ಚನ್ನಪಟ್ಟಣ ಉಪ ಚುನಾವಣೆ ಅಖಾಡದಲ್ಲಿ ಮತ ಕದನ ಜಿದ್ದಾಜಿದ್ದಿನಿಂದ ಕೂಡಿದೆ.. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಧ್ಯೆ ಸಮರ ಜೋರಾಗಿದೆ.. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಹುಟ್ಟೂರಾದ ಚಕ್ಕೆರೆ ಗ್ರಾಮದಲ್ಲಿ ಮತ ಚಲಾಯಿಸಿದ್ದಾರೆ. ಮತಗಟ್ಟೆ ಸಂಖ್ಯೆ 167ರಲ್ಲಿ ಸಿ.ಪಿ. ಯೋಗೇಶ್ವರ್ ತಮ್ಮ ಪತ್ನಿ ಜೊತೆ ಮತದಾನ ಮಾಡಿದ್ದಾರೆ..
ಮತದಾನದ ಬಳಿಕಮಾತನಾಡಿದ ಸಿ.ಪಿ ಯೋಗೇಶ್ವರ್, ಈ ಚುನಾವಣೆಯಲ್ಲಿ ಜನರು ನನ್ನ ಕೈಹಿಡಿಯುತ್ತಾರೆ ಎಂಬ ವಿಶ್ವಾಸ ನನಗಿದೆ. ಇಲ್ಲಿ ಅಭಿವೃದ್ಧಿ ಕೆಲಸಗಳು ವರ್ಕ್ ಆಗ್ತದೆ ಎಂದು ದೇವೇಗೌಡರು ಹಾಗೂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ. ಇನ್ನು ಸಿ.ಪಿ ಯೋಗೇಶ್ವರ್ ಪತ್ನಿ ಶೀಲಾ ಮಾತನಾಡಿ, ಚುನಾವಣೆಯಲ್ಲಿ ನಮ್ಮ ಯಜಮಾನ್ರು ಗೆಲ್ತಾರೆ. ಅವರು ಮಾಡಿರುವ ಅಭಿವೃದ್ಧಿ ಕೆಲಸವನ್ನ ಜನರು ನೋಡಿದ್ದಾರೆ. ಅವರಿಗೆ ಈ ಬಾರಿ ಜನರು ಬೆಂಬಲ ಕೊಡ್ತಾರೆ ಎಂದು ಯೋಗೇಶ್ವರ್ ಪತ್ನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣದ ಮತಗಟ್ಟೆ ಸಂಖ್ಯೆ 168ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಸಹೋದರ ರಾಜೇಶ್ ಮತದಾನ ಮಾಡಿದ್ದಾರೆ. ಮತದಾನದ ಬಳಿಕ ಮಾತನಾಡಿದ ರಾಜೇಶ್, ದೇಶದ ಸಂವಿಧಾನ ಉಳಿಸಲು ಪ್ರತಿಯೊಬ್ಬರು ಮತದಾನ ಮಾಡಬೇಕು. ಎಲ್ಲರೂ ಸಹ ತಮ್ಮ ಹಕ್ಕನ್ನ ಚಲಾಯಿಸಬೇಕು ಅಂತ ಹೇಳಿದ್ದಾರೆ. ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಯೋಗೇಶ್ವರ್ ಸ್ಪರ್ಧೆ ಮಾಡಿದ್ದು, ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಆಗಿದ್ದಾರೆ.