
ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೋರ್ ಕಮೀಟಿ ಸಭೆಯಲ್ಲಿ ಭಾಗಿಯಾದ ನಂತರ ಬಿ ವೈ ವಿಜಯೇಂದ್ರ ಮಾತನಾಡಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಮ್ಮ ಉಸ್ತುವಾರಿ ರಾಧಾ ಮೋಹನ್ ದಾಸ್, ಯಡಿಯೂರಪ್ಪನವರು ಹಾಗೂ ಕೋರ್ ಕಮೀಟಿ ಸದಸ್ಯರು ಸಭೆಯಲ್ಲಿ ಬಾಗಿಯಾಗಿದ್ರು. ಉಪ ಚುನಾವಣೆಯ ಸೋಲಿನ ಬಗ್ಗೆ ಚರ್ಚೆಯಾಗಿದೆ. ಸಂಡೂರು, ಶಿಗ್ಗಾವಿ ಸೋಲಿನ ಕುರಿತು ಸತ್ಯ ಸಂಶೋಧನೆಗೆ ತೀರ್ಮಾನ ಆಗಿದೆ ಎಂದಿದ್ದಾರೆ. ಸದಾನಂದಗೌಡರು ಹಾಗೂ ಎನ್. ಮಹೇಶ್ ಅವರ ನೇತೃತ್ವದ ಸಮಿತಿ ರಚನೆ ಮಾಡಿದ್ದೇವೆ. ಇವರಿಬ್ಬರು ಕ್ಷೇತ್ರಗಳಿಗೆ ಭೇಟಿ ಕೊಟ್ಟು ಸತ್ಯಶೋಧನೆ ಮಾಡಲಿದ್ದಾರೆ ಎಂದಿದ್ದಾರೆ.
ಇನ್ನು ಹಾದಿ ಬೀದಿಯಲ್ಲಿ ಮಾತನಾಡುವವರು ಯಾರೇ ಇರಲಿ ಕ್ರಮ ಆಗ್ಬೇಕು ಎಂದಿರುವ ವಿಜಯೇಂದ್ರ, ಶಿವರಾಮ್ ಹೆಬ್ಬಾರ್ ಮತ್ತು ಎಸ್‌ಟಿ ಸೋಮಶೇಖರ್ ವಿಚಾರವೂ ಚರ್ಚೆಯಾಗಿದೆ ಅಂತಾ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಜೊತೆಗೆ ಅವರಿಬ್ಬರು ಸಕ್ರೀಯವಾಗಿ ಕಾಣಿಸಿಕೊಳ್ತಿದ್ದಾರೆ. ಅದಕ್ಕೆ ಇತೀಶ್ರೀ ಹಾಕಬೇಕೆಂದು ತೀರ್ಮಾನವಾಗಿದೆ. ಪಕ್ಷ ವಿರೋಧಿ ಹೇಳಿಕೆಗಳ ಬಗ್ಗೆಯೂ ಚರ್ಚೆಯಾಗಿದೆ. ಇದೆಲ್ಲದಕ್ಕೂ ತಾರ್ಕಿಕ ಅಂತ್ಯ ಹಾಡುವ ಸಂಬಂಧ ಚರ್ಚೆಯಾಗಿದೆ. ಸಸ್ಪೆಂಡ್ ಮಾಡಬೇಕೋ..? ಡಿಸ್ಮಿಸ್ ಮಾಡಬೇಕೋ..? ಅನ್ನೋದನ್ನ ತೀರ್ಮಾನ ತೆಗೆದುಕೊಳ್ತಾರೆ. ಹಾದಿ ಬೀದಿಯಲ್ಲಿ ಮಾತಾಡುವವರು ಯಾರೇ ಇರಲಿ ಅವರ ಮೇಲೆ ಕ್ರಮ ಆಗಬೇಕು. ಇದೀಗ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ. ಹೈಕಮಾಂಡ್ ಏನ್ ತೀರ್ಮಾನ ತೆಗೆದುಕೊಳ್ಳುತ್ತೋ ನೋಡೋಣ ಎನ್ನುವ ಮೂಲಕ ಯತ್ನಾಳ್ ವಿಚಾರವಾಗಿ ಏನನ್ನೂ ಮಾತನಾಡದೇ ಹೋಗಿದ್ದಾರೆ.

ರಾಧಾಮೋಹನ್ ದಾಸ್ ಅಗರವಾಲ್ ಮಾತನಾಡಿ, ಪಕ್ಷದಲ್ಲಿ ನಡೆಯುತ್ತಿರುವ ವಿಚಾರಗಳು ನಮಗೆ ಆತಂಕ ಮೂಡಿಸಿದೆ. ನಾವು ಯತ್ನಾಳ್ ಅವರಿಗೆ ಶೋಕಾಸ್ ನೊಟೀಸ್ ಕೊಟ್ಟಿದ್ದೇವೆ. ಅವರು ನೊಟೀಸ್‌ಗೆ ಉತ್ತರ ಕೊಡಲಿ, ಅದರ ಆಧಾರದ ಮೇಲೆ ನಾವು ಮುಂದಿನ ನಿರ್ಧಾರ ತೆಗೆದುಕೊಳ್ತೇವೆ ಎಂದಿದ್ದಾರೆ. ಇನ್ನು ವಿಜಯೇಂದ್ರ ಬದಲಾವಣೆಗೆ ಯತ್ನಾಳ್ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪಕ್ಷದ ವರಿಷ್ಠರು ರಾಜ್ಯಾಧ್ಯಕ್ಷರ ನೇಮಕ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಜಯೇಂದ್ರರನ್ನು ಪಕ್ಷದ ಅಧ್ಯಕ್ಷರಾಗಿ ಮಾಡಿರುವುದು ಹೈಕಮಾಂಡ್‌ಗೆ ಔಚಿತ್ಯ ಅನಿಸಿದೆ ಎಂದಿದ್ದಾರೆ.

ಪರಷತ್ ಸದಸ್ಯ ಸಿಟಿ ರವಿ ಮಾತನಾಡಿ, ಶಾಸಕರಾಗಿರುವ ಎಸ್.ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ವಿಚಾರವಾಗಿ ಕ್ರಮಕ್ಕೆ ಕೋರ್ ಕಮಿಟಿ ಶಿಫಾರಸು ಮಾಡಿದೆ. ಅವರಿಬ್ಬರೂ ಶಾಸಕರಾಗಿ ಇರೋದ್ರಿಂದ ಕೇಂದ್ರಿಯ ಶಿಸ್ತು ಸಮಿತಿ ಕ್ರಮ ತೆಗೆದುಕೊಳ್ಳಬೇಕು. ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.