
ಬೆಂಗಳೂರು ; ಟ್ಯೂಷನ್‌ಗೆ ಬರುತಿದ್ದ ಬಾಲಕಿಯನ್ನು ಪುಸಲಾಯಿಸಿ ಪ್ರೀತಿಸುವ ನೆಪಒಡ್ಡಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದ ಟ್ಯೂಷನ್ ಟೀಚರ್ ಅಭಿಷೇಕ್ ಗೌಡ (25) ಎಂಬ ವ್ಯಕ್ತಿಯನ್ನು 45 ದಿನಗಳ ಶೋಧದ ಬಳಿಕ ಜೆಪಿ ನಗರ ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ, ಬಾಲಕಿಯ ತಂದೆಯ ದೂರು ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಾಲಕಿಯನ್ನು ಸರ್ಕಾರಿ ಬಾಲಮಂದಿರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಕನಕಪುರದ ದೊಡ್ಡಸಾತೇನಹಳ್ಳಿಯ ನಿವಾಸಿ ಅಭಿಷೇಕ್ ನಾಲ್ಕು ವರ್ಷಗಳ ಹಿಂದೆ ವಿವಾಹವಾದ ವ್ಯಕ್ತಿಯಾಗಿದ್ದು, ಒಂದು ಮಗುವಿನ ತಂದೆ. ವೈಯಕ್ತಿಕ ಸಮಸ್ಯೆಗಳ ಕಾರಣದಿಂದ ಪತ್ನಿಯಿಂದ ದೂರವಾಗಿದ್ದ ಈತ, ನ್ಯೂಟ್ರಿಷನ್ ತಜ್ಞನಾಗಿ ಕೆಲಸ ಮಾಡುತ್ತಿದ್ದ. ಈತ ಜೆ.ಪಿ.ನಗರದ ಸಾರಕ್ಕಿ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಕಳೆದ ಹಲವಾರು ವರ್ಷಗಳಿಂದ ಶಾಲಾ ಮಕ್ಕಳಿಗೆ ಟ್ಯೂಷನ್ ಕ್ಲಾಸ್‌ಗಳನ್ನು ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 10ನೇ ತರಗತಿಯ ವಿದ್ಯಾರ್ಥಿನಿ, ಕಳೆದ ಆರು ವರ್ಷಗಳಿಂದ ಟ್ಯೂಷನ್ ಕ್ಲಾಸ್‌ಗೆ ಬರುತ್ತಿದ್ದಳು.
ನವೆಂಬರ್ 23ರಂದು, ಟ್ಯೂಷನ್‌ಗೆ ಹೋದ ನಂತರ ಬಾಲಕಿ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಪೋಷಕರು ಆತಂಕಗೊಂಡು ಟೀಚರ್ ಅಭಿಷೇಕ್ ಮನೆಗೆ ಹೋಗಿದ್ದರು, ಆದರೆ ಮನೆಗೆ ಬೀಗ ಹಾಕಿರುವುದನ್ನು ಕಂಡು ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ, ಪೋಷಕರು ಜೆ.ಪಿ.ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದಾಗ, ಆರೋಪಿಯ ಮನೆಯಲ್ಲಿ ಮೊಬೈಲ್ ನ್ನು ಉದ್ದೇಶಪೂರ್ವಕವಾಗಿ ಬಿಟ್ಟುಹೋಗಿರುವುದು ಕಂಡುಬಂದಿತು. ಮೊಬೈಲ್ ನಲ್ಲಿದ್ದ ವೀಡಿಯೋದಿಂದ ದಿಂದ, ಆರೋಪಿ ಬಾಲಕಿಯೊಂದಿಗೆ ಮದುವೆಯಾಗಿರುವ ಬಗ್ಗೆ ಮಾಹಿತಿ ದೊರಕಿತು.
ಇನ್ನು ಮುಂದೆ ತನಿಖೆಯನ್ನು ಮುಂದುವರಿಸಲು ಸಿಸಿಟಿವಿ ದೃಶ್ಯಗಳ ಸಹಾಯವನ್ನು ಬಳಸಲಾಯಿತು. ಆರೋಪಿ, ಮಂಡ್ಯ ಜಿಲ್ಲೆ ಮಳವಳ್ಳಿಯ ಬಾಡಿಗೆ ಮನೆಯಲ್ಲಿ ಬಾಲಕಿಯೊಂದಿಗೆ ತಂಗಿದ್ದ. ತಾನು ಇದ್ದ ಸ್ಥಳ ಪತ್ತೆಯಾಗದಂತೆ ಆನ್‌ಲೈನ್ ಹಣ ವ್ಯವಹಾರಗಳಿಂದ ದೂರವಿದ್ದು, ನಗದು ರೂಪದಲ್ಲಿ ಹಣ ಬಳಸುತ್ತಿದ್ದ. ಈತನ ಪತ್ತೆಗೆ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು, ಮತ್ತು ಮಾಹಿತಿ ನೀಡಿದವರಿಗೆ ₹25,000 ಬಹುಮಾನ ಘೋಷಿಸಲಾಗಿತ್ತು.ಮಳವಳ್ಳಿಯ ನಿವಾಸಿಯೊಬ್ಬರು ಆರೋಪಿಯ ಸ್ಥಳದ ಬಗ್ಗೆ ಮನೆಯ ಮಾಲೀಕರ ಗಮನಕ್ಕೆ ತಂದರು, ಈ ಮಾಹಿತಿ ಮೂಲಕ ಪೊಲೀಸರು ಸ್ಥಳಕ್ಕೆ ಧಾವಿಸಿ ಅಭಿಷೇಕ್‌ನನ್ನು ಬಂಧಿಸಿದರು.
ಆರೋಪಿಯನ್ನು ಬಂಧಿಸುವಲ್ಲಿ ಸಹಾಯ ಮಾಡಿದ ವ್ಯಕ್ತಿಗಳು ಘೋಷಿತ ಬಹುಮಾನವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಆರೋಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.