ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಸಮರದಲ್ಲಿ ಗೆಲ್ಲಲೇ ಬೇಕು ಎನ್ನುವ ಹಠಕ್ಕೆ ಬಿದ್ದ ಕಾಂಗ್ರೆಸ್ ಎದುರಾಳಿ ಅಭ್ಯರ್ಥಿ ಆಕಾಂಕ್ಷಿಯನ್ನೇ ಸೆಳೆಯುವ ಮೂಲಕ ಜೆಡಿಎಸ್-ಬಿಜೆಪಿ ಮೈತ್ರಿ ನಾಯಕರಿಗೆ ಠಕ್ಕರ್ ಕೊಡುವ ಕೆಲಸ ಮಾಡಿದೆ. ಕಳೆದೊಂದು ವಾರದಿಂದ ಟಿಕೆಟ್ ಕೊಡುವ ಬಗ್ಗೆ ಹಗ್ಗಾಜಗ್ಗಾಟ ನಡೆಸುತ್ತಿದ್ದ ಮೈತ್ರಿ ನಾಯಕರು, ನಿನ್ನೆಯಷ್ಟೇ ಯೋಗೇಶ್ವರ್‌ಗೆ ಟಿಕೆಟ್ ನೀಡುವ ಬಗ್ಗೆ ಮಾತನ್ನಾಡಿದ್ರು. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಕಾಂಗ್ರೆಸ್ ಉರುಳಿಸಿದ ದಾಳಕ್ಕೆ ಯೋಗೇಶ್ವರ್ ಬಿದ್ದಾಗಿತ್ತು. ಹೀಗಾಗಿ ಮೈತ್ರಿ ನಾಯಕರ ಆಟ ನಡೆಯಲಿಲ್ಲ. ಟಿಕೆಟ್ ಕೊಡ್ತೇವೆ ಎಂದರೂ ಯೋಗೇಶ್ವರ್ ಪಕ್ಷಾಂತರ ಮಾಡಿದ್ದಾರೆ.

ಬೆಳಗ್ಗೆ 8.48ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ರಾಜೀನಾಮೆ ಪತ್ರ ರವಾನೆ ಮಾಡಿರುವ ಯೋಗೇಶ್ವರ್ ನೇರವಾಗಿ ಡಿ.ಕೆ ಶಿವಕುಮಾರ್ ನಿವಾಸಕ್ಕೆ ತೆರಳಿ ಅಲ್ಲಿಂದ ಸಿಎಂ ಸಿದ್ದರಾಮಯ್ಯ ಮನೆಗೆ ಹೋಗಿ ಸಿಎಂ ಭೇಟಿ ಮಾಡಿದ ಬಳಿಕ ಬೆಳಗ್ಗೆ 11.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಆಗುವ ಮೂಲಕ ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿ ಆಗುವುದು ಘೋಷಣೆ ಆಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ಚುನಾವಣೆ ನಡೆಯುವ ಮೊದಲೇ ಅರ್ಧ ಗೆದ್ದಂತಾಗಿದೆ ಅನ್ನೋ ಚರ್ಚೆಗಳು ರಾಜಕೀಯ ವಲಯದಲ್ಲಿ ಶುರುವಾಗಿದೆ. ಕಾಂಗ್ರೆಸ್‌ನಲ್ಲಿ ಪ್ರಬಲ ಅಭ್ಯರ್ಥಿ ಇಲ್ಲದ ಸಮಯದಲ್ಲಿ ಎದುರಾಳಿಯನ್ನೇ ಸೆಳೆದಿರುವುದು ಗೆಲುವಿಗೆ ಪೂರಕ ಎನ್ನಲಾಗ್ತಿದೆ.

ಚನ್ನಪಟ್ಟಣದಲ್ಲಿ ಗೆಲ್ಲಬೇಕು ಅನ್ನೋ ಕಾರಣಕ್ಕೆ ಕಳೆದ ನಾಲ್ಕೈದು ತಿಂಗಳ ಕಾಲ ಪ್ರವಾಸ ಮಾಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಇದೀಗ ಚನ್ನಪಟ್ಟಣದಲ್ಲಿ ಗೆಲುವುನ ದಾಳ ಉರುಳಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವನ್ನೇ ಬದಿಗೊತ್ತಿದ ಡಿಕೆ ಶಿವಕುಮಾರ್, ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ವೇಳೆ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಯೋಗೇಶ್ವರ್ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಇದ್ದರು. ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವ ನಿರ್ಧಾರ ಮಾಡಿ ಬಂದಿದ್ದಾರೆ. ನಾನೂ, ಸುರೇಶ್ ಎಲ್ಲರೂ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡ್ತೇವೆ ಎಂದಿದ್ದಾರೆ.

ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವುದು ಕಳೆದೊಂದು ವಾರದಿಂದಲೇ ಚರ್ಚೆ ಆಗಿತ್ತು. ಆದರೆ ಯಾವುದೇ ಗುಟ್ಟು ಬಿಟ್ಟುಕೊಡದೆ ರಾಜಕೀಯ ವೇದಿಕೆ ಸಜ್ಜು ಮಾಡಿಕೊಳ್ತಿದ್ರು ಎನ್ನಲಾಗಿದೆ. ಕಳೆದೊಂದು ವಾರದ ಹಿಂದೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನಾಯಕರನ್ನು ಕುಮಾರಸ್ವಾಮಿ ತುಳಿಯುತ್ತಿದ್ದಾರೆ ಎನ್ನುವ ಮೂಲಕ ಎನ್‌ಡಿಎ ಬಿಡುವ ಸೂಚನೆ ಕೊಟ್ಟಿದ್ದರು. ಆ ಬಳಿಕ ಆಪ್ತರ ಸಭೆಯಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದರು. ಆದರೆ ಬಿಜೆಪಿ ನಡೆಯನ್ನು ಗಮನಿಸುತ್ತಿದ್ದ ಯೋಗೇಶ್ವರ್, ಕಡೇ ಗಳಿಗೆಯಲ್ಲಿ ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದರು. ಇದೆಲ್ಲದರ ಹಿಂದಿನ ಸೂತ್ರದಾರ ಡಿ.ಕೆ ಶಿವಕುಮಾರ್ ಆಗಿದ್ದು, ಡಿಸಿಎಂ ಆಡಿಸಿದಂತೆ ಬೊಂಬೆ ಆಗಿದ್ರು ಯೋಗೇಶ್ವರ್ ಎನ್ನಲಾಗ್ತಿದೆ.
