
ಬೆಳಗಾವಿಯನ್ನು ಕೇಂದ್ರಾಡಲಿತ ಪ್ರದೇಶ ಮಾಡಬೇಕು. ಬೆಳಗಾವಿಯಲ್ಲಿ ಮರಾಠಿಗರೇ ಸಾಮ್ರಾಟರು. ಕುಂದಾನಗರಿಯಲ್ಲಿ ಮರಾಠಿಗರಿಗೆ ಅನ್ಯಾಯ ಆಗ್ತಿದೆ. ಮರಾಠಿ ಸಮುದಾಯದ ಮೇಲೆ ಕರ್ನಾಟಕ ಸರ್ಕಾರ ಹಾಗು ಕನ್ನಡಿಗರು ದೌರ್ಜನ್ಯ ಮಾಡ್ತಿದ್ದಾರೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಹೇಳಿದ್ದಾರೆ. ಮಹಾರಾಷ್ಟ್ರದ ವಿಶೇಷ ಅಧಿವೇಶನ ಸಮಯದಲ್ಲೇ ಕರ್ನಾಟಕದಲ್ಲೂ ಅಧಿವೇಶನ ನಡೆಯುತ್ತಿದ್ದು, ಅದರಲ್ಲೂ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದು ಮರಾಠಿಗಳ ಕಣ್ಣು ಕುಕ್ಕಿದೆ. ಇದೇ ಕಾರಣಕ್ಕೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡ್ಬೇಕು ಎನ್ನುವ ಹುಚ್ಚುತನದ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಆದಿತ್ಯ ಠಾಕ್ರೆ ಹೇಳಿಕೆ, ಅದು ಬಾಲೀಷ ತನದ ಹೇಳಿಕೆ. ಮಹಾಜನ್ ವರದಿಯೇ ಅಂತಿಮ. ಬೆಳಗಾವಿಯನ್ನ ಕೇಂದ್ರಾಡಳಿತ ಮಾಡೋಕಾಗುತ್ತಾ..? ಮಹಾಜನ್ ವರಿದಿಯನ್ನ ಒಪ್ಪಿಕೊಳ್ಳಬೇಕು. ಎಂಇಎಸ್‌ನವ್ರು ಹೋರಾಟ ಮಾಡಿದ್ರೆ ನಾವು ಸುಮ್ನೆ ಇರ್ತೀವಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸತೀಶ್ ಜಾರಕಿಹೊಳಿ ಮಾತನಾಡಿ, ಆದಿತ್ಯ ಠಾಕ್ರೆ ಹೇಳಿಕೆ ಹೊಸದೇನಲ್ಲ. ಮಹಾರಾಷ್ಟ್ರ ನಾಯಕರು ಪದೇ ಪದೇ ಹೇಳಿಕೆ ಕೊಡ್ತಿರ್ತಾರೆ.ಅವರ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ. ಅವರ ಹೇಳಿಕೆಯಿಂದ ಏನು ಬದಲಾವಣೆ ಆಗಲ್ಲ ಎಂದಿದ್ದಾರೆ. ಅಂತಹ ಭಯಪಡುವ ಅಗತ್ಯವೂ ಇಲ್ಲ. ಈ ವಿಚಾರ ಹೇಳಿಕೆಗೆ ಸೀಮಿತವಾಗಿದೆ ಅಷ್ಟೇ. ಇದಕ್ಕೆ ಕಾನೂನಲ್ಲಿ ಬೆಲೆ ಇಲ್ಲ. ಮಹಾಜನ್ ವರದಿ ಜಾರಿ ಆಗಲಿ ಬಿಡಲಿ ಬೆಳಗಾವಿ ಕರ್ನಾಟಕದಲ್ಲೇ ಇರುತ್ತದೆ. ಎಂಇಎಸ್‌ನವ್ರು ಎಲ್ಲೋ ನಾಲ್ಕು ಜನ ಪ್ರತಿಭಾರಿ ಪ್ರತಿಭಟನೆ ಮಾಡ್ತಾರೆ. ಈ ಸಂಬಂಧ ಪೊಲೀಸರು ಕ್ರಮ ಕೈಗೊಳ್ತಾರೆ ಎಂದಿದ್ದಾರೆ.

ಆದಿತ್ಯ ಠಾಕ್ರೆ ಹೇಳಿಕೆ ಬಗ್ಗೆ ಕನ್ನಡ ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಬೆಳಗಾವಿ ನಮ್ಮದು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಬೆಳಗಾವಿ ಕರ್ನಾಟಕದ ಪ್ರಮುಖ ಭಾಗ ಎಂದಿದ್ದಾರೆ. ಸುವರ್ಣ ಸೌಧ ಕಟ್ಟಿರುವ ಭಾಗ ಬಿಟ್ಟು ಕೊಡಲು ಸಾಧ್ಯವಾ..? ಎಂದಿರುವ ಸಚಿವರು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶವನ್ನ ಕೇಂದ್ರಾಡಳಿತ ಮಾಡಲು ಸಾಧ್ಯವಿಲ್ಲ. ಇಂತಹ ಹೇಳಿಕೆಯನ್ನ ನಾವು ಒಪ್ಪಲ್ಲ. ಅವರಿಗೆ ಮಾಹಿತಿ ಕೊರತೆ ಇರಬೇಕು. ಅವರು ಗೊತ್ತಿಲ್ಲ ಅಂದರೆ ಓದಿ ತಿಳಿದುಕೊಳ್ಳಲಿ. ಕನ್ನಡಿಗರು ಯಾವುದೇ ಕಾರಣಕ್ಕೂ ಬೆಳಗಾವಿ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.

ಬೆಳಗಾವಿಯಲ್ಲಿ ವಿಪಕ್ಷ ನಾಯಕ ಆರ್ ಆಶೋಕ್ ಮಾತನಾಡಿ, ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಹೀನಾಯ ಸೋಲಾಗಿದೆ. ಮತ್ತೆಂದು ಅಲ್ಲಿ ಗೆಲ್ಲಲು ಸಾಧ್ಯವಾಗದ ಪರಿಸ್ಥಿತಿ ಇದೆ. ಹೀಗಾಗಿ ಅವರು ಈ ರೀತಿಯ ಹೇಳಿಕೆ ಕೊಡ್ತಿದ್ದಾರೆ. ಸೋಲಿಗೂ ಮೊದಲೇ ಅವರು ಬಾಯ್ ಮುಚ್ಕೊಂಡಿದ್ರು. ಈಗ ಬೆಳಗಾವಿ ವಿಚಾರ ಮತ್ತೆ ಮಾತಾಡ್ತಿದ್ದಾರೆ. ಬೆಳಗಾವಿ ನಮ್ಮ ಅವಿಭಾಜ್ಯ ಅಂಗ ಎಂದು ಟಾಂಗ್ ಕೊಟ್ಟಿದ್ದಾರೆ.






