—–ನಾ ದಿವಾಕರ —-
ದೇಶದ ಮುಖ್ಯವಾಹಿನಿ ಸಂಕಥನದಲ್ಲಿ ಮಹಿಳೆ ಈಗಲೂ ಕೇವಲ ಚರ್ಚೆಯ ವಸ್ತುವೇ ಆಗಿದ್ದಾಳೆ
ಸ್ವತಂತ್ರ ಭಾರತದ ಇತಿಹಾಸದುದ್ದಕ್ಕೂ ಹೆಚ್ಚಿನ ವ್ಯತ್ಯಯಗಳಿಲ್ಲದೆ ಗುರುತಿಸಬಹುದಾದ ಕೆಲವೇ ಸಾಮಾಜಿಕ ವಿದ್ಯಮಾನಗಳಲ್ಲಿ ಎರಡು ಪ್ರಮುಖವಾಗಿ ಎದ್ದು ಕಾಣುತ್ತದೆ. ಮೊದಲನೆಯದು ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಮುಂತಾದ ಜಾತಿ ದೌರ್ಜನ್ಯ , ಎರಡನೆಯದು ಮಹಿಳೆಯ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಇತ್ಯಾದಿ. 21ನೇ ಶತಮಾನದ ಡಿಜಿಟಲ್ ಯುಗದಲ್ಲಿ ಭಾರತ ವಿಕಾಸದತ್ತ ದಾಪುಗಾಲು ಹಾಕುತ್ತಿರುವಾಗಲೂ, ಈ ಎರಡೂ ಸಾಮಾಜಿಕ ವಿದ್ಯಮಾನಗಳು ಭಾರತದ ಆಧುನಿಕತೆ ಮತ್ತು ನಾಗರಿಕತೆಯನ್ನು ಅಣಕಿಸುತ್ತಲೇ ಬಂದಿವೆ. ಶಾಸನಾತ್ಮಕವಾಗಿ ಸಾಕಷ್ಟು ಕಾಯ್ದೆಗಳನ್ನು ಜಾರಿಗೊಳಿಸಿದ್ದರೂ, ಕಾನೂನುಗಳು ಬಿಗಿಯಾಗಿದ್ದರೂ, ಈ ಎರಡು ಸಮುದಾಯಗಳು ಎದುರಿಸುತ್ತಿರುವ ಜಟಿಲ ಸವಾಲುಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ.
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) 2020ರಲ್ಲಿ ಸಲ್ಲಿಸಿದ ವರದಿಯ ಪ್ರಕಾರ ದೇಶದಲ್ಲಿ ಪ್ರತಿ 16 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆ, ಪ್ರತಿ ಒಂದು ಗಂಟೆಗೆ ಒಬ್ಬ ಮಹಿಳೆ ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪುತ್ತಿದ್ದಾಳೆ. ಎರಡು ಗಂಟೆಗೆ ಒಬ್ಬ ಮಹಿಳೆ ಆಸಿಡ್ ದಾಳಿಗೆ ತುತ್ತಾಗುತ್ತಿದ್ದಾಳೆ. ಪ್ರತಿ ಎರಡು ಗಂಟೆಗೆ ಒಂದು ಹೆಣ್ಣು ಮಗು ಅತ್ಯಾಚಾರಕ್ಕೀಡಾಗುತ್ತಿದೆ, ಪ್ರತಿ 30 ಗಂಟೆಗೆ ಒಬ್ಬ ಮಹಿಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ. ದಲಿತ ಹೆಣ್ಣು ಮಕ್ಕಳು, ಜಾತಿ ಮತ್ತು ಲಿಂಗ ತಾರತಮ್ಯದ ಎರಡು ಬದಿಯ ದಾಳಿಯನ್ನು ಎದುರಿಸುತ್ತಿದ್ದಾರೆ. ಈ ದೌರ್ಜನ್ಯಗಳು ನಮ್ಮ ಸಾರ್ವಜನಿಕ-ಅಕಾಡೆಮಿಕ್-ಸಂವಹನ ವಲಯಗಳಲ್ಲಿ ಎಷ್ಟರ ಮಟ್ಟಿಗೆ ಚರ್ಚೆಗೊಳಗಾಗುತ್ತಿದೆ ಎಂಬ ಪ್ರಶ್ನೆ ನಾಗರಿಕರಾದ ನಮ್ಮನ್ನು ಕಾಡಬೇಕಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಅತುಲ್ ಸುಭಾಷ್ ಎಂಬ ಸಾಫ್ಟ್ವೇರ್ ಉದ್ಯೋಗಿ ಹೆಂಡತಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವುದು ದೇಶಾದ್ಯಂತ ಸಾಕಷ್ಟು ಚರ್ಚೆ ಸಂವಾದಗಳಿಗೆ ಎಡೆಮಾಡಿಕೊಟ್ಟಿದೆ. ರಾಷ್ಟ್ರೀಯ ವೆಬಿನಾರ್ ಒಂದರಲ್ಲಿ ನಡೆದ ಸಂವಾದದಲ್ಲಿ “ ದೇಶದಲ್ಲಿ ಬಲಗೊಳ್ಳುತ್ತಿರುವ ಸ್ತ್ರೀವಾದಿ ಹೋರಾಟಗಳಿಂದ (Feminist movements) ಗಂಡಸರು ಹೆಚ್ಚು ಕಿರುಕುಳ ಅನುಭವಿಸುತ್ತಿದ್ದಾರೆ,,,,, ಸ್ತ್ರೀವಾದಿ ಹೋರಾಟಗಳ ಮೇಲೆ ನಿಯಂತ್ರಣ ಹೇರಬೇಕು,,,” ಎಂಬ ಅಭಿಪ್ರಾಯವೂ ಕೇಳಿಬಂತು. ಕನ್ನಡದ ಮುಖ್ಯವಾಹಿನಿ ಚಾನೆಲ್ ಒಂದರ ಚರ್ಚೆಯಲ್ಲೂ ಇದೇ ದನಿಗಳು ಕೇಳಿಬಂದವು. ಪುರುಷರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ದನಿಯೂ ಕೇಳಿಬಂದಿತ್ತು. ಈ ದನಿಯೊಂದಿಗೇ ಕೇಳಿಬರುತ್ತಿರುವ ಆಗ್ರಹ ಎಂದರೆ 1961ರ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ರದ್ದುಪಡಿಸುವುದು ಅಥವಾ ತಿದ್ದುಪಡಿ ಮಾಡುವುದು.
ಒಂದು ಆತ್ಮಹತ್ಯೆಯ ಸುತ್ತ
ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿ ಅತುಲ್ ಸುಭಾಷ್ ಅವರ ಸಾವು ಸಾರ್ವಜನಿಕ ವಲಯದಲ್ಲಿ, ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. 34 ವರ್ಷದ ಅತುಲ್ ಸುಭಾಷ್ ಡಿಸೆಂಬರ್ 9ರಂದು ಆತ್ಮಹತ್ಯೆಗೆ ಶರಣಾಗಿದ್ದು, ಸಾಯುವ ಮುನ್ನ ಬಿಟ್ಟುಹೋಗಿರುವ ಟಿಪ್ಪಣಿ (Suicide note) ಮತ್ತು ವಿಡಿಯೋದಲ್ಲಿ ತನ್ನ ಹೆಂಡತಿ ನಿಖಿತಾ ಸಿಂಘಾನಿಯಾ ಮತ್ತು ಆಕೆಯ ಕುಟುಂಬದವರ ಕಿರುಕುಳ ಮತ್ತು ಚಿತ್ರಹಿಂಸೆ ತಾಳಲಾರದೆ ತನ್ನ ಜೀವನ ಅಂತ್ಯಗೊಳಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ತಾನು ಬಿಟ್ಟುಹೋದ 24 ಪುಟಗಳ ಟಿಪ್ಪಣಿ ಮತ್ತು 90 ನಿಮಿಷದ ಸುದೀರ್ಘ ವಿಡಿಯೋದಲ್ಲಿ ಅತುಲ್ ತನ್ನ ಹೆಂಡತಿ ನಿಖಿತಾ ಸಿಂಘಾನಿಯಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಸಿಂಘಾನಿಯಾ ಕುಟುಂಬದವರು ತಮ್ಮ ವಿರುದ್ಧ ಇರುವ ಕಾನೂನು ಮೊಕದ್ದಮೆಗಳನ್ನು ಹಿಂಪಡೆಯಲು 3 ಕೋಟಿ ರೂಗಳನ್ನು , ಮಗುವನ್ನು ಭೇಟಿ ಮಾಡುವ ಸಲುವಾಗಿ 30 ಲಕ್ಷ ರೂಗಳನ್ನು ಮತ್ತು ಹೆಂಡತಿಯ ಜೀವನ ನಿರ್ವಹಣೆಗೆ ಒಂದು ಕೋಟಿ ರೂ ನೀಡುವಂತೆ ಒತ್ತಾಯಿಸಿರುವುದಾಗಿ ಹೇಳಿದ್ದಾರೆ.
ತಮ್ಮ ವಿರುದ್ಧ ಸಿಂಘಾನಿಯಾ ಕುಟುಂಬವು ಸುಳ್ಳು ಮೊಕದ್ದಮೆಯನ್ನು ಹೂಡುವ ಮೂಲಕ ಚಿತ್ರಹಿಂಸೆ ನೀಡಿದ್ದಾರೆ ಎಂದು ಅತುಲ್ ಆರೋಪಿಸಿದ್ದಾರೆ. ಇದಕ್ಕೂ ಮುನ್ನ 2022ರಲ್ಲಿ ನಿಖಿತಾ ಸಿಂಘಾನಿಯಾ ಅತುಲ್ ಸುಭಾಷ್ ವಿರುದ್ಧ ಕೌಟುಂಬಿಕ ಕಿರುಕುಳ ಮತ್ತು ಹಲ್ಲೆ ಹಾಗೂ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡುತ್ತಿರುವುದಾಗಿ ದೂರು ಸಲ್ಲಿಸಿದ್ದರು. ಅತುಲ್ ಸುಭಾಷ್ ಅವರ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಪತ್ನಿ ನಿಖಿತಾ ಸಿಂಘಾನಿಯಾ ಮತ್ತು ಆಕೆಯ ಇಬ್ಬರು ಸೋದರರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯನ್ನು ಮುಂದುವರೆಸಿರುವ ಪೊಲೀಸ್ ಇಲಾಖೆ ಅತುಲ್ ಮಾಡಿರುವ ಆರೋಪಗಳು ಸಾಬೀತಾದರೆ ಚಾರ್ಚ್ಷೀಟ್ ಸಲ್ಲಿಸುವುದಾಗಿ ಹೇಳಿದೆ. ನಿಖೀತಾ ಮತ್ತು ಆಕೆಯ ಸೋದರ ಹಾಗೂ ತಾಯಿಯನ್ನು, ಗುರುಗ್ರಾಮ ಹರಿಯಾಣದಲ್ಲಿ ಬಂಧಿಸಲಾಗಿದ್ದು , ಪರಪ್ಪನ ಅಗ್ರಹಾರದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಏತನ್ಮಧ್ಯೆ ಅತುಲ್ ಮಾಡಿರುವ ಆರೋಪಗಳನ್ನು ಅಲ್ಲಗಳೆದಿರುವ ನಿಖಿತಾ ಕಳೆದ ಮೂರು ವರ್ಷಗಳಿಂದ ತಾವು ಪತಿಯಿಂದ ದೂರ ಇರುವುದಾಗಿ ಹೇಳಿದ್ದಾರೆ. ಬದಲಾಗಿ ತನ್ನ ಪತಿ ಅತುಲ್ ನೀಡಿದ ಅಮಾನುಷ ಚಿತ್ರಹಿಂಸೆ ಮತ್ತು ಅವರ ಕುಟುಂಬದವರು ವರದಕ್ಷಿಣೆಗಾಗಿ ಪೀಡಿಸಿದ್ದರಿಂದ ತಮ್ಮ ತಂದೆಯ ಆರೋಗ್ಯದಲ್ಲಿ ಏರುಪೇರಾಗಿರುವುದಾಗಿ ಹೇಳಿರುವ ಆರೋಪಿ ನಿಖಿತಾ ತಮ್ಮ ಮೇಲಿನ ಅಪವಾದಗಳನ್ನು ನಿರಾಕರಿಸಿದ್ದು, ತಾನೆ ಸಂತ್ರಸ್ತೆ ಎಂದು ಪ್ರತಿಪಾದಿಸಿದ್ದಾರೆ. 2019ರ ಏಪ್ರಿಲ್ 26ರಂದು ಮದುವೆ ಆದ ನಂತರದಲ್ಲಿ ಪತಿ ಅತುಲ್ ಅವರ ಕುಟುಂಬವು 10 ಲಕ್ಷ ರೂಗಳ ವರದಕ್ಷಿಣೆಗಾಗಿ ಪೀಡಿಸಲಾರಂಭಿಸಿತ್ತು, ಇದರ ಒತ್ತಡ ತಾಳಲಾರದೆ ತಮ್ಮ ತಂದೆ ಪಾರ್ಶ್ವವಾಯು ಪೀಡಿತರಾಗಿ ಸಾವನ್ನಪ್ಪಿದರು ಎಂದು ನಿಖಿತಾ ಹೇಳಿದ್ದಾರೆ. ನಿಖಿತಾ ಮತ್ತು ಅವರ ಕುಟುಂಬದವರಿಗೆ ನನ್ನ ಮಗ ಎಟಿಎಂ ನಂತಾಗಿದ್ದ ಎಂದು ಆಕೆಯ ತಂದೆ ಆರೋಪಿಸಿದ್ದಾರೆ.
ವರದಕ್ಷಿಣೆ ಹಿಂಸೆ ಸಾಮಾಜಿಕ ಆಯಾಮ
ಈ ಘಟನೆ ದುರದೃಷ್ಟಕರ ಎನ್ನುವುದು ವಾಸ್ತವ. ಆಧುನಿಕ ನ್ಯೂಕ್ಲಿಯರ್ ಕುಟುಂಬಗಳಲ್ಲಿ ದಂಪತಿಗಳ ನಡುವೆ ವಿರಸ-ಕಲಹ ಉಂಟಾದಾಗ ಅದರಿಂದಾಚೆ ಬರುವ ವ್ಯಾಜ್ಯ ಪರಿಹಾರದ ಅವಕಾಶಗಳು ಇಲ್ಲದಿರುವುದು ಈ ಘಟನೆಯಲ್ಲೂ ಎದ್ದು ಕಾಣುತ್ತದೆ. ಎರಡೂ ಕುಟುಂಬಗಳ ಹಠಮಾರಿ ಧೋರಣೆ ಮತ್ತು ತಪ್ಪೊಪ್ಪಿಕೊಳ್ಳದ ದಾರ್ಷ್ಟ್ಯ ಇಂತಹ ಸನ್ನಿವೇಶಗಳಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ. ಭಾರತೀಯ ಸಮಾಜದ ಪಿತೃಪ್ರಧಾನ ವ್ಯವಸ್ಥೆಯಲ್ಲಿ ʼ ಮದುವೆಯಾದ ಹೆಣ್ಣು ಗಂಡನ ಮನೆಯಲ್ಲಿ ಹೊಂದಿಕೊಂಡಿರಬೇಕು ʼ ಎಂಬ ಸಾಂಪ್ರದಾಯಿಕ ಆಲೋಚನೆ ಇನ್ನೂ ಜೀವಂತವಾಗಿರುವುದರಿಂದ, ಇಂತಹ ಪ್ರಕರಣಗಳಲ್ಲಿ ಹೆಣ್ಣನ್ನು ಶೂಲಕ್ಕೇರಿಸಲಾಗುತ್ತದೆ. ಮದುವೆಯಾದ ಹೆಣ್ಣು ʼ ಅತ್ತೆ ಮನೆಯಲ್ಲಿ ತಗ್ಗಿಬಗ್ಗಿ ನಡೆಯಬೇಕು, ಹಿರಿಯರ ಅಣತಿಯನ್ನು ಮೀರಿ ವರ್ತಿಸಬಾರದು, ಗಂಡನ ದುರ್ವರ್ತನೆಗಳನ್ನು ಸಹಿಸಿಕೊಳ್ಳಬೇಕು, ತನ್ನ ಹಕ್ಕುಗಳನ್ನು ಅತಿಯಾಗಿ ಪ್ರತಿಪಾದಿಸಬಾರದು ʼ ಈ ಮೂಲ ಪ್ರಮೇಯ (Basic Premise) ಇಂದಿಗೂ ಚಾಲ್ತಿಯಲ್ಲಿರುವುದರಿಂದ, ಹೆಣ್ಣು ತಕ್ಷಣದ ಅಪರಾಧಿಯಾಗಿಬಿಡುತ್ತಾಳೆ.
ಇದು ಒಂದು ಅಸಹಜ ಸಾವಿನ ಪ್ರಕರಣವಾಗಿರುವುದರಿಂದ ಸಹಜವಾಗಿ ಸಮಾಜದ ಅನುಕಂಪ ಸಂಪಾದಿಸುತ್ತದೆ. ಅತುಲ್ ಸುಭಾಷ್ ಅವರ ಅಕಾಲಿಕ ಸಾವು ಮತ್ತು ಅದರ ಹಿಂದಿರಬಹುದಾದ ಕಾರಣಗಳು ಈ ಅನುಕಂಪವನ್ನು ಸಹಾನುಭೂತಿಯಾಗಿ ಪರಿವರ್ತಿಸಿಬಿಡುತ್ತದೆ. ಇದನ್ನು ಅಲ್ಲಗಳೆಯಲೂ ಆಗುವುದಿಲ್ಲ. ಏಕೆಂದರೆ ಅತುಲ್ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬಹುದಿತ್ತು. ಕೂಡಿ ಬಾಳುವ ಸಾಧ್ಯತೆಗಳೇ ಇಲ್ಲವೆಂದಾದಲ್ಲಿ ವಿಚ್ಚೇದನ ಪಡೆಯುವ ಹಕ್ಕು ಸಂವಿಧಾನ ನೀಡಿದೆ. ಪ್ರಾಣ ಕಳೆದುಕೊಳ್ಳುವುದು ಅಂತಿಮ ಪರಿಹಾರವಾಗುವುದಿಲ್ಲ. ಈ ರೀತಿಯ ಸಾಂತ್ವನ ಹೇಳುವ ಸಂವೇದನಾಶೀಲ ಸಮಾಜವೊಂದನ್ನು ನಾವಿನ್ನೂ ಕಟ್ಟಬೇಕಿದೆ. ಭಾವಾತಿರೇಕದ ವಿಶ್ಲೇಷಣೆಗಳು ಮತ್ತು ಭಾವಾವೇಷದ ಪ್ರತಿಕ್ರಿಯೆಗಳು ಈ ಕಟ್ಟುವ ಪ್ರಕ್ರಿಯೆಯನ್ನು ಮತ್ತಷ್ಟು ಹಿಮ್ಮೆಟ್ಟಿಸುತ್ತವೆ.
ಅತುಲ್ ಆತ್ಮಹತ್ಯೆ ಪ್ರಕರಣದ ಸುತ್ತ ನಡೆದಿರುವ ಚರ್ಚೆಗಳಲ್ಲಿ ಈ ಪ್ರವೃತ್ತಿ ಪ್ರಧಾನವಾಗಿರುವುದು ಚಿಂತೆಗೀಡುಮಾಡುವ ವಿಚಾರ. ಕ್ರಿಶ 1512ರಲ್ಲಿ ಜರ್ಮನ್ ಭಾಷೆಯಲ್ಲಿ ಥಾಮಸ್ ಮುರ್ನರ್ ಎಂಬಾತ ಹುಟ್ಟುಹಾಕಿದ ನುಡಿಗಟ್ಟು ಆಂಗ್ಲ ಭಾಷೆಯಲ್ಲಿ “ Donʼt throw the baby with bathwater ” ಎಂದು ಪ್ರಚಲಿತವಾಗಿದೆ. ಅರ್ಥಾತ್ ನೀರು ಕಲುಷಿತವಾದರೆ ನೀರಿನಲ್ಲಿರುವ ಹಸುಳೆಯನ್ನೂ ಹೊರಗೆಸೆಯಕೂಡದು. ಅತುಲ್ ಆತ್ಮಹತ್ಯೆಯ ಸುತ್ತ ನಡೆದಿರುವ ಚರ್ಚೆಗಳಲ್ಲಿ, ನಿರಂತರ ದೌರ್ಜನ್ಯ ಎದುರಿಸುತ್ತಿರುವ ಭಾರತದ ವಿವಾಹಿತ ಹೆಣ್ಣುಮಕ್ಕಳ ರಕ್ಷಣೆಗಾಗಿಯೇ ರೂಪಿಸಲಾಗಿರುವ ʼ ವರದಕ್ಷಿಣೆ ನಿಷೇಧ ಕಾಯ್ದೆ 1961 ʼ ಯನ್ನೇ ರದ್ದುಪಡಿಸಬೇಕು ಎಂಬ ಕೂಗೆದ್ದಿರುವುದು ಈ ನುಡಿಗಟ್ಟನ್ನು ನೆನಪಿಸುತ್ತದೆ. ಟಿವಿ ಪ್ಯಾನೆಲ್ ಚರ್ಚೆಗಳಲ್ಲಿ, ವೆಬಿನಾರ್ಗಳಲ್ಲಿ ಧ್ವನಿಸುತ್ತಿರುವ ಪುರುಷ ಸಮಾಜದ ಅಭಿಪ್ರಾಯಗಳನ್ನು ಗಮನಿಸಿದಾಗ, ಇಷ್ಟೇ ಗಂಭೀರವಾದ ಚರ್ಚೆ ಮಹಿಳಾ ದೌರ್ಜನ್ಯಗಳ ಬಗ್ಗೆ ಏಕೆ ನಡೆಯುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ವರದಕ್ಷಿಣೆಯ ಪೀಡೆ ಮಹಿಳೆಯ ಸ್ಥಿತಿಗತಿ
ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಕೌಟುಂಬಿಕ ಜೀವನ ಸಾಮಾನ್ಯವಾಗಿ ಪುರುಷಾಧಿಪತ್ಯದ ನೆರಳಲ್ಲೇ ನಡೆಯುತ್ತದೆ. ಇಲ್ಲಿ ಹೆಣ್ಣುಮಕ್ಕಳು ಮಗಳು, ಹೆಂಡತಿ, ಅತ್ತೆ, ಸೊಸೆ, ಸೋದರಿ ಹೀಗೆ ಯಾವುದೇ ಸ್ಥಾನದಲ್ಲಿದ್ದರೂ ಕೆಲವು ಕಟ್ಟುಪಾಡುಗಳಿಗೆ ಒಳಗಾಗಿಯೇ ಬದುಕು ಸವೆಸಬೇಕಾಗುತ್ತದೆ. ಅಣತಿ ಮೀರಿ ಅಂತರ್ಜಾತಿ ವಿವಾಹವಾದ ಹೆಣ್ಣುಮಕ್ಕಳನ್ನು ತಂದೆಯೇ ಕೊಲೆ ಮಾಡುವ ನಿರ್ದಯಿ ಸಮಾಜವನ್ನು ಈಗಲೂ ನೋಡುತ್ತಲೇ ಇದ್ದೇವೆ. ಹಾಗೆಯೇ ತಮ್ಮ ಕೌಟುಂಬಿಕ ಕಟ್ಟಳೆಗಳನ್ನು ಮೀರಿ ನಡೆಯುವ ಸೊಸೆಯನ್ನು ಕೊಲ್ಲುವ ಪ್ರಕರಣಗಳಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ಇಲ್ಲಿ ವರದಕ್ಷಿಣೆ ಎಂಬ ಪಿಡುಗು ಪ್ರಧಾನ ಪಾತ್ರ ವಹಿಸುತ್ತದೆ. ಗಂಡು ಸಮಾಜ ಎದುರಿಸುವ ಆರ್ಥಿಕ ಬಿಕ್ಕಟ್ಟು ಅಥವಾ ಸಂಕೀರ್ಣತೆಗಳನ್ನು ನೀಗಿಸುವ ಜವಾಬ್ದಾರಿಯನ್ನು ಹೆಣ್ಣು ಹೆತ್ತವರ ಮೇಲೆ ಹೊರಿಸುವ ಒಂದು ವ್ಯಾವಹಾರಿಕ ಸಂಪ್ರದಾಯವನ್ನೇ ವರದಕ್ಷಿಣೆ ಎಂದು ಸಮ್ಮತಿಸಲಾಗುತ್ತದೆ.ʼ
2022ರಲ್ಲೇ ಭಾರತದಲ್ಲಿ 13,479 ಪ್ರಕರಣಗಳನ್ನು ಈ ವರದಕ್ಷಿಣೆ ನಿಷೇಧ ಕಾಯ್ದೆ 1961ಯ ಅಡಿ ದಾಖಲಿಸಲಾಗಿದ್ದು, ವರದಕ್ಷಿಣೆ ಕಾರಣಕ್ಕಾಗಿಯೇ 6,000 ಮಹಿಳೆಯರ ಕೊಲೆ ನಡೆದಿದೆ. 2017-21ರ ನಡುವೆ ದೇಶಾದ್ಯಂತ ಒಟ್ಟು 35,493 ವರದಕ್ಷಿಣೆ ಸಾವುಗಳು ವರದಿಯಾಗಿದ್ದು, ಅದರ ಪೈಕಿ ಉತ್ತರಪ್ರದೇಶದಲ್ಲೇ 11,874 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ವರದಕ್ಷಿಣೆ ಸಾವುಗಳ ಪ್ರಮಾಣ ಶೇಕಡಾ 4.5ರಷ್ಟು ಕಡಿಮೆಯಾಗಿದ್ದರೂ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಲಾಗುವುದಿಲ್ಲ. ಕರ್ನಾಟಕದಲ್ಲಿ 2022ರಲ್ಲಿ 2,224 ಪ್ರಕರಣಗಳು ಈ ಕಾಯ್ದೆಯಡಿ ದಾಖಲಾಗಿವೆ. ದಕ್ಷಿಣ ಭಾರತದಲ್ಲಿ 442 ವರದಕ್ಷಿಣೆ ಸಾವುಗಳು ಸಂಭವಿಸಿದ್ದು ಕರ್ನಾಟಕ 167 ಪ್ರಕರಣಗಳೊಡನೆ ಮೊದಲ ಸ್ಥಾನದಲ್ಲಿದೆ. NCRB ವರದಿಯ ಅನುಸಾರ ದೇಶದಲ್ಲಿ 2017-21ರ ಅವಧಿಯಲ್ಲಿ ಪ್ರತಿದಿನ ಸರಾಸರಿ 20 ವರದಕ್ಷಿಣೆ ಸಾವುಗಳು ಸಂಭವಿಸಿವೆ.
ಈ ಪ್ರಕರಣಗಳು ಕಾನೂನಾತ್ಮಕವಾಗಿ ದಾಖಲಾದರೂ ತನಿಖೆ, ವಿಚಾರಣೆ ಮತ್ತು ನ್ಯಾಯಾಂಗ ಪ್ರಕ್ರಿಯೆಯ ವಿಳಂಬದಿಂದಾಗಿ ಅನೇಕ ಮಹಿಳೆಯರು, ಸಂತ್ರಸ್ತರ ಕುಟುಂದವರು ನ್ಯಾಯ ವಂಚಿತರಾಗಿಯೇ ಉಳಿದುಬಿಡುತ್ತಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ಅಡಿಯಲ್ಲಿ ದಾಖಲಾಗುವ ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಸತತವಾಗಿ ಕುಸಿಯುತ್ತಲೇ ಇದೆ. 1983ರಲ್ಲಿ ಜಾರಿಗೊಳಿಸಲಾದ ಐಪಿಸಿ ಸೆಕ್ಷನ್ 498ಎ ಗಂಡ ಅಥವಾ ಆತನ ಕುಟುಂಬದವರು ಆತನ ಪತ್ನಿಗೆ ಯಾವುದೇ ರೀತಿಯಲ್ಲಿ ಕಿರುಕುಳ, ಚಿತ್ರಹಿಂಸೆ ನೀಡುವುದನ್ನು ಶಿಕ್ಷಾರ್ಹ ಅಪರಾಧ ಎಂದು ನಿರ್ವಚಿಸುತ್ತದೆ. 2006ರಲ್ಲಿ ಈ ಕಾಯ್ದೆಯಡಿ ಶೇಕಡಾ 21.9ರಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದರೆ, 2018ರಲ್ಲಿ ಅದು ಶೇಕಡಾ 13ಕ್ಕೆ ಇಳಿದಿದೆ. ಏಳರಲ್ಲಿ ಒಂದು ಪ್ರಕರಣವು ಮಾತ್ರ ಅಪರಾಧಿಗೆ ಶಿಕ್ಷೆಯಲ್ಲಿ ಕೊನೆಯಾಗುತ್ತದೆ. NCRB 2018ರ ವರದಿಯ ಅನುಸಾರ ಈ ಸೆಕ್ಷನ್ ಅಡಿಯಲ್ಲಿ ಒಂದು ಲಕ್ಷ ಪ್ರಕರಣಗಳು ದಾಖಲಾಗಿದ್ದು ಇದು ದೇಶದಲ್ಲಿ ಸಂಭವಿಸಿದ ಒಟ್ಟು ಅಪರಾಧಗಳ ಶೇಕಡಾ 27.3ರಷ್ಟಾಗುತ್ತದೆ.
ಪುರುಷಾಧಿಪತ್ಯದ ಸಂಕಥನದಲ್ಲಿ
ಅತುಲ್ ಸುಭಾಷ್ ಸದಸ್ಯತ್ವ ಹೊಂದಿದ್ದ Save Indian Family Foundation ಎಂಬ ಸಂಸ್ಥೆಯ ಸಾಮಾಜಿಕ ತಾಣದ ಪೋಸ್ಟ್ಗಳಲ್ಲಿ ಸ್ತ್ರೀವಾದವನ್ನು ಕ್ಯಾನ್ಸರ್, ಪುರುಷ ದ್ವೇಷಿ ಎಂದೆಲ್ಲಾ ಬಣ್ಣಿಸಲಾಗಿದ್ದು ಮಹಿಳಾ ಚಳುವಳಿಗಳು ಪುರುಷ ಸಮಾಜದ ಮೇಲೆ ಲಿಂಗತ್ವ ಕದನ (Gender War) ಸಾರಿರುವುದಾಗಿ ಆರೋಪಿಸಲಾಗಿದೆ. ಇಂತಹ ಕೆಲವು ಅಭಿಪ್ರಾಯಗಳನ್ನು ಅನುಮೋದಿಸುವ ದೀಪಿಕಾ ನಾರಾಯಣ್ ಭರದ್ವಾಜ್ ಎಂಬ ವಕೀಲೆ ಮತ್ತು ಆಕೆಯ ಸಂಗಾತಿಗಳು ಐಪಿಸಿ ಸೆಕ್ಷನ್ 498ಎ ಕಾಯ್ದೆಯನ್ನೇ ರದ್ದುಪಡಿಸುವಂತೆ ಆಗ್ರಹಿಸುತ್ತಾರೆ. “ ಮಹಿಳೆಯರಿಗೆ ನ್ಯಾಯ ಬೇಕಿದೆಯೋ ಅಥವಾ ಅವರ ಅತ್ತೆ-ಮಾವ-ಗಂಡಂದಿರ ಮೇಲಿನ ಆಧಿಪತ್ಯ ಮತ್ತು ಶೋಷಣೆ ಬೇಕಿದೆಯೋ ” ಎಂದು ಪ್ರಶ್ನಿಸುವ ಈ ಸಂಘಟನೆ ಭಾರತದಲ್ಲಿ ವರದಕ್ಷಿಣೆ ಪ್ರಕರಣಗಳಲ್ಲಿ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ ಎಂದೂ ವಾದಿಸುತ್ತದೆ. ಆದರೆ ದಾಖಲೆಗಳು ಬೇರೆಯೇ ಕತೆ ಹೇಳುತ್ತವೆ. NCRB 2022ರ ವರದಿಯಲ್ಲಿ ಹೇಳುವಂತೆ ಭಾರತದಲ್ಲಿ ಪುರುಷರು ಮತ್ತು ಮಹಿಳೆಯರ ಆತ್ಮಹತ್ಯೆ ಪ್ರಕರಣಗಳ ಪೈಕಿ ಶೇಕಡಾ 31.7ರಷ್ಟು ಮಾತ್ರ ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿರುತ್ತದೆ. ಇದರ ಪೈಕಿ ವಿವಾಹ ಸಂಬಂಧಿತ ಸಮಸ್ಯೆಗಳು ಕೇವಲ ಶೇಕಡಾ 4.8 ರಷ್ಟಿರುತ್ತವೆ.
ಇದೇ ದಾಖಲೆಗಳು ಹೇಳುವಂತೆ ವಿವಾಹ ಸಂಬಂಧಿತ, ವಿಶೇಷವಾಗಿ ವರದಕ್ಷಿಣೆ ಸಂಬಂಧಿತ ಪ್ರಕರಣಗಳಲ್ಲಿ 2022ರಲ್ಲಿ 213 ಪುರುಷರು ಸಾವನ್ನಪ್ಪಿದ್ದರೆ 1513 ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಸೆಕ್ಷನ್ 498 ಎ ವಿರುದ್ಧದ ಅಭಿಯಾನದ ಬಗ್ಗೆ ವ್ಯಾಪಕವಾಗಿ ಬರೆದಿರುವ ಪತ್ರಕರ್ತೆ ಕಲ್ಪನಾ ಶರ್ಮಾ ಅವರು ಹೇಳುವಂತೆ ಅತುಲ್ ಸುಭಾಷ್ ಸಾವಿನ ಕೋಲಾಹಲವು ಭಾರತೀಯ ಸಮಾಜದಲ್ಲಿ ಆಳವಾದ ಅಸಮಾನತೆಯ ಸಂಕೇತವಾಗಿದೆ. “ ಭಾರತದಲ್ಲಿ ಮಹಿಳೆಯರ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳು ಬದಲಾಗಿವೆ ಆದರೆ ನಮ್ಮ ಸಮಾಜದಲ್ಲಿ ಮಹಿಳೆಯರ ಬಗ್ಗೆ, ಹೆಣ್ಣುಮಕ್ಕಳ ಬಗ್ಗೆ ಆಳವಾಗಿ ಬೇರೂರಿರುವ ಸ್ತ್ರೀದ್ವೇಷ ಇನ್ನೂ ಬದಲಾಗಿಲ್ಲ ” ಎಂದು ಕಲ್ಪನಾ ಶರ್ಮ ಹೇಳುತ್ತಾರೆ. ( ದ ಸ್ಕ್ರೋಲ್ ಪತ್ರಿಕೆಯ ಲೇಖನ What the uproar over Atul Subhash’s death by suicide says about gender relations in India 17-12-2024)
ಸ್ತ್ರೀದ್ವೇಷದ ಸಾರ್ವಜನಿಕ ದನಿಗಳ ನಡುವೆ
ಕನ್ನಡದ ಕೆಲವು ವಾಹಿನಿಗಳನ್ನೂ ಒಳಗೊಂಡಂತೆ ಅತುಲ್ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ನಡೆದ ಸಂಕಥನಗಳಲ್ಲಿ ಪುರುಷ ಸಮಾಜದ ಈ ದನಿಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಕನ್ನಡದ ಟಿವಿ ನಿರೂಪಕರೊಬ್ಬರಿಗೆ ಅತುಲ್ ಒಂಬತ್ತು ಸಲ ಬೆಂಗಳೂರಿನಿಂದ ಜಬಲ್ಪುರಕ್ಕೆ ನ್ಯಾಯಾಲಯದ ವಿಚಾರಣೆಗಾಗಿ ಹೋಗಿ ಬರುತ್ತಿದ್ದುದೇ ಕಳವಳಕಾರಿಯಾಗಿ ಕಂಡಿತ್ತು. ಆದರೆ ಈ ಪುರುಷಾಹಮಿಕೆಯ ದನಿಗಳಿಗೆ ತಮ್ಮ ಸುತ್ತಲಿನ ಸಾವಿರಾರು ಮಹಿಳೆಯರಿಗೆ ವರದಕ್ಷಿಣೆಯ ಕಿರುಕುಳದ ವಿರುದ್ಧ ಪೊಲೀಸ್ ದೂರು ದಾಖಲಿಸುವುದೇ ಹಿಮಾಲಯ ಚಾರಣದಷ್ಟು ಕಷ್ಟಕರವಾಗಿರುವುದು ಗೋಚರಿಸುವುದಿಲ್ಲ ಎನಿಸುತ್ತದೆ. ಅತುಲ್ ಸಾವಿಗೆ ಅನುಕಂಪ ಸೂಚಿಸುವ ಭರದಲ್ಲಿ ವರದಕ್ಷಿಣೆ ಎಂಬ ಪಿಡುಗಿಗೆ ನಿತ್ಯ ಬಲಿಯಾಗುತ್ತಿರುವ ಸಾವಿರಾರು ಅಸಹಾಯಕ ಹೆಣ್ಣುಮಕ್ಕಳ ಶಾಸನಾತ್ಮಕ ರಕ್ಷಾಕವಚವನ್ನೇ ಕಳಚಿಹಾಕಲು ಆಗ್ರಹಿಸುವುದು, ಪಿತೃಪ್ರಧಾನ ಮೌಲ್ಯಗಳ ಪರಾಕಾಷ್ಠೆ ಎನ್ನಬಹುದು.
ಯಾವುದೇ ಕಾನೂನು ಆದರೂ ಅದಕ್ಕೆ ಎರಡು ಆಯಾಮಗಳಿರುತ್ತವೆ, ಕಾನೂನು ಅನುಷ್ಠಾನದಲ್ಲಿ ಲೋಪಗಳೂ ಸಹಜ. ಹಾಗೆಯೇ ಶಿಕ್ಷೆಗೊಳಗಾದವರ ದೃಷ್ಟಿಯಲ್ಲಿ ಕಾನೂನು ಸದಾ ಅನಪೇಕ್ಷಿತವೇ ಆಗಿರುತ್ತದೆ. ಆದರೆ ಸಂತ್ರಸ್ತರ ದೃಷ್ಟಿಯಲ್ಲಿ ದೇಶದ ಸಂವಿಧಾನ, ಶಾಸನ ಮತ್ತು ಕಾನೂನು ಅಂತಿಮ ರಕ್ಷಣಾ ತಾಣವಾಗಿರುತ್ತದೆ. ಈ ಅಂತಿಮ ಆಶ್ರಯ ತಾಣದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣುವುದು ಮಹಿಳೆಯರು ಮತ್ತು ದಲಿತರು ಎನ್ನುವುದು ನಿರೂಪಿತ ಸತ್ಯ. ಎಲ್ಲ ಪ್ರಕರಣಗಳಲ್ಲೂ ಗಂಡಸರು ಅಪರಾಧಿಗಳೆಂದೇ ಭಾವಿಸಬೇಕಿಲ್ಲವಾದರೂ, ಇಲ್ಲಿ ಒಂದು ಲಿಂಗಸೂಕ್ಷ್ಮ ಸಂಗತಿಯನ್ನು ಗಮನಿಸಲೇಬೇಕಿದೆ. ಯಾವುದೇ ಕುಟುಂಬ ಅಥವಾ ಸಮಾಜದಲ್ಲಾದರೂ ಗಂಡು ಶೋಷಣೆ ಅಥವಾ ದೌರ್ಜನ್ಯಕ್ಕೊಳಗಾಗುವುದು ವ್ಯಕ್ತಿಗತ –ವೈಯುಕ್ತಿಕ ಕಾರಣಗಳಿಗಾಗಿ. ಆದರೆ ಹೆಣ್ಣಾದವಳು ʼಹೆಣ್ಣುʼ ಎಂಬ ಕಾರಣಕ್ಕಾಗಿಯೇ ದೌರ್ಜನ್ಯಕ್ಕೊಳಗಾಗುತ್ತಾಳೆ.
ಲಿಂಗ ಸೂಕ್ಷ್ಮತೆ ಇರುವ ಯಾವುದೇ ಸಮಾಜವಾದರೂ ಇದನ್ನು ಅರ್ಥಮಾಡಿಕೊಳ್ಳಬಹುದು. ಸೆಕ್ಷನ್ 498ಎ ಅಥವಾ POSH ಕಾಯ್ದೆಗಳಲ್ಲಿ ಲಿಂಗ ತಟಸ್ಥ ನೀತಿಯನ್ನು ಆಗ್ರಹಿಸುವ ಪುರುಷ ಸಮಾಜ ಇದನ್ನು ಅರ್ಥಮಾಡಿಕೊಳ್ಳಬೇಕಿದೆ. ವರದಕ್ಷಿಣೆ ನಿಷೇಧ ಕಾಯ್ದೆಯನ್ನೇ ರದ್ದುಪಡಿಸುವ ಆಗ್ರಹ ನಮ್ಮ ಸಮಾಜದಲ್ಲಿ ಲಿಂಗ ಸೂಕ್ಷ್ಮತೆಯೇ ಇಲ್ಲದ ದನಿಗಳು ಇಂದಿಗೂ ಉಸಿರಾಡುತ್ತಿರುವುದನ್ನು ಖಚಿತಪಡಿಸುತ್ತದೆ. ಈ ಪಿತೃಪ್ರಧಾನ ಧ್ವನಿಗಳಿಗೆ ದನಿಗೂಡಿಸುವ ವಿದ್ಯುನ್ಮಾನ ಮಾಧ್ಯಮಗಳು ಸಮಾಜವನ್ನು ಪ್ರಾಚೀನ ಸಾಂಪ್ರದಾಯಿಕತೆಯೆಡೆ ಕೊಂಡೊಯ್ಯುವ ಬೌದ್ಧಿಕ ವಾಹಕಗಳಾಗಿ ಕಾಣುತ್ತವೆ. ಭಾರತ ಬದಲಾಗಿದೆ ಆದರೆ ಮಹಿಳೆಯರ ಪಾಲಿಗೆ ಇನ್ನೂ ಸಾಕಷ್ಟು ಬದಲಾಗಬೇಕಿದೆ. ಶೋಷಿತ ಮಹಿಳೆಯರ ದೃಷ್ಟಿಯಲ್ಲಿ ಆಗಿರುವ ಬದಲಾವಣೆ ಅರ್ಥಹೀನ ಎನಿಸಿದರೆ ಅಚ್ಚರಿಯೇನಿಲ್ಲ.
-೦-೦-೦-೦-೦