ರಾಮನಗರ: ಚನ್ನಪಟ್ಟಣ ಉಪಚುನಾವಣಾ ಪ್ರಚಾರ ಕಾರ್ಯದಲ್ಲಿ ಇರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸಿಎಂ ಸಿದ್ದರಾಮಯ್ಯ ಸೊಕ್ಕು ಮುರಿಬೇಕು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿ ಅಹಂಕಾರ, ಗರ್ವದಿಂದ ಮೆರೆಯುತ್ತಿರುವ ಸಿದ್ದರಾಮಯ್ಯ ಸೊಕ್ಕು ಮುರಿಯಿರಿ ಎಂದು ಕರೆ ನೀಡಿದ್ರು. ಬುಧವಾರ ದೇವೇಗೌಡರ ಮಾತಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ಗೆ ಅವಕಾಶ ಮಾಡಿಕೊಡಿ. ಈ ಉಪಚುನಾವಣೆಯಲ್ಲಿ ಯೋಗೇಶ್ವರ್ಗೆ ಆಶೀರ್ವಾದ ಮಾಡಿ ಎಂದು ಕರೆ ನೀಡಿದ್ದಾರೆ. ನಾನು ಚನ್ನಪಟ್ಟಣಕ್ಕೆ ಮತ್ತೊಮ್ಮೆ ಬರ್ತೀನಿ. ನವೆಂಬರ್ 11ಕ್ಕೆ ಸಾರ್ವಜನಿಕ ಸಭೆ ಇದೆ, ಅಲ್ಲಿ ಹೆಚ್ಚು ಮಾತನಾಡ್ತೇನೆ ಎಂದಿರುವ ಸಿಎಂ ಗೌಡರಿಗೆ ಮಾತಿನ ಏಟು ಕೊಟ್ಟಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯನ್ನು ಆಯ್ಕೆ ಮಾಡಿದ್ರಿ. ಆದರೆ ಅವರು ಬಿಜೆಪಿ ಜೊತೆ ಸೇರಿ ಕೇಂದ್ರದಲ್ಲಿ ಮಂತ್ರಿ ಆಗುವ ಆಸೆಯಿಂದ ಮಂಡ್ಯದಲ್ಲಿ ಹೋಗಿ ನಿಂತರು. ಕೇಂದ್ರದಲ್ಲಿ ಮಂತ್ರಿ ಆಗಿ ಐದಾರು ತಿಂಗಳು ಆಯ್ತು. ಐದಾರು ತಿಂಗಳಲ್ಲಿ ಐದು ತಿಂಗಳು ಮಂಡ್ಯದಲ್ಲೇ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
2018ರಲ್ಲಿ ನಾವೆಲ್ಲ ಸೇರಿ ಸಿಎಂ ಮಾಡಿದ್ವಿ. ಕೇವಲ 37 ಸ್ಥಾನ ಗೆದ್ದಿದ್ರೂ ಸಿಎಂ ಮಾಡಿದ್ವಿ. ಈ ಕುಮಾರಸ್ವಾಮಿ, ದೇವೇಗೌಡರು ಯಾವತ್ತೂ ಬಡವರ ಪರ ಕೆಲಸ ಮಾಡಿಲ್ಲ. ಯಾವಾಗಲೂ ಭಾವನಾತ್ಮಕವಾಗಿ ಜನರ ಅನುಕಂಪ ಗಿಟ್ಟಿಸಿಕೊಂಡು ಅಧಿಕಾರಕ್ಕೆ ಬರ್ತಾರೆ. ದೇವೇಗೌಡ ಕುಟುಂಬಕ್ಕೆ ಇದೇ ಕೆಲಸ. ಈ ಚುನಾವಣೆಯಲ್ಲಿ ಸೋಲ್ತೀವಿ ಅಂತ ಅವರಿಗೆ ಗೊತ್ತಾಗಿದೆ. ಆಗಲೇ ಅಳೋಕೆ ಶುರು ಮಾಡಿದ್ದಾರೆ ಎಂದಿದ್ದಾರೆ.
ಈ ವಯಸ್ಸಿನಲ್ಲೂ ಮೊಮ್ಮಗನ ಪರ ಪ್ರಚಾರ ಮಾಡೋಕೆ ಬಂದಿದ್ದಾರೆ. ಸಿದ್ದರಾಮಯ್ಯನ ಗರ್ವ ಇಳಿಸಬೇಕು ಅಂತ ಮಿಸ್ಟರ್ ದೇವೇಗೌಡ ಹೇಳಿದ್ದಾರೆ. ಈ ತರ ಹೇಳಿ ಜನರ ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ. ನಾನು ಯವತ್ತೂ ಅಧಿಕಾರ ಬಂದಾಗ ಗರ್ವದಿಂದ, ಅಹಂ ನಿಂದ ನಡೆಸುಕೊಂಡಿಲ್ಲ. ಜನರ ಉತ್ಸಾಹ ನೋಡ್ತಿದ್ರೆ ಯೋಗೆಶ್ವರ್ ಗೆಲುವು ನಿಶ್ಚಿತ. ನೂರಕ್ಕೆ ನೂರರಷ್ಟು ಯೋಗೇಶ್ವರ್ ಗೆಲ್ತಾರೆ. ಯೋಗೇಶ್ವರ್ ಈ ತಾಲೂಕಿನವರು, ತಾಲೂಕಿನ ಕಷ್ಟ ಗೊತ್ತಿರುವವರು. ನಿಖಿಲ್ ಕುಮಾರಸ್ವಾಮಿಗೆ ಹಳ್ಳಿಗಳು ಗೊತ್ತಾ..? ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಕೇಂದ್ರ ಮಂತ್ರಿ ಆಗಿದ್ದಾರೆ. ನಾವು ಮೇಕೆದಾಟು ಯೋಜನೆಗೆ ಮುಂದಾಗಿದ್ದೇವೆ. ಈಗ ರೈತನ ಮಗ, ಮಣ್ಣಿನ ಮಗ ಅದನ್ನ ಮಾಡಿಸಲಿ. ಕೇಂದ್ರದಲ್ಲಿ ಅನುಮತಿ ಕೊಡಿಸಲಿ ಎಂದು ಸವಾಲು ಹಾಕಿದ್ದಾರೆ. 24 ಗಂಟೆಗಳಲ್ಲಿ ಸೈನ್ ಹಾಕಿಸ್ತೀನಿ ಅಂದ್ರು, ಮಾಡಿದ್ರಾ..? ತೆರಿಗೆ ವಿಚಾರದಲ್ಲಿ ಅನ್ಯಾಯ ಆಯ್ತು. ದೇವೇಗೌಡರು ಒಂದು ದಿನ ಬಾಯಿ ಬಿಡಲಿಲ್ಲ. ಕುಮಾರಸ್ವಾಮಿ ಒಂದು ದಿನ ಇದನ್ನ ಚರ್ಚೆ ಮಾಡಲಿಲ್ಲ. ಇವತ್ತಿನವರೆಗೆ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಮೇಕೆದಾಟುಗೆ ಅನುಮತಿ ಕೊಡಿಸಿ. ನೀವು ಅನುಮತಿ ಕೊಡಿಸಿದ ತಕ್ಷಣ ನಾವು ಕೆಲಸ ಆರಂಭಿಸುತ್ತೇವೆ. ಅನುಮತಿ ಕೊಡಿಸ್ರೀ ಕುಮಾರಸ್ವಾಮಿ ಎಂದಿದ್ದಾರೆ.