ಉತ್ತರ ಪ್ರದೇಶ: ಮಕ್ಕಳಲ್ಲಿ ವೈಚಾರಿಕತೆ ಬಿತ್ತಬೇಕಾದ ಶಾಲೆಗಳೇ ಮೂಢನಂಬಿಕೆಯನ್ನು ಆಚರಿಸುವ ಮೂಲಕ ವಿದ್ಯಾರ್ಥಿಯ ಪ್ರಾಣ ತೆಗೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶಾಲೆಗೆ ದೊಡ್ಡ ಹೆಸರು ಬರಬೇಕೆಂದು ಮಾಟ-ಮಂತ್ರ ಮಾಡಿಸಿದ್ದ ಶಾಲೆಯ ನಿರ್ದೇಶಕ ಹಾಗೂ ಶಿಕ್ಷಕರು 2ನೇ ಕ್ಲಾಸ್ ಬಾಲಕನ್ನ ನರಬಲಿ ಕೊಟ್ಟಿದ್ದಾರೆ.
ಹತ್ರಾಸ್ನಲ್ಲಿರುವ ಶಾಲೆಯ ಹಾಸ್ಟೆಲ್ನಲ್ಲಿ 2 ನೇ ತರಗತಿ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ. ಈ ವಾರದ ಆರಂಭದಲ್ಲಿ ಘಟನೆ ನಡೆದಿದ್ದು, ಈಗ ಬಯಲಾಗಿದೆ.
ಶಾಲೆಗೆ ಯಶಸ್ಸು ಮತ್ತು ಖ್ಯಾತಿ ಬರಲೆಂದು ವಾಮಾಚಾರ ಆಚರಣೆಯ ಭಾಗವಾಗಿ ನರಬಲಿ ನೀಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಡಿಎಲ್ ಪಬ್ಲಿಕ್ ಶಾಲೆಯ ನಿರ್ದೇಶಕರು ಸೇರಿದಂತೆ ಐವರನ್ನು ಸಹಪೌ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಶಾಲೆಯ ಮೂವರು ಶಿಕ್ಷಕರೂ ಸೇರಿದ್ದಾರೆ. 2ನೇ ಕ್ಲಾಸ್ ಬಾಲಕನ ನಂತರ ಮತ್ತೊಬ್ಬ ಬಾಲಕನ ಬಲಿಗೂ ಇವರು ಮುಂದಾಗಿದ್ದರಂತೆ, ಆದರೆ ಅದು ಯಶಸ್ವಿಯಾಗಿಲ್ಲ.
ಐವರ ಬಂಧನ ಶಾಲೆಯ ನಿರ್ದೇಶಕ ದಿನೇಶ್ ಬಾಘೆಲ್, ಅವರ ತಂದೆ ಜಶೋಧನ್ ಸಿಂಗ್ ಮತ್ತು ಮೂವರು ಶಿಕ್ಷಕರಾದ ಲಕ್ಷ್ಮಣ್ ಸಿಂಗ್, ವೀರಪಾಲ್ ಮತ್ತು ರಾಮಪ್ರಕಾಶ್ ಸೋಲಂಕಿಯನ್ನು ಬಂಧಿಸಲಾಗಿದೆ.
ಡಿಎಲ್ ಪಬ್ಲಿಕ್ ಶಾಲೆಯಲ್ಲಿ ಸುಮಾರು 600 ವಿದ್ಯಾರ್ಥಿಗಳಿದ್ದು, ಬಾಲಕ ಹತ್ಯೆಯಾದ ಹಾಸ್ಟೆಲ್ನಲ್ಲಿ 1 ರಿಂದ 5 ನೇ ತರಗತಿಯ ಮಕ್ಕಳಿದ್ದಾರೆ. ಮೃತ ವಿದ್ಯಾರ್ಥಿ ದೆಹಲಿಯ ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಕ್ರಿಶನ್ ಕುಶ್ವಾಹಾ ಅವರ ಪುತ್ರ ಎಂದು ತಿಳಿದು ಬಂದಿದೆ.
ಘಟನೆ ಮುಚ್ಚಿಡುವ ಪ್ರಯತ್ನ .
ಸೋಮವಾರ ಬೆಳಗ್ಗೆ, ಹಾಸ್ಟೆಲ್ನ ಸಿಬ್ಬಂದಿ ಮತ್ತು ಇತರ ವಿದ್ಯಾರ್ಥಿಗಳು ಹಾಸಿಗೆ ಮೇಲೆ ಮಲಗಿದ್ದ ಬಾಲಕನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಬಾಲಕ ಪ್ರತಿಕ್ರಿಯಿಸಿಲ್ಲ. ಬಾಲಕ ಸಾವನ್ನು ತಕ್ಷಣವೇ ವರದಿ ಮಾಡುವ ಬದಲು, ಶಾಲೆಯ ನಿರ್ದೇಶಕ ದಿನೇಶ್ ಹುಡುಗನ ದೇಹವನ್ನು ತನ್ನ ಕಾರಿನಲ್ಲಿ ತೆಗೆದುಕೊಂಡು ಆಗ್ರಾ ಮತ್ತು ಅಲಿಘರ್ ಸೇರಿದಂತೆ ಹಲವೆಡೆ ಹಲವಾರು ಗಂಟೆಗಳ ಕಾಲ ಸುತ್ತಾಡಿಸಿದ್ದಾರೆ. ಆ ಮೂಲಕ ಅಪರಾಧವನ್ನು ಮುಚ್ಚಿಡಲು ಪ್ರಯತ್ನಿಸಿದರು.
ಕುಟುಂಬಸ್ಥರಿಗೆ ನಿಮ್ಮ ಮಗ ಅಸ್ವಸ್ಥಗೊಂಡಿದ್ದಾನೆ ಎಂದು ಮಾಹಿತಿ ನೀಡಲಾಗಿದೆ. ಅವರು ಶಾಲೆಯ ಹಾಸ್ಟೆಲ್ಗೆ ಬಂದರೆ ಬಾಲಕ ಪತ್ತೆಯಾಗಿಲ್ಲ. ಅನುಮಾನ ಬಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದಿನೇಶ್ಗೆ ಸೇರಿದ ವಾಹನದೊಳಗೆ ಕುತ್ತಿಗೆಯ ಮೇಲೆ ಗಾಯದ ಗುರುತುಗಳೊಂದಿಗೆ ಬಾಲಕನ ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿ, ನಿರ್ದೇಶಕರ ಕಾರಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.ನಾವು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ, ಭಾನುವಾರ ರಾತ್ರಿ ಮಗುವನ್ನು ಕತ್ತು ಹಿಸುಕಿ ಸಾಯಿಸಲಾಗಿದೆ ಎಂದು ತಿಳಿದುಬಂದಿದೆ. ಐವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.