ವಿಧಾನಸಭಾ ಅಧಿವೇಶನ ಮಧ್ಯರಾತ್ರಿಯಾದರೂ ಮುಂದುವರಿದಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕಂಬಳ ಅನುದಾನ ಕುರಿತು ಸರ್ಕಾರದ ಗಮನ ಸೆಳೆದಿದ್ದಾರೆ. ಕಂಬಳ ಉತ್ಸವಕ್ಕೆ ಅನುದಾನ ಸಿಗುತ್ತಿಲ್ಲ. ಮಂತ್ರಿಗಳ ಬಳಿ ನಾವು ಬೇಡಿಕೆ ಇಟ್ಟಿದ್ದೇವೆ. ಪ್ರತಿ ಕಂಬಳಕೆ ಐದು ಲಕ್ಷ ರೂಪಾಯಿ ಅನುದಾನ ಕೊಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ರು ಎಂದಿದ್ದಾರೆ.
ನಾವು ಅನುದಾನ ತಾರತಮ್ಯ ಮಾಡುತ್ತಿದೆ ಅಂತ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುತ್ತೇವೆ. ಆದರೆ ರಾಜ್ಯದಲ್ಲಿ ಎರಡನೇ ಅತಿಹೆಚ್ಚು ಟ್ಯಾಕ್ಸ್ ಕಟ್ಟುವ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಇದೆ. ನಾವು ಕೇವಲ ಒಂದು ಕೋಟಿ ರೂಪಾಯಿ ಕೇಳುತ್ತಿದ್ದೇವೆ. ಅನುದಾನ ಪಡೆಯೋಕೆ ಇಷ್ಟೊಂದು ಹೋರಾಟ ಮಾಡಬೇಕಾ..? ಎಂದು ಪ್ರಶ್ನೆ ಮಾಡಿದ್ದಾರೆ.ಈ ವೇಳೆ ಸರ್ಕಾರದ ವಿರುದ್ಧ ಸ್ಪೀಕರ್ ಖಾದರ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಮುಂಚೆಯಿಂದ ಕಂಬಳ ನಡೆಸುತ್ತಿದ್ದೇವೆ, ಕಂಬಳ ನಡೆಸಲು ಅನುದಾನ ಕೇಳಿದ್ದೆವು, ಆದ್ರೆ ಕೊಟ್ಟಿಲ್ಲ. ಸರ್ಕಾರ ಅನುದಾನ ಕೊಟ್ಟರೆ ಕೊಡಲಿ ಬಿಡಲಿ, ನಾವು ಕಂಬಳ ನಡೆಸುವ ಶಕ್ತಿ ಇದೆ ಎಂದು ಸ್ಪೀಕರ್ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಚಿವ ಕೃಷ್ಣ ಬೈರೇಗೌಡ ಉತ್ತರ ನೀಡಿದ್ದು, ಎರಡು ಜಿಲ್ಲೆಗಳಿಗೆ ತಲಾ ಹತ್ತು ಲಕ್ಷ ಕೊಟ್ಟಿದ್ದೇವೆ. ಹೆಚ್ಚುವರಿ ಅನುದಾನದ ಬಗ್ಗೆ ಮಾಹಿತಿ ಇಲ್ಲ. ಇವತ್ತಿನ ಚರ್ಚೆ ಬಗ್ಗೆ ಸಚಿವರ ಗಮನಕ್ಕೆ ತರುತ್ತೇವೆ ಎಂದು ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದಾರೆ. ಅನುದಾನ ಕೊಡಿಸಿ, ಬಿಡಿ ಆದರೆ ನಮ್ಮ ಕಂಬಳಕ್ಕೆ ನೀವು ಬನ್ನಿ ಎಂದಿದ್ದಾರೆ ಸ್ಪೀಕರ್.