ಬುಧವಾರ ನಿಗದಿಯಾಗಿದ್ದ ಡಿನ್ನರ್ ಮೀಟಿಂಗ್ಗೆ ಬ್ರೇಕ್ ಹಾಕಿದ ವಿಚಾರವಾಗಿ ಡಾ ಹೆಚ್.ಸಿ ಮಹದೇವಪ್ಪ ಮಾತನಾಡಿದ್ದು, ಯಾರೂ ದಲಿತರ ಸಮಸ್ಯೆ ಚರ್ಚೆಗೆ ಬ್ರೇಕ್ ಮಾಡಲು ಆಗಲ್ಲ, ನಮ್ಮನ್ನು ನಿಲ್ಲಿಸುವುದಕ್ಕೂ ಆಗಲ್ಲ, ನಿಲ್ಲಿಸಿದರೆ ಕೇಳುವುದೂ ಇಲ್ಲ ಎಂದು ಗರಂ ಆಗಿದ್ದಾರೆ. ನನ್ನ ನೋಡಿದರೆ ನಾವು ಬೇಜಾರದಂತೆ ಕಾಣತ್ತಾ..? ಎಂದು ಪ್ರಶ್ನಿಸಿರುವ ಸಚಿವರು, ಸಭೆ ರದ್ದಾಗಿಲ್ಲ, ಮುಂದೆ ಹಾಕಿದ್ದೇವೆ ಅಷ್ಟೇ ಎಂದಿದ್ದಾರೆ. ಸಭೆ ಮುಂದೂಡಿಕೆ ಮಾಡಿದ್ದಕ್ಕೆ ಬೇಜಾರಾಗುವುದು ಯಾಕೆ..? ಅಂತಾನೂ ತಿಳಿಸಿದ್ದಾರೆ.

ದಲಿತರ ಸಮಸ್ಯೆಗಳ ಬಗ್ಗೆ ನಿರಂತರ ಚರ್ಚೆ ಆಗಬೇಕು. ಇಂದೂ ಚರ್ಚೆ ಮಾಡ್ತೇವೆ, ಮುಂದೆಯೂ ಚರ್ಚೆ ಮಾಡ್ತೇವೆ. ರಣದೀಪ್ ಸಿಂಗ್ ಸುರ್ಜೆವಾಲಾ ಸಭೆ ಮಾಡಬೇಡಿ ಅಂದಿಲ್ವಲ್ಲ..? ಎಂದಿದ್ದು, ಸುರ್ಜೆವಾಲಾ ಕೂಡ ಬಂದು ವಿವರವಾಗಿ ಸಭೆಯಲ್ಲಿ ಭಾಗಿಯಾಗಿ ಮಾಹಿತಿ ಪಡೆಯಬಹುದು. ದಲಿತ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಎಲ್ಲರೂ ಸ್ವತಂತ್ರರು ಅಲ್ವಾ..? ಹಸ್ತದ ಗುರುತು ಎಲ್ಲರಿಗೂ ಗೊತ್ತು, ಕಾಣದ ಕೈಯಿ ಯಾವುದೂ ಇಲ್ಲ. ಇದರಲ್ಲಿ ರಾಜಕೀಯ ಹುಡುಕುವುದು ಏನಿದೆ..? ಎಂದಿದ್ದಾರೆ.

ಒಳ್ಳೆಯ ಉದ್ದೇಶದಿಂದಲೇ ಸಭೆ ಸೇರುವ ನಿರ್ಧಾರ ಆಗಿತ್ತು. ನನ್ನ ಪ್ರಕಾರ ಯಾವುದೇ ಗೊಂದಲವಿಲ್ಲ, ನಾವೆಲ್ಲ ಬಹಳ ಸ್ಪಷ್ಟವಾಗಿದ್ದೇವೆ. ಯಾವ ಹಸ್ತವೂ ಇದರಲ್ಲಿ ಕೆಲಸ ಮಾಡಿಲ್ಲ. ಸಭೆ ಮುಂದೂಡಿದ್ದಾರೆ, ಮುಂದೆ ಸಭೆ ಮಾಡುತ್ತೇವೆ. ರಾಜಣ್ಣ ಯಾವ ಉದ್ದೇಶದಿಂದ ಹೇಳಿದರೋ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗದ ಪರ ಇದೆ, ದಲಿತರ ಪರ ಇದೆ. ಇದರಲ್ಲಿ ತಪ್ಪು ಹುಡುಕುವುದು ಏನೂ ಕಾಣುತ್ತಿಲ್ಲ. ದಲಿತರ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಡ ಅಂತ ಹೇಳುವುದು ಯಾರು..? ಹಾಗೆ ಹೇಳುವುದಕ್ಕೆ ಆಗುವುದಿಲ್ಲ. ಯಾರೂ ಸಭೆ ಮಾಡಬೇಡಿ ಎಂದಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಮನುಷ್ಯ ಸಂಘ ಜೀವಿ, ಸಂಘ ಆದ ಮೇಲೆ ಚರ್ಚೆ ಮಾಡಲೇಬೇಕಲ್ಲ. ಯಾರೂ ದಲಿತರ ಸಮಸ್ಯೆ ಚರ್ಚೆಗೆ ಬ್ರೇಕ್ ಮಾಡಲು ಆಗಲ್ಲ, ನಿಲ್ಲಿಸುವುದಕ್ಕೂ ಆಗಲ್ಲ, ನಿಲ್ಲಿಸಿದರೆ ಕೇಳುವುದೂ ಇಲ್ಲ. ಕಾಂಗ್ರೆಸ್ ಶಕ್ತಿಯೇ ದಲಿತರು, ಹಾಗಿದ್ದಾಗ ಯಾರೂ ಅಡ್ಡಿ ಮಾಡಲು ಬರುವುದಿಲ್ಲ. ಕಾಂಗ್ರೆಸ್ ಚಿತ್ರದುರ್ಗದಲ್ಲಿ ದಲಿತ ಸಮಾವೇಶ ಮಾಡಿದ್ದರಿಂದಲೇ 135-136 ಸ್ಥಾನ ಬರುವುದಕ್ಕೆ ಸಾಧ್ಯವಾಯಿತು. ದಲಿತರೇ ಕಾಂಗ್ರೆಸ್ನ ಬೇಸ್ ಆಗಿರುವಾಗ ಹೈಕಮಾಂಡ್ ಯಾಕೆ ಸಭೆ ಮಾಡಬೇಡಿ ಅಂತ ಹೇಳ್ತಾರೆ. ಇದೆಲ್ಲ ಮೂರ್ಖತನ ಅಷ್ಟೆ ಎಂದಿದ್ದಾರೆ.




