ಕಳೆದ ಹಲವು ದಶಕಗಳಿಂದ ರಾಜ್ಯ ಹಾಗೂ ಕೇಂದ್ರವನ್ನಾಳುತ್ತಿರುವ ಎಲ್ಲ ಪಕ್ಷಗಳ ಸರ್ಕಾರಗಳು ನಿರಂತರವಾಗಿ ದೇಶದ ರೈತರುಗಳನ್ನು ಶೋಷಿಸುತ್ತಲೇ ಬಂದಿದೆ. ಮುಂದಿನ ದಿನಗಳಲ್ಲಾದರೂ ರೈತರುಗಳು ಸಂಘಟನಾತ್ಮಕವಾಗಿ ಹೋರಾಡಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಇಂದಿಲ್ಲಿ ಕರೆ ನೀಡಿದರು.
ವಿಶ್ವ ರೈತರ ದಿವಸದ ಸಲುವಾಗಿ ಮೈಸೂರು ನಗರದ ಮುಕ್ತ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ, ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಚಂದ್ರು ರೈತರ ಬೆಂಬಲ ಬೆಲೆ, ಕಪ್ಪು ಮೂರು ಕರಾಳ ಶಾಸನಗಳನ್ನು ರದ್ದುಗೊಳಿಸಲು ನಿರಂತರ ಒಂದು ವರ್ಷಗಳ ಕಾಲ ಹೋರಾಟ ಮಾಡಿ 900 ರೈತರುಗಳು ತಮ್ಮ ಜೀವವನ್ನೇ ಅರ್ಪಿಸಿದ್ದರು ಸಹ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದುವರೆಗೂ ಇವುಗಳನ್ನು ರದ್ದುಗೊಳಿಸಿಲ್ಲ.
ಕೇಂದ್ರದಲ್ಲಿ ಬಹುಮತವಿಲ್ಲದಿದ್ದರೂ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ದೇಶದ ರೈತರನ್ನು ಅಂಧಕಾರದಲ್ಲಿ ದೂಡಿದೆ. ರಾಜ್ಯ ಸರ್ಕಾರವು ಸಹ ಇದೇ ಶಾಸನಗಳನ್ನು ಮುಂದುವರಿಸಿಕೊಂಡು ಬಂದಿರುವುದು ಆತಂಕಕಾರಿ ಬೆಳವಣಿಗೆ. ಎಲ್ಲ ಪಕ್ಷಗಳ ರಾಜಕಾರಣಿಗಳು ಕೇವಲ ವೋಟ್ ಬ್ಯಾಂಕ್ ಗೋಸ್ಕರ ರೈತರುಗಳನ್ನು ನಿರಂತರ ಶೋಷಿಸುತಿರುವುದರ ವಿರುದ್ಧ ಸಂಘಟನಾತ್ಮಕವಾಗಿ ಒಂದಾಗಿ ಹೋರಾಟ ಮಾಡಿ, ರೈತರೇ ಅಧಿಕಾರಕ್ಕೆ ಬಂದು ರೈತರ ಸರ್ಕಾರ ನಿರ್ಮಾಣ ಮಾಡಿದ ದಿವಸ ಈ ಕೆಟ್ಟ ಸರ್ಕಾರಗಳಿಂದ ದೇಶದ ರೈತರಿಗೆ ಮುಕ್ತಿ ಸಿಗಲು ಸಾಧ್ಯ ಎಂದು ಮಾರ್ಮಿಕವಾಗಿ ತಿಳಿಸಿದರು.
ಸಭೆಯಲ್ಲಿ ರೈತ ಮುಖಂಡ ಕುರುಬರು ಶಾಂತಕುಮಾರ್ ಸೇರಿದಂತೆ ಅನೇಕ ರೈತ ನಾಯಕರುಗಳು ಹಾಗೂ ಸಾವಿರಾರು ರೈತರುಗಳು ಭಾಗವಹಿಸಿದ್ದರು.