—–ನಾ ದಿವಾಕರ—-
ಸಮಾಜವಾದ ಭಾರತದ ಸಂವಿಧಾನದ ಮೂಲ ಆಶಯವೇ ಹೊರತು ಶಾಸನಾತ್ಮಕ ನಿಬಂಧನೆಯಲ್ಲ
=====
ಸಮಾಜವಾದ ಮತ್ತು ಜಾತ್ಯತೀತತೆ ಈ ಎರಡೂ ಉದಾತ್ತ ಮೌಲ್ಯಗಳು ಭಾರತದ ಸಂವಿಧಾನದ ಮೂಲ ತಾತ್ವಿಕ ಆಶಯಗಳು. ಡಾ. ಬಿ.ಆರ್. ಅಂಬೇಡ್ಕರ್ ಮೂಲತಃ ಉದಾರವಾದಿ ಪ್ರಜಾಪ್ರಭುತ್ವದ (Liberal Democracy) ಪ್ರತಿಪಾದಕರಾಗಿದ್ದರೂ, ಅವರೊಳಗೊಂದು ಸಮಾಜವಾದದ ತಾತ್ವಿಕ ಒಲವು ಖಚಿತವಾಗಿಯೂ ಇತ್ತು. ಮಾರ್ಕ್ಸ್‌ವಾದವು ಪ್ರತಿಪಾದಿಸುವ ವೈಜ್ಞಾನಿಕ ಸಮಾಜವಾದವನ್ನು ತಾತ್ವಿಕ ನೆಲೆಯಲ್ಲಿ ಒಪ್ಪದಿದ್ದರೂ, ಅಂಬೇಡ್ಕರ್ ವಿಶಾಲಾರ್ಥದಲ್ಲಿ 20ನೆಯ ಶತಮಾನದ ಆರಂಭದಲ್ಲಿ ಜಾಗತಿಕ ರಾಜಕಾರಣದಲ್ಲಿ ಪ್ರಚಲಿತವಾಗಿದ್ದ ಸಮಾಜವಾದ ಅಥವಾ ಸಮ ಸಮಾಜದ ತಾತ್ವಿಕ ನೆಲೆಗಳಲ್ಲಿ ವಿಶ್ವಾಸ ಹೊಂದಿದ್ದರು. ಸಂವಿಧಾನ ರಚನೆಗೂ ಮುನ್ನ ಅಂಬೇಡ್ಕರ್ ಅವರು ಭೌಗೋಳಿಕ ಭಾರತದ ಸಕಲ ಸಂಪತ್ತು ಮತ್ತು ಸಂಪನ್ಮೂಲಗಳ ಮೇಲೆ ಜನರ ಹಕ್ಕು ಇರಬೇಕು ಎಂದು ಪ್ರತಿಪಾದಿಸಿದ್ದರು. ಹಾಗಾಗಿಯೇ ಅವರ ಬರಹಗಳಲ್ಲಿ ಭೂಮಿ ಮತ್ತು ಸಾರ್ವಜನಿಕ ಉದ್ದಿಮೆಗಳ ರಾಷ್ಟ್ರೀಕರಣದ ದನಿಯೂ ಧ್ವನಿಸಿತ್ತು.
ಆದರೆ ಅಂತಿಮವಾಗಿ ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನದಲ್ಲಿ ಸಮಾಜವಾದಿ ತತ್ವಗಳು ಪ್ರಾಶಸ್ತ್ಯ ಗಳಿಸಲಾಗಲಿಲ್ಲ. ಭೂ ರಾಷ್ಟ್ರೀಕರಣ ಅಥವಾ ಸಾರ್ವಜನಿಕ ಸಂಪತ್ತು-ಸಂಪನ್ಮೂಲಗಳ ಒಡೆತನದ ಬಗ್ಗೆ ಸಾಂವಿಧಾನಿಕವಾದ ಯಾವುದೇ ನಿಬಂಧನೆಗಳನ್ನು ಶಾಸನಾತ್ಮಕವಾಗಿ ಅಳವಡಿಸಲಾಗಲಿಲ್ಲ. ಬದಲಾಗಿ ಕೆಲವು ಅನುಚ್ಛೇದಗಳು ಮರುವ್ಯಾಖ್ಯಾನಕ್ಕೆ ಮುಕ್ತವಾಗಿದ್ದುದರಿಂದ, ಚುನಾಯಿತ ಸರ್ಕಾರಗಳು ಶಾಸನಬದ್ಧವಾಗಿ ಸಮಾಜವಾದಿ ತತ್ವಗಳನ್ನು ಅನುಷ್ಠಾನಗೊಳಿಸುವ ಅವಕಾಶಗಳನ್ನು ಹೊಂದಿದ್ದವು. ಈ ಅವಕಾಶವನ್ನು ಬಳಸಿಕೊಂಡೇ ಇಂದಿರಾಗಾಂಧಿ ಸರ್ಕಾರವು 1976ರ ಸಂವಿಧಾನ ತಿದ್ದುಪಡಿ 42 ರ ಮೂಲಕ ಸಂವಿಧಾನ ಪೀಠಿಕೆಯಲ್ಲಿ “ ಸಮಾಜವಾದಿ ಮತ್ತು ಜಾತ್ಯತೀತ ”ಎಂಬ ಪದಗಳನ್ನು ಸೇರ್ಪಡಿಸಿತ್ತು. ಈ ಹಂತದಲ್ಲೂ ಸಮಾಜವಾದ ಎಂಬ ಪದವು ಚೀನಾ ಅಥವಾ ಸೋವಿಯತ್ ಸಂಘದಲ್ಲಿ ಅಳವಡಿಸಲಾಗಿದ್ದ ʼರಾಷ್ಟ್ರೀಕರಣʼ ದ ಪರಿಕಲ್ಪನೆಯನ್ನು ಹೊಂದಿರಲಿಲ್ಲ. ಬದಲಾಗಿ ಕೆಲವು ಆಯ್ದ ವಲಯಗಳನ್ನು ರಾಷ್ಟ್ರೀಕರಣಗೊಳಿಸಲು ಅನುವು ಮಾಡಿಕೊಟ್ಟಿತ್ತು.
ನ್ಯಾಯಾಂಗದ ಮರು ವ್ಯಾಖ್ಯಾನಗಳು
ಈ ತಾತ್ವಿಕ ನೆಲೆಯಲ್ಲೇ 1977ರ ರಂಗನಾಥ ರೆಡ್ಡಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ನ ನ್ಯಾ. ಕೃಷ್ಣ ಐಯ್ಯರ್ ಅವರ ನೇತೃತ್ವದ ಪೀಠವು ಖಾಸಗಿ ಒಡೆತನದಲ್ಲಿರುವ ಎಲ್ಲ ಸಂಪನ್ಮೂಲಗಳನ್ನೂ ಸರ್ಕಾರ ಸ್ವಾಧೀನಕ್ಕೆ ಪಡೆದುಕೊಳ್ಳಬಹುದು ಎಂದು ವ್ಯಾಖ್ಯಾನಿಸಿತ್ತು. ಸಂವಿಧಾನದ ಅನುಚ್ಛೇದ 39(ಬಿ) ಈ ನಿಟ್ಟಿನಲ್ಲಿ ” ಪ್ರಭುತ್ವ ಅಥವಾ ಸರ್ಕಾರವು ಸಮುದಾಯದ ವಸ್ತು ಸಂಪನ್ಮೂಲಗಳ ಮಾಲೀಕತ್ವ ಮತ್ತು ನಿಯಂತ್ರಣವನ್ನು ಸಾಮಾನ್ಯ ಒಳಿತಿಗಾಗಿ ಉತ್ತಮ ರೀತಿಯಲ್ಲಿ ವಿತರಿಸುವ ನಿಟ್ಟಿನಲ್ಲಿ ತನ್ನ ನೀತಿಯನ್ನು ರೂಪಿಸುತ್ತದೆ ” ಎಂದು ಸೂಚಿಸುತ್ತದೆ. ನ್ಯಾ. ಕೃಷ್ಣ ಐಯ್ಯರ್ ನೇತೃತ್ವದ ನ್ಯಾಯಪೀಠವು ಈ ಸಾಂವಿಧಾನಿಕ ನಿಯಮವನ್ನೇ ಅವಲಂಬಿಸಿ ಖಾಸಗಿ ಒಡೆತನದ ಸಂಪತ್ತು ಮತ್ತು ಸಂಪನ್ಮೂಲಗಳನ್ನೂ ಸಹ ಸಮುದಾಯದ ಸಂಪತ್ತು ಎಂದು ವ್ಯಾಪಕ ಅರ್ಥದಲ್ಲಿ ವ್ಯಾಖ್ಯಾನಿಸಬಹುದು ಎಂದು ಹೇಳಿತ್ತು. ಈ ಪ್ರಶ್ನೆಯನ್ನೇ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ನ್ಯಾಯಪೀಠವು ಅನುಚ್ಛೇದ 39(ಬಿ) ಹೇಳುವಂತೆ ʼ ಭೌತಿಕ ಸಂಪತ್ತು ಮತ್ತು ಸಂಪನ್ಮೂಲಗಳು ʼ ಖಾಸಗಿ ಒಡೆತನದ ಸಂಪತ್ತನ್ನೂ ಒಳಗೊಳ್ಳುತ್ತವೆ ಎನ್ನುವುದು ನಿಜ ಎಂದು ತಾತ್ವಿಕವಾಗಿ ಒಪ್ಪಿಕೊಂಡಿದೆ. ಆದರೆ ಖಾಸಗಿ ಒಡೆತನದಲ್ಲಿರುವ ಎಲ್ಲ ಸಂಪನ್ಮೂಲಗಳನ್ನೂ ಸಾರ್ವಜನಿಕ ಬಳಕೆಗಾಗಿ ಸರ್ಕಾರ ಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ, ಬದಲಾಗಿ ಸಮುದಾಯದ ವಶದಲ್ಲಿರುವ ಸಂಪನ್ಮೂಲಗಳನ್ನು ಜನಸಮೂಹದ ಒಳಿತಿಗಾಗಿ ಸ್ವಾಧೀನಪಡಿಸಿಕೊಳ್ಳಬಹುದು ಎಂದು ಪ್ರಸ್ತುತ ನ್ಯಾಯಪೀಠವು ಆದೇಶಿಸಿದೆ.
ಮೂಲತಃ ಅನುಚ್ಛೇದ 39(ಬಿ) ಹೇಳುವುದು ಸಮಾಜವಾದಿ ಸಿದ್ಧಾಂತ ಅಲ್ಲ. ಭಾರತದಂತಹ ಅಸಮಾನತೆಯ ಸಮಾಜದಲ್ಲಿ ಸಂಪತ್ತಿನ ಕ್ರೋಢೀಕರಣ ಮತ್ತು ಇದರಿಂದ ಉದ್ಭವಿಸುವಂತಹ ಶ್ರೀಮಂತಿಕೆ-ಬಡತನದ ನಡುವಿನ ಅಂತರವನ್ನು ಸರ್ಕಾರಗಳು ತಮ್ಮ ಆಡಳಿತ ನೀತಿಗಳ ಮೂಲಕ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಅನುಚ್ಛೇದವನ್ನು ಬಳಸಿಕೊಂಡು, ವಿಶಾಲ ಜನತೆಯ ಒಳಿತಿಗಾಗಿ ಹಾಗೂ ಸಮುದಾಯದ ಉನ್ನತಿಗಾಗಿ, ಖಾಸಗಿ ಒಡೆತನದ ಸಂಪತ್ತನ್ನು ಸ್ವಾಧೀನಪಡಿಸಿಕೊಳ್ಳುವ ಅವಕಾಶವನ್ನು ಇದು ಕಲ್ಪಿಸುತ್ತದೆ. ನ್ಯಾ. ಕೃಷ್ಣ ಐಯ್ಯರ್ ಅವರ ನ್ಯಾಯಪೀಠ ಈ ಅರ್ಥದಲ್ಲೇ ತಮ್ಮ ತೀರ್ಪನ್ನು ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠವು 7 : 2 ಬಹುಮತದೊಂದಿಗೆ 1977ರ ಈ ತೀರ್ಪನ್ನು ಅಸಿಂಧುಗೊಳಿಸಿದೆ.
ಕೆಲವು ಖಾಸಗಿ ಒಡೆತನದ ಸಂಪನ್ಮೂಲಗಳು ಇಲ್ಲಿ ಗಣನೆಗೆ ಬರಬಹುದಾದರೂ, ನಿರ್ದಿಷ್ಟ ಸಂದರ್ಭ ಮತ್ತು ಪ್ರತಿಯೊಂದು ಪ್ರಕರಣದ ವಾಸ್ತವ ಸನ್ನಿವೇಶಗಳ ನೆಲೆಯಲ್ಲಿ ಈ ನಿಯಮವನ್ನು ಅಳವಡಿಸಬಹುದು ಎಂದು ಹೇಳಿರುವ ನ್ಯಾಯಪೀಠವು, ವಿಶಾಲ ಸಮುದಾಯದ ಕಲ್ಯಾಣಕ್ಕೆ ಅಥವಾ ಒಳಿತಿಗೆ ಗಮನಾರ್ಹವಾಗಿ ಕೊಡುಗೆ ನೀಡಬಹುದಾದಂತಹ ಅಥವಾ ಅಂತಹ ಗುಣಲಕ್ಷಣಗಳನ್ನು ಹೊಂದಿರುವಂತಹ ಅಥವಾ ಸಮುದಾಯದ ಉನ್ನತಿ-ಕಲ್ಯಾಣಕ್ಕೆ ಅತ್ಯವಶ್ಯ ಎನಿಸಿರುವ ಸಂಪನ್ಮೂಲಗಳನ್ನು ಮಾತ್ರ ಈ ನಿಬಂಧನೆಯಡಿ ಪರಿಗಣಿಸಬಹುದು ಎಂದು ನ್ಯಾಯಪೀಠ ಹೇಳಿದೆ. ಇದು ಬದಲಾಗುತ್ತಿರುವ ಭಾರತದಲ್ಲಿ ಅಚ್ಚರಿ ಮೂಡಿಸಬೇಕಿಲ್ಲ. ನಾಲ್ಕನೇ ಔದ್ಯೋಗಿಕ ಕ್ರಾಂತಿಯ ಡಿಜಿಟಲ್ ಯುಗದತ್ತ ಸಾಗುತ್ತಿರುವ ವಿಕಸಿತ ಭಾರತ ನಡೆಯುತ್ತಿರುವ ಹಾದಿಯಲ್ಲಿ ಇದು ಸಹಜ ಪ್ರಕ್ರಿಯೆಯಾಗಿ ಕಾಣುತ್ತದೆ.
ಸುಪ್ರೀಂಕೋರ್ಟ್ ನ್ಯಾಯಪೀಠದ ತೀರ್ಪಿನ ಮುಖ್ಯಾಂಶಗಳನ್ನು ಗಮನಿಸಿದರೆ, ಬದಲಾದ ಭಾರತದ ವಾಸ್ತವಗಳನ್ನೂ ಗ್ರಹಿಸಬಹುದು. “ಎಲ್ಲ ಖಾಸಗಿ ಸ್ವತ್ತುಗಳು ಸಮುದಾಯದ ಸಂಪನ್ಮೂಲಗಳು ಎಂದು ಹೇಳುವುದು ಸರಿಯಲ್ಲ, ಆರ್ಥಿಕ ನೀತಿಯೊಂದರ ನಿರೂಪಣೆ ಸುಪ್ರೀಂಕೋರ್ಟ್‌ನ ಕೆಲಸವಲ್ಲ, ವ್ಯಕ್ತಿಗಳು ಹೊಂದಿರುವ ಎಲ್ಲ ಸಂಪನ್ಮೂಲಗಳನ್ನು ಸಮುದಾಯದ ಸ್ವತ್ತುಗಳು ಎಂದು ಪರಿಗಣಿಸುವುದು ಸಂವಿಧಾನದ ತತ್ವವನ್ನೇ ಬುಡಮೇಲು ಮಾಡುತ್ತದೆ, 1960-70ರ ಅವಧಿಯಲ್ಲಿ ಸಮಾಜವಾದಿ ಅರ್ಥವ್ಯವಸ್ಥೆಗೆ ಪ್ರಾಶಸ್ತ್ಯ ನೀಡಲಾಗುತ್ತಿತ್ತು 1990ರ ನಂತರ ಮಾರುಕಟ್ಟೆ ಆರ್ಥಿಕತೆಯತ್ತ ದೇಶ ಸಾಗುತ್ತಿದೆ, ಈ ಆರ್ಥಿಕ ನೀತಿಗಳೇ ಭಾರತವನ್ನು ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ಶಕ್ತಿಯನ್ನಾಗಿ ರೂಪಿಸಿದೆ ” ಎಂದು ನ್ಯಾಯಪೀಠವು ವ್ಯಾಖ್ಯಾನಿಸಿದೆ. ಸಂವಿಧಾನದ ಮೂಲ ಅಶಯಗಳೇನೇ ಇದ್ದರೂ, ಅದನ್ನು ಜಾರಿಗೊಳಿಸುವ ಶಾಸನಬದ್ಧ ಅಧಿಕಾರ ಚುನಾಯಿತ ಸರ್ಕಾರಗಳಿಗೆ ಇರುತ್ತದೆ. ಈ ಸರ್ಕಾರಗಳು ಅನುಸರಿಸುವ ಆರ್ಥಿಕ ನೀತಿಗಳು ಸಾಂವಿಧಾನಿಕ ನಿಬಂಧನೆಗಳನ್ನೂ ಮರುವ್ಯಾಖ್ಯಾನಗೊಳಿಸುವ ಸಾಧ್ಯತೆಗಳಿರುತ್ತವೆ. ಡಾ. ಬಿ. ಆರ್. ಅಂಬೇಡ್ಕರ್ ಸಹ ಈ ಆತಂಕವನ್ನು ವ್ಯಕ್ತಪಡಿಸಿದ್ದುದನ್ನು ಸ್ಮರಿಸಬಹುದು.
ಚುನಾಯಿತ ಸರ್ಕಾರದ ಆದ್ಯತೆಗಳು
ಆದರೆ ಇಲ್ಲಿ ಕೆಲವು ಮೂಲಭೂತ ಸಮಸ್ಯೆಗಳನ್ನು ಸಹ ಅಧಿಕಾರಾರೂಢ ಸರ್ಕಾರಗಳು ಎದುರಿಸಬೇಕಾಗುತ್ತದೆ. ಖಾಸಗಿ ಒಡೆತನದ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳಬಹುದಾದ ಸಂದರ್ಭಗಳಲ್ಲಿ ಮತ್ತು ಸಂಪನ್ಮೂಲ ಮರುಹಂಚಿಕೆಯ ಪ್ರಕರಣಗಳಲ್ಲಿ ಸರ್ಕಾರಗಳು ಕೈಗೊಳ್ಳಬಹುದಾದ ನಿರ್ಣಯಗಳು ಪುನಃ ನ್ಯಾಯಾಲಯದ ಆವರಣದಲ್ಲೇ ನಿಷ್ಕರ್ಷೆಯಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಉದಾಹರಣೆಗೆ ರಸ್ತೆ, ಹೆದ್ದಾರಿ, ಮೆಟ್ರೋ, ಎಕ್ಸ್‌ಪ್ರೆಸ್ ಹೆದ್ದಾರಿ ಮುಂತಾದ, ಸಾರ್ವಜನಿಕರ ಬಳಕೆ ಮತ್ತು ಒಳಿತಿಗಾಗಿ ನಿರ್ಮಿಸಲಾಗುವ ಮೂಲಸೌಕರ್ಯಗಳಿಗಾಗಿ ಖಾಸಗಿ ಒಡೆತನದ, ವಿಶೇಷವಾಗಿ ಸಾಂಸ್ಥಿಕ ಒಡೆತನದ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳುವಾಗ ಅಲ್ಲಿ ವಾಣಿಜ್ಯೋದ್ಯಮಿಯ, ಸಾಂಸ್ಥಿಕ ವಾರಸುದಾರರ ಹಿತಾಸಕ್ತಿಗಳು ಅಡ್ಡಬರುತ್ತವೆ. ಪ್ರಸ್ತುತ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಸೂಚಿಸಿರುವ ಮಾನದಂಡಗಳನ್ನು ಜಾರಿಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆಯೊಂದಿಗೇ, ಒಂದು ವೇಳೆ ಸಾಧ್ಯವಾಗದಿದ್ದಲ್ಲಿ ಖಾಸಗಿ ಆಸ್ತಿಗಳು ಸಾಂವಿಧಾನಿಕ ರಕ್ಷಣೆ ಪಡೆಯುವ ಸಾಧ್ಯತೆಗಳಿರುತ್ತವೆ.
ಪ್ರಾಯೋಗಿಕವಾಗಿ ಸುಪ್ರೀಂಕೋರ್ಟ್‌ನ ಈ ತೀರ್ಪು ಜಾರಿಯಾಗುವ ಸಂದರ್ಭದಲ್ಲಿ ಹಲವು ಪ್ರಶ್ನೆಗಳೂ ಸಹಜವಾಗಿ ಉದ್ಭವಿಸುತ್ತವೆ. ಎಲ್ಲಾ ಖಾಸಗಿ ಸ್ವತ್ತುಗಳು ಸಾರ್ವಜನಿಕ ವಿತರಣೆಗಾಗಿ ರಾಜ್ಯ ಸ್ವಾಧೀನಕ್ಕೆ ಮುಕ್ತವಾಗಿಲ್ಲ ಆದರೂ, ಪ್ರತಿ ಸ್ವಾಧೀನತೆಯು ಸಂಪನ್ಮೂಲದ ಸ್ವರೂಪ, ಅದರ ಕೊರತೆ, ಸಮುದಾಯದ ಕಲ್ಯಾಣ-ಉಪಯುಕ್ತತೆಯ ಮೇಲೆ ಅದರ ಪ್ರಭಾವ ಮತ್ತು ಖಾಸಗಿ ಅಥವಾ ಸಾಮುದಾಯಿಕ ಒಡೆತನದಲ್ಲಿ ಸಾರ್ವಜನಿಕ ಹಿತಾಸಕ್ತಿಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತದೆಯೇ ಎಂಬ ಅಂಶಗಳನ್ನು ಆಧರಿಸಿ ಸರ್ಕಾರಗಳು, ನ್ಯಾಯಾಲಯಗಳು ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಸಮಾಜವಾದಿ ಅಥವಾ ಬಂಡವಾಳಶಾಹಿ ತತ್ವಗಳಿಗೆ ಕಟ್ಟುನಿಟ್ಟಾದ ಅನುಸರಣೆಗಿಂತ ಆರ್ಥಿಕ ಪ್ರಜಾಪ್ರಭುತ್ವಕ್ಕೆ ಸಂವಿಧಾನದ ಬದ್ಧತೆಯನ್ನು ನ್ಯಾಯಾಲಯದ ಈ ತೀರ್ಪು ಎತ್ತಿಹಿಡಿದಂತಿದೆ. ಹಾಗಾಗಿ ಸಾರ್ವಜನಿಕ ಪ್ರಯೋಜನಕ್ಕಾಗಿ ಪುನರ್ ವಿತರಣೆ ಅತ್ಯಗತ್ಯವಾದರೂ, ವೈಯಕ್ತಿಕ ಆಸ್ತಿ ಹಕ್ಕುಗಳ ವಿರುದ್ಧ ಕೈಗೊಳ್ಳುವ ಕ್ರಮಗಳು ಸಮತೋಲನದಲ್ಲಿರಬೇಕು ಎಂದು ನ್ಯಾಯಾಲಯ ಹೇಳುತ್ತದೆ.
ಈ ನಿಟ್ಟಿನಲ್ಲಿ ಸಂವಿಧಾನದ ಅನುಚ್ಛೇದ 39 (ಬಿ) ವಿಧಿಸುವ ನಿಬಂಧನೆಗಳನ್ನು ಮುಂದುವರೆಸಲು ಸಂವಿಧಾನದ ಅನುಚ್ಛೇದ 31ಸಿ ನೆರವಾಗುತ್ತದೆ ಎಂಬ ಅಭಿಪ್ರಾಯವನ್ನು ಪ್ರಸ್ತುತ ನ್ಯಾಯಪೀಠವೂ ಪುರಸ್ಕರಿಸಿದೆ. ಸಮುದಾಯದ ವಸ್ತು ಸಂಪನ್ಮೂಲಗಳ ಮಾಲೀಕತ್ವ ಮತ್ತು ನಿಯಂತ್ರಣವು ಸಾಮಾನ್ಯ ಜನರ ಒಳಿತಿಗಾಗಿ ಅರ್ಹವಾಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳು ಮಾಡಿದ ಕಾನೂನುಗಳಿಗೆ ಸಂವಿಧಾನಾತ್ಮಕ ಸವಾಲುಗಳಿಂದ ವಿನಾಯಿತಿಯನ್ನು 31ಸಿ ಅನುಚ್ಛೇದ ಒದಗಿಸುತ್ತದೆ ಎಂದು ಸಂವಿಧಾನ ತಜ್ಞರು ಅಭಿಪ್ರಾಯಪಡುತ್ತಾರೆ. ಈ ಅನುಚ್ಛೇದವು ತಿದ್ದುಪಡಿಗಳಿಗೆ ಒಳಗಾಗಿದ್ದರೂ ಇಂದಿಗೂ ಶಾಸನಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕ ಕಲ್ಯಾಣಕ್ಕಾಗಿ ಸಂಪನ್ಮೂಲ ವಿತರಣೆಯ ಸಾಂವಿಧಾನಿಕ ಉದ್ದೇಶಗಳನ್ನು ಮತ್ತಷ್ಟು ಹೆಚ್ಚಿಸಲು ನಿಜವಾದ ಗುರಿಯನ್ನು ಹೊಂದಿದ್ದರೆ ಅಂತಹ ಕಾನೂನುಗಳು ಈ ಅನುಚ್ಛೇದದ ಅಡಿಯಲ್ಲಿ ಪಡೆಯಬಹುದಾಗಿರುತ್ತದೆ. .
ವರ್ತಮಾನದ ಆಳ್ವಿಕೆಯ ವಾಸ್ತವತೆಗಳು
ಸುಪ್ರೀಂಕೋರ್ಟ್‌ನ ಈ ತೀರ್ಪು ಅನಿರೀಕ್ಷಿತವೇನಲ್ಲ. ಬದಲಾಗುತ್ತಿರುವ ಭಾರತದ ಆರ್ಥಿಕ ವ್ಯವಸ್ಥೆ ಮತ್ತು ಡಿಜಿಟಲ್ ಆರ್ಥಿಕತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ನವ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿಗಳಿಗೆ ಈ ತೀರ್ಪು ಪೂರಕವಾಗಿ ಕಾಣುತ್ತದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಜನರಿಂದಲೇ ಚುನಾಯಿತವಾದ ಸರ್ಕಾರಗಳು ಸೈದ್ಧಾಂತಿಕ ನೆಲೆಯಲ್ಲಿ ಸಂವಿಧಾನದ ಮೂಲ ಆಶಯಗಳಿಗೆ ತದ್ವಿರುದ್ಧವಾದ ದಿಕ್ಕಿನಲ್ಲಿ ಸಾಗುವುದಕ್ಕೆ ಭಾರತ ಹಲವು ಬಾರಿ ಸಾಕ್ಷಿಯಾಗಿದೆ. ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ನಿರ್ದೇಶಿತ ಆಪ್ತ ಬಂಡವಾಳಶಾಹಿ ಆರ್ಥಿಕತೆಯನ್ನು ಬಹುಮಟ್ಟಿಗೆ ಸರ್ವಸಮ್ಮತಿಯಿಂದ ಅನುಮೋದಿಸುತ್ತಿರುವ ಭಾರತದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಗೆ ಈ ತೀರ್ಪು ಹೆಚ್ಚಿನ ಆಘಾತವನ್ನೇನೂ ಉಂಟುಮಾಡುವುದಿಲ್ಲ.
ಆದರೆ ಸುಪ್ರೀಂಕೋರ್ಟ್‌ನ ಈ ತೀರ್ಪು ಭಾರತದ ಮಾರುಕಟ್ಟೆ ಆರ್ಥಿಕತೆ ಮತ್ತು ಅದನ್ನು ನಿರ್ದೇಶಿಸುವ ನವ ಉದಾರವಾದಿ ಆರ್ಥಿಕ ನೀತಿಗಳಿಗೆ ಮತ್ತಷ್ಟು ಪುಷ್ಟಿ ನೀಡುತ್ತದೆ. ಸಂವಿಧಾನ ಪೀಠಿಕೆಯಲ್ಲಿರುವ ಸಮಾಜವಾದ ಎಂಬ ಪದ, ಸಾಂವಿಧಾನಿಕ ಆಶಯವಾಗಿ ಇಂದಿಗೂ ಪ್ರಸ್ತುತ ಎಂದು ಇತ್ತೀಚಿನ ತೀರ್ಪೊಂದರಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಆದರೆ ಭಾರತ ಅನುಸರಿಸುತ್ತಿರುವ ಸಮಾಜವಾದ 18-19ನೆಯ ಶತಮಾನದಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಜನಿಸಿದ ಸಮಾಜವಾದವನ್ನು ಹೋಲುವುದಿಲ್ಲ. ಅಥವಾ ಮಾರ್ಕ್ಸ್ ಮತ್ತು ಏಂಗೆಲ್ಸ್ ಪ್ರತಿಪಾದಿಸಿದ ವೈಜ್ಞಾನಿಕ ಸಮಾಜವಾದಕ್ಕೂ ಹೊಂದಾಣಿಕೆಯಾಗುವುದಿಲ್ಲ. ಭಾರತದ ಸಂವಿಧಾನದ ಚೌಕಟ್ಟಿನೊಳಗೇ ಚುನಾಯಿತ ಸರ್ಕಾರಗಳು ಶಾಸನಬದ್ಧವಾಗಿ ಆರ್ಥಿಕ ನೀತಿಗಳನ್ನು ರೂಪಿಸುತ್ತಾ, ಸಮಾಜವಾದದ ಆಶಯಗಳನ್ನು ನಗಣ್ಯಗೊಳಿಸುವ ಅಥವಾ ಮತ್ತಷ್ಟು ಬಲಪಡಿಸುವ ಅವಕಾಶಗಳು ವಿಪುಲವಾಗಿವೆ.
ಸಂವಿಧಾನದ ಈ ನಮ್ಯತೆಯನ್ನು (Flexibility) ಬಳಸಿಕೊಂಡೇ 1970ರ ದಶಕದಲ್ಲಿ ಸಂಪನ್ಮೂಲಗಳ ರಾಷ್ಟ್ರೀಕರಣದಂತಹ ಉದಾತ್ತ ಚಿಂತನೆಗಳನ್ನು ಎತ್ತಿಹಿಡಿಯಲಾಗಿತ್ತು. ದಿವಂಗತ ನ್ಯಾಯಮೂರ್ತಿ ಕೃಷ್ಣ ಐಯ್ಯರ್ ಅವರ 1977ರ ತೀರ್ಪನ್ನು ಸಹ ಇದೇ ಬೆಳಕಿನಲ್ಲಿ ನೋಡಬೇಕಿದೆ. ಸ್ವತಂತ್ರ ನ್ಯಾಯಾಂಗ-ಕಾರ್ಯಾಂಗದ ಪರಿಕಲ್ಪನೆಯನ್ನು ಇಂದಿಗೂ ಪರಿಪೂರ್ಣವಾಗಿ ಮೈಗೂಡಿಸಿಕೊಳ್ಳಲಾಗದ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಸಂವಿಧಾನದ ಎಲ್ಲ ಶಾಸನಬದ್ಧ ಅಂಗಗಳೂ ಸಹ ಕಾಲಕಾಲಕ್ಕೆ ತಮ್ಮ ನಿಲುವುಗಳನ್ನು ಬದಲಿಸಿಕೊಳ್ಳುತ್ತಲೇ ಬಂದಿರುವುದನ್ನು ಕಂಡಿದ್ದೇವೆ. ಹಾಗಾಗಿ ಐವತ್ತು ವರ್ಷಗಳ ಹಿಂದಿನ ಸಮಾಜವಾದದ ಕಲ್ಪನೆಗಳು 2024ರಲ್ಲಿ ಅಪ್ರಸ್ತುತ ಎನಿಸುತ್ತಿವೆ. ಇಂದು ಭಾರತವನ್ನು ನಿರ್ದೇಶಿಸುತ್ತಿರುವ ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆಯು ಖಾಸಗಿ ಆಸ್ತಿಯನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ. ವಿಶಾಲ ಸಮಾಜದ ಒಳಿತಿಗೆ ಅಥವಾ ಉಪಯೋಗಕ್ಕೆ ಅಗತ್ಯವಾಗುವ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳುವ ಔದಾತ್ಯವನ್ನು ಅಧಿಕಾರ ರಾಜಕಾರಣದ ಯಾವುದೇ ಭಾಗಿದಾರ ಪಕ್ಷಗಳೂ ತೋರುವ ಸಾಧ್ಯತೆಗಳಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ Monetisation ಅಥವಾ ನಗದೀಕರಣದ ಮೂಲಕ ಈಗಿರುವ ಸಾರ್ವಜನಿಕ ಸಂಪತ್ತನ್ನೂ ಸಹ ಖಾಸಗಿ-ಕಾರ್ಪೋರೇಟ್‌ಗಳಿಗೆ ಪರಭಾರೆ ಮಾಡುವ ನೀತಿಗಳಿಗೆ ಬೂರ್ಷ್ವಾ ಪಕ್ಷಗಳು ಬದ್ಧತೆ ತೋರುತ್ತವೆ.
ಸುಪ್ರೀಂಕೋರ್ಟಿನ ತೀರ್ಪನ್ನು ಈ ಬೆಳಕಿನಲ್ಲಿ ನೋಡಬೇಕಿದೆ. ವಿಕಸಿತ ಭಾರತ ತನ್ನ ವಿಕಾಸದ ಹಾದಿಯಲ್ಲಿ ಕಾರ್ಪೋರೇಟ್ ಶ್ರೀಮಂತಿಕೆಯನ್ನು ಮತ್ತಷ್ಟು ಬೆಳೆಸುವಂತಹ ಆರ್ಥಿಕ ನೀತಿಗಳನ್ನು ಅಳವಡಿಸಿಕೊಳ್ಳುತ್ತಿದೆ. ಈ ಹಾದಿಯಲ್ಲಿ ಬಂಡವಾಳಶಾಹಿಯ ಸಂಪತ್ತು ನೂರು ಪಟ್ಟು ಹೆಚ್ಚಾಗುತ್ತಿರುವುದನ್ನು ಕಳೆದ ಹತ್ತು ವರ್ಷಗಳಲ್ಲಿ ಕಾಣಬಹುದು. ಇದೇ ವೇಳೆ ಸಂಪತ್ತಿನ ಮೇಲೆ ತೆರಿಗೆಯನ್ನು ರದ್ದುಗೊಳಿಸಿರುವುದು ಹಾಗೂ ಕಾರ್ಪೋರೇಟ್ ತೆರಿಗೆಯನ್ನು ತಗ್ಗಿಸಿರುವುದು, ಭವಿಷ್ಯ ಭಾರತದ ಒಂದು ಚಿತ್ರಣವನ್ನು ನೀಡುತ್ತದೆ. ಸರ್ಕಾರಗಳ ಆರ್ಥಿಕ ನೀತಿಗಳ ನಿರೂಪಣೆ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳುತ್ತಲೇ ಇದೆ. ಸರ್ಕಾರದ ಅಡಳಿತ ನೀತಿಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ನ್ಯಾಯಾಂಗದ ವ್ಯಾಪ್ತಿ ಸೀಮಿತವಾದದ್ದು ಎಂದು ಈ ಹಿಂದೆಯೂ ಸುಪ್ರೀಂಕೋರ್ಟ್ ಹೇಳಿತ್ತು.
ಸಾಮಾಜಿಕ-ಆರ್ಥಿಕ ಅಸಮಾನತೆಗಳು
ಆದರೆ ವಿಕಸಿತ ಭಾರತದಲ್ಲಿ ಬಡವ ಶ್ರೀಮಂತರ ನಡುವೆ ಅಂತರ ಹೆಚ್ಚಾಗುತ್ತಲೇ ಇರುವ ಈ ಸಂದರ್ಭದಲ್ಲಿ ಸಂವಿಧಾನದ ಸಮಸಮಾಜದ ಆಶಯಗಳಿಗೆ ಅನುಗುಣವಾಗಿ ಆರ್ಥಿಕ ನೀತಿಗಳನ್ನು ರೂಪಿಸುವ ಜವಾಬ್ದಾರಿ ಚುನಾಯಿತ ಸರ್ಕಾರಗಳ ಮೇಲಿರುತ್ತದೆ. ಕಳೆದ ಮೂರು ದಶಕಗಳ ಆರ್ಥಿಕ ನೀತಿಗಳು ಈ ಆಶಯಗಳನ್ನು ಕಡೆಗಣಿಸುತ್ತಲೇ ಬಂದಿವೆ. ಇಂದು ಈ ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆ ತನ್ನ ಉಚ್ಛ್ರಾಯ ಹಂತದಲ್ಲಿದ್ದು, ಭಾರತವನ್ನು ವಿಶ್ವದ ಅಗ್ರಮಾನ್ಯ ಆರ್ಥಿಕ ಶಕ್ತಿಯಾಗಿ ಮಾರ್ಪಡಿಸುವ ಹಾದಿಯಲ್ಲಿದೆ. ಇದನ್ನು ವಿರೋಧಿಸಬೇಕಿರುವುದು ಸಂವಿಧಾನಕ್ಕೆ ಬದ್ಧತೆ ತೋರುವ ರಾಜಕೀಯ ಪಕ್ಷಗಳು. ವಿಪರ್ಯಾಸವೆಂದರೆ ಮುಖ್ಯವಾಹಿನಿಯ ಯಾವುದೇ ರಾಜಕೀಯ ಪಕ್ಷಗಳಲ್ಲೂ ಈ ಕುರಿತಂತೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ. ಈ ಪಕ್ಷಗಳ ಕಾರ್ಯಕ್ರಮಗಳಾಗಲೀ, ಪ್ರಣಾಳಿಕೆಗಳಾಗಲೀ ಆರ್ಥಿಕತೆಯ ಬಗ್ಗೆ ಮಾತನಾಡುವುದೂ ಇಲ್ಲ.
ನೈಜ ಅಥವಾ ವೈಜ್ಞಾನಿಕ ಸಮಾಜವಾದದ ಸಾಂವಿಧಾನಿಕ ಆಶಯವು ಈಡೇರಬೇಕಾದರೆ ಅದಕ್ಕೆ ಸ್ಪಂದಿಸುವ ದನಿಗಳು ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಸಮಾಜದಿಂದ ಹೊರಹೊಮ್ಮಬೇಕು. ಈ ದನಿಗಳನ್ನು ನಿಯಂತ್ರಿಸಿ, ನಿರ್ದೇಶಿಸುವ ರಾಜಕೀಯ ಪಕ್ಷಗಳು ಇದಕ್ಕೆ ದನಿಗೂಡಿಸಬೇಕು. ದುರದೃಷ್ಟವಶಾತ್ ವಿಕಸಿತ ಭಾರತದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಸಂವಿಧಾನದಲ್ಲಿ ಲಭ್ಯವಿರುವ ಅವಕಾಶಗಳನ್ನೇ ಬಳಸಿಕೊಂಡು ಚುನಾಯಿತ ಸರ್ಕಾರಗಳು ಬಂಡವಾಳಶಾಹಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತಾ ಬಂದಿವೆ. ಉನ್ನತ ನ್ಯಾಯಾಂಗದ ನಿರ್ದೇಶನ ಅಥವಾ ನಿರೂಪಣೆಗಳನ್ನು ಅವಲಂಬಿಸುವುದಕ್ಕಿಂತಲೂ ಹೆಚ್ಚಾಗಿ, ತಳಸಮಾಜದಲ್ಲಿ ಸಮ ಸಮಾಜದ ಔದಾತ್ಯದ ಬಗ್ಗೆ ಜಾಗೃತಿ ಮೂಡಿಸುವುದು ವರ್ತಮಾನದ ಆದ್ಯತೆಯಾಗಬೇಕಿದೆ. ಸಂವಿಧಾನವನ್ನು ಎದೆಗವುಚಿಕೊಳ್ಳುವ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಯೋಚಿಸುವಂತಾದರೆ, ತಳಸಮಾಜದ ನಿರ್ಲಕ್ಷಿತ ಧ್ವನಿಗಳಿಗೆ ಬಲ ನೀಡಬಹುದು. ಆಗ ವಿಕಸಿತ ಭಾರತವನ್ನು ಕಾಡುತ್ತಿರುವ ಹಸಿವೆ, ಬಡತನ, ದಾರಿದ್ರ್ಯ ಮತ್ತು ಹಿಂದುಳಿಯುವಿಕೆ ಮತ್ತು ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸಲು ಸಾಧ್ಯವಾದೀತು.
ಸಮಾಜವಾದ ಅರಳುವುದು ಪ್ರಜಾಸತ್ತಾತ್ಮಕ ಆಡಳಿತದ ಅಂಗಳದಲ್ಲಿ. ಇದನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಮತ್ತು ರಾಜಕೀಯ ಪಕ್ಷಗಳ ಆದ್ಯತೆಗಳು, ಆಯ್ಕೆಗಳು ಮತ್ತು ಯೋಜನೆಗಳು ನಿರ್ಣಾಯಕವಾಗುತ್ತದೆ. ಈ ಪ್ರಾತಿನಿಧಿತ್ವವನ್ನು ನಿರ್ಣಯಿಸುವ ಸಾರ್ವಭೌಮ ಜನತೆಗೆ ಈ ವಾಸ್ತವ ಅರಿವು ಮೂಡುವುದು ಇವತ್ತಿನ ತುರ್ತು.
-೦-೦-೦-೦-