ಬೆಂಗಳೂರು : ಮೂಡಾ ಸೈಟು ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಸಿಎಂ ಪಾತ್ರದ ತನಿಖೆಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ನಿರ್ಣಯವನ್ನು ಖಂಡಿಸಿ ಎಂದು ಕಾಂಗ್ರೆಸ್ ರಾಜ್ ಭವನ್ ಚಲೋ ನಡೆಸಿದೆ.ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಗಾಂಧಿ ಪ್ರತಿಮೆಯಿಂದ ರಾಜಭವನದವರೆಗೆ ಪಾದಯಾತ್ರೆ ನಡೆಸಿ ರಾಜ್ಯಪಾಲರ ವಿರುದ್ದ ಘೋಷಣೆ ಕೂಗಲಾಯಿತು.
ಗೆಹಲೋಟ್ ಹಠಾವೋ ಪ್ರಜಾಪ್ರಭುತ್ವ ಬಚಾವೋ, ಇದು ರಾಜಭವನ ಅಲ್ಲ ರಾಜಕೀಯ ಭವನ,ಮೋದಿ ಕಾ ಕೈಗೊಂಬೆ, ಕಣ್ಮುಚ್ಚಿದ ಪಕ್ಷಪಾತಿ ರಾಜ್ಯಪಾಲ ಮುಂತಾದ ಬರಹಗಳುಳ್ಳ ಫಲಕಗಳನ್ನು ಪ್ರದರ್ಶಿಸುತ್ತಾ ಸಿಎಂ ನೇತೃತ್ವದ ಕಾಂಗ್ರೆಸ್ ಬಳಗವು ಗೆಹಲೋಟ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿತು.ಗಾಂಧಿ ಪ್ರತಿಮೆಯ ಬಳಿಯೇ ತುಸು ಹೊತ್ತು ಕುಳಿತು ಧರಣಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಬಿಜೆಪಿ ಮತ್ತು ರಾಜ್ಯಪಾಲರ ವಿರುದ್ದ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಸಚಿವ ಈಶ್ವರ ಖಂಡ್ರೆ, ಸಚಿಮ ಜಮೀರ್ ಅಹ್ಮದ್, ಎಚ್.ಕೆ. ಪಾಟೀಲ್, ವೀರಪ್ಪ ಮೊಯಿಲಿ, ದಿನೇಶ್ ಗುಂಡೂರಾವ್, ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.