
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಸೋಲುವ ಮೂಲಕ ಜೆಡಿಎಸ್ ಶಾಸಕರ ಸಂಖ್ಯೆ 19 ರಿಂದ 18ಕ್ಕೆ ಇಳಿದಿದೆ. ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳುವ ಮೂಲಕ ತನ್ನದೇ ಕ್ಷೇತ್ರವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ ಕುಮಾರಸ್ವಾಮಿ ಹಿನ್ನಡೆ ಅನುಭವಿಸಿದ್ದಾರೆ. ಇದೀಗ ಜೆಡಿಎಸ್ ಪಕ್ಷವೇ ಕಾಂಗ್ರೆಸ್ ಹಾಗು ಬಿಜೆಪಿಯಲ್ಲಿ ಲೀನವಾಗುವ ಮೂಲಕ ಅಸ್ತಿತ್ವ ಕಳೆದುಕೊಳ್ಳುವ ಸೂಚನೆಗಳು ಕಂಡು ಬರುತ್ತಿವೆ. ಈ ಬಗ್ಗೆ ಚನ್ನಪಟ್ಟಣ ಶಾಸಕ ಸಿ.ಪಿ ಯೊಗೇಶ್ವರ್ ಸಣ್ಣದೊಂದು ಸುಳಿವು ಕೊಟ್ಟಿದ್ದು, ಜೆಡಿಎಸ್ ಶಾಸಕರನ್ನು ನಾವಾಗಿಯೇ ಕರೆಯುವುದಿಲ್ಲ, ಆದರೆ ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ಚರ್ಚೆ ಮಾಡುತ್ತೇನೆ ಎಂದಿದ್ದಾರೆ. ಇನ್ನು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಯೊಗೇಶ್ವರ್, ಕಾಂಗ್ರೆಸ್ ಪಕ್ಷ ಒಪ್ಪುವುದಾದರೆ ಇಡೀ JDS ಪಕ್ಷದ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರುತ್ತೇನೆ ಎಂದಿದ್ದಾರೆ.

ನಾವು ನಿರ್ಧಾರ ಮಾಡಿದರೆ ಜೆಡಿಎಸ್‌ನಲ್ಲಿ ಯಾವುದೇ ಶಾಸಕರು ಇರುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇದನ್ನು ಇನ್ನೂ ಒಂದು ಹೆಜ್ಜೆ ಇಟ್ಟಿರುವ ಸಿ.ಪಿ ಯೋಗೇಶ್ವರ್, ಕಾಂಗ್ರೆಸ್ ಪಕ್ಷ ನನಗೆ ಟಾಸ್ಕ್ ಕೊಟ್ಟರೆ ಮುಂದಿನ ಒಂದು ತಿಂಗಳಲ್ಲಿ ಎಲ್ಲಾ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರುತ್ತೇನೆ ಎಂದಿದ್ದಾರೆ. ಇನ್ನು ದೇವೇಗೌಡರ ನಾಮಬಲ ಹಾಗು ಕುಮಾರಸ್ವಾಮಿ ನಾಮಬಲದಲ್ಲಿ ಶಾಸಕರು ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಇನ್ನು ಮುಂದಿನ ಚುನಾವಣೆ ಹೊತ್ತಿಗೆ ಜೆಡಿಎಸ್ ಪಕ್ಷವೇ ಇರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಜೊತೆಗೆ ಇಡೀ ಪಕ್ಷವನ್ನೇ ವಿಲೀನ ಮಾಡುವ ಸಾಧ್ಯತೆಯೂ ಇದೆ ಎನ್ನುವ ಮಾತನ್ನೂ ಸಿ.ಪಿ ಯೋಗೇಶ್ವರ್ ಹೇಳಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ
ಈಗಾಗಲೇ ಜೆಡಿಎಸ್ ಬಗ್ಗೆ ಅಸಮಾಧಾನಗೊಂಡು ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಅವರ ಮನೆಗೆ ಭೇಟಿ ನೀಡಿದ್ದ ಉಚ್ಚಾಟಿತ ಅಧ್ಯಕ್ಷ ಸಿ.ಎಂ ಇಬ್ರಾಹಿಂ, ಜೆಡಿಎಸ್ ಪಕ್ಷ ಅದೋಗತಿಗೆ ಹೋಗಿದೆ. ಜೆಡಿಎಸ್‌ನ ಸಾಕಷ್ಟು ಶಾಸಕರು ನಮ್ಮ ಜೊತೆಗೆ ಸಂಪರ್ಕದಲ್ಲಿದ್ದಾರೆ. ಈಗಲೂ ಜೆಡಿಎಸ್ ರಾಜ್ಯದ ಜನತೆ ಮುಂದೆ ಕ್ಷಮೆ ಕೋರಿದರೆ ಎಲ್ಲವೂ ಮುಗಿದು ಹೋಗುತ್ತದೆ. ಇಲ್ಲದಿದ್ದರೆ ,ಮುಂದಿನ ದಿನಗಳಲ್ಲಿ ಅಧ್ಯಕ್ಷನಾಗಿ ನಾನೇ ಸಭೆ ಕರೆಯುತ್ತೇನೆ. ಎಲ್ಲಾ ಶಾಸಕರು ಏನು ಹೇಳ್ತಾರೆ ಆ ರೀತಿ ಮುಂದಿನ ನಿರ್ಧಾರ ಮಾಡ್ತೇವೆ ಎಂದಿದ್ದಾರೆ.
