ಕಾಂಗ್ರೆಸ್ ಸರ್ಕಾರದಿಂದ ಮುಸ್ಲಿಮರಿಗೆ ಮತ್ತೊಂದು ಮೀಸಲಾತಿ ನೀಡಲು ಚಿಂತನೆ ನಡೆದಿದೆ. ರಾಜ್ಯ ಸರ್ಕಾರ ನೀಡುವ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು, ಸರ್ಕಾರಿ ಗುತ್ತಿಗೆಯಲ್ಲಿ ಶೇಕಡ 4ರಷ್ಟು ಮೀಸಲಾತಿ ನೀಡಲು ಸಿದ್ದರಾಮಯ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಬಗ್ಗೆ ಮುಂಬರುವ ಬೆಳಗಾವಿ ಅಧಿವೇಶನದ ವೇಳೆ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ ಎನ್ನುವ ಮಾಹಿತಿ ಹೊರಬಿದ್ದಿದೆ.
SC-STಗೆ ಗುತ್ತಿಗೆಯಲ್ಲಿ ಶೇkಡ 24 ಮೀಸಲಾತಿ ಇದೆ. 2A ಸಮುದಾಯಕ್ಕೆ ಶೇಕಡ 15 ಮೀಸಲಾತಿ ಇದೆ. ಇದೇ ಮಾದರಿಯಲ್ಲಿ ಮುಸ್ಲಿಮರಿಗೂ ಮೀಸಲಾತಿ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ವಿಧಾನಸಭಾ ಉಪ ಚುನಾವಣೆಯಲ್ಲಿ ಮತ ಸೆಳೆಯುವ ದೃಷ್ಟಿಯಿಂದ ಸರ್ಕಾರದ ಮೂಲಗಳೇ ಈ ಮಾಹಿತಿಯನ್ನು ಬಹಿರಂಗ ಮಾಡಿದ್ದು, ರಾಮನಗರದ ಚನ್ನಪಟ್ಟಣ, ಹಾವೇರಿಯ ಶಿಗ್ಗಾವಿ ಹಾಗು ಬಳ್ಳಾರಿಯ ಸಂಡೂರು ಕ್ಷೇತ್ರದಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಸಹಕಾರಿ ಎನ್ನಲಾಗಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮಕ್ಕೆ ತಿದ್ದುಪಡಿ ತರಲು ಚಿಂತನೆ ಮಾಡಿದ್ದು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ. ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವನೆ ಪರಿಶೀಲಿಸುತ್ತಿರುವ ಅಧಿಕಾರಿಗಳು ಮೀಸಲಾತಿ ನೀಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. OBC ಸಮುದಾಯಕ್ಕೆ ಈಗಾಗಲೇ ಶೇಕಡ 4 ರಷ್ಟು ಗುತ್ತಿಗೆ ಮೀಸಲಾತಿ ನೀಡಲಾಗಿದೆ. ಇದೀಗ ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ನೀಡಲಾಗುತ್ತಾ ಅನ್ನೋ ಬಗ್ಗೆ ಚರ್ಚೆಗಳು ನಡೆದಿವೆ. ಸರ್ಕಾರದ ಕಾಮಗಾರಿಗಳಲ್ಲಿ ಶೇಕಡ 43ರಷ್ಟು ಮೀಸಲಾತಿ ನೀಡಲಾಗಿದ್ದು, ಇದೀಗ ಮೀಸಲಾತಿ ಪ್ರಮಾಣ ಏರಿಸುವ ಬಗ್ಗೆಯೂ ಚರ್ಚೆ ಆಗ್ತಿದೆ.
ಮುಸ್ಲಿಂ ಸಮುದಾಯದ ಬಗ್ಗೆ ಆಶಾದಾಯ ಮೂಡಿಸುವ ಜೊತೆಗೆ ಉಪಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದಲೇ ಕಾಂಗ್ರೆಸ್ ಸರ್ಕಾರ ಈ ವಿಚಾರವನ್ನು ಬಹಿರಂಗ ಮಾಡಿದೆ ಎನ್ನಲಾಗ್ತಿದೆ. ಸಿಎಂ ಸಿದ್ದರಾಮಯ್ಯ ಕೂಡ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆ. ಸರ್ಕಾರ ಇನ್ನು ಯಾವುದೇ ನಿರ್ಧಾರ ಮಾಡಿಲ್ಲ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಆದರೆ ಈಗಾಗಲೇ ವಕ್ಫ್ ಆಸ್ತಿ ಎಂದು ನಮೂದು ಆಗ್ತಿರುವ ಈ ಹೊತ್ತಿನಲ್ಲಿ ಹಿಂದೂಗಳು ಕೊತಕೊತನೆ ಕುದಿಯುತ್ತಿದ್ದಾರೆ. ಈಗ ಮುಸ್ಲಿಮರಿಗೆ ಮೀಸಲಾತಿ ಎನ್ನುವ ಮೂಲಕ ಓಲೈಕೆ ರಾಜಕಾರಣ ಮಾಡ್ತಿದೆ ಅನ್ನೋ ಅಂಶ ಜನರ ಮನಸ್ಸನ್ನು ಬದಲಿಸುವ ಸಾಧ್ಯತೆಯೂ ಇದೆ. ಒಂದು ವೇಳೆ ಪಕ್ಷಾತೀತವಾಗಿ ಹಿಂದೂಗಳು ಸರ್ಕಾರದ ಬಗ್ಗೆ ಅಸಹನೆಗೊಂಡು ಸರ್ಕಾರದ ವಿರುದ್ಧ ಮತ ಚಲಾಯಿಸಿದ್ರೆ ಸಂಕಷ್ಟ ಗ್ಯಾರಂಟಿ.