ಖಾಸಗಿ ಆಸ್ತಿ – ಕುಟುಂಬ ಮತ್ತು ರಾಜಕೀಯ ಅಧಿಕಾರದ ಸಂಬಂಧ ಭಾರತದ ನೆಲದ ಗುಣ.
ಕಾರ್ಲ್ಸ್ ಮಾರ್ಕ್ಸ್ ಅವರ ಚಾರಿತ್ರಿಕ ಮತ್ತು ಗತಿತಾರ್ಕಿ ಭೌತವಾದದ (Historical & Dialectical Materialism) ತಾತ್ವಿಕ ನೆಲೆಯಲ್ಲಿ ಫ್ರೆಡ್ರಿಕ್ ಏಂಗೆಲ್ಸ್ 1884ರಲ್ಲಿ ಸಿದ್ದಪಡಿಸಿದ ಒಂದು ಐತಿಹಾಸಿಕ ಪ್ರಬಂಧ “ ಕುಟುಂಬ-ಖಾಸಗಿ ಆಸ್ತಿ ಮತ್ತು ಪ್ರಭುತ್ವದ ಮೂಲ ” (The Origin of the Family, Private Property and the State ). ಮಾರ್ಕ್ಸ್‌ವಾದಿ ಚಿಂತನೆಗಳನ್ನು ಅಪ್ರಸ್ತುತ ಅಥವಾ ಗತಕಾಲದ ತಾತ್ವಿಕತೆ ಎಂದೆಲ್ಲಾ ಹೀಗಳೆಯುವವರೂ ಒಪ್ಪಲೇಬೇಕಾದ ಒಂದು ಮೂಲ ಆಲೋಚನೆಯನ್ನು ಈ ಗ್ರಂಥ ಒದಗಿಸುತ್ತದೆ. ಏಕೆಂದರೆ ಇಲ್ಲಿ ಏಂಗೆಲ್ಸ್ ಹೇಳುವ ಸತ್ಯಗಳು ಸಾರ್ವಕಾಲಿಕವಷ್ಟೇ ಅಲ್ಲ ಎಲ್ಲ ಸಮಾಜಗಳಿಗೂ ಸಮಾನವಾಗಿ, ಸಮಾನಾಂತರವಾಗಿ ಅನ್ವಯಿಸುವ ಸರಳ ವಾಸ್ತವಗಳು. ಮಾನವ ಸಮಾಜದ ಅಭ್ಯುದಯದ ಹಾದಿಯಲ್ಲಿ ಪ್ರಭುತ್ವ ಅಂದರೆ ಸರ್ಕಾರವನ್ನು ನಿರ್ವಹಿಸುವ ಒಂದು ವ್ಯವಸ್ಥೆ ಹಂತಹಂತವಾಗಿ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಖಾಸಗಿ ಆಸ್ತಿ ಮತ್ತು ಅದನ್ನು ಕಾಪಾಡುವ ಕುಟುಂಬ ಹೇಗೆ ಬೆಳೆದುಬಂದಿದೆ ಎನ್ನುವುದನ್ನು ಈ ಕೃತಿ ವಿಷದೀಕರಿಸುತ್ತದೆ.
ರಾಜಕೀಯವಾಗಿ ಕಮ್ಯುನಿಸಂ ಸತ್ತಿದೆ ಎಂದು ಘೋಷಿಸಿಬಿಟ್ಟಿರುವ ಉದಾರವಾದಿಗಳೂ ಸದ್ದಿಲ್ಲದೆ ಸಮ್ಮತಿಸಬೇಕಾದ ಒಂದು ಸರಳ ಸತ್ಯವನ್ನು ಮಾರ್ಕ್ಸ್-ಏಂಗೆಲ್ಸ್ ಪ್ರತಿಪಾದಿಸಿದ ಈ ತಾತ್ವಿಕ ಚಿಂತನೆಯಲ್ಲಿ ಕಾಣಬಹುದು. ಇದರ ನೇರ ಸಾಕ್ಷಿ ಭಾರತದ ರಾಜಕಾರಣದಲ್ಲಿದೆ. ʼ ವಂಶಾಡಳಿತ ʼ ಅಥವಾ ʼ ಕುಟುಂಬ ರಾಜಕಾರಣ ʼ ಅಥವಾ ಉತ್ತರ ಭಾರತದಲ್ಲಿ ಬಳಸುವ ʼ ಪರಿವಾರ್‌ವಾದ್ ʼ ಪ್ರಸಕ್ತ ರಾಜಕಾರಣದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಪದ. ಬಿಜೆಪಿ ಈ ಪದವನ್ನೇ ನೆಹರೂ ಕುಟುಂಬದ ವಿರುದ್ಧ ಪ್ರಖರ ಅಸ್ತ್ರವನ್ನಾಗಿ ಬಳಸುತ್ತಿರುವುದನ್ನು ಇಂದಿಗೂ ಗಮನಿಸಬಹುದು. 2024ರ ಲೋಕಸಭಾ ಚುನಾವಣೆಗಳಿಗೆ ಮುನ್ನ ತೆಲಂಗಾಣದ ಸಂಗಾರೆಡ್ಡಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾ ಪ್ರಧಾನಿ ಮೋದಿಯವರು “ ಪರಿವಾರ್ ವಾದ್ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಬಹುದೊಡ್ಡ ಅಪಾಯ ಅದು ಹೊಸ ಪ್ರತಿಭೆಯನ್ನು ಉತ್ತೇಜಿಸುವುದಿಲ್ಲ ” ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಜಕೀಯ ಕುಟುಂಬಗಳ ಉಗಮ
ಸಾಮಾನ್ಯವಾಗಿ ಭಾರತದ ರಾಜಕೀಯ ಸಂಕಥನಗಳಲ್ಲಿ ಕುಟುಂಬ ರಾಜಕಾರಣ ಎಂದರೆ ನೆಹರೂ-ಇಂದಿರಾ ಕುಟುಂಬವನ್ನೇ ಉದ್ದೇಶಿಸಿ ಮಾತನಾಡಲಾಗುತ್ತದೆ. ಇದರಲ್ಲಿ ತಪ್ಪೇನೂ ಇಲ್ಲ. ಏಕೆಂದರೆ ಆ ಕುಟುಂಬ ಇಂದಿಗೂ ಕಾಂಗ್ರೆಸ್ ಪಕ್ಷದ ಮೇಲೆ ತನ್ನ ಹಿಡಿತವನ್ನು ಅಬಾಧಿತವಾಗಿ ಕಾಪಾಡಿಕೊಂಡೇ ಬಂದಿದೆ. ಆದರೆ ಕುಟುಂಬ ರಾಜಕಾರಣವನ್ನು ಗಾಂಧಿ ಕುಟುಂಬದೊಡನೆ ಮಾತ್ರ ಸಮೀಕರಿಸುವುದು ಆತ್ಮದ್ರೋಹವಾಗುತ್ತದೆ. ಏಕೆಂದರೆ ಇಂದು, ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಪರಿಭಾವಿಸಲಾಗುವ ಈ ರಾಜಕೀಯ ಪಿಡುಗು ಸರ್ವವ್ಯಾಪಿಯಾಗಿ ಎಲ್ಲ ಪಕ್ಷಗಳಲ್ಲೂ ಬೇರೂರಿದೆ. ಇನ್ನೂ ಹೇಳಬೇಕೆಂದರೆ ಕುಟುಂಬದ ಚೌಕಟ್ಟುಗಳಿಂದಾಚೆಗೆ ರಾಜಕೀಯ ಅಧಿಕಾರದ ವಿಸ್ತರಣೆಯನ್ನು ಕಾಣುವುದು ಅಸಾಧ್ಯವಾಗಿದೆ. ಕೆಲವು ನಾಯಕರು ವ್ಯಕ್ತಿಗತ ನೆಲೆಯಲ್ಲಿ ಇದಕ್ಕೆ ಹೊರತಾಗಿ ಕಂಡರೂ, ಪಕ್ಷದ ನೆಲೆಯಲ್ಲಿ ಅಧಿಕಾರ ರಾಜಕಾರಣ ಕೆಲವೇ ಪ್ರಬಲ ಕುಟುಂಬಗಳ ಅಂಗಳವನ್ನು ದಾಟಿ ಮುನ್ನಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದು ಕಟುಸತ್ಯ. ಹಾಗಾಗಿಯೇ ಒಂದು ಕುಟುಂಬದಿಂದಲೇ ಇಡೀ ಪಕ್ಷವನ್ನು ನಿಯಂತ್ರಿಸುವುದನ್ನು ಮಾತ್ರ ʼ ಪರಿವಾರ್‌ವಾದ ʼ ಎಂದು ವ್ಯಾಖ್ಯಾನಿಸುವ ಬಿಜೆಪಿ ನಾಯಕತ್ವ, ಕುಟುಂಬದ ಸದಸ್ಯರು ಅಧಿಕಾರ ರಾಜಕಾರಣವನ್ನು ಆಕ್ರಮಿಸುವುದನ್ನು ತಾತ್ವಿಕವಾಗಿ ಒಪ್ಪಿಕೊಳ್ಳುತ್ತದೆ.
ಇತ್ತೀಚೆಗೆ ನಡೆದ ಹರಿಯಾಣ ಮತ್ತು ಬರಲಿರುವ ಮಹಾರಾಷ್ಟ್ರ ಚುನಾವಣೆಗಳಲ್ಲಿ, 2023ರ ಕರ್ನಾಟಕ ವಿಧಾನಸಭೆ ಮತ್ತು 2024ರ ಲೋಕಸಭಾ ಚುನಾವಣೆಗಳನ್ನು ಗಮನಿಸಿದರೆ. ಮುಖ್ಯವಾಹಿನಿಯ ಎಲ್ಲ ಪಕ್ಷಗಳಲ್ಲೂ ಪ್ರಧಾನ ನಾಯಕರು ತಮ್ಮ ವಾರಸುದಾರರನ್ನು ಶಾಸನಸಭೆಗಳ ಹೊಸ್ತಿಲಲ್ಲಿ ನಿಲ್ಲಿಸಿರುವುದನ್ನು ಗುರುತಿಸಬಹುದು. ಇಡೀ ಪಕ್ಷವನ್ನೇ ಒಂದು ನಿರ್ದಿಷ್ಟ ಕುಟುಂಬ ನಿಯಂತ್ರಿಸುವ ಮಾದರಿಗಳನ್ನೂ ಕರ್ನಾಟಕದ ಜೆಡಿಎಸ್, ಹರಿಯಾಣದ ಲಾಲ್ ತ್ರಿವಳಿ, ಮಹಾರಾಷ್ಟ್ರದ ಪವಾರ್ ಕುಟುಂಬ, ಥಾಕರೆ ಕುಟುಂಬ, ಆಂಧ್ರ ಪ್ರದೇಶದ ಚಂದ್ರಬಾಬುನಾಯ್ಡು, ವೈಎಸ್ಆರ್ ಕಾಂಗ್ರೆಸ್ ಇವುಗಳಲ್ಲಿ ಕಾಣಬಹುದು. ನಿನ್ನೆ ಇಂದು ಮತ್ತು ನಾಳೆಯನ್ನು ರಾಜಕೀಯವಾಗಿ ಪ್ರತಿನಿಧಿಸುವ ಕುಟುಂಬ ಸದಸ್ಯರನ್ನು ವ್ಯವಸ್ಥಿತವಾಗಿ ಪೋಷಿಸಿ, ಅಧಿಕಾರವಲಯದಲ್ಲಿ ಬೆಳೆಸುವ ಪರಂಪರೆಗೆ ಈ ಕುಟುಂಬಗಳಷ್ಟೇ ಅಲ್ಲ, ಬಿಜೆಪಿಯ ಹಲವಾರು ನಾಯಕರೂ ಉತ್ತೇಜನ ಕೊಡುತ್ತಲೇ ಇದ್ದಾರೆ.
ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಎತ್ತಿಹಿಡಿಯುವ ಡಿಎಂಕೆಯಂತಹ ಪಕ್ಷವೂ ಸಹ ಇದೇ ಹಾದಿ ಹಿಡಿದಿರುವುದು ಅನಪೇಕ್ಷಣೀಯವಾದರೂ, ಸ್ಟಾಲಿನ್ ತಮ್ಮ ಪುತ್ರನನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿರುವುದನ್ನು ಗಮನಿಸಿದರೆ, ಕುಟುಂಬ ರಾಜಕಾರಣ ಭಾರತದ ರಾಜಕೀಯ ಭೂಪಟವನ್ನು ಎಷ್ಟು ಗಾಢವಾಗಿ ಪ್ರಭಾವಿಸಿದೆ ಎಂದು ಅರ್ಥವಾಗುತ್ತದೆ. ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ಈಗಾಗಲೇ , ಯಡಿಯೂರಪ್ಪ, ಖರ್ಗೆ, ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ ಹೀಗೆ ಪ್ರಮುಖ ನಾಯಕರು ತಮ್ಮ ವಾರಸುದಾರರನ್ನು ನೇಮಿಸಿಯಾಗಿದೆ. ಇತ್ತೀಚಿನ ಸೇರ್ಪಡೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಈ ವಿಚಾರದಲ್ಲಿ ಸಮಾನಮನಸ್ಕರಾಗಿಯೇ ಕಾಣುವ ರಾಜಕಾರಣಿಗಳು. ಕೌಟುಂಬಿಕ ವಾರಸುದಾರಿಕೆಯನ್ನು ರಾಜಕೀಯ ಅಧಿಕಾರಕ್ಕೂ ವಿಸ್ತರಿಸುವ ಈ ವಿಧಾನಕ್ಕೆ ಚಾರಿತ್ರಿಕ ಕಾರಣಗಳೂ ಇರುವುದನ್ನು ಗಮನಿಸಬೇಕಿದೆ.
ರಾಜಕೀಯ ಸುಡುವಾಸ್ತವಗಳು
ಇತ್ತೀಚಿನ ಚುನಾವಣೆಗಳ ಕೆಲವು ಅಂಕಿಅಂಶಗಳು ಇಲ್ಲಿ ಉಲ್ಲೇಖನಾರ್ಹ. 2024ರ ಲೋಕಸಭಾ ಚುನಾವಣೆಗಳಲ್ಲಿ ಆಯ್ಕೆಯಾದ 540 ಸಂಸದರ ಪೈಕಿ ಶೇಕಡಾ 93ರಷ್ಟು ಕೋಟ್ಯಧಿಪತಿಗಳಿದ್ದಾರೆ. ಸಂಸದರ ಸರಾಸರಿ ಆಸ್ತಿ ಕಳೆದ 15 ವರ್ಷಗಳಲ್ಲಿ ( ಅಂದರೆ ಡಿಜಿಟಲ್ ಕೈಗಾರಿಕಾ ಕ್ರಾಂತಿಯ ಉತ್ಕರ್ಷದ ಸಂದರ್ಭದಲ್ಲಿ) ಏಳುಪಟ್ಟು ಹೆಚ್ಚಾಗಿದೆ. ಮರು ಆಯ್ಕೆಯಾದ ಶೇಕಡಾ 29ರಷ್ಟು ಸಂಸದರ ಆಸ್ತಿ ದುಪ್ಪಟ್ಟಾಗಿದೆ. ವಿಧಾನಸಭೆಗಳನ್ನು ಅಲಂಕರಿಸುವ ರಾಜಕಾರಣಿಗಳೇನೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಚುನಾಯಿತರಾದ ಹರಿಯಾಣದ ಶೇಕಡಾ 96ರಷ್ಟು ಶಾಸಕರು , ಮಧ್ಯಪ್ರದೇಶದ 230 ಶಾಸಕರ ಪೈಕಿ 186 , ಕರ್ನಾಟಕದ 224ರ ಪೈಕಿ . ಶೇಕಡಾ 97ರಷ್ಟು,. ಆಂಧ್ರಪ್ರದೇಶದಲ್ಲಿ 174 ಶಾಸಕರ ಪೈಕಿ 162, ತೆಲಂಗಾಣದಲ್ಲಿ 118 ಶಾಸಕರ ಪೈಕಿ 106, ಛತ್ತಿಸ್‌ಘಡದಲ್ಲಿ 90 ಶಾಸಕರ ಪೈಕಿ 72, ಮಹಾರಾಷ್ಟ್ರದಲ್ಲಿ ಶೇಕಡಾ 93ರಷ್ಟು ಶಾಸಕರು ಕೋಟ್ಯಧಿಪತಿಗಳಿದ್ದಾರೆ. ಇಲ್ಲಿ ಪರಾಭವಗೊಂಡ ರಾಜಕಾರಣಿಗಳನ್ನೂ ಇದೇ ಆವರಣದಲ್ಲಿ ಸೇರಿಸಿದರೆ ಭಾರತದ ಶ್ರೀಮಂತ ಭಾರತದ ವಿರಾಟ್ ಸ್ವರೂಪ ಕಾಣುತ್ತದೆ. (Association for Democratic Rights-ADR ವರದಿಗಳನ್ನು ಗಮನಿಸಿ)
ಏಕೆ ಹೀಗೆ ಎಂಬ ಪ್ರಶ್ನೆಗೆ ಮಾರ್ಕ್ಸ್-ಏಂಗೆಲ್ಸ್ ಅವರ ಕುಟುಂಬ-ಖಾಸಗಿಆಸ್ತಿ ಪ್ರಮೇಯದತ್ತ ಪುನಃ ನೋಡಬಹುದು. ವರ್ತಮಾನದ ಭಾರತದಲ್ಲಿ ಕಾಣುತ್ತಿರುವ ವಂಶಾಡಳಿತ ಅಥವಾ ಕುಟುಂಬ ರಾಜಕಾರಣ ಶತಮಾನಗಳಿಂದ ಬೇರೂರಿರುವ ರಾಜಪ್ರಭುತ್ವದ ಒಂದು ರಾಜಕೀಯ ಪಳೆಯುಳಿಕೆ. ಏಂಗೆಲ್ಸ್ ಹೇಳಿದಂತೆ ಒಂದು ಕುಟುಂಬ ತನ್ನ ಕ್ರೋಢೀಕೃತ ಆಸ್ತಿಯನ್ನು ಸಂರಕ್ಷಿಸಲು ಹೇಗೆ ವಾರಸುದಾರರನ್ನು ಸೃಷ್ಟಿಸುತ್ತಾ, ಖಾಸಗಿ ಆಸ್ತಿ ಮತ್ತು ಅದರ ಸುತ್ತಲಿನ ಸಾಮ್ರಾಜ್ಯವನ್ನು ವಿಸ್ತರಿಸುವ ಸಲುವಾಗಿ ಪ್ರಭುತ್ವ ಅಥವಾ ಆಳ್ವಿಕೆಯನ್ನು ಆಶ್ರಯಿಸುವುದೋ ಹಾಗೆಯೇ ಭಾರತದ ರಾಜಕಾರಣದಲ್ಲೂ ʼ ರಾಜಕೀಯ ಕುಟುಂಬಗಳುʼ ತಾವು ಸಂಪಾದಿಸಿದ ಖಾಸಗಿ ಆಸ್ತಿ ಮತ್ತು ಅದರ ಸುತ್ತ ಕಟ್ಟಿಕೊಂಡ ವಾಣಿಜ್ಯ-ಕಾರ್ಪೋರೇಟ್ ಸಾಮ್ರಾಜ್ಯವನ್ನು ಶಾಶ್ವತಗೊಳಿಸುವ ಸಲುವಾಗಿ ವಾರಸುದಾರಿಕೆಯನ್ನು ಅಪೇಕ್ಷಿಸುತ್ತವೆ. ಆಳ್ವಿಕೆಯ ಕೃಪೆಯನ್ನೂ ಅಪೇಕ್ಷಿಸುತ್ತವೆ.
ಮೇಲಿನ ಅಂಕಿಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ವರ್ತಮಾನದ ಅಧಿಕಾರ ರಾಜಕಾರಣದಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರುವುದು ಊಹಿಸಲೂ ಸಾಧ್ಯವಾಗುವುದಿಲ್ಲ. ಈ ಕೋಟ್ಯಧಿಪತಿ ಜನಪ್ರತಿನಿಧಿಗಳು ತಮ್ಮ ಅಧಿಕಾರಾವಧಿಯಲ್ಲಿ ನಿರ್ಮಿಸಿಕೊಂಡ ವಾಣಿಜ್ಯ ಕೋಟೆಗಳನ್ನು, ಮಾರುಕಟ್ಟೆ ಭಂಡಾರಗಳನ್ನು ಮತ್ತು ಬಂಡವಾಳದ ಕಣಜಗಳನ್ನು ಕಾಪಾಡಿಕೊಳ್ಳುವ ಸಲುವಾಗಿಯೇ ತಮ್ಮ ಮಕ್ಕಳನ್ನು, ಕುಟುಂಬದವರನ್ನು, ಬಂಧುಬಾಂಧವರನ್ನು ಕೆಳಹಂತದಿಂದಲೇ ಪೋಷಿಸಿಕೊಂಡು ಬರುತ್ತಾರೆ. ನವ ಉದಾರವಾದದ ಡಿಜಿಟಲ್ ಮಾರುಕಟ್ಟೆ ಮತ್ತು ಬಂಡವಾಳದ ಹರಿವನ್ನು ಹಿಡಿದಿಟ್ಟುಕೊಳ್ಳಲು ಈ ಜನಪ್ರತಿನಿಧಿಗಳಿಗೆ ನೆರವಾಗುವುದು ರಸ್ತೆ-ಹೆದ್ದಾರಿ-ಸೇತುವೆ-ಮೆಟ್ರೋ ಮೊದಲಾದ ಮೂಲ ಸೌಕರ್ಯಗಳು, ನಗರೀಕರಣದ ಬೆಳವಣಿಗೆಯಿಂದ ಸುಭದ್ರವಾಗಿರುವ ರಿಯಲ್ ಎಸ್ಟೇಟ್, ವಾಣಿಜ್ಯೀಕರಣಗೊಂಡ ಶೈಕ್ಷಣಿಕ ಸಂಸ್ಥೆಗಳು, ಕಾರ್ಪೋರೇಟ್ ಆಸ್ಪತ್ರೆ ಮತ್ತು ಯೋಗಕ್ಷೇಮ (Wellness) ಕೇಂದ್ರಗಳು ಮತ್ತು ಪರೋಕ್ಷ ರಾಜಕಾರಣಕ್ಕೆ ನೆರವಾಗುವ ಅಧ್ಯಾತ್ಮ-ಧಾರ್ಮಿಕ ಸಂಸ್ಥೆಗಳು.
ಸಾಂಸ್ಥಿಕ ನೆಲೆ ಮತ್ತು ವಾಣಿಜ್ಯಾಸಕ್ತಿ
ಈ ಯಾವುದೇ ಸಾಂಸ್ಥಿಕ ನೆಲೆಯಲ್ಲಿ ಸಮಾಜದ ಕಟ್ಟಕಡೆಯ ಅವಕಾಶವಂಚಿತ ವ್ಯಕ್ತಿಗೆ ಉಚಿತ ಇರಲಿ, ಮುಕ್ತ ಪ್ರವೇಶವೂ ಸಾಧ್ಯವಾಗುವುದಿಲ್ಲ. ಬಂಡವಾಳ ಮತ್ತು ಮಾರುಕಟ್ಟೆ ವಿಸ್ತರಿಸಿದಂತೆಲ್ಲಾ ತಮ್ಮ ಬಾಹುಗಳನ್ನು ಹರಡುತ್ತಾ ಹೋಗುವ ʼ ಜನಪ್ರತಿನಿಧಿಗಳ ʼ ಒಡೆತನದ ಈ ಸಂಸ್ಥೆಗಳು ಒಂದು ರೀತಿಯಲ್ಲಿ ಸಮಾನಾಂತರ ಆರ್ಥಿಕತೆಯನ್ನೇ ಪೋಷಿಸುತ್ತಾ ಹೋಗುತ್ತವೆ. ಈ ವಿಸ್ತರಣೆಗೆ ಅಗತ್ಯವಾದ ಭೂಮಿ, ಅರಣ್ಯ , ಜಲ ಮತ್ತಿತರ ನೈಸರ್ಗಿಕ ಸಂಪನ್ಮೂಲಗಳನ್ನು ಆಡಳಿತಾರೂಢ ಸರ್ಕಾರಗಳೇ ಪಕ್ಷಭೇದವಿಲ್ಲದೆ ಒದಗಿಸುತ್ತಾ ಹೋಗುತ್ತವೆ. ಏಕೆಂದರೆ ಈ ವಾಣಿಜ್ಯ ಸಾಮ್ರಾಜ್ಯ ವಿಸ್ತರಣೆಗೂ ಮೇಲ್ಪದರದ ಆರ್ಥಿಕತೆಗೂ ನೇರ ಸಂಬಂಧ ಇರುತ್ತದೆ. ʼ ಜನಸೇವೆ ʼ ಮಾಡಲೆಂದೇ ಶಾಸನಸಭೆಗಳಿಗೆ ಆಯ್ಕೆಯಾಗುವ ಪ್ರತಿನಿಧಿಗಳು ಇಲ್ಲಿ ಜನರಿಂದ ಸುಲಿಗೆ ಮಾಡುವ ಹಣವನ್ನೇ ಮಾರುಕಟ್ಟೆಯ ಸೇವೆಯಲ್ಲಿ ತೊಡಗಿಸುತ್ತಾರೆ. ಬಂಡವಾಳಶಾಹಿಯ ಒಂದು ಪ್ರಧಾನ ಲಕ್ಷಣ ಇದು.. ಭಾರತದ ರಾಜಕಾರಣವನ್ನು ಇದರಿಂದ ಹೊರತಾಗಿ ನೋಡಲಾಗುವುದಿಲ್ಲ.
ಈ ವಿಸ್ತರಿಸಲ್ಪಟ್ಟ ಅಥವಾ ಸಂಸ್ಥಾಪಿಸಲ್ಪಟ್ಟ ವಾಣಿಜ್ಯ ಸಾಮ್ರಾಜ್ಯವನ್ನು ತಮ್ಮ ವೈಯುಕ್ತಿಕ ಕುಟುಂಬದ ಮುಂದಿನ ತಲೆಮಾರುಗಳಿಗಾಗಿ ಶಾಶ್ವತವಾಗಿ ರಕ್ಷಿಸುವುದು ರಾಜಕಾರಣಿಗಳ ಪ್ರಧಾನ ಧ್ಯೇಯವಾಗಿರುತ್ತದೆ. ಇಲ್ಲಿ ಕಾಣಬಹುದಾದ ಏಕೈಕ ಮಾರ್ಗ ಎಂದರೆ ಅಧಿಕಾರ ರಾಜಕಾರಣ. ಇಲ್ಲಿ ಅಧಿಕಾರ ಶಾಶ್ವತವಾಗದಿದ್ದರೂ, ಅಧಿಕಾರಯುತ ಪ್ರಭಾವವನ್ನು ಶಾಶ್ವತಗೊಳಿಸುವ ಸಲುವಾಗಿಯೇ ಜಾತಿ, ಧರ್ಮ, ಸಮುದಾಯ, ಭಾಷೆ ಮೊದಲಾದ ಅಸ್ಮಿತೆಗಳ ಕೋಟೆಗಳನ್ನು ಭದ್ರಪಡಿಸಲಾಗುತ್ತದೆ. ತಮ್ಮ ನಾಯಕನ ವಾಣಿಜ್ಯ ಸಾಮ್ರಾಜ್ಯದ ವಿಸ್ತರಣೆಯಿಂದ ತಮ್ಮ ಬದುಕಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಅರಿತಿದ್ದರೂ, ಈ ಅಸ್ಮಿತೆಗಳಿಗೆ ನೇತುಹಾಕಿಕೊಳ್ಳುವ ಕಾರ್ಯಕರ್ತರು , ಹಿಂಬಾಲಕರಾಗಿ ಲಭ್ಯ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಜೀವನ ಸವೆಸುತ್ತಾರೆ. ಇವರ ಪೈಕಿ ಕೆಲವರು ಮಾತ್ರ ತಮ್ಮದೇ ಆದ ಪುಟ್ಟ ವಾಣಿಜ್ಯ ಸಂಸ್ಥಾನಗಳನ್ನು ಕಟ್ಟಿಕೊಳ್ಳಲು ಸಾಧ್ಯ ಎನ್ನುವುದು ಮೇಲ್ನೋಟಕ್ಕೇ ಕಾಣುವ ಸತ್ಯ.
ಮೂಲತಃ ಕುಟುಂಬ ವ್ಯವಸ್ಥೆ ಮತ್ತು ಅದರೊಳಗಿನ ಯಜಮಾನಿಕೆಯ ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡಿರುವ ಭಾರತೀಯ ಸಮಾಜದಲ್ಲಿ ಕುಟುಂಬದ ಆಸ್ತಿಯನ್ನು ರಕ್ಷಿಸುವುದು ಮುಂದಿನ ತಲೆಮಾರುಗಳ ಪ್ರಥಮ ಆದ್ಯತೆಯಾಗುತ್ತದೆ. ಗಂಡು ಮಕ್ಕಳಿಲ್ಲದ ರಾಜರು ದತ್ತು ತೆಗೆದುಕೊಂಡಾದರೂ ತಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳುತ್ತಿದ್ದ ಪರಂಪರೆಗೂ ಭಾರತೀಯ ಸಮಾಜ ಸಾಕ್ಷಿಯಾಗಿದೆ. ಇಲ್ಲಿ ಪ್ರಧಾನವಾಗಿ ಕಾರ್ಯೋನ್ಮುಖವಾಗುವ ಪಿತೃಪ್ರಧಾನ ಮೌಲ್ಯಗಳೇ ಅಧಿಕಾರ ರಾಜಕಾರಣಕ್ಕೂ ವಿಸ್ತರಿಸುವುದರಿಂದಲೇ, ಕುಟುಂಬ ರಾಜಕಾರಣ ಎಷ್ಟೇ ವಿಸ್ತರಿಸಿದರೂ ಅಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಪ್ರಧಾನವಾಗಿ ಕಾಣಲಾಗುವುದಿಲ್ಲ. ಹಾಗಾಗಿಯೇ ರಾಜಕೀಯ ಪಕ್ಷಗಳಲ್ಲಿ ನಾಯಕತ್ವದ ಸ್ಥಾನವನ್ನು ಬಹುತೇಕವಾಗಿ ಪುರುಷರೇ ಆಕ್ರಮಿಸಿರುತ್ತಾರೆ. ಯಾವುದೇ ಪಕ್ಷದಲ್ಲೂ ನೈಜ ಪ್ರಜಾಸತ್ತಾತ್ಮಕ ಆಯ್ಕೆ ಪ್ರಕ್ರಿಯೆಯನ್ನೂ ಕಾಣಲಾಗುವುದಿಲ್ಲ. ಅಧಿಕಾರ ಹಂಚಿಕೆಯೂ ಇದರ ಒಂದು ವಿಸ್ತರಣೆಯಾಗಿ ನಡೆಯುತ್ತದೆ. ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಅನುಸರಿಸುತ್ತಿರುವ ವಿಳಂಬ ನೀತಿ ಇದಕ್ಕೊಂದು ನಿದರ್ಶನ.
ಕುಟುಂಬ ರಾಜಕಾರಣದ ಮಾರುಕಟ್ಟೆ ಆಯಾಮ
ವಂಶಾಡಳಿತ-ಪರಿವಾರ್‌ವಾದ್ ಅಥವಾ ಕುಟುಂಬ ರಾಜಕಾರಣ ಭಾರತದ ಸಂಸದೀಯ ಪ್ರಜಾಸತ್ತೆಯಲ್ಲಿ ಸ್ಥಾಪಿತ ವ್ಯವಸ್ಥೆಯಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಸ್ವಾತಂತ್ರ್ಯ ಬಂದ ದಿನದಿಂದಲೇ ಇದಕ್ಕೆ ಅಗತ್ಯವಾದ ಅಡಿಪಾಯವನ್ನು ಹಾಕಲಾಗಿದೆ. ಕೆಲವೇ ನಾಯಕರು ಸರಳ ಜೀವನ, ಬ್ರಹ್ಮಚರ್ಯ, ವ್ಯಕ್ತಿಗತ ಪ್ರಾಮಾಣಿಕತೆ ಮೊದಲಾದ ಗುಣಲಕ್ಷಣಗಳ ಮೂಲಕ ಜನಾಕರ್ಷಣೆ ಪಡೆದುಕೊಂಡಿದ್ದಾರೆ. ಆದರೆ ಇಂತಹ ನಾಯಕರ ಆಳ್ವಿಕೆಯಲ್ಲೇ ಕುಟುಂಬ ರಾಜಕಾರಣದ ಬೇರುಗಳೂ ಗಟ್ಟಿಯಾಗಿರುವುದಲ್ಲದೆ, ಈ ಕುಟುಂಬದ ಖಾಸಗಿ ಆಸ್ತಿಯ ವಿಶಾಲ ಸಾಮ್ರಾಜ್ಯಗಳೂ ವಿಸ್ತರಿಸುತ್ತಲೇ ಬಂದಿವೆ. ಈ ಬೆಳವಣಿಗೆಯನ್ನು ಇಂತಹ ನಾಯಕರೂ ಸಹಿಸಿಕೊಳ್ಳುತ್ತಲೇ ಬಂದಿದ್ದಾರೆ. ಇದಕ್ಕೆ ಮೂಲ ಕಾರಣ ಎಂದರೆ ರಾಜಕಾರಣಿಗಳನ್ನು ಅಥವಾ ಅವರ ವಾಣಿಜ್ಯ ಸಾಮ್ರಾಜ್ಯಗಳ ವಿಸ್ತರಣೆಯನ್ನು ಯಾರೂ ಸಹ ಪ್ರಶ್ನಿಸುವುದಿಲ್ಲ. ರಾಜಕೀಯದ ಔದ್ಯಮೀಕರಣ ಅಥವಾ ಕಾರ್ಪೋರೇಟೀಕರಣ ಮತ್ತು ಕಾರ್ಪೋರೇಟ್ ಜಗತ್ತಿನ ರಾಜಕೀಕರಣ ಎರಡೂ ಪ್ರಕ್ರಿಯೆಯಗಳು ಸಮಾನಾಂತರವಾಗಿ ನಡೆಯುತ್ತಿರುವುದನ್ನು ಕಳೆದ ಎರಡು ದಶಕಗಳಲ್ಲಿ ಗಮನಿಸಬಹುದು.
ಇಲ್ಲಿ ನೆಲೆ ಕಂಡುಕೊಳ್ಳುವ ರಾಜಕೀಯ ಕುಟುಂಬಗಳು ತಾವು ಕ್ರೋಢೀಕರಿಸಿದ ಖಾಸಗಿ ಆಸ್ತಿಯನ್ನು ರಕ್ಷಿಸುವ ಮತ್ತು ಇನ್ನೂ ವಿಸ್ತರಿಸುವ ಸಲುವಾಗಿ ಆಳ್ವಿಕೆಯ ಅಧಿಕಾರ ಕೇಂದ್ರಗಳನ್ನೇ ಆಶ್ರಯಿಸುತ್ತವೆ. ಪಕ್ಷಾತೀತವಾಗಿ ಆಳ್ವಿಕೆಯ ನೀತಿಗಳು ಈ ಪ್ರಕ್ರಿಯೆಗೆ ಪೂರಕವಾಗಿರುವುದನ್ನೂ ಗಮನಿಸುತ್ತಲೇ ಬಂದಿದ್ದೇವೆ. ಆದರೆ ಈವರೆಗೂ ಸಾರ್ವಜನಿಕ ಸಂಕಥನಗಳಲ್ಲಿ, ಬೌದ್ಧಿಕ ಚರ್ಚೆಗಳಲ್ಲಿ ನಮ್ಮ ಜನಪ್ರತಿನಿಧಿಗಳಿಂದ ಉತ್ತರದಾಯಿತ್ವವನ್ನು ಆಗ್ರಹಿಸುವ ದನಿ ಹೊರಹೊಮ್ಮಿಲ್ಲ. ಮೇಲ್ಮುಖಿಯಾಗೇ ಚಲಿಸುತ್ತಾ ಹೋಗುವ ತಮ್ಮ ಖಾಸಗಿ ಆಸ್ತಿ ಮತ್ತು ಸಂಪತ್ತಿಗೆ ರಾಜಕೀಯ ನಾಯಕರು ಯಾರಿಗೂ ಉತ್ತರದಾಯಿಯಾಗಬೇಕಿಲ್ಲ. ಇದನ್ನು ಪ್ರಶ್ನಿಸಲು ಮುಂದಾಗಬಹುದಾದ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಅವಕಾಶವಂಚಿತರನ್ನು , ವಿಶೇಷವಾಗಿ ಯುವ ಸಂಕುಲವನ್ನು, ರಾಜಕೀಯ ಪಕ್ಷಗಳು-ನಾಯಕರು ತತ್ವ-ಸಿದ್ಧಾಂತ-ಪಕ್ಷನಿಷ್ಠೆ-ನಾಯಕನಿಷ್ಠೆ ಮತ್ತು ಜಾತಿ-ಮತ-ಧರ್ಮಗಳ ಅಸ್ಮಿತೆಗಳ ಚೌಕಟ್ಟಿನೊಳಗೆ ಕಟ್ಟಿಹಾಕಿರುತ್ತಾರೆ. ಇದು ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಜಗತ್ತಿನ ಒಂದು ಜಗನಿಯಮ.
ಮತ್ತೆಮತ್ತೆ ಮಾರ್ಕ್ಸ್ ಮತ್ತು ಏಂಗೆಲ್ಸ್ ಅವರ ಬಳಿಗೇ ಹೋಗುವುದಾದರೆ, “ ಕುಟುಂಬ-ಖಾಸಗಿ ಆಸ್ತಿ ಮತ್ತು ಪ್ರಭುತ್ವ ಅಥವಾ ಆಳ್ವಿಕೆ ” , ಈ ತಾತ್ವಿಕ ಪ್ರತಿಪಾದನೆಯನ್ನು ರಾಜಕೀಯ ಕುಟುಂಬಗಳಿಗೆ ನೇರವಾಗಿ ಅನ್ವಯಿಸಬಹುದಾಗಿದೆ. ಈ ಪ್ರಮೇಯದಿಂದಾಚೆಗೆ ನೋಡಿದರೆ ಕುಟುಂಬ ರಾಜಕಾರಣದ ಒಳಮರ್ಮ ಅರ್ಥವಾಗುವುದೂ ಕಷ್ಟ. ಸ್ವತಂತ್ರ ಭಾರತ ಸೃಷ್ಟಿಸಿರುವ ರಾಜಕೀಯ ಕುಟುಂಬಗಳು ರಾಜಪ್ರಭುತ್ವದ ಸಂತತಿಗಳನ್ನು ಉಳಿಸಿಕೊಂಡೇ ಬಂದಿದ್ದು ಈಗ ಮಾರ್ಕ್ಸ್-ಗಾಂಧಿ-ಲೋಹಿಯಾ-ಅಂಬೇಡ್ಕರ್ ಅವರನ್ನು ಆರಾಧಿಸುವ ರಾಜಕಾರಣಿಗಳ ನಡುವೆಯೂ ಸ್ಥಾಪನೆಯಾಗಿವೆ. ಇದು ಕಟು ವಾಸ್ತವ. ಇದರ ಮೂಲ ಇರುವುದು ಭಾರತೀಯ ಸಮಾಜದಲ್ಲಿ ಬೇರೂರಿರುವ ಕುಟುಂಬ ವ್ಯವಸ್ಥೆಯಲ್ಲಿ ಮತ್ತು ಅದನ್ನು ನಿಯಂತ್ರಿಸುವ ಯಜಮಾನಿಕೆಯ ಸಂಸ್ಕೃತಿ, ಊಳಿಗಮಾನ್ಯ-ಪಿತೃಪ್ರಧಾನ ಮನಸ್ಥಿತಿ ಹಾಗೂ ಮುಂದಿನ ಸಂತತಿಯನ್ನು ಕಾಪಾಡುವ ಹಪಹಪಿಯಲ್ಲಿ.
ಇದನ್ನು ಸರಿಪಡಿಸುವುದು ಹೇಗೆ ? ಸರಿಪಡಿಸಿದಾಗಲೇ ಕುಟುಂಬ ರಾಜಕಾರಣಕ್ಕೆ ಅಂತ್ಯಹಾಡಲು ಸಾಧ್ಯ. ತಳಮಟ್ಟದ ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಉನ್ನತ ನಾಯಕನಾಗುವ ಕನಸು ಕಾಣಲು ಸಾಧ್ಯ. ಹೌದಲ್ಲವೇ ?