
ಉತ್ತರ ಭಾರತದಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆ ಕಣ ಆಗಿರುವ ಹರಿಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಹೊರ ಬೀಳಲಿದ್ದು, ಗೆಲ್ಲೋದ್ಯಾರು ಅನ್ನೋ ಕುತೂಹಲ ಮೂಡಿಸಿದೆ.

ಎರಡೂ ರಾಜ್ಯಗಳಗಳಲ್ಲೂ 90 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಕಣಿವೆನಾಡು ಜಮ್ಮುಕಾಶ್ಮಿರದಲ್ಲಿ 10 ವರ್ಷಗಳ ಬಳಿಕ ಅದರಲ್ಲು ಆರ್ಟಿಕಲ್ 370 ರದ್ದಾದ ನಂತರ ಎದುರಾಗಿರುವ ಮೊದಲ ಚುನಾವಣೆ ಎನ್ನುವುದು ಗಮನಾರ್ಹ. ಬಿಜೆಪಿ ಗೆಲ್ಲುತ್ತಾ..? ಅಥವಾ ಇಂಡಿಯಾ ಮೈತ್ರಿಕೂಟ ಗೆದ್ದು ಬೀಗುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ.
ಜಮ್ಮುಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು.. ಶೇಕಡಾ 62.52ರಷ್ಟು ಮತದಾನ ಆಗಿದೆ. ಚುನಾವಣಾ ಅಖಾಡದಲ್ಲಿ 873 ಅಭ್ಯರ್ಥಿಗಳಿದ್ದು, ಅಭ್ಯರ್ಥಿಗಳ ಭವಿಷ್ಯ ಕೆಲಹೊತ್ತಲ್ಲೇ ನಿರ್ಧಾರವಾಗಲಿದೆ.. ಕಣಿವೆ ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರಲ್ಲ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ರೂ, ಇಂಡಿಯಾ ಮೈತ್ರಿ ಕೂಟ ಮತ್ತು ಬಿಜೆಪಿ ಮಾತ್ರ ತಮ್ಮದೇ ಅಧಿಕಾರ ಎಂಬ ವಿಶ್ವಾಸದಲ್ಲಿವೆ.

ರಿಸಲ್ಟ್‌ಗೂ ಮೊದಲೇ ಐವರು ಶಾಸಕರ ಆಯ್ಕೆ ಮಾಡಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಐವರನ್ನು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಐವರು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗ್ತಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಐವರು ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದ್ದು, ಅಶೋಕ್ ಕೌಲ್, ರಜನಿ ಸೇಥಿ, ಸುನಿಲ್ ಸೇಥಿ, ಡಾ.ಫರೀದಾ ಖಾನ್ ಹಾಗೂ ಸಂಜಿತಾ ಡೋಗ್ರಾ ನಾಮನಿರ್ದೇಶನ ಆಗಿದ್ದಾರೆ..
ಜಮ್ಮು ಮತ್ತು ಕಾಶ್ಮೀರ ಮರು ಸಂಘಟನೆ ಕಾಯ್ದೆ 2019ಗೆ ತಿದ್ದುಪಡಿಗಳ ಭಾಗವಾಗಿ ಇಬ್ಬರು ಮಹಿಳೆಯರು, ಇಬ್ಬರು ಕಾಶ್ಮೀರಿ ಪಂಡಿತರು ಮತ್ತು ಪಾಕ್ ಆಕ್ರಮಿತ ಕಾಶ್ಮೀರದಿಂದ ಆಗಮಿಸಿದ ನಿರಾಶ್ರಿತ ವ್ಯಕ್ತಿಯೊಬ್ಬರನ್ನು ನಾಮನಿರ್ದೇಶನ ಮಾಡಲಾಗಿದೆ.. ಇದು ಬಿಜೆಪಿ ರಾಜಕೀಯ ತಂತ್ರಗಾರಿಕೆ ಎನ್ನಲಾಗಿದೆ.. ಈ ಐವರು ನಾಮ ನಿರ್ದೇಶಿತ ಶಾಸಕರಿಗೂ ಸಿಎಂ ಆಯ್ಕೆಯಲ್ಲಿ ಮತದಾನದ ಹಕ್ಕು ಇರೋದ್ರಿಂದ ಜಮ್ಮು ಕಾಶ್ಮೀರದ ಅಖಾಡ ಮತ್ತಷ್ಟು ರಂಗೇರಿದೆ.
ಇನ್ನೂ ಹರಿಯಾಣ ಚುನಾವಣಾ ಫಲಿತಾಂಶವೂ ಇಂದು ಹೊರ ಬೀಳಲಿದ್ದು, ಕುತೂಹಲ ಕೆರಳಿಸಿದೆ. 10 ವರ್ಷದಿಂದ ಆಡಳಿತದಲ್ಲಿರುವ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳುವ ಉತ್ಸಾಹದಲ್ಲಿದ್ರೆ ಕಾಂಗ್ರೆಸ್ ಗೆದ್ದು ಆಡಳಿತ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿದೆ. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿರುವುದು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದೆ. ಹರಿಯಾಣದ 90 ಕ್ಷೇತ್ರಗಳ ಪೈಕಿ ಮ್ಯಾಜಿಕ್ ನಂಬರ್ 46 ಬೇಕಿದೆ. ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್‌ಗೆ ಜೈ ಎಂದಿವೆ
ಹರಿಯಾಣದಲ್ಲಿ ಬಿಜೆಪಿ ನಾಯಕ ಹಾಗು ಸಿಎಂ ನಯಾಬ್ ಸಿಂಗ್ ಸೈನಿ, ಕಾಂಗ್ರೆಸ್‌ನ ಭೂಪಿಂದರ್ ಸಿಂಗ್ ಹೂಡಾ, ವಿನೇಶ್ ಫೋಗಟ್ ಮತ್ತು ಜೆಜೆಪಿಯ ದುಶ್ಯಂತ್ ಚೌಟಾಲ ಸೇರಿದಂತೆ 1,027 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಸಮೀಕ್ಷೆಗಳ ಪ್ರಕಾರ ಇಂಡಿಯಾ ಕೂಟ ಅಧಿಕಾರಕ್ಕೆ ಬಂದಿದ್ದೇ ಆದರೆ ಎನ್‌ಡಿಎಗೆ ಬಹುದೊಡ್ಡ ನಷ್ಟ ಎನ್ನಬಹುದು.