ಫೆಬ್ರವರಿ 19 ರಿಂದ ಶುರುವಾಗಲಿರುವ ಚಾಂಪಿಯನ್ಸ್ ಟ್ರೋಫಿ(Champions Trophy) ಟೂರ್ನಿಗೂ ಮುನ್ನವೇ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ (Australia Captain Pat Cummins) ಟೂರ್ನಿಯಲ್ಲಿ ಕಣಕ್ಕಿಳಿಯುವುದು ಅನುಮಾನ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ (Boarder Gavaskar Test Series) ವೇಳೆ ಗಾಯಗೊಂಡಿದ್ದ ಕಮಿನ್ಸ್ ಶೀಘ್ರದಲ್ಲೇ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ, ಸ್ಕ್ಯಾನಿಂಗ್ ರಿಪೋರ್ಟ್ ಬಂದ ಬಳಿಕ ಪ್ಯಾಟ್ ಕಮಿನ್ಸ್ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು ಎಂಬುದು ನಿರ್ಧಾರವಾಗಲಿದೆ ಎಂದು ಆಸ್ಟ್ರೇಲಿಯಾದ ಆಯ್ಕೆಗಾರರ ಅಧ್ಯಕ್ಷ ಜಾರ್ಜ್ ಬೈಲಿ ದೃಢಪಡಿಸಿದ್ದಾರೆ.
ಒಂದು ವೇಳೆ ಪ್ಯಾಟ್ ಕಮಿನ್ಸ್ ಸರ್ಜರಿಗೆ ಒಳಗಾದರೆ, ಒಂದು ತಿಂಗಳೊಳಗೆ ಚೇತರಿಸಿಕೊಳ್ಳುವುದು ಅನುಮಾನ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೆ ಅವರು ಅಲಭ್ಯರಾಗಬಹುದು. ಇದು ಆಸ್ಟ್ರೇಲಿಯಾ ತಂಡದ ಪಾಲಿಗೆ ಹಿನ್ನಡೆಯನ್ನು ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ.
ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಕಣಕ್ಕಿಳಿದ ಆಸ್ಟ್ರೇಲಿಯಾ ತಂಡವು ಎಲ್ಲಾ ಟೂರ್ನಿಗಳಲ್ಲೂ ಯಶಸ್ಸು ಸಾಧಿಸಿದೆ. ಅದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಗಿರಬಹುದು ಅಥವಾ ಏಕದಿನ ವಿಶ್ವಕಪ್ ಆಗಿರಬಹುದು. ಇದಲ್ಲದೆ ಇತ್ತೀಚೆಗೆ ಮುಗಿದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಗಿರಬಹುದು.
ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಕಮಿನ್ಸ್ ಹೊರಗುಳಿದರೆ ಆಸ್ಟ್ರೇಲಿಯಾ ಏಕದಿನ ತಂಡದ ನಾಯಕನಾಗಿ ಸ್ಟೀವ್ ಸ್ಮಿತ್ ಕಾಣಿಸಿಕೊಳ್ಳಬಹುದು.