್ತುತವಾಗುತ್ತಾರೆ. ಆದರೆ ನಮಗೆ ಅಲ್ಲಿ ಗಾಂಧಿ ಕಾಣುತ್ತಾರೆಯೇ ? ಹುಡುಕಾಡಬೇಕಲ್ಲವೇ ?

 ವ್ಯಕ್ತಿ ಮತ್ತು ವ್ಯಕ್ತಿತ್ವದ ನೆಲೆಯಲ್ಲಿ

 ಗಾಂಧಿ ಆಗಲೀ ಅಥವಾ ಅಂಬೇಡ್ಕರ್‌ ಆಗಲೀ, ಮೂಲತಃ ಇರಬೇಕಾದ್ದು ರಾಜಕೀಯ ನಾಯಕರ ವ್ಯಕ್ತಿತ್ವಗಳಲ್ಲಿ. ಅವರ ಜೀವನ ಧ್ಯೇಯಗಳನ್ನು ಯಥಾವತ್ತಾಗಿ ಪಾಲಿಸುವ ಸಂತರಾಗಬೇಕಿಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಮಹಾತ್ಮನ ಆದರ್ಶಗಳನ್ನು ಅನುಸರಿಸುವಷ್ಟು ಮಟ್ಟಿಗಾದರೂ, ಬೌದ್ಧಿಕ ಆಲೋಚನೆ ರಾಜಕಾರಣಿಗಳಲ್ಲಿರಬೇಕಲ್ಲವೇ ? ಡಿಜಿಟಲ್‌ ಭಾರತದಲ್ಲೂ ಮಲಗುಂಡಿಯಲ್ಲಿ ಸಿಲುಕಿ ಸಾಯುವ ಅಸ್ಪೃಶ್ಯರು ಎದ್ದು ಕಾಣುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದ ಬಯಲಿನಲ್ಲೂ ಅಮಾಯಕ ಮಹಿಳೆಯರು ಅತ್ಯಾಚಾರ, ಬಹಿಷ್ಕಾರ, ದೌರ್ಜನ್ಯಗಳಿಗೆ ಈಡಾಗುತ್ತಿದ್ದಾರೆ. ಅತ್ಯುನ್ನತ ಆಧುನಿಕ ಶೈಕ್ಷಣಿಕ ಪರಿಸರದ ನಡುವೆಯೂ ಶಿಕ್ಷಣ ವಂಚಿತ ಮಕ್ಕಳು ಹೆಚ್ಚಾಗುತ್ತಿದ್ದಾರೆ. ಸಾಂವಿಧಾನಿಕ ಸುರಕ್ಷತೆಯ ನಡುವೆಯೇ ತಳಸ್ತರದ ಜನತೆ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ತಾರತಮ್ಯಗಳನ್ನು ಎದುರಿಸುತ್ತಿದ್ದಾರೆ.

 ಬೆಳಗಾವಿಗೆ ಹೊರಡುವ ಮುನ್ನ, ಅಲ್ಲಿ 1924ರ ಚಾರಿತ್ರಿಕ ಸಂದರ್ಭವನ್ನು ಪುನರ್‌ ಸೃಷ್ಟಿಸುವ ಮುನ್ನ, ಸಮಾಜವಾದ-ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ದತೆಯನ್ನು ತೋರುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಮತ್ತು ವರ್ತಮಾನದ ಇಡೀ ರಾಜಕೀಯ ಬಳಗ, ಈ ಮೇಲಿನ ಪ್ರಶ್ನೆಗಳಿಗೆ ಎದೆಮುಟ್ಟಿಕೊಂಡು ಉತ್ತರಿಸಬೇಕಿದೆ. ಇಲ್ಲವಾದರೆ ಈಗಾಗಲೇ ರಾಜಕೀಯ ಚದುರಂಗದಲ್ಲಿ ಪಗಡೆಯಾಗಿರುವ ಗಾಂಧಿ ಕೇವಲ ಪ್ರತಿಮೆಯಾಗಿ ಅಲಂಕಾರಿಕವಾಗಿಬಿಡುತ್ತಾರೆ. ವರ್ಷಕ್ಕೆರಡು ಬಾರಿ ನೆನಪಾಗುವ ವ್ಯಕ್ತಿಯಾಗಿಬಿಡುತ್ತಾರೆ. ಗಾಂಧಿ ಭವನಗಳು ಒಣ ಚರ್ಚೆಗಳ ಆಡುಂಬೊಲಗಳಾಗಿಬಿಡುತ್ತವೆ. 1924ರ ಬೆಳಗಾವಿ ನಮಗೆ ನೆನಪಿಸಬೇಕಿರುವುದು ಈ ವಾಸ್ತವಗಳನ್ನು. ಆ ಚಾರಿತ್ರಿಕ ಸನ್ನಿವೇಶ ನಮ್ಮೊಳಗೆ ಉದ್ಧೀಪನಗೊಳಿಸಬೇಕಿರುವುದು, ಗಾಂಧಿ, ಅಂಬೇಡ್ಕರ್‌ ಮತ್ತಿತರ ಸ್ವಾತಂತ್ರ್ಯದ ಪೂರ್ವಸೂರಿಗಳು ಕಂಡ ಕನಸುಗಳನ್ನು.

ಈ ಕನಸುಗಳನ್ನು ಸಾಕಾರಗೊಳಿಸಬೇಕಾದರೆ ಭಾರತದ ಕಟ್ಟಕಡೆಯ ವ್ಯಕ್ತಿಯೂ ಕೇವಲ ಕನಸು ಕಟ್ಟುವ ಭ್ರಮೆಯಿಂದ ಹೊರಬಂದು ವಾಸ್ತವ ಬದುಕಿನಲ್ಲಿ ಸುಸ್ಥಿರಜೀವನ ಕಾಣುವಂತಾಗಬೇಕು. ನವ ಉದಾರವಾದ ಮತ್ತು ಕಾರ್ಪೊರೇಟ್‌ ಬಂಡವಾಳಶಾಹಿ ಮಾರುಕಟ್ಟೆಯ ಪ್ರಭಾವದಿಂದ ಭ್ರಮಾಧೀನರಾಗುತ್ತಿರುವ ಬೃಹತ್‌ ಯುವಸ್ತೋಮವನ್ನು ಭ್ರಮಾತ್ಮಕತೆಯಿಂದ ವಿಮೋಚನೆಗೊಳಿಸಿ ವಾಸ್ತವದಲ್ಲಿ ಬದುಕುವಂತೆ ಮಾಡಬೇಕು. ಸಮಾಜವಾದ ಮತ್ತು ಸಂವಿಧಾನ ಗ್ರಾಂಥಿಕವಾಗಿ ಉಳಿಯದೆ ಸಮಾಜದ ಕಟ್ಟಕಡೆಯ ಅವಕಾಶವಂಚಿತ ವ್ಯಕ್ತಿಗೆ ಅನ್ವಯಿಸುವಂತಾಗಬೇಕು. ಇದು ಸಾಧ್ಯವಾಗಬೇಕಾದರೆ ಭಾರತದ ಅಧಿಕಾರ ರಾಜಕಾರಣ ಊಳಿಗಮಾನ್ಯ ಪಿತೃಪ್ರಧಾನತೆ, ಕಾರ್ಪೊರೇಟ್‌ ಮಾರುಕಟ್ಟೆ, ಬಂಡವಾಳಶಾಹಿ, ಜಾತಿ ಶ್ರೇಷ್ಠತೆ, ಮತೀಯ ಯಜಮಾನಿಕೆ ಮತ್ತು ಗಂಡಾಳ್ವಿಕೆಯ ಮೌಲ್ಯಗಳಿಂದ ಮುಕ್ತವಾಗಬೇಕು.

 ಭಾರತದ ರಾಜಕಾರಣದಲ್ಲಿ ಗಾಂಧಿ ಅದೃಶ್ಯರಾಗಿದ್ದಾರೆ, ಗಾಂಧಿಯಲ್ಲಿ ರಾಜಕೀಯವನ್ನು ಕಾಣಲು ವಿಫಲವಾಗಿದ್ದೇವೆ. ಈ ಸಂದಿಗ್ಧತೆಯ ನಡುವೆ 1924ರ ಬೆಳಗಾವಿ 2024ರಲ್ಲಿ ಹೇಗೆ ಕಾಣಲು ಸಾಧ್ಯ ?

-೦-೦-೦-

Previous Post

ಗರ್ಭಾವಸ್ಥೆಯಲ್ಲಿ ಫೋಲಿಕ್ ಆಸಿಡ್ ತೆಗೆದುಕೊಳ್ಳುವುದರಿಂದ ಆಗುವ ಪ್ರಯೋಜನಗಳು.!

Next Post

ಬೆಂಗಳೂರಿನ ಮಾಪನಸೌಧದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

Related Posts

Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
0

ಸ್ಯಾಂಡಲ್ವುಡ್ ನ ಭರವಸೆಯ ನಟ ಕಿರಣ್ ರಾಜ್ ಹುಟ್ಟು ಹಬ್ಬದಂದು ಸಿಕ್ಕಿತು ಮತ್ತೊಂದು ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ ಮತ್ತು ಉದ್ಯೋನ್ಮುಖ ನಟ ಕಿರಣ್ ರಾಜ್,...

Read moreDetails

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
Next Post
ಬೆಂಗಳೂರಿನ ಮಾಪನಸೌಧದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಮಾಪನಸೌಧದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

Recent News

Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada